Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ
ಖರ್ಗೆ-ಜಾರಕಿಹೊಳಿ ಭೇಟಿಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ
Team Udayavani, Oct 6, 2024, 6:55 AM IST
ವಿಜಯನಗರ/ವಿಜಯಪುರ: ರಾಜ್ಯದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು ಕೇಳಿಬಂದಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಎದುರಾದ ಬೆನ್ನಲ್ಲೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ “ದಲಿತ ಸಿಎಂ’ ಚರ್ಚೆಗೆ ರೆಕ್ಕೆಪುಕ್ಕಗಳು ಬಂದಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ರಾಜ್ಯದ ಕೆಲವು ನಾಯಕರು ಹೇಳಿಕೆ ನೀಡಿದ್ದಾರೆ.
ದಲಿತ ಸಿಎಂ ಆಗಬೇಕು ಎನ್ನುವವರಲ್ಲಿ ನಾನೂ ಒಬ್ಬ. ಆದರೆ ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದಾರೆ. ಮಾಧ್ಯಮದವರು ಈ ಬಗ್ಗೆ ಕೂಗಿದರೆ ಆಯಿತಾ ಎಂದು ರಾಜಣ್ಣ ವ್ಯಂಗ್ಯವಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಭೇಟಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ. ಖರ್ಗೆಯವರ ಆರೋಗ್ಯ ವಿಚಾರಿಸಲು ಜಾರಕಿಹೊಳಿ ಹೋಗಿದ್ದಾರೆ. ಈ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ನಾನಂತೂ ಸಿಎಂ ರೇಸ್‌ನಲ್ಲಿ ಇಲ್ಲ. ಚುನಾವಣಾ ರಾಜಕಾರಣದಿಂದ ದೂರ ಉಳಿದು, ಸಕ್ರಿಯ ರಾಜಕಾರಣದಲ್ಲಿರುವ ಬಗ್ಗೆ ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ ಎಂದರು.
ಖರ್ಗೆ ಸಿಎಂ ಆದರೆ ಬಹಳ ಖುಷಿ
ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಬೇರೆ ಯಾರೇ ಸಿಎಂ ಆಗಲಿ ನಮಗೆ ಬಹಳ ಖುಷಿ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ವಿಜಯನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ಆಶಯ. ಜೀವಂತ ಇರುವವರೆಗೂ ದಲಿತ ಸಿಎಂ ಆಗಬೇಕೆಂದು ಹೋರಾಟ ಮಾಡುವೆ. ಈ ವಿಚಾರದಲ್ಲಿ ನಾನು ಬಿಜೆಪಿಯಲ್ಲೂ ಪ್ರಶ್ನೆ ಮಾಡುವೆ, ಸುಮ್ಮನಿರಲ್ಲ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಕೇವಲ ಊಹಾಪೋಹ: ಸಿದ್ದು
ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಸುಳ್ಳು ಆರೋಪಗಳಿಗೆ ನಾವು ಉತ್ತರ ಕೊಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಅಥವಾ ಭೋಸರಾಜು ಇನ್ಯಾರನ್ನೋ ಭೇಟಿ ಮಾಡಿದರೆ ಚರ್ಚೆ ನಡೆಯುತ್ತದೆ. ಭೇಟಿ ಮಾಡಿದಾಕ್ಷಣ ಏನೋ ಆಗುತ್ತದೆಯಂತಲ್ಲ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್ ರಾಜೀನಾಮೆ ಕೊಡುವುದಿದ್ದರೆ ಕೊಡಲಿ. ನಾನು ತಪ್ಪು ಮಾಡಿದ್ದರೆ ಹೆದರಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಎಂದು ಯಾರಾದರೂ ಹೇಳಿದ್ದಾರಾ? ತಪ್ಪೇ ಮಾಡಿಲ್ಲ ಎಂದ ಮೇಲೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ಬಿಜೆಪಿಯವರಿಗೂ, ಜೆಡಿಎಸ್‌ನವರಿಗೂ ಭಯ ಪಡುವುದಿಲ್ಲ ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾಕರ ಸ್ವಾಭಿಮಾನ ಹೆಚ್ಚಾಗಬೇಕು ಎಂದು ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗಿದೆ. ಯಾರ ಸ್ವಾಭಿಮಾನಕ್ಕೂ ಧಕ್ಕೆಯಾಗಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.