Waqf Issue: ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್: ಸಿಎಂ, ಡಿಸಿಎಂ
ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿದ್ದರಾಮಯ್ಯ
Team Udayavani, Oct 31, 2024, 3:40 AM IST
ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿಯು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿ ರಾಜಕೀಯ ಮಾಡಲು ಹೊರಟಿದೆ. ಹಾಗೆ ನೋಡಿದರೆ, ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದು, ಯಾವುದೇ ವಿವಾದವಿಲ್ಲದಿದ್ದರೂ ಚುನಾವಣೆಯ ಉದ್ದೇಶದಿಂದ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು. ರೈತರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯವರು ಧ್ವನಿ ಎತ್ತುತ್ತಿರುವ ಬಗ್ಗೆ ಉತ್ತರಿಸಿದ ಅವರು, ಸರಕಾರ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ನೋಟಿಸ್‌ಗಳನ್ನು ವಾಪಸ್ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಅನಗತ್ಯ ರಾಜಕೀಯ
ಉಪಮುಖ್ಯಮಂತ್ರಿ ಮಾತನಾಡಿ, ಬಿಜೆಪಿ ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟೀಸ್ ನೀಡಲಾಗಿತ್ತು. ದಾಖಲಾತಿಗಳಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ನಾವು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇವೆ ಎಂದರು.
ರೈತರಿಗೇ ಹಕ್ಕು
ರೈತರಿಗೆ ನೀಡಲಾಗಿರುವ ಭೂಮಿಯನ್ನು ರೈತರ ಭೂಮಿಯಾಗಿ ಮುಂದುವರಿಸಬೇಕು ಅಂತ ತಿಳಿಸಿದ್ದೇವೆ. ನಾವು ಯಾವುದೇ ರೈತರಿಗೆ ತೊಂದರೆ ನೀಡುವುದಿಲ್ಲ. ರೈತರ ಹಕ್ಕನ್ನು ಎತ್ತಿಹಿಡಿಯುತ್ತೇವೆ. ಇದು ಸರಕಾರದ ತೀರ್ಮಾನವಾಗಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ. ಬಿಜೆಪಿ ಇದನ್ನು ಕೋಮು ವಿಚಾರವಾಗಿ ಬಳಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.