Gangolli ಬಂದರಿಗೆ ಮರೀಚಿಕೆಯಾದ ಅಭಿವೃದ್ಧಿ
ಸೂಕ್ತ ಭದ್ರತೆ ಇಲ್ಲ , ಶೌಚಾಲಯಗಳಿಲ್ಲ , ಕುಡಿಯಲು ನೀರಿಲ್ಲ, ವಿಶ್ರಾಂತಿ ಗೃಹಗಳಿಲ್ಲ
Team Udayavani, Oct 22, 2024, 4:49 PM IST
ಮೀನುಗಾರಿಕೆ ಚಟುವಟಿಕೆ ಕಡಿಮೆಯಾಗಿರುವುದರಿಂದ ಬಿಕೋ ಎನ್ನುತ್ತಿರುವ ಗಂಗೊಳ್ಳಿ ಬಂದರ
ಗಂಗೊಳ್ಳಿ: ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಮೀನುಗಾರಿಕಾ ಬಂದರು ಕರಾವಳಿ ಜಿಲ್ಲೆಗಳ ಪೈಕಿಯೇ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಬಂದರು ಕೂಡ ಹೌದು. ಬಂದರು ಅಭಿವೃದ್ಧಿಯಾಗಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದರೂ, ಬಂದರಿನಲ್ಲಿ ನಡೆದ ಕಳಪೆ ಕಾಮಗಾರಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ದಶಕಗಳಿಂದ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಶೌಚಾಲಯಗಳಿಲ್ಲ
ಪ್ರತಿ ವರ್ಷ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಹೀಗಾಗಿ ವ್ಯವಹಾರ ನಿಮಿತ್ತ ಬಂದರಿಗೆ ಬರುವ ಮೀನುಗಾರ ಮಹಿಳೆಯರು ಹಾಗೂ ಪುರುಷರು ತೊಂದರೆ ಅನುಭವಿಸುತ್ತಿದ್ದಾರೆ. ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಅನೇಕ ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ರಾಂತಿ ಗೃಹಗಳಿಲ್ಲ
ಪ್ರತಿನಿತ್ಯ ಗಂಗೊಳ್ಳಿ ಬಂದರಿಗೆ ಆಗಮಿಸುತ್ತಿರುವ ಮೀನುಗಾರ ಮಹಿಳೆಯರಿಗೆ ತಂಗಲು ಬಂದರಿನಲ್ಲಿ ಯಾವುದೇ ವಿಶ್ರಾಂತಿ ಗೃಹಗಳಿಲ್ಲ. ಮೀನುಗಾರ ಮಹಿಳೆಯರು ಹರಾಜು ಪ್ರಾಂಗಣ ಅಥವಾ ಸಣ್ಣಪುಟ್ಟ ಶೆಡ್‌ಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಬಂದರಿನಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರ ಮಹಿಳೆಯರು ಆರೋಪಿಸಿದ್ದಾರೆ.
ಸೂಕ್ತ ಭದ್ರತೆ ಇಲ್ಲ
ಜಿಲ್ಲೆಯ ಪ್ರಮುಖ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ. ಬಂದರು ಪ್ರದೇಶದ ಸುತ್ತಲೂ ಗೋಡೆ ನಿರ್ಮಿಸಿಲ್ಲ. ಬಂದರು ವಠಾರದಲ್ಲಿ ಸ್ಥಳೀಯ ಮೀನುಗಾರಿಕೆ ಸಂಘದವರು ಸಿಸಿ ಕ್ಯಾಮರಾ ಅಳವಡಿಸಿದ್ದರೂ, ಇಲಾಖೆ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಿಲ್ಲ. ವಾಚ್‌ಮನ್ ನೇಮಕವೂ ಆಗಿಲ್ಲ. ಒಟ್ಟಿನಲ್ಲಿ ಭದ್ರತೆ ದೃಷ್ಟಿಯಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರು ಬಹಳಷ್ಟು ಹಿಂದೆ ಬಿದ್ದಿದೆ.
ಕುಡಿಯಲು ನೀರಿಲ್ಲ
ಐದು ನದಿಗಳ ಸಂಗಮ ತಾಣವಾಗಿರುವ ಗಂಗೊಳ್ಳಿಯಲ್ಲಿ ಕುಡಿಯುವ ನೀರಿಗೆ ಬರ ಇಲ್ಲದಿದ್ದರೂ, ಮೀನುಗಾರಿಕಾ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮೀನುಗಾರರು ಬಾಟಲಿ ನೀರನ್ನು ಬಳಸಬೇಕಾಗಿದ್ದು, ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.
ಜೆಟ್ಟಿ ಪುನರ್ ನಿರ್ಮಾಣ
ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದ್ದರೂ, ಹಳೆ ಜೆಟ್ಟಿಯ ಡಯಾಪ್ರಾಮ್ ವಾಲ್ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕಳಪೆ ಕಾಮಗಾರಿ ಆರೋಪದ ಹಿನ್ನಲೆಯಲ್ಲಿ ಸುಮಾರು 150 ಮೀ. ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.
ಜೆಟ್ಟಿ ಪ್ರದೇಶದಲ್ಲಿ ಹೂಳು
ಸುಮಾರು 400 ಮೀ. ಉದ್ದದ ಮೀನುಗಾರಿಕಾ ಜೆಟ್ಟಿ ಪ್ರದೇಶದಲ್ಲಿ ಹಾಗೂ ಹಳೆ ಜೆಟ್ಟಿ ಪ್ರದೇಶದಲ್ಲಿ ಮತ್ತು ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದೆ. ಅಳಿವೆಯಲ್ಲಿ ಅವೈಜ್ಞಾನಿಕ ಹೂಳೆತ್ತುವ ಕಾಮಗಾರಿಯಿಂದ ಬೋಟುಗಳು ಗಂಗೊಳ್ಳಿ ಬಂದರು ಪ್ರವೇಶಕ್ಕೆ ತೊಂದರೆಯಾಗುತ್ತಿದ್ದರೆ, ಜೆಟ್ಟಿ ಪ್ರದೇಶದಲ್ಲಿ ಬೋಟು ಮತ್ತು ದೋಣಿಗಳ ನಿಲುಗಡೆಗೆ ಕಷ್ಟವಾಗುತ್ತಿದೆ.
ಕಾಮಗಾರಿ ನಡೆದಿಲ್ಲ
ಉಡುಪಿ ಜಿಲ್ಲೆಯ ಎರಡನೇ ಬೃಹತ್ ಮೀನುಗಾರಿಕಾ ಬಂದರು ಆಗಿರುವ ಗಂಗೊಳ್ಳಿ ಅಭಿವೃದ್ಧಿಯಾಗದೇ ಮೀನುಗಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಮುಗಿದು ಸುಮಾರು 17 ವರ್ಷಗಳಾಗಿದ್ದು, ಸುಮಾರು 12 ಕೋಟಿ. ರೂ.ಗಳ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಬಿಟ್ಟರೆ ಯಾವುದೇ ದೊಡ್ಡ ಮಟ್ಟದ ಕಾಮಗಾರಿಯೇ ನಡೆದಿಲ್ಲ. ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಕಳೆದಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಅನೇಕ ಸರಮಾಲೆಗಳನ್ನು ಸುತ್ತಿಕೊಂಡಿದ್ದು ಅಭಿವೃದ್ಧಿಯಲ್ಲಿ ಬಹಳಷ್ಟು ಹಿನ್ನಡೆ ಕಾಣುತ್ತಿದೆ. ಮೀನುಗಾರಿಕಾ ಋತು ಅಂತ್ಯಗೊಳ್ಳುವ ಸಮಯದಲ್ಲಿ ಇದ್ದ ಸಮಸ್ಯೆಗಳು ಮೀನುಗಾರಿಕಾ ಋತು ಆರಂಭದ ಸಮಯದಲ್ಲೂ ಇದೆ. ಹೀಗಾಗಿ ಮೀನುಗಾರರು ಪ್ರತಿವರ್ಷ ಸಮಸ್ಯೆಗಳ ನಡುವೆ ಕಡಲಿಗಿಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ.
2ನೇ ಹಂತದ ಕಾಮಗಾರಿ ಆರಂಭಿಸಲಿ
ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದು 17 ವರ್ಷ ಕಳೆದರೂ ಇನ್ನೂ ಮೀನುಗಾರಿಕಾ ಇಲಾಖೆಯಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆಯೇ ಹೋಗಿಲ್ಲ. ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಂಡರೆ ಸಾಕಷ್ಟು ಪ್ರಯೋಜನವಾಗಲಿದೆ.
-ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ
ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆ
ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯಡಿ ಸುಮಾರು 22 ಕೋ. ರೂ. ವೆಚ್ಚದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹ, ಸುಸಜ್ಜಿತ ಶೌಚಾಲಯ, ಬಂದರಿನ ಸುತ್ತ ಆವರಣ ಗೋಡೆ ನಿರ್ಮಾಣ ಸಹಿತ ಅನೇಕ ಯೋಜನೆ ಅನುಷ್ಠಾನಗೊಳ್ಳಲಿದೆ. ಸಿಆರ್‌ಝಡ್ ಅನುಮತಿ ಸಿಕ್ಕಿದ ಬಳಿಕ ಕಾಮಗಾರಿಗಳು ಆರಂಭವಾಗುವ ಸಾಧ್ಯತೆ ಇದೆ.-ಸಂಜೀವ ಅರಕೇರಿ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಗಂಗೊಳ್ಳಿ
ಪ್ರಸ್ತಾವನೆ ಸಲ್ಲಿಸಿದರೂ ಸಿಗದ ಮನ್ನಣೆ
ಕಳೆದ ಅನೇಕ ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿ ಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಬಂದರಿನ ವಾರ್ಫ್ ನಲ್ಲಿ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭಿಸುವುದು, ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಿಸುವುದು, ಸುಸಜ್ಜಿತ ಶೌಚಾಲಯ ನಿರ್ಮಾಣ, ಬಂದರಿನ ಸುತ್ತಲೂ ಆವರಣ ಗೋಡೆ ನಿರ್ಮಾಣ, ವಾಹನ ನಿಲುಗಡೆಗೆ ತಂಗುದಾಣ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಜೆಟ್ಟಿ ಮತ್ತು ಅಳಿವೆ ಪ್ರದೇಶದಲ್ಲಿ ಹೂಳೆತ್ತುವುದು ಮೊದಲಾದವುಗಳ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದರೂ, ಸರಕಾರ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಬೇಡಿಕೆಗಳಿಗೆ ಅಸ್ತು ಎನ್ನುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಮೀನುಗಾರರ ಆಕ್ರೋಶದ ಕಟ್ಟೆ ಒಡೆಯುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಂಗೊಳ್ಳಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಡೆಗೆ ಗಮನಹರಿಸಬೇಕಿದೆ ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.