Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
ಮನೆ ಊಟ ಯಾವಾಗಲೂ ಆರೋಗ್ಯಕರವಾಗಿರುತ್ತದೆ ಎಂದೇ ತಿಳಿದಿರುತ್ತೇವೆ...
Team Udayavani, Oct 30, 2024, 5:21 PM IST
ನಾವು ಹೊರಗಡೆ ಹೋಟೆಲ್ ಗಳಲ್ಲಿ ಆಹಾರವನ್ನು ಸೇವಿಸುವಾಗ ಮನೆಯಲ್ಲಿ ಹಿರಿಯರು ಹೇಳುವುದುಂಟು “ಹೊರಗಿನ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ, ಮನೆಯಲ್ಲಿಯೇ ಆಹಾರವನ್ನು ಸೇವಿಸು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮನೆ ಆಹಾರದಲ್ಲೇ ಸಿಗುತ್ತದೆ” ಎಂದು. ಆದರೆ ಮನೆಯ ಊಟ ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದೇ? ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ನಿಜವಾಗಿಯೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತದೆಯೇ? ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಕಡಿಮೆಯೇ ಸರಿ. ಒಟ್ಟಾರೆಯಾಗಿ ಮನೆ ಊಟ ಯಾವಾಗಲೂ ಆರೋಗ್ಯಕರವಾಗಿರುತ್ತದೆ ಎಂದೇ ತಿಳಿದಿರುತ್ತೇವೆ.
ಮೊದಲಾದರೆ ಹಳ್ಳಿಗಳಲ್ಲಿ, ತೋಟದಲ್ಲಿ, ಮನೆಯ ಹಿತ್ತಿಲಿನಲ್ಲಿ ಬೇಕಾದಂತೆ ಲಭಿಸುತ್ತಿದ್ದ ತರಕಾರಿ, ಸೊಪ್ಪುಗಳನ್ನು ಬಳಸಿಕೊಂಡು ಆರೋಗ್ಯಕರವಾದ ಆಹಾರ ತಯಾರಿಸಲಾಗುತ್ತಿತ್ತು. ಹಾಗಾಗಿ ನಮ್ಮ ಹಿರಿಯರು ತಮ್ಮ ಜೀವನದ ಕೊನೆಯ ಘಳಿಗೆಯಲ್ಲಿ ತಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ಕಂಡದ್ದು ಕಡಿಮೆ. ಅದರೆ ಈಗ, ಕಾಲ ಬದಲಾದಂತೆ ಆಹಾರ ಪದ್ದತಿಯು ಬದಲಾಗಿದೆ. ಮೊದಲಿನಂತೆ ಪರಿಸರವಾಗಲಿ, ಆಹಾರವಾಗಲೀ ಈಗ ಲಭ್ಯವಿಲ್ಲ. ಹೀಗಿದ್ದಾಗ ಮನೆಯೂಟ ಪೋಷಕಾಂಶ ತುಂಬಿದ ಊಟ ಎಂದು ಹೇಳುವುದು ಎಷ್ಟು ಸರಿ? ಹಾಗೆಂದ ಮಾತ್ರಕ್ಕೆ ಮನೆಯ ಆಹಾರ ಪೋಷಕಾಂಶವನ್ನು ಹೊಂದಿರುವುದಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ.
ಮನೆಯಲ್ಲೇ ತಯಾರಿಸಲ್ಪಡುವ ಆಹಾರ ಹಾಗೂ ಪೌಷ್ಟಿಕಾಂಶಗಳ ಪ್ರಯೋಜನಗಳ ಕುರಿತಾಗಿ 2019 ರಲ್ಲಿ ನಡೆಸಿದ ಅಧ್ಯಯನವು ಚಿಕ್ಕ ಮಕ್ಕಳಿರುವ ಕುಟುಂಬಗಳಲ್ಲಿ ಸಂಪೂರ್ಣ ಅಥವಾ ಭಾಗಶಃ ಮನೆಯಲ್ಲೇ ತಯಾರಿಸಿದ ಆಹಾರವು ಪೌಷ್ಟಿಕಾಂಶವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಹೇಳಿದೆ.
ಹೊರಗಡೆ ಲಭಿಸುವ ಆಹಾರದಲ್ಲಿ ಅಧಿಕ ಪ್ರಮಾಣದ ಎಣ್ಣೆ, ಮಸಾಲೆ, ಸಕ್ಕರೆ, ಸಂರಕ್ಷಕಗಳ ಬಳಸುವಿಕೆಯ ಜೊತೆಗೆ ಶುಚಿತ್ವದ ಕೊರತೆಯು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಜೊತೆಗೆ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ದೇಹವನ್ನು ಆವರಿಸುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ತಯಾರಾದ ಆಹಾರವು ಇತರ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಹೋಲಿಸಿದರೆ ಬಹಳ ಉತ್ತಮವಾಗಿದ್ದು ಶುಚಿಯಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಟೇಲ್ ನ ಮಸಾಲೆ ಪದಾರ್ಥಗಳೆಲ್ಲಾ ಅಡುಗೆ ಮನೆಯ ಡಬ್ಬಿ ಸೇರಿಕೊಂಡಿದೆ.
ರುಚಿಯಾದ ಆಹಾರ ತಯಾರಿಸುವ ಪಣ ಹೊತ್ತ ಹಿರಿಯರು ಆಹಾರದಲ್ಲಿ ಮಸಾಲೆಯ ಪ್ರಮಾಣ ಹೆಚ್ಚಿಸಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಜೊತೆಗೆ ಚಮಚ ಪೂರ್ತಿ ತುಪ್ಪ, ಬೆಣ್ಣೆಯನ್ನು ಬಡಿಸುವುದು ಹೆತ್ತವರು ಪ್ರೀತಿ ವ್ಯಕ್ತಪಡಿಸುವ ಹಲವಾರು ರೀತಿಗಳಲ್ಲಿ ಒಂದಾಗಿದೆ. ತಯಾರಿಸುವ ಸಿಹಿತಿಂಡಿಗಳಲ್ಲಿ ತುಪ್ಪ, ಸಕ್ಕರೆಯದ್ದೇ ಮೇಲುಗೈ. ಅದರಲ್ಲೂ ಈಗಿನ ಬ್ಯುಸಿ ಶೆಡ್ಯೂಲ್ ಗಳಲ್ಲಿ ಬ್ರೆಡ್ ಜ್ಯಾಮ್ ಗಳೇ ಬೆಳಗ್ಗಿನ ಉಪಾಹಾರ. ಹೀಗಿದ್ದಾಗ ದೇಹಕ್ಕೆ ಲಭಿಸುವ ಪೋಷಕಾಂಶಗಳಾದರೂ ಎಷ್ಟು?
ಯಾವಾಗ ಮನೆಯ ಆಹಾರದಲ್ಲಿ ಎಲ್ಲಾ ಪದಾರ್ಥಗಳು ಅಗತ್ಯಕ್ಕಿಂತ ಅಧಿಕವಾಗಿ ಸೇರಿಕೊಳ್ಳುವುದಿಲ್ಲವೋ ಆಗ ಆ ಆಹಾರವು ಆರೋಗ್ಯಕರ ಎಂದು ಹೇಳಬಹುದು. ಜೊತೆಗೆ ತಾಜಾ ಸೊಪ್ಪು ತರಕಾರಿ, ಹಣ್ಣು ಹಂಪಲುಗಳು, ಅಡುಗೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ತಯಾರಿಸಲ್ಪಟ್ಟ ಆಹಾರವು ಆರೋಗ್ಯಕರವಾಗಿದ್ದು ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ.
ತಯಾರಿಸಿದ ಅಡುಗೆಯಲ್ಲಿ ಎಲ್ಲಾ ಮಸಾಲೆಗಳು, ಎಣ್ಣೆ, ಉಪ್ಪು ಮುಂತಾದವುಗಳು ಸರಿಯಾದ ಪ್ರಮಾಣದಲ್ಲಿದೆ, ತಿನ್ನುವ ಆಹಾರವು ಪೋಷಕಾಂಶಯುಕ್ತವಾಗಿದೆ ಎಂದ ಮಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುವುದು ಸರಿಯಲ್ಲ.
ಬಹಳ ದಿನಗಳ ನಂತರ ಮನೆಗೆ ಆಗಮಿಸಿದ ಮಕ್ಕಳಿಗೆ ಮನೆಯಲ್ಲಿದ್ದಷ್ಟು ದಿನ ಮನೆಯಲ್ಲಿ ಭಾರೀ ಭೋಜನ ತಯಾರು ಮಾಡುತ್ತಾರೆ ಹೆತ್ತವರು. ಬಂದ ಖುಷಿಯಲ್ಲಿ ಅದು ತಿನ್ನು ಇದು ತಿನ್ನು ಎಂದು ಅಗತ್ಯಕ್ಕಿಂತ ಹೆಚ್ಚೇ ಬಡಿಸುತ್ತಾರೆ. ಆದರೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ನೀಡುವುದರಿಂದ ದೇಹವನ್ನು ಬೇರೆ ಕಾಯಿಲೆಗಳಿಗೆ ದೂಡಿದಂತಾಗಬಹುದು. ತೂಕದ ಹೆಚ್ಚಳ, ಅಜೀರ್ಣ, ಹೃದಯ ಸಂಬಂಧಿ ಸಮಸ್ಯೆಗಳು, ಮಾನಸಿಕ ಖಿನ್ನತೆ, ಮಾನಸಿಕ ಅಸಮತೋಲನ, ದೇಹದಲ್ಲಿ ಅಧಿಕ ಕೊಬ್ಬಿನಂಶ ಸೇರ್ಪಡೆ ಮುಂತಾದ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಅಧಿಕ.
ಮನೆಯ ಊಟ ಯಾವಾಗಲೂ ಪೋಷಕಾಂಶಯುಕ್ತವಾಗಿ ಇರಬೇಕೆಂದಿಲ್ಲ, ಆದರೆ ಅದು ಶುಚಿಯಾಗಿರುತ್ತದೆ. ಕೆಲವೊಮ್ಮೆ ಮನೆಯಲ್ಲಿ ಕೆಲವು ಪದಾರ್ಥಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವುದರಿಂದ ಆಹಾರವು ಪೋಷಕಾಂಶಗಳ ಕೊರತೆಯನ್ನು ಕಾಣಬಹುದು ಅಥವಾ ಇತರ ಕಾಯಿಲೆಗಳಿಗೆ ಮೂಲವಾಗಬಹುದು. ತಯಾರಿಸುವ ಆಹಾರದಲ್ಲಿ ಪೋಷಕಾಂಶದ ಪ್ರಮಾಣ ಎಷ್ಟಿದೆ ಎಂಬುದರ ಕುರಿತಾದ ಮಾಹಿತಿ ತಿಳಿದಿದ್ದರೆ ಮನೆಯ ಊಟವು ಆರೋಗ್ಯಕರವಾಗಿರಲು ಸಾಧ್ಯ.
-ಪೂರ್ಣಶ್ರೀ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್ ಆಗಲಿರುವ ಸಿನಿಮಾಗಳ ಪಟ್ಟಿ
ICC T20 World Cup: ನ್ಯೂಜಿಲ್ಯಾಂಡ್ ಗೆ ಪ್ರಶಸ್ತಿಯ ದಾರಿ ತೋರಿದ ʼಅಜ್ಜಿʼಯಂದಿರು
C.P.Yogeshwara; ಮಾತೃ ಪಕ್ಷಕ್ಕೆ ಮರಳಿ ಮತ್ತೊಂದು ಹೋರಾಟಕ್ಕೆ ಸಿದ್ದವಾದ ಸೈನಿಕ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.