ಪುರಾಣ ಪ್ರಸಂಗ ಕಾಯಕಲ್ಪ-ಯಕ್ಷಗಾನದ ಸಾಂಪ್ರದಾಯಿಕ ಆವರಣದ ಸೌಂದರ್ಯ, ಔಚಿತ್ಯ ಪ್ರಜ್ಞೆ

ಅವಶ್ಯವೆನಿಸಿದಾಗ ಹೊಸ ಸೃಷ್ಟಿ ಮಾಡುವುದೂ ಹಿಂದಿನಿಂದಲೇ ನಡೆದುಕೊಂಡು ಬಂದಿದೆ...

Team Udayavani, Oct 16, 2024, 2:55 PM IST

13

ಹಲವು ಕಲಾ ಪರಿಕರಗಳ ವಿಶಿಷ್ಟ ಪಾಕವಾದ ಯಕ್ಷಗಾನ ಬಯಲಾಟವು ತಾನು ಬಳಸಿಕೊಂಡು ಬಂದ ವಸ್ತುಗಳ ವಿಚಾರದಲ್ಲಿಯೂ ವೈವಿಧ್ಯವನ್ನು ತೋರಿದೆ. ಯಕ್ಷಗಾನದ ಮೂಲ ಆಶಯವನ್ನು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಒಂದು ಕಥೆಯನ್ನು ಸಂಗೀತ, ನಾಟ್ಯಾತ್ಮಕವಾಗಿ ಪ್ರಸ್ತುತ ಪಡಿಸಿ ರಂಜನೆಯೊಂದಿಗೆ ಧಾರ್ಮಿಕ ಮೌಲ್ಯಗಳನ್ನು ಬಿಂಬಿಸುವ ದೃಷ್ಟಿಯನ್ನು ಅಲ್ಲಿ ಗುರುತಿಸಬಹುದು.

‘ಧಾರ್ಮಿಕ’ ಎಂದೊಡನೆ ದೇಶಕಾಲಾತೀತವಾದ ಅಪ್ಪಟ ಧರ್ಮವೆಂದೇನೂ ಅಲ್ಲ. ಹೆಚ್ಚಾಗಿ ‘ಮತಧರ್ಮ’ ಸಂಬಂಧವಾದ ಮೌಲ್ಯಗಳು ಇತರ ನಾದ ಮಾಧ್ಯಮಗಳಲ್ಲಿ ವಿಜೃಂಭಿಸಿದುದಾಗಿದೆ. ಏಕೆಂದರೆ ಬೇರೆ ಬೇರೆ ಪುರಾಣಗಳು ಇಂಥ ರಂಗಗಳಿಗೆ ವಸ್ತುಗಳನ್ನು ಪೂರೈಕೆ ಮಾಡಿವೆ. ಪುರಾಣಗಳು ಸೃಷ್ಟಿಯಾದ ಮುಖ್ಯವಾಗಿ ಮತ ಧರ್ಮಗಳ ವ್ಯಾಖ್ಯಾನ, ಪ್ರಚಾರದ ದೃಷ್ಟಿಯಿಂದ ಎಂಬುದು ಗಮನಿಸಬೇಕು. ಪುರಾಣ ರಾಶಿಯಲ್ಲಿ ರೋಚಕ, ಮೌಲ್ಯಯುತ ಪರಿಣಾಮ ರಮಣೀಯ ಕಥಾನಕಗಳು ಸಾಕಷ್ಟಿದ್ದರೂ ಕಳಪೆ ಸರಕುಗಳು ಬೇಕಾದಷ್ಟಿವೆ. ಹಾಗಾಗಿ ಇಂಥ ವಸ್ತುಗಳನ್ನು ಬಳಸಿಕೊಂಡ, ಯಕ್ಷಗಾನ ಪ್ರಸಂಗದಂತಹ ರಂಗ ಕೃತಿಗಳಲ್ಲಿ ಕಾಲಬಾಧಿತವಾದ ಅನೇಕ ವಿಚಾರಗಳನ್ನು ನಾವು ಕಾಣಬಹುದು. ಪುರಾತನ ವರ್ಣಾಶ್ರಮ ಧರ್ಮದ ಅನುಬಂಧನೀಯತೆ, ಶ್ರೇಣಿಕೃತ ಸಮಾಜ ಪದ್ಧತಿ, ವಿವೇಚನೆಯಿಲ್ಲದ ಶಾಪ ಪ್ರಸಂಗಗಳು, ದೇವರುಗಳ ವಿಚಿತ್ರ ವರ್ತನೆಗಳು, ಕಪ್ಪು ಬಿಳುಪಿನ ದೇವಾಸುರ ಪಾತ್ರಗಳು  ಇಂತ ಅನೇಕ ವಿಚಾರಗಳಿಂದ ಪುರಾಣ ಕೃತಿಗಳು ನಿಬಿಡವಾಗಿರುವುದನ್ನು ಕಾಣಬಹುದು.

ಇತಿಹಾಸ ಕಾವ್ಯಗಳೆನಿಸಿದ ರಾಮಾಯಣ ಮಹಾಭಾರತಗಳಿಂದ ಹಾಗೂ ಇತರ ಪುರಾಣಗಳಿಂದ ವಸ್ತುಗಳನ್ನು ಸ್ವೀಕರಿಸಿದ ಸಂಸ್ಕೃತ ಹಾಗೂ ಇತರ ದೇಶ ಭಾಷಾ ಕವಿಗಳು ತಮ್ಮ ಪ್ರತಿಭೆ, ಮನೋಧರ್ಮ, ಅನುಕೂಲಗಳಿಗೆ ತಕ್ಕಂತೆ ಆ ವಸ್ತುಗಳ ನಿರ್ವಹಣೆಯಲ್ಲಿ ತಮಗೆ ಸೂಕ್ತವೆನಿಸಿದ ಬದಲಾವಣೆಗಳನ್ನು ಮಾಡಿದ್ದಾರೆ. ಯಕ್ಷಗಾನ ಕವಿಗಳೂ ಈ ಸ್ವಾತಂತ್ರ್ಯವನ್ನು ತಕ್ಕಮಟ್ಟಿಗೆ ವಹಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ‘ಮೂಲ’ ಕೃತಿಗಳಲ್ಲಿ ಕಂಡು ಬಾರದಿರುವ ವಿಷಯಗಳನ್ನು ಪ್ರಸಂಗವಾಗಿರಿಸಿದ್ದಾರೆ. ಉದಾ: ಕೃಷ್ಣಾರ್ಜುನ ಕಾಳಗ, ಗರುಡ ಹನುಮಂತರ ಕಾಳಗ, ಭೀಮಾರ್ಜುನರ ಕಾಳಗ, ರಾಮಾಂಜನೇಯ ಕಾಳಗ ಇತ್ಯಾದಿ. ಪೌರಾಣಿಕವಾದ ಚೌಕಟ್ಟಿನಲ್ಲಿ ಇವೆಲ್ಲ ಕಥೆಗಳು ರೋಚಕವಾಗಿ ಸಾಗುವುದರಿಂದ ಇವನ್ನು ನಿಜವಾದ ಪುರಾಣ ಪ್ರಸಂಗವೇನೋ ಎಂಬಷ್ಟು ತಲ್ಲೀನತೆಯಿಂದಲೂ ಪ್ರಶಂಸಾಭಾವದಿಂದಲೂ ನೋಡುತ್ತಾರೆ. ಎಂದರೆ ಮೂಲವಸ್ತುವಿನಲ್ಲಿ ಸಾಂದರ್ಭಿಕವಾದ ಬದಲಾವಣೆ ಮಾಡಿಕೊಳ್ಳುವುದೂ, ಅವಶ್ಯವೆನಿಸಿದಾಗ ಹೊಸ ಸೃಷ್ಟಿ ಮಾಡುವುದೂ ಹಿಂದಿನಿಂದಲೇ ನಡೆದುಕೊಂಡು ಬಂದಿದೆ.

ಯಕ್ಷಗಾನ ಕೃತಿಗಳಲ್ಲಿ ನಿರ್ದಿಷ್ಟ ಆಶಯಗಳು ಇರಲೇಬೇಕೆಂಬ ನಿರ್ಬಂಧವಿಲ್ಲವಾದರೂ ಇಂದಿನ ಪ್ರೇಕ್ಷಕರ ಇದಿರಿಗೆ ಪ್ರದರ್ಶನವಾಗತಕ್ಕ ಯಕ್ಷಗಾನದಲ್ಲಿ ಕೆಲವೊಂದು ಉತ್ತಮ ಮೌಲ್ಯ ಅಥವಾ ಸಂದೇಶಗಳು ಸೂಚಿತವಾಗುವುದು ಅಪೇಕ್ಷಣೀಯವೆನ್ನಬಹುದು. ಪ್ರಸಂಗ ಕೃತಿಗಳಲ್ಲಿ ಪ್ರಕಟವಾಗಿ ಇಲ್ಲವಾದರೂ ಕೆಲವೊಮ್ಮೆ ಪಾತ್ರಧಾರಿಗಳು ಕೆಲವು ಆಶಯಗಳನ್ನೂ, ಸಮಕಾಲೀನ ಸಂವೇದನೆಗಳನ್ನೂ ತಮ್ಮ ವಾಚಿಕಾಭಿನಯದಲ್ಲಿ ಪ್ರಕಟಿಸುವುದುಂಟು. ಇದು ಸ್ವಾಗತಾರ್ಹವೇ. ಆದರೆ ಕೃತಿಗಳೇ ಆಶಯಗರ್ಭಿತವಾಗಿರುವುದು ಕಷ್ಟಕರ. ಸಮಕಾಲೀನ ಸಂದರ್ಭದಲ್ಲಿ ನಿಂತು ಒಂದು ರಂಗಕೃತಿಯನ್ನು ಸೃಜಿಸುವ ಕವಿಗೆ, ಸಮಕಾಲೀನ ಪ್ರಜ್ಞೆ ಹಾಗೂ ಸಂವೇದನೆಗಳನ್ನು ಕೃತಿಯ ಒಡಲಲ್ಲಿ ಕಲಾತ್ಮಕವಾಗಿ ಸಮೀಕರಿಸುವುದು ಒಂದು ಸವಾಲೂ ಅಹುದು.

ಪುರಾಣೋಕ್ತವಾದ ಕೆಲವು ಸನ್ನಿವೇಶಗಳನ್ನು ಇಂದಿನ ದೃಷ್ಟಿಯಿಂದ ಪುಷ್ಟಿಕರಿಸಲು ಸಾಧ್ಯವಿಲ್ಲದುದರಿಂದ ಔಚಿತ್ಯಪೂರ್ಣವಾಗಿ ಒಂದಿಷ್ಟು ಮಾರ್ಪಡಿಸಿಕೊಳ್ಳಬಹುದು. ಉದಾ: ಖಾಂಡವವನ ದಹನ ಪ್ರಸಂಗ. ಹಿಂದೆ ಕಾಡುಗಳು ದೊಡ್ಡ ಪ್ರಮಾಣದಲ್ಲಿದ್ದು, ಜನವಸತಿಗಳನ್ನು ವಿಸ್ತರಿಸಲು ಅಥವಾ ಮೃಗಗಳ ಹಾವಳಿಯನ್ನು ತಗ್ಗಿಸಲು ಕಾಡುಗಳನ್ನು ತಕ್ಕಮಟ್ಟಿಗೆ ನಾಶಮಾಡಬೇಕಾಗಿತ್ತು. ಅದು ಅಂದಿನ ಅವಶ್ಯಕತೆ ಆದರೆ, ಇಂದಿನ ಸನ್ನಿವೇಶ ತದ್ವಿರುದ್ಧವಾಗಿದೆ. ಈಗ ಕಾಡುಗಳನ್ನೂ, ವನ್ಯಪ್ರಾಣಿಗಳನ್ನೂ ಉಳಿಸಬೇಕಾಗಿದೆ. ಖಾಂಡವವನ ದಹನ ಭಾಗವನ್ನು ಹಿಂದಿನಂತೆಯೇ ಚಿತ್ರಿಸಿದರೂ, ಅದರ ಅನಿಷ್ಟ ಪರಿಣಾಮಗಳನ್ನು ಸೂಚಿಸಿ, ವನದಹನಗೈದ ಕೃಷ್ಣಾರ್ಜುನರು ಪಶ್ಚಾತ್ತಾಪಗೊಳ್ಳುವಂತೆ ಕಥೆಯನ್ನು ಸಂಯೋಜಿಸಬಹುದಾಗಿದೆ.

ಪರಶುರಾಮನ ಕೈಯ ಪರಶು, ಲೋಹಯುಗಾರಂಭದ ಹಾಗೂ ವನನಾಶದ ಸಂಕೇತವಾಗಿದೆ ಎಂದಿಟ್ಟುಕೊಂಡರೆ ವಿಪುಲವಾಗಿ ವನನಾಶಗೈದ ಪರಶುರಾಮನಿಗೆ ಕೊನೆಗೆ ಹೇಗೆ ನೆಲೆಸಲು ಊರಿಲ್ಲದಾಯಿತು ಎಂದು ಚಿತ್ರಿಸುವುದು ಪರಿಣಾಮಕಾರಿಯಾಗಬಹುದು.

ಹರಿಶ್ಚಂದ್ರನ ಸೈನಿಕರು ವಿಶ್ವಾಮಿತ್ರನ ಆಶ್ರಮದ ಪರಿಸರವನ್ನು ತೀರಾ ಕೆಡಿಸಿದ ಪರಿಣಾಮವಾಗಿಯೇ ಋಷಿಯ ಆಗ್ರಹಕ್ಕೆ ತುತ್ತಾಗಿ ಹರಿಶ್ಚಂದ್ರ ಪಾಡುಪಟ್ಟನೆಂದು ನಿರೂಪಿಸಬಹುದು. ಇದರಂತೆ ಪಾಂಡುಭೂಪತಿ ಮೊದಲಾದವರ ಮೃಗಯಾವಿಹಾರದ ಪ್ರಸಂಗಗಳನ್ನು ಭಿನ್ನ ರೀತಿಯಲ್ಲಿ ಚಿತ್ರಿಸಬಹುದು. ಸರ್ಪಕುಲವನ್ನು ಹನನ ಮಾಡಿ ಕುಷ್ಠ ರೋಗ ತಂದುಕೊಂಡ ಜನಮೇಜಯ ರಾಜನ ಕೃತ್ಯವನ್ನು ಈ ದೃಷ್ಟಿಯಿಂದ ವಿವೇಚಿಸಬಹುದು.

ದುಷ್ಯಂತನ ಮಗ ಭರತ ಚಿಕ್ಕವನಿರುವಾಗ ‘ಸರ್ವದಮನ’ನಾಗಿ ಹೇಗೆ ಹಿಂಸಾರುಚಿಯನ್ನು ಮೈಗೂಡಿಸಿದ್ದ ಎಂಬುದನ್ನು ‘ಭುವನ ಭಾಗ್ಯ’ ಎಂಬ ಪ್ರಸಂಗದಲ್ಲಿ ಚಿತ್ರಿಸುವ ಪ್ರಯತ್ನವನ್ನು ಮಾಡಿದ್ದೇನೆ. ಸರ್ವದಮನ ಸಿಂಹಶಿಶುಗಳಿಗೆ ಹಿಂಸೆ ನೀಡುತ್ತಿದ್ದನೆಂಬ, ಶಾಂಕುಂತಲ ನಾಟಕದಲ್ಲಿನ ಒಂದು ಎಳೆಯನ್ನು ಹಾಗೂ ‘ಸರ್ವದಮನ’ ಎಂಬ ಹೆಸರಿನ ಅರ್ಥವನ್ನು ಆಧರಿಸಿ, ಅವನು ಹುಡುಗು ಪ್ರಾಯದಲ್ಲಿ ‘ಸರ್ವದಮನ’ನಾಗಿ ಹೇಗೆ ಬೆಳೆದ ಎಂದು ತೋರಿಸಲಾಗಿದೆ. ನಿಷ್ಕಾರಣವಾಗಿ ಕಾಡಿನಲ್ಲಿ ಬೇಟೆಯಾಡುವುದು, ಕಾಡಿಗೆ ಬೆಂಕಿ ಇಕ್ಕುವುದು, ಆನೆ, ಸರ್ಪ ಇತ್ಯಾದಿಗಳ ನಾಶ ಮೊದಲಾದ ಕ್ರಿಯೆಗಳು ಇಲ್ಲಿ ನಡೆಯುತ್ತವೆ. ಮುಂದೆ ಆತ ಚಕ್ರವರ್ತಿ ಭರತನಾದಾಗ, ಅವನ ಮಕ್ಕಳು ಅಕಾಲದಲ್ಲಿ ಸಾಯುವ ದಾರುಣ ಸನ್ನಿವೇಶ ಪುರಾಣದಲ್ಲಿದೆ. ಇಂಥ ದುರಂತಕ್ಕೆ ಆತನಲ್ಲಿ ಮೊದಲು ನೆಲೆಸಿದ್ದ ಹಿಂಸಾಭಾವನೆಯೇ ಮೂಲ ಕಾರಣ ಎಂಬುದನ್ನು ಸೂಚಿಸಲಾಗಿದೆ. ನಮ್ಮ ಪ್ರಾಚೀನ ಕರ್ಮ ಸಿದ್ದಾಂತವು ಇಲ್ಲಿ ಪ್ರಸ್ತುತತೆಯನ್ನು ಪಡೆಯುತ್ತದೆ. ಪುರಾಣಗಳಲ್ಲಿ ಲಭ್ಯವಾಗುವ ಪೂರ್ವಾಪರ ಘಟನೆಗಳನ್ನು ಹೀಗೊಂದು ಪ್ರಸಂಗಕಥೆಯ ಚೌಕಟ್ಟಿನೊಳಗೆ ಅಡಕಗೊಳಿಸಿ ನಿರ್ದಿಷ್ಟ ಆಶಯವೊಂದನ್ನು ಹೊಮ್ಮಿಸಬಹುದು.

ಸಗರ ಚಕ್ರವರ್ತಿಯ ಅರುವತ್ತು ಸಾವಿರ ಮಕ್ಕಳು ಯಜ್ಞದ ಕುದುರೆಯನ್ನು ಹುಡುಕಲೆಂದು ಪಾತಾಳಕ್ಕೆ ಹೋಗಲು ಭೂಮಿಯನ್ನು ತೋಡಿ, ಸಾಗರ ಆಗುವುದಕ್ಕೆ ಕಾರಣೀಭೂತರಾದರೆಂದು ಪುರಾಣಗಳು ಬಣ್ಣಿಸುತ್ತವೆ. ಪರಿಸರವನ್ನು ವಿಕಾರಗೊಳಿಸಿದ ದೆಸೆಯಿಂದ ಅವರು ಭಸ್ಮದ ರಾಶಿಯಾಗಿ ಬಿದ್ದರೆಂದು ನಿರೂಪಿಸಲೂ ಸಾಧ್ಯವಿದೆ.

ಪ್ರಾಚೇತಸರು (ಹತ್ತು ಮಂದಿ) ವನನಾಶಕ್ಕೆ ವಿದ್ಯುಕ್ತರಾದಾಗ ಓಷಧೀಶನಾದ ಚಂದ್ರನು ಅವರನ್ನು ಸಂತೈಸಿ, ವೃಕ್ಷಕನ್ನೆಯಾದ ಮಾರಿಷೆಯನ್ನು ಅವರಿಗೆ ಲಗ್ನ ಮಾಡಿಕೊಡುವ ಕಥೆ ಸಾಂಕೇತಿಕವೂ ಸ್ವಾರಸ್ಯವೂ ಆಗಿದೆ. ಈ ಭಾಗವನ್ನು ಒಂದು ಪ್ರಸಂಗ ಭಾಗದಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ. ( ಆದಿಕವಿ ವಾಲ್ಮೀಕಿ) ಅರಣ್ಯನಾಶಕ್ಕೆ ಒಂದು ಪ್ರತಿಕ್ರಿಯೆಯಾಗಿ ಪ್ರಾಚೀನ ಕಾಲದಲ್ಲೇ ಈ ತೆರನಾದ ಕಥಾನಕಗಳು ರೂಪುಗೊಂಡದ್ದು ಕುತೂಹಲಕರವಾಗಿದೆ.

ಭಸ್ಮಾಸುರನಂಥ ದಾನವರ ಕಥೆಗಳಲ್ಲಿ, ಆಧುನಿಕ ವಿಜ್ಞಾನದ ವಿನಾಶಕರ ಪ್ರವೃತ್ತಿ ಹಾಗೂ ಸ್ವಯಂ ನಾಶದ ದುರಂತ ಸಂಭವಗಳನ್ನು ಮೂಡಿಸಲು ಸಾಧ್ಯವಿದೆ. ‘ತ್ರಿಪುರ ಮಥನ’ ಪ್ರಸಂಗದಲ್ಲಿ ಇಂಥದೊಂದು ಆಶಯವನ್ನು ಧ್ವನಿಸುವ ಪ್ರಯತ್ನವನ್ನು ಮಾಡಲಾಗಿದೆ.

ಚ್ಯವನನ ಕಥೆ ಕೇವಲ ಭೌತಿಕ ಕಾಯಕ್ಕೆ ಸಂಬಂಧಪಟ್ಟ ಕಾಯಕಲ್ಪವಾಗದೆ ಸಮಾಜಕ್ಕೆ ಆಗಬೇಕಾದ ಕಾಯಕಲ್ಪವೂ ಆಗುವುದು ಅಪೇಕ್ಷಣೀಯ. ದೇವಲೋಕದಲ್ಲಿ ಪಂಕ್ತಿಬಾಹಿರರೆನಿಸಿದ ಅಶ್ವಿನೀ ದೇವತೆಗಳು ಹವಿಸ್ಸು ಪಡೆದ ವೃತ್ತಾಂತವನ್ನು ಆಧುನಿಕ ಕಾಲದ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸುವಂತೆ ಬೆಳೆಸಬಹುದು.

ಸ್ವರ್ಗಪ್ರಾಪ್ತಿಗಾಗಿ ತಪಸ್ಸನ್ನು ಕೈಗೊಂಡಿದ್ದ ಶೂದ್ರ ಶಂಭುಕನ ತಲೆಕಡಿದು ಶ್ರೀ ರಾಮ ವರ್ಣಾಶ್ರಮ ಧರ್ಮವನ್ನು ಉಳಿಸಿದ ಎಂದು ಪ್ರತಿಪಾದಿಸುವ ಬದಲಾಗಿ, ಬೇರೇನೋ ದೊಡ್ಡ ಅಕೃತ್ಯವೆಸಗಿದುದಕ್ಕಾಗಿ ಶಂಭುಕನಿಗೆ ಶಾಸ್ತಿಯಾಯಿತು ಎಂದು ಕಥೆಯನ್ನು ಬದಲಾಯಿಸುವುದು ಮೇಲು.

ಪುರಾಣಗಳಲ್ಲಿ ಕೇವಲ ಕಪ್ಪು ಬಿಳುಪು ಪಾತ್ರಗಳಾಗಿ ಚಿತ್ರಿತವಾಗಿರುವ ಅನೇಕ ಪಾತ್ರಗಳನ್ನು ಮುಖ್ಯವಾಗಿ ಪ್ರತಿ ನಾಯಕ ಪಾತ್ರಗಳನ್ನು ಮನಃಶ್ಯಾಸ್ತ್ರೀಯ ಬೆಳಕಿನ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ಪಾತ್ರಗಳ ಮಾನಸ ಲೋಕದ ತುಮುಲ, ದ್ವಂದ್ವ, ಸಂಕೀರ್ಣತೆಗಳನ್ನು ಬಿಂಬಿಸಬಹುದು. ಮಾಗಧ, ರಾವಣ, ಭೌಮಾಸುರರಂಥ ಪಾತ್ರಗಳು ಈ ಬಗೆಯಿಂದ ಮರುಹುಟ್ಟು ಪಡೆಯಬಲ್ಲವು.

ಪ್ರಪಂಚವನ್ನು ತಲ್ಲಣಗೊಳಿಸುವ ಘೋರ ಮಾರಕ ವ್ಯಾಧಿಯಾದ ಏಡ್ಸ್ ಬಗ್ಗೆ ಜನಜಾಗೃತಿ ಮೂಡಿಸಲು ಉಳಿದ ಮಾಧ್ಯಮಗಳೊಂದಿಗೆ ಯಕ್ಷಗಾನ ಮಾಧ್ಯಮವೂ ಶ್ರಮಿಸಿದರೆ ತಪ್ಪಾದೀತೆ? ಯಕ್ಷಗಾನ ಮಾಧ್ಯಮದಲ್ಲಿ ಎಲ್ಲ ವಿಚಾರಗಳನ್ನು ಹೇಳುವುದು ಸಾಧ್ಯವಲ್ಲ; ಅಗತ್ಯವೂ ಇಲ್ಲ ಎನ್ನೋಣ. ಆದರೆ ಮಾಧ್ಯಮಕ್ಕೆ ಕೊರತೆಯಾಗದಂತೆ ಒಂದು ಮುಖ್ಯ ವಿಚಾರವನ್ನು ಹೇಳುವುದು ಸಾಧ್ಯವಾದರೆ ಆ ಸಾಧ್ಯತೆಯನ್ನು ಅನುಮೋದಿಸಬೇಕಾಗುತ್ತದೆ.

ಕವಿಗಳು ಬಂದ ಮೇಲೆ ಸಮಕಾಲೀನ ಸಂದೇಶ, ಸಂವೇದನೆಗಳನ್ನು ತಮ್ಮ ಯಕ್ಷಗಾನ ಕೃತಿಗಳಲ್ಲಿ ತರುವ ಪ್ರಯತ್ನ ಮಾಡಿದರೂ ಕಲೆಯ ಸಾಂಪ್ರದಾಯಿಕ ಆವರಣದ ಸೌಂದರ್ಯಕ್ಕೂ, ಔಚಿತ್ಯ ಪ್ರಜ್ಞೆಗೂ ಭಂಗ ಬಾರದಂತೆ ಅವುಗಳನ್ನು ರಂಗದಲ್ಲಿ ಪ್ರಸ್ತುತ ಪಡಿಸುವ ಕಲಾವಿದರ ಹೊಣೆಯೂ ಹಿರಿದಾಗಿದೆ.

(ಯಕ್ಷಾಂದೋಳ-ಅಮೃತ ಸೋಮೇಶ್ವರ ಪುಸ್ತಕದ ಆಯ್ದ ಭಾಗ)

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-nagoor

Yakshagana; ನಾಗೂರು ಶ್ರೀನಿವಾಸ ದೇವಾಡಿಗರಿಗೆ ಗಣ್ಯರ ಸಮಕ್ಷಮದಲ್ಲಿ ಸಮ್ಮಾನ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ನನಗೆ ಸಂಸ್ಕಾ ರ ಕೊಟ್ಟಿದ್ದೇ ಯಕ್ಷ ಗಾನ, ಅದೊಂದು ರಮ್ಯಾದ್ಭುತ ಲೋಕ: ನಟ ರಾಮಕೃಷ್ಣ

ನನಗೆ ಸಂಸ್ಕಾ ರ ಕೊಟ್ಟಿದ್ದೇ ಯಕ್ಷ ಗಾನ, ಅದೊಂದು ರಮ್ಯಾದ್ಭುತ ಲೋಕ: ನಟ ರಾಮಕೃಷ್ಣ

1-a-reee

Yakshagana; ಸಮಶ್ರುತಿಯಲ್ಲಿ ಹಾಡುವುದೇ ತೆಂಕುತಿಟ್ಟಿನ ಪರಂಪರೆ: ಪುತ್ತಿಗೆ ರಘುರಾಮ ಹೊಳ್ಳ

1-a-kota

Yakshagana ಮಕ್ಕಳ ಶಿಕ್ಷಣಕ್ಕೆ ಪೂರಕವೇ ಹೊರತು ಮಾರಕವಲ್ಲ: ಎಚ್‌.ಶ್ರೀಧರ ಹಂದೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.