![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 22, 2024, 2:41 PM IST
ಕಲ್ಲಡ್ಕ-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಅಪ್ಪೇರಿಪಾದೆ ಬಳಿ ರಸ್ತೆಯ ಹೊಂಡಗಳು(1), ಕಲ್ಲಡ್ಕ-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಕಾಶಿಮಠ ಬಳಿ ನೂತನ ರಸ್ತೆಯಲ್ಲಿ ಹೊಂಡಗಳು(2), ಕಡಂಬು ಬಳಿ ರಸ್ತೆಯಲ್ಲಿ ಹೊಂಡಗಳು(3).
ವಿಟ್ಲ: ವಿಟ್ಲ ಮೂಲಕ ಅಂತಾರಾಜ್ಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗುತ್ತವೆ. ಅಂತಾರಾಜ್ಯ ಹೆದ್ದಾರಿ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ, ರಾಜ್ಯ ಹೆದ್ದಾರಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುತ್ತದೆ. ಈ ಹೆದ್ದಾರಿಗಳ ಸ್ಥಿತಿ ಹದಗೆಟ್ಟಿದೆ. ಹೆದ್ದಾರಿಯಲ್ಲಿ ಹೊಂಡಗಳಿಂದಾಗಿ ವಾಹನ ಸವಾರರು, ಮಾಲಕರು, ಚಾಲಕರು ಕಂಗಾಲಾಗಿದ್ದಾರೆ.
ಒಕ್ಕೆತ್ತೂರಿನಿಂದ ಕಾಶಿಮಠ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 5 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಗೊಳ್ಳಲಾಗಿತ್ತು. ಆದರೆ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಕರ್ಣಾಟಕ ಬ್ಯಾಂಕಿನ ವಿಟ್ಲ ಶಾಖೆಯ ಮುಂಭಾಗದಲ್ಲಿ ಸುಮಾರು 150 ಮೀಟರ್ ಉದ್ದದ ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿಯೂ ಇಲ್ಲ. ಇಲ್ಲಿ ನಿತ್ಯವೂ ಸಂಚಾರ ಕಷ್ಟವಾಗಿದೆ. ಹೊಂಡ ಗುಂಡಿಗಳ ಪರಿಣಾಮ ವಾಹನಗಳ ಸಾಲೂ ಆಗಾಗ ಬೆಳೆಯುತ್ತದೆ. ಮಳೆ ಜೋರಾದಾಗ ಕೃತಕ ಪ್ರವಾಹವೂ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಹೆದ್ದಾರಿ ಅಭಿವೃದ್ಧಿಯಾಗಿ ಕೇವಲ ನಾಲ್ಕು ತಿಂಗಳಲ್ಲೇ ಕಾಶಿಮಠ ಪ್ರದೇಶದಲ್ಲಿ ಹೊಂಡ ಬಿದ್ದಿದೆ. ಕೆಲವು ಕಡೆ ರಸ್ತೆ ಬಿರಿಯುತ್ತಿದೆ.
ಕಲ್ಲಡ್ಕ-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಪೇಟೆಯ ಬಳಿ ರಸ್ತೆಯ ಹೊಂಡಗಳು
ಕಾಶಿಮಠದಿಂದ ಉಕ್ಕುಡ ವರೆಗೆ ರಸ್ತೆ ತೀರಾ ಹದಗೆಟ್ಟಿದೆ. ವಿಟ್ಲ ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ಕೂಡಾ ಡಾಮರು ರಸ್ತೆ ಮಾಯವಾಗಿ ಮಣ್ಣಿನ ರಸ್ತೆಯಂತೆ, ಕೆಸರುಗುಂಡಿಯಂತಾಗಿದೆ.
ವಿಟ್ಲ ಕಬಕ ರಸ್ತೆ ಅಭಿವೃದ್ಧಿಯಾಗಿದ್ದರೂ ಕಬಕದಿಂದ ವಿಟ್ಲ ಆಗಮಿಸುವ ರಸ್ತೆಯಲ್ಲಿ ಹೊಂಡಗಳು ದೊಡ್ಡದಾಗುತ್ತಿದ್ದು ಅಯೋಮಯ ಸ್ಥಿತಿ ಉಂಟಾಗಿದೆ. ಈ ರಸ್ತೆಗಳು ರಾಜ್ಯ, ಅಂತಾರಾಜ್ಯ ಹೆದ್ದಾರಿಯೆಂದು ಕರೆಯಲಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿಲ್ಲ.
-ಉದಯಶಂಕರ್ ನೀರ್ಪಾಜೆ
You seem to have an Ad Blocker on.
To continue reading, please turn it off or whitelist Udayavani.