Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Team Udayavani, Oct 5, 2024, 9:05 AM IST
ಗದಗ: ರಾಜ್ಯ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಹಾಗೂ ಮಾರಾಟ ಜಿಲ್ಲಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದ್ದು, ತಾಲೂಕಿನ ನರಸಾಪೂರ ಗ್ರಾಮದ ಬಳಿ ಇರುವ ಇಂಡಸ್ಟ್ರಿಯಲ್ ಎಸ್ಟೇಟ್ ನ ಗೋದಾಮಿನೊಂದಲ್ಲಿ 50ಕ್ಕೂ ಅಧಿಕ ಚೀಲ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿರುವುದು ಪತ್ತೆಯಾಗಿದೆ.
ನಂದಿ ಬ್ರ್ಯಾಂಡ್ ಹುರಿಗಡಲೆ ಚೀಲದೊಳಗೆ ಅನ್ನಭಾಗ್ಯ ಅಕ್ಕಿ ತುಂಬಿ ಸಾಗಾಟ ಮಾಡಲಾಗುತ್ತಿದೆ. ನರಸಾಪೂರ ಗ್ರಾಮದ ಬಳಿ ಇರುವ ಇಂಡಸ್ಟ್ರಿಯಲ್ ಎಸ್ಟೇಟ್ ನ ಗೋದಾಮಿನಲ್ಲಿ ನಂದಿ ಬ್ರ್ಯಾಂಡ್ ಹುರಿಗಡಲೆ ಚೀಲದೊಳಗೆ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದ್ದು, ಈವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ.
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಹಾಗೂ ಮಾರಾಟ ಪ್ರಕರಣಗಳು ದಾಖಲಾಗುತ್ತಿದ್ದರೂ ಅದು ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದ್ದು, ಅಕ್ರಮ ಅಕ್ಕಿ ಮಾರಾಟ, ಸಾಗಾಟದಲ್ಲಿರುವ ಕಿಂಗ್ ಪಿನ್ ಗಳು ಮಾತ್ರ ಪ್ರತಿ ಬಾರಿಯೂ ಸೇಫ್ ಆಗುತ್ತಿರುವುದು ಎಲ್ಲರಲ್ಲಿಯೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ಗದಗ, ರೋಣ, ಮುಂಡರಗಿ ತಾಲೂಕಿನಲ್ಲಿ ನಡೆದಿದ್ದರೂ ಜಿಲ್ಲೆಯಲ್ಲಿ ಎಂದು ಯಾವುದೇ ಸಮಸ್ಯೆಗಳಿಲ್ಲ ಆಹಾರ ಇಲಾಖೆ ಅಧಿಕಾರಿಗಳು ಏನೂ ನಡೆದೇ ಇಲ್ಲವಂತೆ ವರ್ತಿಸುತ್ತಿದ್ದು, ಇದರ ಮಧ್ಯೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಧ್ಯ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಯನ್ನು ಅತ್ಯಂತ ಪ್ರಭಾವಿಗಳೇ ನಡೆಸುತ್ತಿದ್ದಾರೆ. ಅವರಿಗೆ ಆಡಳಿತಾರೂಢ ಪಕ್ಷದ ಹಿರಿಯ ನಾಯಕರ, ನಗರಸಭೆಯ ಸದಸ್ಯರ ಕೃಪಾಶೀರ್ವಾದವಿದೆ ಎನ್ನಲಾಗಿದೆ. ಅಕ್ರಮವಾಗಿ ಅಕ್ಕಿ ಸಾಗಾಟ ಹಾಗೂ ಮಾರಾಟ ಮಾಡುವವರಿಗೆ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಪ್ರಭಾವಿಗಳೇ ಮುಂದೆ ನಿಂತು ರಾಜೀ ಮಾಡಿಸಿ, ಸಮಸ್ಯೆ ಇತ್ಯರ್ಥ ಪಡಿಸಿ ಮತ್ತೆ ಅವರನ್ನು ಅಕ್ರಮ ಅಕ್ಕಿ ದಂಧೆಗೆ ಅಣಿಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ.
ಇಷ್ಟಿದ್ದರೂ ಆಯಾ ಭಾಗದ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಅಕ್ಕಿ ಮಾರಾಟ ದಂಧೆಕೊರರ ವಿರುದ್ಧ ದೂರು ದಾಖಲಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅನ್ನಭಾಗ್ಯ ಪ್ರಕರಣ:
ಪ್ರಸಕ್ತ ಸಾಲಿನ (2024) ಏಪ್ರಿಲ್ ರಿಂದ ಈ ವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 6 ಪ್ರಕರಣ ದಾಖಲಿಸಲಾಗಿದೆ. ಗದಗ ತಾಲೂಕಿನಲ್ಲಿ 3 ಪ್ರಕರಣ, ಮುಂಡರಗಿಯಲ್ಲಿ 2 ಹಾಗೂ ರೋಣದಲ್ಲಿ 1 ಪ್ರಕರಣ ದಾಖಲಿಸಿ ಒಟ್ಟು 5.82 ಲಕ್ಷ ಮೌಲ್ಯದ 171.30 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು. 1 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲಾ ಪ್ರಕರಣಗಳಲ್ಲಿಯೂ ಕೇವಲ ಚಾಲಕರ ಮೇಲೆ ಪ್ರಕರಣ ದಾಖಲಿಸಿ ಮೂಲ ಅಕ್ಕಿ ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.