Kota: ಹೂವಿನ ಕೋಲಿಗೆ ಮಕ್ಕಳ ರಾಯಭಾರ!
ಆಶ್ವಯುಜ ಶುದ್ಧ ಮಹಾನವಮಿಯಲ್ಲಿ ಶಾಶ್ವತದಿ ಹರಸುವರು ಬಾಲಕರು ಬಂದು!; ಮಕ್ಕಳ ವಾಕ್ಚಾತುರ್ಯ, ಕಲಾವಂತಿಕೆ ಹೆಚ್ಚಿಸುವ ವಿಶಿಷ್ಟ ಯಕ್ಷಗಾನ ರೂಪಾಂತರ
Team Udayavani, Oct 9, 2024, 2:43 PM IST
ಭಾಗವತ ರಾಮಚಂದ್ರ ನಾವಡರು, ಹಿರಿಯಡಕ ಗೋಪಾಲ ರಾವ್ ಅವರಿದ್ದ ಹಲವು ದಶಕ ಹಿಂದಿನ ಹೂವಿನ ಕೋಲು ತಂಡ
ಕೋಟ: ಹಿಂದೆಲ್ಲ ನವರಾತ್ರಿ ಬಂತೆಂದರೆ ‘ಗುರುದೈವ ಗಣಪತಿಗೆ ಶರಣು ಶರಣೆಂದು; ಕರಗಳೆರಡನು ಮುಗಿದು ಶಿರವೆರಗಿ ನಿಂದು. ಆಶ್ವಯುಜ ಶುದ್ಧ ಮಹಾ ನವಮಿ ಬರಲೆಂದು ಶಾಶ್ವತದಿ ಹರಸಿದೆವು ಬಾಲಕರು ಬಂದು’ ಎನ್ನುವ ಹಾಡು ಮನೆ-ಮನೆಗಳಲ್ಲಿ ಒಂಬತ್ತು ದಿನ ಹೂವಿನ ಕೋಲು ತಂಡದಿಂದ ಕೇಳಿಬರುತ್ತಿತ್ತು. ಈಗ ಒಂದಿಷ್ಟು ಕಡಿಮೆಯಾಗಿದೆಯಾದರೂ ಹೊಸ ತಲೆಮಾರಿನ ಚುಂಗು ಹಿಡಿದು ಮತ್ತೆ ಬೆಳೆಯುತ್ತಿದೆ.
ಯಕ್ಷಗಾನ ಕಲೆ ತಾಳಮದ್ದಳೆ, ಹೂವಿನಕೋಲು, ಚಿಕ್ಕಮೇಳ, ಯಕ್ಷಗಾನ ಬೊಂಬೆಯಾಟ, ಬ್ಯಾಲೆ ಮೊದಲಾದ ರೂಪಾಂತರಗಳನ್ನು ಪಡೆದಿದೆ. ಅದೇ ರೀತಿ ಹೂವಿನಕೋಲು ಕಲೆ ಕೂಡ ಇದರ ರೂಪಾಂತರ ಭಾಗವಾಗಿದೆ. ಇದು ಮೇಲ್ನೋಟಕ್ಕೆ ತಾಳಮದ್ದಲೆಯನ್ನೇ ಹೋಲಿಕೆಯಾದರೂ ಅವುಗಳ ನಡುವೆ ತುಂಬಾ ವ್ಯತ್ಯಾಸ ಇದೆ. ಈ ಹೂವಿನ ಕೋಲು ಕಲೆಗೆ ಸಾಂಸ್ಕೃತಿಕ, ಧಾರ್ಮಿಕ, ಜನಪದೀಯ ನಂಟಿರುವುದು ವಿಶೇಷ.
ಮನೆಗೆ ಶ್ರೇಯಸ್ಸಾಗಲಿ ಎಂಬ ಕಲ್ಪನೆ
ಯಕ್ಷಗಾನ, ಚಿಕ್ಕಮೇಳ ಸೇರಿದಂತೆ ಎಲ್ಲ ಕಲೆಗಳಿಗೆ ಧಾರ್ಮಿಕ ನಂಟಿದೆ ಹಾಗೂ ಆ ಪ್ರದರ್ಶನವನ್ನು ಏರ್ಪಾಡು ಮಾಡುವವರಿಗೆ, ಅದನ್ನು ನೋಡುವವರಿಗೆ ಒಳಿತಾಗಲಿ ಎನ್ನುವ ಆಶಯದೊಂದಿಗೆ ನಡೆಸಲಾಗುತ್ತದೆ. ಅದೇ ರೀತಿ ಹೂವಿನ ಕೋಲು ಕೂಡ ಧಾರ್ಮಿಕ ಭಾವದೊಂದಿಗೆ ನಡೆಸಲಾಗುತ್ತದೆ ಎನ್ನುವುದಕ್ಕೆ ‘ಈಶ ನಿಮಗತ್ಯಧಿಕ ಸುಖವ ಕೊಡಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು. ಮಳೆ ಬಂದು, ಬೆಳೆ ಬೆಳೆದು ಧರೆ ತಣಿಯಲೆಂದು; ತಿಳಿಕೊಳಗಳುಕ್ಕಿ ತುರುಗಳು ಕರೆಯಲೆಂದು.
ನಳಿನಮುಖೀಯರು ಸುಪುತ್ರರು ಬಂದು ಇಳೆಯೊಳಗೆ ಹರಸಿದೆವು ಬಾಲಕರು ಬಂದು’ ಎನ್ನುವ ಹೋವಿನ ಕೋಲಿನ ಹಾಡಿನ ಸಾಲುಗಳೇ ಸಾಕ್ಷಿಯಾಗಿದೆ.
ಜನಪದೀಯ ಕೋಲಾಟದ ಟಚ್
ಯಕ್ಷಗಾನದ ಹೊಸ ಪ್ರಸಂಗಗಳಲ್ಲಿ ಕೋಲಾಟ, ಜನಪದ ನೃತ್ಯಗಳನ್ನು ಬಳಸಿಕೊಳ್ಳುವ ಕ್ರಮವಿದೆ. ಅದೇ ರೀತಿ ಹೂವಿನ ಕೋಲು ಪ್ರದರ್ಶನದ ಆಕರ್ಷಣೆ ಹೆಚ್ಚಿಸಲು ಭಾಗವತರು ಮತ್ತು ಮಕ್ಕಳು ಸೇರಿ ಕೋಲಾಟದ ಪದ್ಯಗಳನ್ನು ಹಾಡುವುದು ಹಾಗೂ ಮಕ್ಕಳು ಕುಳಿತಲ್ಲಿಯೇ ತಾಳಕ್ಕೆ ಸರಿಯಾಗಿ ಕೋಲು ನಾಟ್ಯವನ್ನು ಮಾಡುವುದು ಹಲವು ದಶಕಗಳಿಂದ ನಡೆದು ಬಂದಿದೆ.
ಕಲಾವಿದರ ಸೃಷ್ಟಿಯ ಪ್ರಯತ್ನ
ಐದಾರು ದಶಕಗಳ ಹಿಂದೆ ಎರಡು-ಮೂರನೇ ತರಗತಿಗೆ ಮಕ್ಕಳು ಶಾಲೆಗೆ ತಿಲಾಂಜಲಿ ಹೇಳಿ ಉದರ ಪೋಷಣೆಗಾಗಿ ಯಕ್ಷಗಾನ ಮೇಳ ಸೇರುತ್ತಿದ್ದರು. ಅವರಿಗೆ ಒಂದಿಷ್ಟು ಮಾತು ಕಲಿಸಿದರೆ ಹೂವಿನ ಕೋಲು ಅದರ ಪ್ರದರ್ಶನದ ವೇದಿಕೆ ಆಗುತ್ತಿತ್ತು. ಶ್ರುತಿ, ಲಯಗಳಿಗೆ ಸರಿಯಾಗಿ ಅರ್ಥ ಹೇಳುವ ಚುರುಕಾಗಿರುವ ಮಕ್ಕಳನ್ನು ಗಮನಿಸಿ ಯಕ್ಷಗಾನ ತರಬೇತಿಗೆ ಆಯ್ಕೆ ಮಾಡಲಾಗುತ್ತಿತ್ತು. ಹೀಗೆ ಆ ಕಾಲದ ಸ್ಟಾರ್ ಕಲಾವಿದರಿಗೆ ಹೂವಿನ ಕೋಲು ತಂಡವೇ ಕಲಾ ಬದುಕಿನ ಕಮ್ಮಟ ಸಾಲೆಯಾಗಿತ್ತು. ಈಗಲೂ ಮಕ್ಕಳಲ್ಲಿ ಮಾತುಗಾರಿಕೆ, ಪುರಾಣ ಪರಿಕಲ್ಪನೆ ಅರಳಲು ಇದು ವೇದಿಕೆಯಾಗಿದೆ.
ಹೇಗಿರುತ್ತದೆ ಹೂವಿನಕೋಲು?
ಒಂದು ಹೂವಿನಕೋಲು ತಂಡದಲ್ಲಿ ಭಾಗವತರು, ಮದ್ದಳೆಗಾರರು, ಶ್ರುತಿವಾದಕರು ಮತ್ತು ಇಬ್ಬರು ಮಕ್ಕಳು ಸೇರಿ ಸುಮಾರು ಐದು-ಆರು ಜನ ಇರುತ್ತಾರೆ. ಚಂಡೆಯ ಬಳಕೆ ಇರುವುದಿಲ್ಲ.
ಮಕ್ಕಳು ಆಲಂಕಾರಿಕ ವಸ್ತುಗಳನ್ನು ಮುಂದಿಟ್ಟುಕೊಂಡು, ಪರಸ್ಪರ ಅಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಮಕ್ಕಳು ‘ನಾರಾಯಣಾಯ ನಮೊ ನಾರಾಯಣಾಯ’ ಎಂಬ ಚೌಪದಿ (4-5 ಸಾಲಿನ ಹಾಡಿನ ಮೂಲಕ) ಪ್ರದರ್ಶನ ಆರಂಭಿಸುತ್ತಾರೆ. ಭಾಗವತರು ನೇರವಾಗಿ ಪ್ರಸಂಗದ ಪದ್ಯಗಳನ್ನು ಹೇಳುತ್ತಾರೆ. ಮಕ್ಕಳು ಆ ಪದ್ಯಗಳಿಗೆ ಅರ್ಥ ಹೇಳುತ್ತಾರೆ. ಮೊದಲಿಗೆ ಗಣಪತಿ ಪೂಜೆಯ ಪದ್ಯವಾಗಲೀ, ಕೊನೆಯಲ್ಲಿ ಮಂಗಳ ಪದ್ಯವಾಗಲೀ ಹಾಡುವ ಕ್ರಮ ಆರಂಭದಲ್ಲಿ ಇರಲಿಲ್ಲ. ಆದರೆ ಕೆಲವು ಕಡೆ ಇದು ಬಳಕೆಯಾಗುತ್ತದೆ. ಹಿಂದೆಲ್ಲ ಕರಾವಳಿಯಲ್ಲಿ ಸಾಲು-ಸಾಲು ತಂಡಗಳಿದ್ದವು. ಆದರೆ ಈಗ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ತಂಡ, ಬಾರ್ಕೂರು ಸುರೇಶ ಭಾಗವತರ ತಂಡ ಸೇರಿದಂತೆ ಬೆರಳೆಣಿಕೆಯ ತಂಡಗಳು ಮಾತ್ರ ಉಳಿದುಕೊಂಡಿದೆ.
ಗಾಂಧೀ ಪ್ರಭಾವದಿಂದ ಟೋಪಿ
ಹಿಂದೆ ಹೂವಿನ ಕೋಲು ತಂಡಗಳಿಗೆ ನಿರ್ಧಿಷ್ಟ ಉಡುಗೆ ತೊಡುಗೆ ಇರಲಿಲ್ಲ. ಆದರೆ ಹಿಂದಿನಿಂದಲೂ ಅರ್ಥ ಹೇಳುವ ಮಕ್ಕಳು ಗಾಂಧೀ ಟೋಪಿಯನ್ನು ಬಳಸುತ್ತಿದ್ದರು. ಗಾಂಧೀ ಟೋಪಿ ಬಳಸಲು ಕಾರಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಏಳೆಂಟು ದಶಕಗಳ ಹಿಂದೆ ಮಹಾತ್ಮಗಾಂಧೀಜಿಯವರ ಹೋರಾಟಗಳು ಮುಂಚೂಣಿಯಲ್ಲಿದ್ದ ಕಾಲದಲ್ಲಿ ಗಾಂಧೀ ಟೋಪಿ ಧರಿಸುವ ಮೂಲಕ ಅವರ ಹೋರಾಟಕ್ಕೆ ಬೆಂಬಲ ನೀಡಲಾಗುತ್ತಿತ್ತು. ಅದರ ಭಾಗವಾಗಿ ಹೂವಿನ ಕೋಲಿಗೆ ಈ ವಸ್ತ್ರ ಸಂಹಿತೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಹಿಂದೆ ಹೂವಿನಕೋಲು ಕಲೆಗೆ ವಿಶೇಷ ಮಹತ್ವವಿತ್ತು. ಇತ್ತೀಚೆಗೆ ಈ ಕಲೆ ನಶಿಸುತ್ತಿದ್ದು ಇದನ್ನು ಉಳಿಸುವ ಸಲುವಾಗಿ ಕೆಲವು ತಂಡಗಳು ಕೆಲಸ ಮಾಡುತ್ತಿದೆ. ಅದೇ ರೀತಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಕೂಡ ತಂಡವನ್ನು ರಚಿಸಿಕೊಂಡು ಪ್ರದರ್ಶನ ನೀಡುತ್ತಿದೆ. ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.
-ರಾಜಶೇಖರ್ ಹೆಬ್ಟಾರ್, ಕಾರ್ಯದರ್ಶಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.