Canada: ಜಸ್ಟಿನ್ ಟ್ರಾಡೊ ಉದ್ಧಟತನಕ್ಕೆ ತಕ್ಕ ಪ್ರತಿಕ್ರಿಯೆ
Team Udayavani, Oct 15, 2024, 6:00 AM IST
ಭಾರತವು “ಉಗ್ರ’ ಎಂದು ಹೆಸರಿಸಿದ್ದ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡದಲ್ಲಿರುವ ಭಾರತೀಯ ರಾಯಭಾರಿ ಮತ್ತು ಇತರ ಭಾರತೀಯ ರಾಜತಾಂತ್ರಿಕರು ಭಾಗಿಯಾಗಿದ್ದಾರೆ ಎಂಬುದಾಗಿ ಕೆನಡ ಮಾಡಿರುವ ಹೊಸ ಆರೋಪಕ್ಕೆ ಭಾರತೀಯ ಸರಕಾರ ನೀಡಿರುವ ಉಗ್ರ ಪ್ರತಿಕ್ರಿಯೆ ಟ್ರಾಡೊ ಸರಕಾರದ ಉದ್ಧಟತನಕ್ಕೆ ತಕ್ಕುದಾಗಿಯೇ ಇದೆ.
ಕೆನಡದ ಈ ಆರೋಪ ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿರುವ ಭಾರತೀಯ ವಿದೇಶಾಂಗ ಸಚಿವಾಲಯವು ಇದಕ್ಕೆ ಜಸ್ಟಿನ್ ಟ್ರಾಡೊ ಉದ್ದಕ್ಕೂ ಭಾರತದ ವಿರುದ್ಧ ಶತ್ರುತ್ವ ಭಾವವನ್ನೇ ಮೆರೆಯುತ್ತ ಬಂದಿರುವುದೇ ಸಾಕ್ಷಿ ಎಂದು ಸರಿಯಾಗಿಯೇ ತಿವಿದಿದೆ. ಅಷ್ಟೇ ಅಲ್ಲ, ಕೆನಡದಲ್ಲಿರುವ ಎಲ್ಲ ಭಾರತೀಯ ರಾಯಭಾರಿಗಳನ್ನು ಮರಳಿ ಕರೆಯಿಸಿಕೊಂಡಿದ್ದು, ರಾಜತಾಂತ್ರಿಕ ಸಂಬಂಧವನ್ನೇ ಕಡಿದುಕೊಂಡಿದೆ.
ಜಸ್ಟಿನ್ ಟ್ರಾಡೊ ಮತ್ತವರ ಸರಕಾರ ಭಾರತದಿಂದ ಪ್ರತ್ಯೇಕವಾಗಿ ಖಲಿಸ್ಥಾನ ಸ್ಥಾಪನೆಯನ್ನು ಬಯಸುತ್ತಿರುವ ಗುರು ಪತ್ವಂತ್ ಸಿಂಗ್ ಪನ್ನು ಮತ್ತು ಇತರ ಪ್ರತ್ಯೇಕತಾವಾದಿಗಳ ಕೈಗೊಂಬೆಯಾಗಿ ಭಾರತ ವಿರೋಧಿ ಮನಃಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕೆನಡದಲ್ಲಿ ನಡೆದ ವಿವಿಧ ಹತ್ಯೆ, ಹಲ್ಲೆಯಂತಹ ಘಟನೆಗಳಿಗೆ ಭಾರತವೇ ಕಾರಣ ಎಂದು ಟ್ರಾಡೊ ಆರೋಪಿಸಿದ್ದರು. ತನ್ನ ಈ ನಿಲುವಿನಿಂದಾಗಿ ಕೆನಡದಲ್ಲಿಯೇ ಟ್ರಾಡೊ ಭಾರೀ ಟೀಕೆ ಮತ್ತು ವಿರೋಧಕ್ಕೆ ಒಳಗಾಗಿದ್ದಾರೆ. ಅಲ್ಲದೆ ಕೆನಡದ ರಾಜಕಾರಣದಲ್ಲಿ ಖಲಿಸ್ಥಾನಿ ಮತ್ತು ಇತರ ಬಾಹ್ಯ ಶಕ್ತಿಗಳ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ಅಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ವಿಷಯದಲ್ಲಿ ಸಮಿತಿಯೊಂದು ರಚನೆಯಾಗಿದ್ದು, ಟ್ರಾಡೊ ಅದರ ಮುಂದೆ ಹಾಜರಾಗಬೇಕಾಗಿದೆ. ಈ ವಿಷಯ ದಿಂದ ಗಮನವನ್ನು ಬೇರೆಡೆಗೆ ಹರಿಯಿಸಲು ಟ್ರಾಡೊ ಭಾರತದ ಮೇಲೆ ಈಗ ಹೊಸ ಆಪಾದನೆಯನ್ನು ಹೊರಿಸಿದಂತಿದೆ. ಭಾರತೀಯ ವಿದೇಶಾಂಗ ಸಚಿವಾ ಲಯ ಕೂಡ ಕೆನಡಕ್ಕೆ ನೀಡಿರುವ ತಿರುಗೇಟಿನಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದೆ.
ಜಸ್ಟಿನ್ ಟ್ರಾಡೊ ಕೆನಡದಲ್ಲಿ ಮತ್ತು ತನ್ನ ಸರಕಾರದಲ್ಲಿ ಖಲಿಸ್ಥಾನಿ ಪ್ರತ್ಯೇಕತಾ ವಾದಿಗಳು ಮತ್ತು ಅವರ ಬೆಂಬಲಿಗರಿಗೆ ನಿರ್ಲಜ್ಜವಾಗಿ ಬಹುಪರಾಕು ಹೇಳುತ್ತಿ ರುವುದು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಕಟುವಾಗಿ ಹೇಳಿದ್ದು, ಇದು ಸರಿಯಾಗಿಯೇ ಇದೆ.
ಜಸ್ಟಿನ್ ಟ್ರಾಡೊ ಖಲಿಸ್ಥಾನಿ ಪ್ರತ್ಯೇಕತಾವಾದಿಗಳ ಪರವಾಗಿ ಇದ್ದಾರೆ ಎಂಬುದಕ್ಕೆ 2018ರಲ್ಲಿ ಅವರು ಭಾರತಕ್ಕೆ ಬಂದಿದ್ದಾಗ ಜಸ್ಪಾಲ್ ಅತ್ವಾಲ್‌ನನ್ನು ಔತಣಕೂಟಕ್ಕೆ ಆಹ್ವಾನಿಸಿದ್ದೇ ಸಾಕ್ಷಿ. ಈತ ಪಂಜಾಬ್ ಸರಕಾರದಲ್ಲಿ ಸಚಿವರಾಗಿದ್ದ ಮಾಲ್‌ಕಿಯತ್ ಸಿಂಗ್ ಸಿಧು ಅವರ ಹತ್ಯೆ ಪ್ರಯತ್ನದಲ್ಲಿ ದೋಷಿಯಾಗಿದ್ದ ಖಲಿಸ್ಥಾನಿ ಉಗ್ರ. 2019ರಲ್ಲಿ ಕೆನಡದ ಸಾರ್ವಜನಿಕ ಭದ್ರತ ಇಲಾಖೆಯು ಸಿಕ್ಖ್ ತೀವ್ರವಾದವನ್ನು ದೇಶದ ಅತ್ಯುಚ್ಚ ಐದು ಭೀತಿವಾದಿ ಅಪಾಯಗಳಲ್ಲಿ ಒಂದು ಎಂದು ಗುರುತಿಸಿತ್ತು. ಆದರೆ ಅಲ್ಲಿರುವ ಖಲಿಸ್ಥಾನಿ ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಮಣಿದು ಸಿಕ್ಖ್ ತೀವ್ರವಾದವನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕೆಲವೇ ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ಟ್ರಾಡೊ ಮೂಗು ತೂರಿಸಿದ್ದರು. ಟ್ರಾಡೊ ಅವರ ಭಾರತ ವಿರೋಧಿ ಮನಃಸ್ಥಿತಿ ಮತ್ತು ಅದಕ್ಕೆ ಏನು ಕಾರಣ ಎಂಬುದನ್ನು ವಿವರಿಸಲು ಇಷ್ಟು ಸಾಕು.
ಜಸ್ಟಿನ್ ಟ್ರಾಡೊ ಅಧಿಕಾರದಲ್ಲಿರುವಷ್ಟು ದಿನವೂ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಲೇ ಇರುತ್ತಾರೆ ಎಂದರೆ ಅತಿಶಯೋಕ್ತಿ ಆಗದು. ಭಾರತೀಯ ಸರಕಾರವು ಇದಕ್ಕೆಲ್ಲ ಮಣಿಯದೆ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವಲ್ಲಿ ದೃಢವಾಗಿರಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.