![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 4, 2024, 3:19 PM IST
ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿಹಬ್ಬ ಡಿ. 15ರಂದು ನಡೆಯಲಿದ್ದು, ಆ ಪ್ರಯುಕ್ತ ಧಾರ್ಮಿಕ ಪರಂಪರೆಯಂತೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕಿಯಲ್ಲಿ ರಥಬೀದಿಯಿಂದ ಬೀಜಾಡಿ ಮಾರ್ಗವಾಗಿ ಕಡಲ ತಡಿಯ ಅಮಾವಾಸ್ಯೆ ಕಡುವಿನಲ್ಲಿ ಶ್ರೀ ದೇವರಿಗೆ ಸಮುದ್ರ ಸ್ನಾನ ನೆರವೇರಿಸಲಾಯಿತು.
ದೀಪಾವಳಿಯ ಅಮಾವಾಸ್ಯೆ ದಿನ ದೇಗುಲದ 7ನೇ ಪ್ರದಕ್ಷಿಣ ಪಥದಲ್ಲಿ ಗೋಳೆ ದೇವರು, ಉತ್ಸವ ಮೂರ್ತಿ, ತಾಂಡವೇಶ್ವರ, ಮತ್ತು ಸೀಗೆ ಕುಡಿಗಳೊಂದಿಗೆ ಪುರಮೆರವಣಿಗೆ ಸಾಗಿ ಸಮುದ್ರಸ್ನಾನ, ತಟದಲ್ಲಿ ಪೂಜೆ, ಬ್ಯಾಲೆ ರಾಜಶೇಖರ ದೇವಾಲಯ, ಬಿದ್ದಿನ ಲಕ್ಷ್ಮೀ ಜನಾರ್ದನ ದೇಗುಲ ಹೊದ್ರಾಳಿ, ಮುಖ್ಯಪ್ರಾಣ ದೇಗುಲ ದೊಡ್ಮನೆಬೆಟ್ಟು ಚೀಪಾನ್ ಬೆಟ್ಟುಗಳಲ್ಲಿ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ತೆರಳುವ ಸಂಪ್ರದಾಯವಿದ್ದು, ದೇಗುಲದ ಪ್ರಧಾನ ಅರ್ಚಕ ಹಾಗೂ ತಂತ್ರಿ ಪ್ರಸನ್ನ ಕುಮಾರ್ ಐತಾಳ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನಡೆದವು.
ಉತ್ಸವ ಮೂರ್ತಿ ಸಾಗುವ ಹಾದಿಯ ಉದ್ದಕ್ಕೂ ಆ ಭಾಗದ ನಿವಾಸಿಗಳು ಮನೆಯ ಮುಂದೆ ರಂಗೋಲಿ ಬಿಡಿಸಿ ಶ್ರೀ ದೇವರಿಗೆ ಆರತಿ ಬೆಳಗುವುದರ ಮೂಲಕ ಕೊಡಿಹಬ್ಬದ ಸಾಂಕೇತಿಕ ಸಮುದ್ರ ಸ್ನಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ ಸಹಿತ ಮಾಜಿ ಸದಸ್ಯರಾದ ಸುರೇಶ ಬೆಟ್ಟಿನ್, ಶಂಕರ ಚಾತ್ರಬೆಟ್ಟು, ಮಂಜುನಾಥ ಆಚಾರ್, ಬಿ.ಎಂ. ಗುರುರಾಜರಾವ್, ವನಜ ಪೂಜಾರಿ, ಕುಸುಮ ದೇವಾಡಿಗ, ಕೊಲ್ಲೂರು ದೇಗುಲದ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ ಕೋಟೇಶ್ವರ, ಬೀಜಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ ಪೂಜಾರಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ದೇಗುಲದ ಅರ್ಚಕರು, ಸಿಬಂದಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.