Explainer: FBI ವಾಂಟೆಡ್ ಲಿಸ್ಟ್ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್ ಯಾದವ್?
ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಎರಡು ದಿನದ ಮೊದಲು ನಿಜ್ಜರ್ ಹತ್ಯೆ ನಡೆದಿತ್ತು.
ನಾಗೇಂದ್ರ ತ್ರಾಸಿ, Oct 18, 2024, 3:55 PM IST
ಖಲಿಸ್ತಾನ್ ಭಯೋ*ತ್ಪಾದಕ ಗುರುಪತ್ ವಂತ್ ಸಿಂಗ್ ಪನ್ನು ಹ*ತ್ಯೆ ಸಂಚಿನಲ್ಲಿ ಭಾರತದ ರಾ (Research & Analysis) ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ಪ್ರಕಟನೆ ಬಿಡುಗಡೆ ಮಾಡಿದೆ. ಗುರುಪತ್ ವಂತ್ ಸಿಂಗ್ ನ್ಯೂಯಾರ್ಕ್ ನಿವಾಸಿಯಾಗಿದ್ದು, ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿದ್ದ.
ಗುರುಪತ್ ವಂತ್ ಪನ್ನುನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಜಸ್ಟೀಸ್ ಡಿಪಾರ್ಟ್ ಮೆಂಟ್ ಗುರುವಾರ (ಅ.17) ಯಾದವ್ ಗುರುತನ್ನು ಮೊದಲ ಬಾರಿಗೆ ಬಹಿರಂಗಗೊಳಿಸಿತ್ತು.
ಪ್ರಕರಣದಲ್ಲಿ ಆರೋಪಿಯಾಗಿರುವ ವಿಕಾಸ್ ಯಾದವ್ ನಾಪತ್ತೆಯಾಗಿದ್ದಾನೆ ಎಂದು ಜಸ್ಟೀಸ್ ಡಿಪಾರ್ಟ್ ಮೆಂಟ್ ತಿಳಿಸಿದೆ. ಅಮೆರಿಕ ನೆಲದಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ಹ*ತ್ಯೆಗೈಯುವ ಸಂಚಿನಲ್ಲಿ ಇಬ್ಬರು ಆರೋಪಿಗಳು ಶಾಮೀಲಾಗಿರುವುದಾಗಿ ಅಮೆರಿಕ ಆರೋಪಿಸಿದೆ.
ವಿಕಾಸ್ ಯಾದವ್ ಯಾರು?
ಪಿಟಿಐ ವರದಿ ಪ್ರಕಾರ, ಹರ್ಯಾಣ ಮೂಲದ ವಿಕಾಸ್ ಯಾದವ್ ಭಾರತದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ Rawನಲ್ಲಿ ಕ್ಯಾಬಿನೆಟ್ ಸೆಕ್ರೆಟರಿಯೇಟ್ ನಲ್ಲಿ ಉದ್ಯೋಗಿಯಾಗಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಪನ್ನು ಹ*ತ್ಯೆ ಪ್ರಕರಣದಲ್ಲಿ ಯಾದವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದು ಹೆಚ್ಚಿನ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಆರು ಅಡಿ ಎತ್ತರದ ಕಟ್ಟುಮಸ್ತಾದ ವಿಕಾಸ್ ಯಾದವ್ 1984ರ ಡಿಸೆಂಬರ್ 11ರಂದು ಹರ್ಯಾಣದ ಪ್ರಾಣ್ ಪುರದಲ್ಲಿ ಜನಿಸಿದ್ದರು. ತಲೆಮರೆಸಿಕೊಂಡಿರುವ ಯಾದವ್ ಪತ್ತೆಗಾಗಿ ಎಫ್ ಬಿಐ ಆತನ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಗುಪ್ತಚರ ಸಂಸ್ಥೆ ರಾನಲ್ಲಿ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಮತ್ತು ಇಂಟೆಲಿಜೆನ್ಸ್ ವಿಭಾಗದಲ್ಲಿ ಹಿರಿಯ ಫೀಲ್ಡ್ ಆಫೀಸರ್ ಆಗಿದ್ದ. ಅಲ್ಲದೇ ಈತ ಸಿಆರ್ ಪಿಎಫ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದ ಎನ್ನಲಾಗಿದೆ. ಆದರೆ ಭಾರತ ಈ ಬಗ್ಗೆ ಖಚಿತಪಡಿಸಿಲ್ಲ ಎಂದು ಅಮೆರಿಕ ಹೇಳಿದೆ.
ಚಾರ್ಜ್ ಶೀಟ್ ನಲ್ಲಿ ವಿಕಾಸ್ ಯಾದವ್ ಹೆಸರನ್ನು ಸಿಸಿ1 ಎಂದು ನಮೂದಿಸಲಾಗಿದೆ. ವಿಕಾಸ್ ಯಾದವ್ ಸಹಚರ ನಿಖಿಲ್ ಗುಪ್ತಾ ಅವರನ್ನು ಜೆಕ್ ರಿಪಬ್ಲಿಕ್ ನಲ್ಲಿ ಬಂಧಿಸಲಾಗಿತ್ತು. ನಂತರ ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ನಿಖಿಲ್ ಈಗ ಅಮೆರಿಕದ ಜೈಲಿನಲ್ಲಿದ್ದಾರೆ.
ಕೊಲೆ ಸಂಚಿಗೆ ಸಂಬಂಧಿಸಿದಂತೆ ಯಾದವ್ ಮತ್ತು ಗುಪ್ತಾ ನಡುವೆ ನಡೆದ ಸಂವಹನದ ವಿವರವನ್ನು ಪ್ರಾಸಿಕ್ಯೂಷನ್ ನೀಡಿದೆ. ಗುರುಪತ್ ವಂತ್ ಸಿಂಗ್ ಪನ್ನು ಬಾಡಿಗೆ ಕೊಲೆ ಸಂಚಿನಲ್ಲಿ ಅಂಡರ್ ಕವರ್ ಫೆಡರಲ್ ಏಜೆಂಟ್ ವೊಬ್ಬರಿಗೆ ಯಾದವ್ ಮತ್ತು ಗುಪ್ತಾ 1,00,000 ಡಾಲರ್ ಗುತ್ತಿಗೆ ನೀಡಿರುವುದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಜೂನ್ ನಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಮುನ್ನ ದಿನ ಪನ್ನು ಕೊಲೆ ನಡೆಸಲು 15,000 ಡಾಲರ್ ಮುಂಗಡ ಹಣ ಪಾವತಿಸಲಾಗಿತ್ತು. ಅದೇ ದಿನ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (45ವರ್ಷ)ನನ್ನು ಕೆನಡಾದ ವ್ಯಾಂಕೋವರ್ ಗುರುದ್ವಾರದ ಹೊರಭಾಗದಲ್ಲಿ ಗುಂಡಿಟ್ಟು ಹ*ತ್ಯೆಗೈಯಲಾಗಿತ್ತು.
ನಿಜ್ಜರ್ ಕೊಲೆಯಾದ ನಂತರ ಕೆನಡಾ ಪ್ರಧಾನಿ ಜಸ್ಟೀನ್ ಟ್ರ್ಯೂಡೊ ಈ ಘಟನೆಯಲ್ಲಿ ಭಾರತದ ಗುಪ್ತಚರ ಸಂಸ್ಥೆಯ ಏಜೆಂಟ್ ಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸುವ ಮೂಲಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.
ಅಮೆರಿಕ ಅಧಿಕಾರಿಗಳ ಮಾಹಿತಿ ಪ್ರಕಾರ, ಗುಪ್ತಾ ಪನ್ನುಗೆ ಸಂಬಂಧಿಸಿದ ವಿವರಗಳನ್ನು ಯಾದವ್ ಗೆ ನೀಡಿದ್ದು, ಇದರಲ್ಲಿ ನ್ಯೂಯಾರ್ಕ್ ವಿಳಾಸ, ದಿನಂಪ್ರತಿಯ ಪನ್ನು ಚಟುವಟಿಕೆಯ ಮಾಹಿತಿಯನ್ನು ಹಂತಕನಿಗೆ ರವಾನಿಸಿರುವುದಾಗಿ ವಿವರಿಸಿದೆ. ಆದರೆ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಕ್ಷಣವೇ ಕೊಲೆ ಕೃತ್ಯ ಎಸಗಲು ಮುಂದಾಗಬೇಡಿ ಎಂದು ಯಾದವ್, ಹಂತಕನಿಗೆ ಸಲಹೆ ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಏತನ್ಮಧ್ಯೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಎರಡು ದಿನದ ಮೊದಲು ನಿಜ್ಜರ್ ಹತ್ಯೆ ನಡೆದಿತ್ತು. ಇದರಿಂದಾಗಿ ಪನ್ನು ಕೊಲೆ ಸಂಚಿನ ಪ್ಲ್ಯಾನ್ ಬದಲಾವಣೆ ಕಂಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಖಲಿಸ್ತಾನಿ ಉಗ್ರ ಪನ್ನು ಕೊಲೆ ಸಂಚಿನಲ್ಲಿ ಯಾದವ್ ಮಾಸ್ಟರ್ ಮೈಂಡ್ ಆಗಿದ್ದು, 2023ರ ಮೇನಲ್ಲಿ ಗುಪ್ತಾನನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಿದೆ.
ಭಾರತದ ಪ್ರತಿಕ್ರಿಯೆ ಏನು?
ಆರೋಪಿ ವಿಕಾಸ್ ಯಾದವ್ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ( MEA)ಗುರುವಾರ ಪ್ರತಿಕ್ರಿಯೆ ನೀಡಿದ್ದು, ಗುರುಪತ್ ವಂತ್ ಸಿಂಗ್ ಪನ್ನು ಪ್ರಕರಣದಲ್ಲಿ ಅಮೆರಿಕ ಹೆಸರಿಸಿರುವ ಯಾದವ್ ಭಾರತ ಸರ್ಕಾರದ ಜತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ಭಾರತದ ನಿಯೋಗ ಭೇಟಿ:
ಭಾರತದ ಇಂಟರ್ ಏಜೆನ್ಸಿ ಟೀಮ್ ಎಫ್ ಬಿಐ ಯನ್ನು ಭೇಟಿಯಾಗಿ ಮಾತುಕತೆ ನಡೆಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾರತದ ಸಹಕಾರ ತೃಪ್ತಿ ತಂದಿದೆ. ಈ ಪ್ರಕರಣದ ವಿಚಾರಣೆ ಮುಂದುವರಿಯುತ್ತಿದೆ. ಆದರೆ ಭಾರತದ ಸಹಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದೆ.
ಭಾರತ ಸರ್ಕಾರಕ್ಕೆ ಅಮೆರಿಕ ಕೋರ್ಟ್ ನಿಂದ ಸಮನ್ಸ್ ಜಾರಿ:
ಸೆಪ್ಟೆಂಬರ್ ನಲ್ಲಿ ಅಮೆರಿಕ ಸರ್ಕಾರ ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿಗೊಳಿಸಿತ್ತು. ಪನ್ನು ಹ*ತ್ಯೆ ವಿಚಾರದಲ್ಲಿ ಸಮನ್ಸ್ ಜಾರಿಗೊಳಿಸಿರುವುದು ಸಂಪೂರ್ಣವಾಗಿ ಅನಗತ್ಯವಾಗಿದೆ ಎಂದು ಭಾರತ ಸರ್ಕಾರ ಪ್ರತಿಕ್ರಿಯೆ ನೀಡಿತ್ತು. ಪ್ರಕರಣದಲ್ಲಿ ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಾ ಮಾಜಿ ವರಿಷ್ಠ ಸಮಂತ್ ಗೋಯೆಲ್, ಯಾದವ ಮತ್ತು ಗುಪ್ತಾ 21 ದಿನದೊಳಗೆ ಉತ್ತರ ನೀಡುವಂತೆ ಅಮೆರಿಕ ಕೋರ್ಟ್ ಸಮನ್ಸ್ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
SM Krishna: ಪ್ರೊಫೆಸರ್ ಟು ಸಿಎಂ, ಗವರ್ನರ್, ವಿದೇಶಾಂಗ ಸಚಿವ…SMK ರಾಜಕೀಯ ಯಶೋಗಾಥೆ…
Exclusive: ಭಾರತ-ಮ್ಯಾನ್ಮಾರ್ ಗಡಿ; ಮೋದಿ ಸರ್ಕಾರದ Fence ನಿರ್ಮಾಣ ಯೋಜನೆಗೆ ವಿರೋಧವೇಕೆ!
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.