Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ
Team Udayavani, Oct 6, 2024, 11:55 AM IST
ನಿಮ್ಮಲ್ಲಿ ತಲೆದೋರಿರುವ ಮಧುಮೇಹ ಅಥವಾ ಕ್ಯಾನ್ಸರ್ ಬಾಲ್ಯಕಾಲದಲ್ಲಿ ನೀವು ಅನುಭವಿಸಿದ ಪ್ರತಿಕೂಲ ಪರಿಸ್ಥಿತಿಗಳಿಂದ ಮತ್ತು ಅವುಗಳನ್ನು ನೀವು ಎದುರಿಸಿದ ಬಗೆಯಿಂದ ಉಂಟಾದುದು ಎಂಬುದಾಗಿ ವೈದ್ಯರು ಹೇಳಿದರೆ ನಿಮ್ಮ ಪ್ರತಿಕ್ರಿಯೆ ಏನಿರಬಹುದು?
ಬಾಲ್ಯಕಾಲದ ಪ್ರತಿಕೂಲ ಪರಿಸ್ಥಿತಿಗಳು (ಎಸಿಇಗಳು) ಆರೋಗ್ಯ ಅಪಾಯಗಳು ಮತ್ತು ಕಾಯಿಲೆಗಳು ಉಂಟಾಗುವುದಕ್ಕೆ ಕಾರಣವಾಗಬಲ್ಲ ಸಂಕೀರ್ಣ ವರ್ತನಾತ್ಮಕ ಶೈಲಿಗಳನ್ನು ಹೇಗೆ ರೂಪಿಸಬಲ್ಲವು ಎಂಬುದಕ್ಕೆ ಒಂದು ಉದಾಹರಣೆಯನ್ನು ಗಮನಿಸೋಣ.
40 ವರ್ಷ ವಯಸ್ಸಿನ ಅಪ್ಪು (ಕೇವಲ ಕಾಲ್ಪನಿಕ ಹೆಸರು) ಎಂಬವರಿಗೆ ಮಧುಮೇಹ ಇರುವುದು ಇತ್ತೀಚೆಗೆ ತಿಳಿದುಬಂತು. ತೂಕ ಇಳಿಸಿಕೊಳ್ಳಲು, ಆಹಾರ ಕ್ರಮ ಮತ್ತು ಜೀವನಕ್ರಮಗಳನ್ನು ಬದಲಾಯಿಸಿಕೊಳ್ಳುವಂತೆ ಅವರಿಗೆ ಸೂಚಿಸಲಾಯಿತು. ರೂಢಿಗತ ಆರೋಗ್ಯ ತಪಾಸಣೆಯ ವೇಳೆ ಅಪ್ಪು ಅವರಿಗೆ ಮಧುಮೇಹ ಇರುವುದು ಗೊತ್ತಾಗಿತ್ತು. ಅವರ ಕುಟುಂಬದಲ್ಲಿ ಕೆಲವರಿಗೆ ಮಧುಮೇಹ ಇದ್ದುದು ನಿಜವಾದರೂ ಅವರ ತಂದೆಯವರು ಮಧುಮೇಹಕ್ಕೆ ಔಷಧ ಆರಂಭಿಸಬೇಕಾಗಿ ಬಂದದ್ದು ಅವರ 52ನೇ ವಯಸ್ಸಿನಲ್ಲಿ. ತನಗೆ ಇಷ್ಟು ಬೇಗನೆ ಮಧುಮೇಹ ಉಂಟಾದದ್ದು ಹೇಗೆ ಎಂದು ಅಪ್ಪು ಅಚ್ಚರಿಪಟ್ಟಿದ್ದಾರೆ. ಜತೆಗೆ ಜಾಲತಾಣಗಳಲ್ಲಿ ಸ್ವಲ್ಪ ಶೋಧಕಾರ್ಯ ನಡೆಸಿದ ಬಳಿಕ ಸಂಸ್ಕರಿತ ಹಿಟ್ಟುಗಳು, ಸೋಡಾ ಪಾನೀಯಗಳ ಸೇವನೆ, ಕೆಲಸದ ಒತ್ತಡ ಮತ್ತು ತನ್ನ ಹಾಲಿ ಜೀವನಶೈಲಿಯೇ ಇದಕ್ಕೆ ಕಾರಣ ಎಂದು ಅಪ್ಪು ತಿಳಿದುಕೊಂಡಿದ್ದಾರೆ.
ಅಪ್ಪು ತನ್ನ ಗ್ರಾಹಕರ ಕರೆಗಳಿಗೆ ಉತ್ತರಿಸುವುದಕ್ಕಾಗಿ ಎಚ್ಚರವಾಗಿರಲು ಸಹಾಯವಾಗುವಂತೆ ರಾತ್ರಿ ಕೆಲಸ ಮಾಡಬೇಕಾಗಿ ಬಂದಾಗಲೆಲ್ಲ ಒತ್ತಡಕ್ಕೆ ಒಳಗಾಗಿ ಆಹಾರ ಸೇವಿಸುತ್ತಾರೆ, ಅತಿಯಾಗಿ ತಿನ್ನುತ್ತಾರೆ ಎಂದು ಅವರ ಪತ್ನಿ ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರೈಸುವ ಬಗ್ಗೆ ತಾನು ಒತ್ತಡಕ್ಕೆ ಒಳಗಾಗುವುದು ನಿಜ ಎಂಬುದನ್ನು ಅಪ್ಪು ಒಪ್ಪಿಕೊಳ್ಳುತ್ತಾರೆ, ಅವರು ನಿರ್ವಹಿಸುತ್ತಿರುವ ಉದ್ಯೋಗವು ವಿಭಿನ್ನ ಟೈಮ್ ಝೋನ್‌ಗಳಲ್ಲಿರುವ ಗ್ರಾಹಕರು ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುತ್ತಾರೆ, ಹೀಗಾಗಿ ಅಪ್ಪು ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದೆ ಕೆಲವು ಬಾರಿ ಕೆಲಸ ಮಾಡಬೇಕಾಗುತ್ತದೆ. ಒತ್ತಡದಲ್ಲಿ ಇರುವಾಗ ಅತಿಯಾಗಿ ತಿನ್ನುವ ಅಭ್ಯಾಸ ಅಪ್ಪು ಅವರಿಗೆ ಹತ್ತನೇ ತರಗತಿಯ ಪರೀಕ್ಷೆಗಳ ವೇಳೆ ಆಯಿತು. ಜೆಇಇ ಪ್ರವೇಶ ಪರೀಕ್ಷೆಗಳಿಗಾಗಿ ದಿನಕ್ಕೆ 12-14 ತಾಸು
ಅಭ್ಯಾಸ ಮಾಡುತ್ತಿದ್ದಾಗ ಆರು ತಿಂಗಳುಗಳ ಅವಧಿಯಲ್ಲಿ 10ರಿಂದ 15 ಕೆಜಿ ತೂಕ ಹೆಚ್ಚಿಸಿಕೊಂಡದ್ದನ್ನು ಅಪ್ಪು ನೆನಪಿಸಿಕೊಳ್ಳುತ್ತಾರೆ. 9ನೇ ತರಗತಿಯ ವರೆಗೆ ಅಪ್ಪು ಕಲಿಕೆಯ ಬಗ್ಗೆ ಅಷ್ಟು ಗಂಭೀರವಾಗಿರಲಿಲ್ಲ. ಶೇ. 70ರಷ್ಟು ಮಾತ್ರ ಅಂಕ ಗಳಿಸುತ್ತಿದ್ದುದು, ಅದರಲ್ಲೂ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದಾಗ ಕುಟುಂಬದವರು, ಸಮ ವಯಸ್ಕ ಗೆಳೆಯರು ತನ್ನನ್ನು ಅಪಹಾಸ್ಯ ಮಾಡುತ್ತಿದ್ದುದು ಅವರಿಗೆ ನೆನಪಿದೆ. ಸರೀಕರಿಂದ ಅಣಕಕ್ಕೆ ಒಳಗಾಗುತ್ತಿದ್ದ ಆ ಅನುಭವ ಅಪ್ಪು ಅವರಲ್ಲಿ ಅಭದ್ರತೆಯ ಭಾವನೆ ಮೂಡಿಸಿದ ಹಲವು ಅನುಭವಗಳಲ್ಲಿ ಮೊದಲನೆಯದಾಗಿತ್ತು. ಈಗಲೂ ತನ್ನ ಕೆಲಸ ಮತ್ತು ಶ್ರಮಕ್ಕೆ ತಕ್ಕಷ್ಟು ಶ್ಲಾಘನೆ ಸಿಗುತ್ತಿಲ್ಲ ಎಂಬುದೇ ಅಪ್ಪು ಅವರ ಭಾವನೆಯಾಗಿದೆ.
1998ರಲ್ಲಿ ನಡೆಸಲಾಗಿರುವ “ದ ಅಡ್ವರ್ಸ್ ಚೈಲ್ಡ್‌ಹುಡ್ ಎಕ್ಸ್‌ಪೀರಿಯೆನ್ಸಸ್ (ಎಸಿಇ) ಅಧ್ಯಯನವು ಬಾಲ್ಯಕಾಲದಲ್ಲಿ ಎದುರಿಸಿರಬಹುದಾದ ನಿಂದನೆ ಮತ್ತು ನಿರ್ಲಕ್ಷ್ಯಗಳ ಸಹಿತ ಆಘಾತಕಾರಿ ಘಟನೆಗಳು ಹಾಗೂ ಹೃದ್ರೋಗಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಂತಹ ದೀರ್ಘಕಾಲೀನ ಅನಾರೋಗ್ಯಗಳ ನಡುವೆ ಕಳವಳಕಾರಿ ಸಂಬಂಧ ಇರುವುದನ್ನು ಬಹಿರಂಗಪಡಿಸಿದೆ. ಉದಾಹರಣೆಗೆ, ಬಾಲ್ಯಕಾಲದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರತಿಕೂಲ ಅನುಭವಗಳನ್ನು ಹೊಂದಿದವರು ಹೃದ್ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಇತರರಿಗಿಂತ ಎರಡು ಪಟ್ಟು ಹೆಚ್ಚು. ಇಂತಹವರಿಗೆ ಶೀಘ್ರ ರೋಗಪತ್ತೆ, ಚಿಕಿತ್ಸೆ ಮತ್ತು ನೆರವು ಬಹಳ ಅಗತ್ಯವಿರುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ.
ತೆಗಳಿಕೆ, ದೈಹಿಕ ದೌರ್ಜನ್ಯ, ಹೆತ್ತವರ ಬೆಂಬಲ ನಷ್ಟವಾಗುವುದು, ಸಾಮಾಜಿಕ-ಆರ್ಥಿಕ ಸಂಕಷ್ಟಗಳು ಮತ್ತು ಕೌಟುಂಬಿಕ ಕಲಹಗಳು ಮಗು ಅಥವಾ ಹದಿಹರಯದವರನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯಕ್ಕೆ ಈಡು ಮಾಡಬಹುದಾಗಿದೆ. ಇಂತಹ ಪರಿಸ್ಥಿತಿಗಳು ಮಾದಕ ದ್ರವ್ಯ ವ್ಯಸನ, ಸುರಕ್ಷಿತವಲ್ಲದ ಜೀವನ ಶೈಲಿ ಆಯ್ಕೆಗಳು ಮತ್ತು ಅಪಾಯಕಾರಿ ಪ್ರವೃತ್ತಿಗಳಂತಹ ಅನಾಹುತಕಾರಿ ನಿಭಾವಣ ತಂತ್ರಗಳ ಮೊರೆಹೋಗುವಂತೆ ಮಾಡುತ್ತವೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕ – ಎರಡೂ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿರುತ್ತದೆ.
ಬಾಲ್ಯಕಾಲದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗುವುದರಿಂದ ವ್ಯಕ್ತಿಯ ಚಿತ್ತವೃತ್ತಿಗೆ ಗಂಭೀರವಾದ ಆಘಾತ ಉಂಟಾಗುವ ಸಾಧ್ಯತೆಗಳಿದ್ದು, ವರ್ಷಾನುಗಟ್ಟಲೆ ಅವರು ಇದರಿಂದ ಸಂಕಷ್ಟವನ್ನು ಅನುಭವಿಸುವಂತಾಗುತ್ತದೆ. ಇದರಿಂದಾಗಿ ಅವರ ಸಂಬಂಧಗಳು, ಸ್ವಪ್ರತಿಷ್ಠೆ, ಆಹಾರ ಕ್ರಮ ಮತ್ತು ಲೈಂಗಿಕ ವರ್ತನೆಯ ಮೇಲೂ ಪರಿಣಾಮ ಉಂಟಾಗಬಲ್ಲುದು. ಇಂತಹ ಅನುಭವಕ್ಕೆ ಒಳಗಾಗುವ ಮಕ್ಕಳು ಮತ್ತು ಹದಿಹರಯದವರು ಪಿಟಿಎಸ್‌ಡಿ, ಒತ್ತಡಕ್ಕೆ ಸಂಬಂಧಿಸಿದ ಅನಾರೋಗ್ಯಗಳು, ಖನ್ನತೆ ಮತ್ತು ಚಿಂತೆಯಂತಹ ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
ತಾವೇ ದೂಷಣೆಗೆ ಒಳಗಾಗುವ ಅಥವಾ “ದುರ್ಬಲ ಮನಸ್ಸಿನವರು’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳುವ ಹೆದರಿಕೆಯಿಂದಾಗಿ ಇಂಥವರಲ್ಲಿ ಅನೇಕರು ತಮಗಾಗಿರುವ ಕೆಟ್ಟ ಅನುಭವಗಳನ್ನು ವೈದ್ಯರು ಅಥವಾ ಆಪ್ತಸಮಾಲೋಚಕರ ಜತೆಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಆಘಾತಗಳೇ ಅವರನ್ನು ಗುಣಮುಖರಾಗುವುದರಿಂದ ಅಥವಾ ಇತರರ ಮೇಲೆ ವಿಶ್ವಾಸವಿರಿಸುವುದರಿಂದ ತಡೆಯುತ್ತವೆ.
–ಮುಂದಿನ ವಾರಕ್ಕೆ
-ಡಾ| ಅವಿನಾಶ್ ಜಿ. ಕಾಮತ್
ಮಕ್ಕಳು ಮತ್ತು ಹದಿಹರಯದವರ ಮನಶ್ಶಾಸ್ತ್ರಜ್ಞರು
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.