Ullal: ಕುಸಿಯುವ ಭೀತಿಯಲ್ಲಿದೆ ಗ್ರಾಮ ಪಂಚಾಯತ್ ಸದಸ್ಯೆ ಮನೆ!
ರಸ್ತೆ ಬದಿ ಚರಂಡಿ ಅಗೆತದಿಂದ ಕುಸಿಯುತ್ತಿರುವ ಮಣ್ಣು, ಮನೆಯ ಪಂಚಾಂಗವೇ ಅಪಾಯದಲ್ಲಿ; ಗ್ರಾ. ಪಂ. ಸದಸ್ಯೆಯ ಸಂಕಷ್ಟಕ್ಕೂ ಸ್ಪಂದಿಸದ ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ
Team Udayavani, Oct 20, 2024, 5:28 PM IST
ಉಳ್ಳಾಲ: ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕೆರೆಯಲ್ಲಿ ಪಂಚಾಯತ್ ಸದಸ್ಯೆಯೊಬ್ಬರ ಮನೆಯೇ ಕುಸಿದು ಬೀಳುವ ಅಪಾಯಕ್ಕೆ ಸಿಲುಕಿದೆ. ರಸ್ತೆ ಪಕ್ಕ ಸ್ವಲ್ಪ ಎತ್ತರದ ಜಾಗದಲ್ಲಿರುವ ಮನೆಯ ಅಂಗಳ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು, ಅಡಿಪಾಯವೇ ಅಪಾಯಕ್ಕೆ ಸಿಲುಕುವಂತಿದೆ. ಮನೆಯ ಎದುರಿನ ಕುಸಿದ ಭಾಗಕ್ಕೆ ಪ್ಲಾಸ್ಟಿಕ್ ಶೀಟ್ ಮತ್ತು ಹಗ್ಗವನ್ನು ಕಟ್ಟಿ ಜೀವ ಕೈಯಲ್ಲಿಟ್ಟುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಬೆಳ್ಮ ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತಾ ರೈ ಅವರ ಮನೆಯೇ ಈ ಸ್ಥಿತಿಯಲ್ಲಿರುವುದು. ಮಳೆಗಾಲ ಆರಂಭದಲ್ಲಿ ಮನೆಯ ಎದುರಿನ ಧರೆ ಕುಸಿಯಲು ಆರಂಭಿಸಿತ್ತು. ನಾಲ್ಕು ತಿಂಗಳುಗಳಿಂದ ಪಂಚಾಯತ್, ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಈ ಮನೆಯ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಬಡ ಕುಟುಂಬವಾಗಿದ್ದರಿಂದ ಬದಲಿ ವ್ಯವಸ್ಥೆಗೆ ಅಸಾಧ್ಯವಾಗಿದೆ.
ಈ ಬಾರಿ ಮಳೆಗಾಲದಲ್ಲಿ ಹಲವು ಕಡೆ ಭೂಕುಸಿತಗಳು ಸಂಭವಿಸಿವೆ. ಅದರಲ್ಲೂ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಧರೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಆಗಮಿಸಿದಕಂದಾಯ ಸಚಿವರು ಜಿಲ್ಲೆಯಲ್ಲಿ ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಸ್ಥಳೀಯವಾಗಿ ಸರ್ವೇ ನಡೆಸಲು ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಆದೇಶ ನೀಡಿದ್ದರು. ಆದರೆ ಸಚಿವರ ಆದೇಶ ಕೇವಲ ಹೇಳಿಕೆಗೆ ಸೀಮಿತವಾಗಿದೆ.
ಗ್ರಾ.ಪಂ. ಸದಸ್ಯೆಯಾಗಿರುವ ಇವರೇ ಮನೆಯ ಸಮಸ್ಯೆಗಾಗಿ ನಾಲ್ಕು ತಿಂಗಳುಗಳಿಂದ ಓಡಾಡುತ್ತಿದ್ದರೂ ಫಲ ಸಿಕ್ಕಿಲ್ಲ. ಇನ್ನು ಜನಸಾಮಾನ್ಯರ ಸಮಸ್ಯೆ ಬಗೆಹರಿಯುವುದು ಹೇಗೆ ಎನ್ನುತ್ತಾರೆ ಸ್ಥಳೀಯರು. ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಈ ಮನೆ ಕುಸಿಯುವ ಭೀತಿಯಲ್ಲಿದೆ. ಜಿಲ್ಲಾಡಳಿತ ತತ್‌ಕ್ಷಣ ಸ್ಪಂದಿಸಿ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆ ಮಾಡಿ ತಡೆಗೋಡೆ ಕಟ್ಟಿ ಮನೆ ಉಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ್ ಆಗ್ರಹಿಸಿದ್ದಾರೆ.
ಏನಾದರೂ ಆದರೆ ಜಿಲ್ಲಾಡಳಿತವೇ ಹೊಣೆ
ಲೋಕೋಪಯೋಗಿ ಇಲಾಖೆಯ ಚರಂಡಿ ನಿರ್ಮಾಣದ ಕಾರಣ ಮಣ್ಣು ಕುಸಿದಿದೆ. ಇಲಾಖೆಯನ್ನು ವಿಚಾರಿಸಿದರೆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನುತ್ತಾರೆ. ಪ್ರತೀ ಬಾರಿ ಮಳೆ ಬರುವಾಗ ದೇವರ ಮೇಲೆ ಭಾರ ಇಟ್ಟು ಮನೆಯಲ್ಲೇ ವಾಸ ಮಾಡುತ್ತಿದ್ದೇನೆ. ಬಾಡಿಗೆ ಮನೆಯಲ್ಲಿ ನಿಲ್ಲುವಷ್ಟು ಆರ್ಥಿಕ ಸ್ಥಿತಿವಂತರಲ್ಲ. ನನ್ನ ಮನೆಯನ್ನು ಉಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಏನಾದರೂ ಅವಘಡ ಆದರೆ ಇದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯೇ ಹೊಣೆಯಾಗಲಿದೆ.
– ಪುಷ್ಪಲತಾ ರೈ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯೆ
ತಡೆಗೋಡೆ ಆಶ್ವಾಸನೆ ಕಡತದಲ್ಲೇ ಬಾಕಿ
ಲೋಕೋಪಯೋಗಿ ಇಲಾಖೆಯ ಪ್ರಮಾದದಿಂದ ಈ ಮನೆ ಕುಸಿಯುವ ಹಂತಕ್ಕೆ ತಲುಪಿದೆ. ಪ್ರಾಕೃತಿಕ ವಿಕೋಪ ಯೋಜನೆಯಡಿ ತಡೆಗೋಡೆ ನಿರ್ಮಿಸಲು ಸರ್ವೇ ನಡೆಸಿ ಅಧಿಕಾರಿಗಳು ಯೋಜನೆ ರೂಪಿಸಿದರೂ ಈವರೆಗೆ ಕಾರ್ಯಗತವಾಗಿಲ್ಲ. ಘಟನ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್, ಗ್ರಾ.ಪಂ. ಅಧಿಕಾರಿಗಳು, ಭೂವಿಜ್ಞಾನ ಅಧಿಕಾರಿಗಳು, ಎಂಜಿನಿಯರ್‌ಗಳು ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚವನ್ನು ಅಂದಾಜಿಸಿ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಯೋಜನೆ ಕಡತದಲ್ಲೇ ಇದ್ದು ಆದೇಶ ಇನ್ನೂ ಸಿಕ್ಕಿಲ್ಲ.
ಚರಂಡಿ ಅಗೆತವೇ ಕುಸಿತಕ್ಕೆ ಕಾರಣ
ಬೆಳ್ಮ ಗ್ರಾಮದ ದೇರಳಕಟ್ಟೆಯಿಂದ ಕಾನಕೆರೆಯನ್ನು ಸಂಪರ್ಕಿಸುವ ರಸ್ತೆ ಇಳಿಜಾರು ಪ್ರದೇಶದಲ್ಲಿದ್ದು, ಮಳೆಗಾಲ ಆರಂಭದಲ್ಲಿ ಮಳೆ ನೀರು ಹರಿದು ಹೋಗಲು ಲೋಕೋಪಯೋಗಿ ಇಲಾಖೆ ಚರಂಡಿ ನಿರ್ಮಿಸಿತ್ತು. ಈ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಮಣ್ಣು ಅಗೆತದಿಂದ ಈ ಕುಸಿತ ಆರಂಭಗೊಂಡಿದ್ದು, ಪ್ರತೀ ಬಾರಿ ಮಳೆ ಬಂದಾಗಲೂ ಹಂತ ಹಂತವಾಗಿ ಮಣ್ಣು ಕುಸಿದು ಇದೀಗ ಮನೆ ಕುಸಿಯುವ ಭೀತಿಯಲ್ಲಿದೆ.
-ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.