Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ
Team Udayavani, Oct 24, 2024, 10:13 PM IST
ವಿಜಯಪುರ: ಜಿಲ್ಲೆಯಲ್ಲಿ ಆನ್‌ಲೈನ್ ಮತ್ತು ಆರ್ಥಿಕ ವಂಚನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಈ ವರ್ಷದಲ್ಲಿ ಇದುವರೆಗೆ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ (ಸಿಇಎನ್) ಅಪರಾಧ ಪೊಲೀಸ್ ಠಾಣೆಯಲ್ಲಿ 30 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ 9.84 ಕೋಟಿ ರೂಪಾಯಿಗಳನ್ನು ಸೈಬರ್ ಕ್ರಿಮಿನಲ್‌ಗಳು ವಂಚಿಸಿದ್ದು, ಈ ಪೈಕಿ 7.48 ಕೋಟಿ ರೂಪಾಯಿಗಳನ್ನು ಮರಳಿ ನೊಂದ ದೂರುದಾರರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಲಾಗಿದೆ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು.
ಪಾರ್ಟ್ ಟೈಮ್ ಜಾಬ್, ಷೇರು ಮಾರ್ಕೆಟ್ ಟ್ರೇಡಿಂಗ್, ಕ್ರಿಸ್ಟೋ ಟ್ರೇಡಿಂಗ್, ಕ್ರೆಡಿಟ್-ಡೆಬಿಟ್ ಕಾರ್ಡ್ ಬಿಟಿಪಿ, ಕಂಪನಿ ಪ್ರಾಂಚೈಸಿ-ಡೀಲರ್‌ಶಿಪ್, ವರ್ಟಿಕಲ್ ಫಾರ್ಮಿಂಗ್ ಮತ್ತು ಡಿಜಿಟಲ್ ಅರೆಸ್ಟ್ ಎಂಬ ಹೆಸರಲ್ಲಿ ಜನರನ್ನು ಖದೀಮರು ತಮ್ಮ ವಂಚನೆಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಆನ್‌ಲೈನ್, ಆರ್ಥಿಕ ವಂಚನೆಗೊಳಗಾದವರು ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 30 ಪ್ರಕರಣಗಳಲ್ಲಿ ಬರೋಬ್ಬರಿ 9,84,03,949 ರೂ.ಗಳ ವಂಚನೆಯಾಗಿದೆ. ಈ ಪ್ರಕರಣಗಳ ತನಿಖೆ ಕೈಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ದೂರುದಾರರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ 7,48,39,434 ರೂ.ಗಳನ್ನು ಮರಳಿ ಜಮೆಯಾಗಿದೆ. ಇದರಲ್ಲಿ ಡಿಜಿಟಲ್ ಅರೆಸ್ಟ್ ನಂತ ಪ್ರಕರಣವನ್ನೂ ಭೇದಿಸಲಾಗಿದೆ ಎಂದರು.
ಡಿಜಿಟಲ್ ಅರೆಸ್ಟ್ ಮಾಡಿದ್ದ ನಾಲ್ವರ ಸೆರೆ: ಪೊಲೀಸರಾಗಲಿ ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮಾಡಿ ವಿಚಾರಣೆ ಮಾಡಲ್ಲ. ಆದರೆ, ಸೈಬರ್ ಖದೀಮರು ತನಿಖಾ ಸಂಸ್ಥೆಗಳ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಮೋಸದ ಮಾರ್ಗ ಕಂಡುಕೊಂಡಿದ್ದಾರೆ. ಈ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಿಜಯಪುರದ ಡಾ:ಅನಿರುದ್ಧ ಉಮರ್ಜಿ ಎಂಬುವವರಿಗೆ 54 ಲಕ್ಷ ರೂ.ಗಳ ವಂಚನೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಜಸ್ಥಾನ ಮತ್ತು ಹರಿಯಾಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ವಂಚಿಸಿದ್ದ ಹಣದ ಪೈಕಿ 25 ಲಕ್ಷ ರೂ.ಗಳನ್ನು ಮರಳಿ ಕೊಡಿಸಲಾಗಿದೆ. ಇನ್ನುಳಿದ ಹಣದ ಬಗ್ಗೆ ಆಪಾದಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ ಎಂದು ಪ್ರಸನ್ನ ದೇಸಾಯಿ ಮಾಹಿತಿ ನೀಡಿದರು.
ಅದೇ ರೀತಿಯಾಗಿ ಬಬನ್ ಚವ್ಹಾಣ ಎಂಬುವವರಿಗೆ ವೆಬ್‌ಸೈಟ್‌ವೊಂದರಲ್ಲಿ ಹಣ ಹಾಕಿ ಸಿನಿಮಾ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ಬುಕ್ ಮಾಡಿದ ಹಣದ ಜತೆಗೆ ಬೃಹತ್ ಲಾಭಾಂಶ ನೀಡುತ್ತೇವೆ ಅಂತಾ ಖದೀಮರು ಸುಳ್ಳು ಹೇಳಿ ನಂಬಿಸಿ, 14.77 ಲಕ್ಷ ರೂ.ಗಳನ್ನು ಹಾಕಿಸಿಕೊಂಡು ಮೋಸ ಮಾಡಿದ್ದರು. ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 11.84 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯ ಮೂಲಕ ಜಪ್ತಿ ಮಾಡಲಾಗಿದೆ. ಇಷ್ಟೇ ಅಲ್ಲ, ಡಾ.ದಾದಾಪೀರ ಪೀರಜಾದೆ ಎಂಬುವವರಿಗೆ ಐಪಿಒ ಟ್ರೇಡಿಂಗ್ ಹೆಸರಿನಲ್ಲಿ 20.03 ಲಕ್ಷ ರೂ.ಗಳ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಖಾತೆಗಳನ್ನು ಸ್ಥಗಿತಗೊಳಿಸಿ ಒಟ್ಟು ಮೊತ್ತವನ್ನು ದೂರುದಾರರಿಗೆ ಮರಳಿ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚು ಮೋಸಕ್ಕೊಳಾಗದ ವಿದ್ಯಾವಂತರು!: ಸೈಬರ್ ಕ್ರೈಂ ಜಾಲಕ್ಕೆ ಹೆಚ್ಚಾಗಿ ವಿದ್ಯಾವಂತರೇ ಸಿಲುಕಿ, ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಖದೀಮರು ಹಲವು ರೀತಿಯಲ್ಲಿ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ಯಾವುದೋ ಮಾರ್ಗದಲ್ಲಿ ಮೊಬೈಲ್ ಮತ್ತು ಆಧಾರ್ ಕಾರ್ಡ್ ನಂಬರ್ ಸಂಗ್ರಹಿಸಿ, ಅದನ್ನು ಹೇಳಿ ನಂಬಿಸಿ ಮತ್ತು ಭಯಪಡಿಸುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ನಾಗರಿಕರು ಜಾಗೃತಿ, ಹೆಚ್ಚಿನ ಅರಿವು ಹೊಂದಿರಬೇಕು. ಇದರಿಂದ ಮಾತ್ರ ಸೈಬರ್ ಕ್ರೈಂ ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ತನಿಖೆಗೆ ಪೊಲೀಸ್ ತಂಡ: ಆನ್‌ಲೈನ್ ಮತ್ತು ಆರ್ಥಿಕ ವಂಚನೆ ಪ್ರಕರಣಗಳ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುನೀಲ ಕಾಂಬಳೆ ಮತ್ತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಪ್ರಭಾರ ಎಸ್‌ಪಿ ಶ್ಲಾಘಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.