ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Team Udayavani, Nov 5, 2024, 6:04 PM IST
ಉದಯವಾಣಿ ಸಮಾಚಾರ
ಧಾರವಾಡ: ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕೆಲಗೇರಿ ಕೆರೆಗೆ ತ್ಯಾಜ್ಯ, ಕೊಳಚೆ ನೀರು ಸೇರ್ಪಡೆಯಾಗಿ ಕಪ್ಪು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ, ಪಾಚಿ ಬೆಳೆದು ಅವಸಾನದಂಚಿಗೆ ತಲುಪಿದೆ. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿರುವ ಅವಳಿ ನಗರದ ಈ ಅಪರೂಪದ ಕೆರೆ ಒಂದು ಕಾಲದಲ್ಲಿ ಕುಡಿಯುವ ನೀರಿನ ಜಲ ಮೂಲವಾಗಿತ್ತು.ಆದರೆ ಈಗ ದನಗಳೂ ನೀರು ಕುಡಿಯದಷ್ಟು ಕಲುಷಿತಗೊಂಡಿದೆ. ದಿವ್ಯನಿರ್ಲಕ್ಷ್ಯಕ್ಕೊಳಗಾಗಿ ತನ್ನ ಖದರ್ ಕಳೆದುಕೊಂಡಿದೆ.
ವಾರ್ಡ್ ನಂ.1ರ ವ್ಯಾಪ್ತಿಗೆ ಬರುವ ಕೆಲಗೇರಿ ಕೆರೆ ಸುಮಾರು 170 ಎಕರೆ ವಿಸ್ತೀರ್ಣದಲ್ಲಿದೆ. ಇದರ ನಿರ್ವಹಣೆ, ಉಸ್ತುವಾರಿ ಎಲ್ಲವೂ ಕೃಷಿ ವಿವಿಗೆ ಸೇರಿದೆ. ಆದರೆ ಅನುದಾನ ಕೊರತೆಯಿಂದ ಕೆರೆ ಸ್ವಚ್ಛತೆ, ನಿರ್ವಹಣೆ ಮಾಡದೆ ಹಾಗೆ ಬಿಟ್ಟಿದೆ. ಇತ್ತ ಪಾಲಿಕೆ ಕೂಡ ಅಷ್ಟಕ್ಕಷ್ಟೇ ಎಂಬಂತೆ ನಿರ್ಲಕ್ಷ್ಯ ವಹಿಸಿದೆ. ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಎಂಬಂತೆ ಪಾಲಿಕೆ-ಕೃಷಿ ವಿವಿ ನಡುವೆ ಅಪರೂಪದ ಹಾಗೂ ಐತಿಹಾಸಿಕ ಕೆರೆ ಕೊಳಚೆಯಿಂದ ತುಂಬಿ ತುಳುಕುತ್ತಿದೆ.
ಸೊಳ್ಳೆಗಳ ಕಾಟ: 170 ಎಕರೆ ಕೆರೆಯಲ್ಲಿ ಮುಕ್ಕಾಲು ಭಾಗ ಹೂಳು ತುಂಬಿದೆ. ದಂಡೆಯ ಸುತ್ತಲೂ ಪಾಚಿ ಬೆಳೆದಿದೆ. ಕೆರೆ ಪಕ್ಕದಲ್ಲೇ ಕೆಲಗೇರಿ, ಸಂಪಿಗೆ ನಗರ ಬೇಂದ್ರೆ ನಗರ ಸೇರಿದಂತೆ ಇತ್ತೀಚೆಗೆ ನಿರ್ಮಾಣಗೊಂಡ ಲೇಔಟ್‌ಗಳಲ್ಲಿ ಲಕ್ಷಾಂತರ ಜನ ವಾಸಿಸುತ್ತಿದ್ದಾರೆ. ಕೆರೆಯ ಕೊಳಚೆ ನೀರಿನ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.
ಜಲಮೂಲವೇ ಬಂದ್: ಒಂದು ಕಾಲದಲ್ಲಿ ಕೆರೆಗೆ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿತ್ತು. ಕಾಲಕಳೆದಂತೆ ಲೇಔಟ್‌ಗಳು ತಲೆ ಎತ್ತಿದ್ದರಿಂದ ಕೆರೆಗೆ ಹರಿದು ಬರುತ್ತಿದ್ದ ನೀರಿನ ಮೂಲವೇ ಬಂದ್ ಆಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಯಥೇಚ್ಛವಾಗಿ ಸೇರುತ್ತಿದೆ. ಆಗಾಗ ಸಾಮಾಜಿಕ ಕಾರ್ಯಕರ್ತರು ಸ್ವಚ್ಛಗೊಳಿಸುವ ಯತ್ನ ಮಾಡಿದರೂ ಕಸ ಮಾತ್ರ ಕಮ್ಮಿಯಾಗಿಲ್ಲ.
ಆಗದ ಸದುಪಯೋಗ: ಅಮೃತ್ ಯೋಜನೆಯ ಹಸಿರು ವಲಯ ಪ್ರದೇಶ ಅಭಿವೃದ್ಧಿ ಅಡಿ ಸುಮಾರು 2.01 ಕೋಟಿ ರೂ. ವೆಚ್ಚದಲ್ಲಿ ಕೆರೆಯ ದಡದಲ್ಲಿ ಕೆಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. 30 ಅಡಿ ಅಗಲದ ವಾಕಿಂಗ್ ಪಾಥ್, 4 ಅಡಿಯಲ್ಲಿ ಕಟ್ಟೆ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಸೀಸಾ ಡಬಲ್, ಆರ್ಚ್ ಸ್ವಿಂಗ್, ಟು ವೇ ಸ್ಲೈಡ್, ಡಕ್ ಮೆರಿಗೋ ರೌಂಡ್ ಆಟದ ಪರಿಕರ ಅಳವಡಿಸಲಾಗಿದೆ. ಓಪನ್ ಜಿಮ್‌ನಲ್ಲಿ ಕ್ರಾಸ್ ವಾಲ್ಕರ್, ಲೆಗ್ ಪ್ರೆಸ್, ಸೈಕಲ್ , ಸಿಟೆಡ್ ಚೆಸ್ಟ್ ಪ್ರೆಸ್, ಥೈ ಚೈ ವ್ಹೀಲ್, ಲೆಗ್ ಆ್ಯಂಡ್ ಥೈ ಎಕ್ಸ್‌ರಸೈಜ್, ಪುಲ್ ಅಪ್ ಚೇರ್ ಸೇರಿದಂತೆ ಇತರೆ ಪರಿಕರಗಳನ್ನು 2 ಸೆಟ್‌ಗಳಂತೆ ಅಳವಡಿಸಲಾಗಿದೆ.ಆದರೆ ಉತ್ತಮ ವಾತಾವರಣ ಇಲ್ಲದೇ ಇವುಗಳ ಸದುಪಯೋಗ ಆಗುತ್ತಿಲ್ಲ.
ಪಕ್ಷಿ ಸಂಕುಲಕ್ಕೆ ಕುತ್ತು
ಒಂದು ಕಾಲದಲ್ಲಿ ಕೆಲಗೇರಿ ಕೆರೆ ದಡದಲ್ಲಿ ಹಕ್ಕಿಗಳ ಕಲರವ ಕೇಳುತ್ತಿತ್ತು. ದೂರದೂರಿನಿಂದ ಬಂದ ಹಕ್ಕಿಗಳು ಕೆಲ ಕಾಲ ಇಲ್ಲೇ ಇದ್ದು, ವಾಪಸ್ ಹೋಗುತ್ತಿದ್ದವು. ಇವು ಪಕ್ಷಿ ಪ್ರಿಯರಿಗೆ ರಂಜನೆ ಜತೆಗೆ ಅಧ್ಯಯನಕ್ಕೂ ಅನುಕೂಲ ಕಲ್ಪಿಸಿದ್ದವು. ದ.ರಾ.ಬೇಂದ್ರೆ ಸೇರಿ ಹಲವು ಕವಿಗಳ ಕವಿತೆಗಳಿಗೆ ಸ್ಫೂರ್ತಿದಾಯಕ ತಾಣವಾಗಿತ್ತು. ಆದರೆ ಈಗ ಪಕ್ಷಿಗಳೂ ಇಲ್ಲ, ಕವಿಗಳೂ ಇತ್ತ ಸುಳಿಯುತ್ತಿಲ್ಲ.
ನಾವು ಸಣ್ಣವರಿದ್ದಾಗ ಕೆರೆಯಲ್ಲಿ ನೀರು ಕುಡಿಯುತ್ತಿದ್ದೆವು. ಆದರೀಗ ನಗರದ ಸುತ್ತಮುತ್ತಲಿನ ಮನೆಗಳಿಂದ ಕಲುಷಿತ ನೀರು ಹರಿದು ಬಂದು ಕೆರೆ ಹಾಳು ಮಾಡಿದೆ. ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಹರಿದು ಬರುವ ತ್ಯಾಜ್ಯ ನೀರನ್ನು ಬೇರೆಡೆಗೆ
ಹೋಗುವಂತೆ ಮಾಡಿ ಕೆರೆ ಉಳಿಸಿ ಕೊಡಬೇಕು. ಮತ್ತೆ ನಮ್ಮ ಕೆರೆಯಲ್ಲಿನ ನೀರು ಕುಡಿವಂತಾಗಬೇಕು.
● ಉಮೇಶ ಶಿರಹಟ್ಟಿಮಠ, ಕೆಲಗೇರಿ ನಿವಾಸಿ
ಕೆರೆ ತುಂಬೆಲ್ಲ ಹೂಳು ತುಂಬಿದ್ದು, ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು. ಸಂಜೆಯಾದರೆ ಸಾಕು ಕೆರೆಯ
ಹತ್ತಿರ ಕುಳಿತುಕೊಳ್ಳುವ ಹಾಗಿಲ್ಲ. ದೊಡ್ಡ ಗಾತ್ರದ ಸೊಳ್ಳೆಗಳು ಕಚ್ಚುತ್ತಿವೆ. ಇದರಿಂದ ಇಲ್ಲಿ ಓಡಾಡುವ ಸಣ್ಣ ಮಕ್ಕಳಿಗೆ, ವೃದ್ಧರಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ಉಂಟಾಗಿದೆ. ಸಂಬಂಧಪಟ್ಟವರು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.
●ಬಸವರಾಜ ಹಿರೇಮಠ, ಕೆಲಗೇರಿ ನಿವಾಸಿ
■ ಸುನೀಲ ತೇಗೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!
Hubli; ಬಸವಣ್ಣ ಬಗ್ಗೆ ಹೇಳಿಕೆ ನೀಡಿದ ಯತ್ನಾಳರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಲಿ: ಆಗ್ರಹ
ಆಸ್ತಿ ವಿವಾದ: ಸುಪಾರಿ ಕೊಟ್ಟು ಚಿಕ್ಕಪ್ಪನ ಕೊಲೆ… ಪ್ರಕರಣ ಭೇದಿಸಿದ ಚೆನ್ನಗಿರಿ ಪೊಲೀಸರು
Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.