Yakshagana ಮಕ್ಕಳ ಶಿಕ್ಷಣಕ್ಕೆ ಪೂರಕವೇ ಹೊರತು ಮಾರಕವಲ್ಲ: ಎಚ್‌.ಶ್ರೀಧರ ಹಂದೆ

ಉದಯವಾಣಿ ಮಾತಿನ ಜರಡಿಯಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ

Team Udayavani, Oct 20, 2024, 4:39 PM IST

1-a-kota

ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಉದ್ದೇಶದಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹುಟ್ಟಿಕೊಂಡ ಅತ್ಯಂತ ಹಳೆಯ ಯಶಸ್ವಿ ಸಂಘಟನೆ ಸಾಲಿಗ್ರಾಮ ಮಕ್ಕಳ ಮೇಳ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕದ್ವಯರಾದ ದಿ| ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಹಂದಟ್ಟು ಶ್ರೀಧರ ಹಂದೆಯವರ ಕನಸಿನ ಕೂಸಾಗಿ 1975 ಅ.10ರಂದು ಈ ಸಂಸ್ಥೆ ಜನ್ಮ ತಾಳಿತು. ಯಕ್ಷಗಾನದ ಬಡಗುತಿಟ್ಟಿನ ಹಾರಾಡಿ, ಮಟಪಾಡಿ ತಿಟ್ಟುಗಳ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಕುಣಿತ, ವೇಷಭೂಷಣಗಳ ಅನನ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ದೇಶ-ವಿದೇಶದ ಉದ್ದಗಲಕ್ಕೂ ಸಂಸ್ಥೆ ಕೆಲಸ ಮಾಡಿದೆ. 1978ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಆಗಿನ ಸಚಿವರಾದ ಕೆ.ಎಚ್‌. ಶ್ರೀನಿವಾಸ್‌, ಡಾ|ಎಚ್‌.ಕೆ. ರಂಗನಾಥ್‌ ಅವರ ಸಹಕಾರದೊಂದಿಗೆ ಅಮೆರಿಕದಲ್ಲಿ ನಡೆದ ವಿಶ್ವ ಮಕ್ಕಳ ಉತ್ಸವದಲ್ಲಿ ಭಾರತದ ಏಕೈಕ ತಂಡವಾಗಿ ಪ್ರದರ್ಶನ ನೀಡಿತ್ತು. ಅನಂತರ ಸ್ಯಾನ್‌ ಜೋಸ್‌, ಅಟ್ಲಾಂಟಾ, ಬಫೆಲೋ, ನ್ಯೂಯಾರ್ಕ್‌, ವಾಷಿಂಗ್ಟನ್‌ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದೆ. 1985ರಲ್ಲಿ ಬಹ್ರೈನ್‌ನಲ್ಲಿ, 1988ರಲ್ಲಿ ಇಂಗ್ಲೆಂಡ್‌ನ‌ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಯಕ್ಷ ಪ್ರದರ್ಶನ ನೀಡಿದೆ.ಕೋಟ ಹಂದಟ್ಟುವಿನ ಶ್ರೀಧರ ಹಂದೆಯವರ ಮನೆಯಂಗಳದಲ್ಲಿ ಇಂದಿಗೂ ಮಕ್ಕಳಿಗೆ ಯಕ್ಷ ತರಬೇತಿಯನ್ನು ನೀಡಲಾಗುತ್ತಿದೆ. ಇದೀಗ ಈ ಮಕ್ಕಳ ಮೇಳ 50ರ ಸಂಭ್ರಮದಲ್ಲಿದ್ದು, ಶ್ರೀಧರ್‌ ಹಂದೆಯವರ ಪುತ್ರ ಉಪನ್ಯಾಸಕ, ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸುವರ್ಣ ಮಹೋತ್ಸವದ ಪ್ರಯುಕ್ತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಸುವರ್ಣ ಸಂಭ್ರಮದ ಶುಭ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಸಂಪ್ರದಾಯ ಶೈಲಿಯ ಹವ್ಯಾಸಿ ಭಾಗವತರು, ಮಕ್ಕಳ ಮೇಳದ ಸ್ಥಾಪಕರು ಮತ್ತು ಮಕ್ಕಳ ತಂಡಕ್ಕೆ ನಿರ್ದೇಶನ ನೀಡುವ 89ರ ಹರೆಯದ ಶ್ರೀಧರ ಹಂದೆಯವರು ಮಕ್ಕಳ ಮೇಳ ಹಾಗೂ ಯಕ್ಷಗಾನ ಕ್ಷೇತ್ರದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಕ್ಕಳ ಮೇಳದ ಕಲ್ಪನೆ ನಿಮ್ಮಲ್ಲಿ ಹೇಗೆ ಕುಡಿಯೊಡೆಯಿತು ?
ಮಕ್ಕಳ ಮೇಳವವನ್ನು ಸ್ಥಾಪಿಸಿದ ಕಾರ್ಕಡ ಶ್ರೀನಿವಾಸ ಉಡುಪರು ಹಾಗೂ ನಾನು ಶಿಕ್ಷಕರಾಗಿದ್ದೆವು. ಬಡಗುತಿಟ್ಟಿನ ಹಾರಾಡಿ, ಮಟಪಾಡಿ ತಿಟ್ಟುಗಳ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಕುಣಿತ, ವೇಷಭೂಷಣಗಳ ಬಗ್ಗೆ ನಮಗೆ ಸಾಕಷ್ಟು ಆಸಕ್ತಿ ಇತ್ತು. ಜತೆಗೆ ಆ ಪರಂಪರೆ ಮಾಯವಾಗುತ್ತಿದೆ ಎನ್ನುವ ಆತಂಕ ನಮಗೆ ಐದು ದಶಕದ ಹಿಂದೆಯೇ ಕಾಡಿತ್ತು. ಹೀಗಾಗಿ ಶಾಲೆ-ಶಾಲೆಗೆ ತೆರಳಿ ಮಕ್ಕಳಿಗೆ ಈ ಶೈಲಿಯನ್ನು ತರಬೇತಿ ನೀಡತೊಡಗಿದೆವು. ಅಲ್ಲಿನ ಆಯ್ದ ಕಲಾವಿದರನ್ನು ಕರೆತಂದು ಮಕ್ಕಳ ಮೇಳ ಕಟ್ಟಿದೆವು.

ಮಕ್ಕಳ ಮೇಳ ಸ್ಥಾಪನೆಯಿಂದ ಯಾವ ರೀತಿ ಸಾಧನೆ ಸಾಧ್ಯವಾಯಿತು ?
ಮಕ್ಕಳ ಮೇಳ ಅಂದಿಗೂ-ಇಂದಿಗೂ ಬಡಗುತಿಟ್ಟಿನ ಹಾರಾಡಿ, ಮಟಪಾಡಿ ತಿಟ್ಟುಗಳ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಕುಣಿತ, ವೇಷಭೂಷಣಗಳ ಆಧಾರದಲ್ಲೇ ಪ್ರದರ್ಶನ ನೀಡುತ್ತಿದೆ. ಜತೆಗೆ ಕಲೆಯ ಮೂಲಸತ್ವವನ್ನು ಅರಿಯಬಲ್ಲ, ಯಾವುದಕ್ಕೆ ಚಪ್ಪಾಳೆ ತಟ್ಟಬೇಕು, ಯಾವುದಕ್ಕೆ ತಟ್ಟಬಾರದು ಎನ್ನುವ ಪರಿಜ್ಞಾನವನ್ನು ಹೊಂದಿದ ಒಂದಷ್ಟು ಪ್ರಜ್ಞಾವಂತ ಪ್ರೇಕ್ಷಕರನ್ನು ಸೃಷ್ಟಿಸಿದ ತೃಪ್ತಿ ಇದೆ.

ಹಿರಿಯವರ ಮೇಳಕ್ಕೂ; ಕಿರಿಯವರ ಮೇಳಕ್ಕೂ ಏನು ವ್ಯತ್ಯಾಸ?
ಮಕ್ಕಳಿಗೆ ತರಬೇತಿ ನೀಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಅವರನ್ನು ಊರಿಂದ ಊರಿಗೆ ವಾಹನಗಳಲ್ಲಿ ಕರೆದುಕೊಂಡು ಹೋಗುವುದು, ಜೋಪಾನ ಮಾಡುವುದು ಇದೆಲ್ಲ ತುಂಬಾ ಕಷ್ಟ. ನಾನು ಮತ್ತು ನನ್ನ ಮಗ ಶಿಕ್ಷಕರಾಗಿದ್ದರಿಂದ ಮಕ್ಕಳಿಗೆ ಪ್ರೀತಿ ಜತೆಗೆ ಸ್ವಲ್ಪ ಭೀತಿ ಇತ್ತು. ಪ್ರದರ್ಶನಕ್ಕೆ ಒಂದೆರಡು ದಿನ ಇದ್ದಾಗ ಅಥವಾ ಕೆಲವೊಮ್ಮೆ ಪ್ರದರ್ಶನದ ದಿನವೇ ಆರೋಗ್ಯ ಕೈಕೊಡುವುದು, ಮಕ್ಕಳು ಬೆಳವಣಿಗೆಯಾದಂತೆ ಆ ಸ್ಥಾನಕ್ಕೆ ಮತ್ತೂಬ್ಬನನ್ನು ತಯಾರು ಮಾಡುವುದು ಇದೆಲ್ಲ ಸಮಸ್ಯೆಗಳು ಇರುತ್ತದೆ.

ವಿದೇಶಗಳಲ್ಲಿ ಮಕ್ಕಳ ಮೇಳವನ್ನು ಹೇಗೆ ಸ್ವೀಕರಿಸಿದ್ದರು ?
ವಿದೇಶಿಗರು ನಮ್ಮ ತಂಡವನ್ನು ಅತ್ಯಂತ ಪ್ರೀತಿಯಿಂದ ನೋಡಿದ್ದಾರೆ. ನಾವು ಕನ್ನಡದಲ್ಲೇ ಪ್ರದರ್ಶನ ನೀಡಿದರೂ ಅವರಿಗೆ ಭಾಷೆಯ ಅಡ್ಡಿಯಾಗಿರಲಿಲ್ಲ. ಪ್ರದರ್ಶನದ ಕೊನೆಯಲ್ಲಿ ಮಂಗಳ ಪದ್ಯ ಹಾಡುವಾಗ ರಾಷ್ಟ್ರಗೀತೆಗೆ ಎದ್ದು ನಿಲ್ಲುವಂತೆ ಎಲ್ಲರೂ ಎದ್ದು ನಿಂತು ಗೌರವ ನೀಡಿದ್ದು ನಮ್ಮ ಕಲೆಯ ಮೇಲೆ ಅವರಿಗಿದ್ದ ಪ್ರೀತಿಯನ್ನು ತೋರಿಸಿತ್ತು. ಅವರು ನಮ್ಮ ಯಕ್ಷಗಾನದ ವೇಷಭೂಷಣಗಳನ್ನು ಆಶ್ಚರ್ಯದಿಂದ ಅವಲೋಕಿಸಿದ್ದರು. ಸ್ತ್ರೀವೇಷ ಹಾಕಿದ ಹುಡುಗ ಹೆಣ್ಣೇ ಇರಬೇಕು ಎಂದು ಕುತೂಹಲದಿಂದ ಚೌಕಿ ತನಕ ಬಂದು ಇಣುಕಿದ್ದು ಇಂದಿಗೂ ಕಣ್ಣ ಮುಂದಿದೆ. ವೃಷಸೇನ ಕಾಳಗದಲ್ಲಿ ವೃಷಸೇನ ಮಡಿದ ಸನ್ನಿವೇಶವನ್ನು ನೋಡಿ ಚೌಕಿಗೆ ಬಂದು ಕಣ್ಣೀರು ಹಾಕಿದ್ದರು. ಅಭಿಮನ್ಯು ಕಾಳಗದ ಅಭಿಮನ್ಯುವನ್ನು ತಬ್ಬಿ “ಭೇಷ್‌ ಮಗನೇ’ ಎಂದಿದ್ದರು. ಒಟ್ಟಾರೆ ಯಕ್ಷಗಾನದ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ನಮ್ಮನ್ನು ಬೀಳ್ಕೊಡುವಾಗ ಮುಂದೆ ಯಾವಾಗ ಬರುತ್ತೀರಿ ಎಂದು ಕೇಳುತ್ತಿದ್ದರು.

ಕಲೆಯ ವಿಚಾರದಲ್ಲಿ ಅಂದಿನ ಮಕ್ಕಳಲ್ಲಿ ಮತ್ತು ಇಂದಿನ ಮಕ್ಕಳಲ್ಲಿ ಏನು ಬದಲಾವಣೆಯಾಗಿದೆ?
ಮಕ್ಕಳಿಗಿಂತ ಹೆಚ್ಚು ಹೆತ್ತವರಲ್ಲಿ ಬದಲಾವಣೆಯಾಗಿದೆ. ಮೊದಲೆಲ್ಲ ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಇದ್ದಿದ್ದರೆ ಯಕ್ಷಗಾನ ಮಾತ್ರ ಕಲಿಸುತ್ತಿದ್ದರು. ಆದರೆ ಈಗ ಹಾಗಲ್ಲ ತಮ್ಮ ಮಕ್ಕಳು ಯಕ್ಷಗಾನ, ನಾಟಕ, ಭಾಷಣ, ಹಾಡುವುದು, ಕುಣಿಯುವುದು, ಹತ್ತಾರು ಕ್ರೀಡೆಗಳಲ್ಲಿ ಭಾಗವಹಿಸುವುದು… ಹೀಗೆ ಎಲ್ಲವನ್ನೂ ಕಲಿಯಬೇಕು ಎನ್ನುವ ಹಪಾಹಪಿ ಹೆತ್ತವರಲ್ಲಿ ಹೆಚ್ಚುತ್ತಿದೆ. ಟಿ.ವಿ. ರಿಯಾಲಿಟಿ ಶೋಗಳು
ಈ ರೀತಿ ಮಾಡಿಬಿಟ್ಟಿದೆ. ಹೀಗಾಗಿ ಮಕ್ಕಳು ಯಾವುದನ್ನೂ ಸರಿಯಾಗಿ ಕಲಿಯದ ಸ್ಥಿತಿ ಇದೆ. ಮಕ್ಕಳ ಆಸಕ್ತಿಯ ಯಾವುದಾದರು ಒಂದೆರಡು ಕ್ಷೇತ್ರ ಆಯ್ದು ಕಲಿಸಿದರೆ ಪ್ರಬುದ್ಧತೆ ಸಾಧ್ಯ.

ಮಕ್ಕಳ ಮೇಳಕ್ಕೆ ಈಗಲೂ ಬೇಡಿಕೆ ಇದೆಯಾ?
ಸಂಪ್ರದಾಯಬದ್ಧ ಒಳ್ಳೆಯ ಪ್ರದರ್ಶನಗಳನ್ನು ನೀಡಿದರೆ ಸ್ವೀಕರಿಸುವ ಪ್ರೇಕ್ಷಕ ಇಂದಿಗೂ ಇದ್ದಾನೆ. ಇದೇ ಕಾರಣಕ್ಕೆ ಮಕ್ಕಳ ಮೇಳದ ಪ್ರದರ್ಶನಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ.

ಯಕ್ಷಗಾನ ಕಲೆ ಮೂಲಸತ್ವ ಕಳೆದುಕೊಳ್ಳಲು ಕಾರಣವೇನು?
ಯಕ್ಷಗಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಭಾಗವತರು ರಂಗನಿರ್ದೇಶಕರಾಗಿದ್ದರು. ಅವರ ಸೂಚನೆಯನ್ನು ಎಲ್ಲ ಕಲಾವಿದರು ಪಾಲಿಸುತ್ತಿದ್ದರು. ಹೀಗಾಗಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು. ಆದರೆ ಈಗ ಭಾಗವತರಿಗೆ ಆ ಗೌರವವಿಲ್ಲದಿರುವುದರಿಂದ ಯಕ್ಷಗಾನಕ್ಕೆ ನಿರ್ದೇಶಕರೇ ಇಲ್ಲವಾಗಿದೆ. ಮತ್ತೆ ಯಕ್ಷಗಾನ ಕ್ಷೇತ್ರದ ಋಣಾತ್ಮಕ ಬದಲಾವಣೆಗಳಿಗೆ ಪ್ರೇಕ್ಷಕನೇ ದೊಡ್ಡ ಕಾರಣವಾಗಿದ್ದಾನೆ. ಯಾಕೆಂದರೆ ಆರೇಳು ದಶಕದ ಹಿಂದೆ ಯಕ್ಷಗಾನ ಪ್ರದರ್ಶನ ನಡೆಯುವಾಗ ಚಪ್ಪಾಳೆ, ಶಿಳ್ಳೆ ಹೊಡೆದು ಕಲಾವಿದನನ್ನು ಹುರಿದುಂಬಿಸುವ ಕ್ರಮ ಅಪರೂಪವಾಗಿತ್ತು. ಕೇವಲ ಕಣ್ಣಸನ್ನೆ, ಪ್ರದರ್ಶನ ಮುಗಿದ ಮೇಲೆ ಚೌಕಿಗೆ ಹೋಗಿ ಶಹಭಾಷ್‌ ಎನ್ನುತ್ತಿದ್ದರು. ಈಗ ಪ್ರೇಕ್ಷಕನ ಶಿಳ್ಳೆ, ಚಪ್ಪಾಳೆ ಧ್ವನಿಯ ಆಧಾರದಲ್ಲಿ ಕಲಾವಿದ ಕೆಲಸ ಮಾಡುವ ಕಾಲ ಬಂದಿದೆ. ಪ್ರೇಕ್ಷಕನಿಗೆ ಯಾವುದಕ್ಕೆ ಚಪ್ಪಾಳೆ ತಟ್ಟಬೇಕು. ಯಾವುದಕ್ಕೆ ತಟ್ಟಬಾರದು ಎನ್ನುವ ಪರಿಜ್ಞಾನ ಇಲ್ಲ. ಈ ಕಾರಣದಿಂದಾಗಿ ಕಲೆ ಹಾಳಾಗುತ್ತಿದೆ.

ಯಕ್ಷಗಾನದಲ್ಲಿ ಸಿನೆಮಾ ಪ್ರಭಾವ ಬೀರುತ್ತಿದೆ; ಸಂಪ್ರದಾಯವಿಲ್ಲ ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯ?
ಯಕ್ಷಗಾನದ ಮೇಲೆ ಸಿನೆಮಾ ಪ್ರಭಾವ ಆರಂಭವಾಗಿ ಐದಾರು ದಶಕಗಳೇ ಕಳೆದಿದೆ. ಯಕ್ಷಗಾನ ಕಲೆಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಹಾಗೂ ಕಲಾವಿದರಿಗೆ ಸೌಲಭ್ಯ, ಉತ್ತಮ ಸಂಬಳವನ್ನು ನೀಡಲು ಡೇರೆ ಮೇಳಗಳ ಕೊಡುಗೆ ಅತ್ಯಂತ ದೊಡ್ಡದು. ಆದರೆ ಡೇರೆ ಆಟವನ್ನು ನೋಡುವ ಪ್ರೇಕ್ಷಕರು ಹಣ ಕೊಟ್ಟು ಬರುವುದರಿಂದ ಮತ್ತು ಪ್ರೇಕ್ಷಕನ ಅಭಿರುಚಿಗೆ ತಕ್ಕಂತೆ ಆಟಗಳನ್ನು ಆಯೋಜಿಸಬೇಕಾದ ಅನಿವಾರ್ಯ ಯಜಮಾನನಿಗೆ ಉಂಟಾದ್ದರಿಂದ ಆತನನ್ನು ತೃಪ್ತಿಪಡಿಸುವ ಸಲುವಾಗಿ ಡೇರೆ ಮೇಳಗಳಲ್ಲಿ ಸಿನೆಮಾ ಪ್ರಭಾವ ಆರಂಭವಾಯಿತು. ಅನಂತರ ಬಯಲಾಟ ಮೇಳಗಳಲ್ಲೂ ಇದರ ಅನುಕರಣೆ ನಡೆಯಿತು.

ಅಂದಿನ ಕಾಲದ ಯಕ್ಷಗಾನ; ಇಂದಿನ ಯಕ್ಷಗಾನ ನೋಡುವಾಗ ಏನನಿಸುತ್ತದೆ?
ಆ ಕಾಲದಲ್ಲಿ ಹಾರಾಡಿ ರಾಮ ಗಾಣಿಗರ ಕರ್ಣ, ಕುಷ್ಠ ಗಾಣಿಗರ ಅರ್ಜುನ, ವೀರಭದ್ರ ನಾಯ್ಕರ ಅತಿಕಾಯ, ವೀರಮಣಿ ವೇಷಗಳನ್ನು ನೋಡಿದಾಗ ಕರ್ಣ, ಅರ್ಜುನ, ವೀರಮಣಿ ಎಂದರೆ ಹೀಗೆ ಇದ್ದಿರಬೇಕು ಎನ್ನುವ ಕಲ್ಪನೆ ಬರುತ್ತಿತ್ತು. ಆದರೆ ಈಗ ಆ ರೀತಿಯ ಪ್ರದರ್ಶನಗಳು ಕಾಣಸಿಗುವುದೇ ಇಲ್ಲ. ಮೊದಲು ಮೇಳದಲ್ಲಿ ಹತ್ತಾರು ಮಂದಿ ಪ್ರಬುದ್ಧ ಕಲಾವಿದರು ಇರುತ್ತಿದ್ದರು. ಆದರೆ ಈಗ ಒಬ್ಬ ಒಳ್ಳೆಯ ವೇಷಧಾರಿ ಇದ್ದರೂ ಆತನಿಗೆ ಎದುರು ಕಲಾವಿದ ಒಳ್ಳೆಯವನು ಸಿಗುವುದಿಲ್ಲ. ಈ ಕಾರಣಕ್ಕೆ ಉತ್ತಮ ಪ್ರದರ್ಶನ ಸಾಧ್ಯವಾಗುತ್ತಿಲ್ಲ.

ಯಕ್ಷಗಾನ ಕಲಿಕೆಯಿಂದ ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗುತ್ತದೆ ಎಂಬ ಅಭಿಪ್ರಾಯ ಇದೆಯಲ್ಲ?
ಇದು ಖಂಡಿತವಾಗಿಯೂ ತಪ್ಪು ಅಭಿಪ್ರಾಯ. ನಮ್ಮಲ್ಲಿ ನೂರಾರು ಮಕ್ಕಳು ತರಬೇತಿ ಪಡೆದಿದ್ದಾರೆ. ಇದರಲ್ಲಿ ಈಗ ಎಂಜಿನಿಯರ್‌ಗಳು, ಡಾಕ್ಟರ್‌, ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಉದ್ಯೋಗಿಗಳಾಗಿರುವವರ ಸಂಖ್ಯೆ ದೊಡ್ಡದಿದೆ. ಇದುವರೆಗೆ ಒಬ್ಬರೇ ಒಬ್ಬ ಹೆತ್ತವರು ನನ್ನ ಮಗ ನಿಮ್ಮಲ್ಲಿ ಯಕ್ಷಗಾನ ಕಲಿತು ಹಾಳಾದ ಎಂದು ಹೇಳಿದವರಿಲ್ಲ. ಯಕ್ಷಗಾನದಿಂದ ಮಕ್ಕಳಲ್ಲಿ ಸಭಾಕಂಪನ ಮಾಯವಾಗಿ ಬುದ್ಧಿವಂತಿಕೆ, ಪುರಾಣ ಜ್ಞಾನ, ಸಮಾಜದಲ್ಲಿ ಬೆರೆಯುವ ಗುಣ ಹೆಚ್ಚುತ್ತದೆ. ಯಕ್ಷಗಾನ ಕಲೆ ಮಕ್ಕಳ ಶಿಕ್ಷಣಕ್ಕೆ ಪೂರಕವೇ ಹೊರತು ಮಾರಕವಲ್ಲ.

* ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

8-sirsi

Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ

13

ಪುರಾಣ ಪ್ರಸಂಗ ಕಾಯಕಲ್ಪ-ಯಕ್ಷಗಾನದ ಸಾಂಪ್ರದಾಯಿಕ ಆವರಣದ ಸೌಂದರ್ಯ, ಔಚಿತ್ಯ ಪ್ರಜ್ಞೆ

1-weqewewqe

Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್‌ ಗಣಪತಿ ಭಟ್‌

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.