KPTCL ಕಾಮಗಾರಿ ಅವಾಂತರ; ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಬಳಿ ಅಪಾಯ
Team Udayavani, Nov 6, 2024, 2:56 PM IST
ಸ್ಟೇಟ್‌ಬ್ಯಾಂಕ್: ಸ್ಟೇಟ್‌ಬ್ಯಾಂಕ್‌ನಲ್ಲಿರುವ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸುವ ರಸ್ತೆಯ ಪಕ್ಕದಲ್ಲಿ ಕಳೆದ ಸುಮಾರು ಆರು ತಿಂಗಳುಗಳಿಂದ ಕೆಪಿಟಿಸಿ ಎಲ್‌ನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ರಸ್ತೆ ಬದಿ ಮತ್ತು ಫುಟ್‌ಪಾತ್ ಮೇಲೆಯೇ ಸಂಗ್ರಹಿಸಿಡಲಾಗಿದೆ. ಇದರಿಂದಾಗಿ ಪಾದಚಾರಿಗಳು, ಬಸ್‌ಗಳ ಸಂಚಾರಕ್ಕೆ ತೀರಾ ಅಡ್ಡಿಯಾಗುತ್ತಿದೆ.
ಖಾಸಗಿ ಮತ್ತು ಕೆಎಸ್‌ಆರ್‌ಟಿಸಿಯ ನೂರಾರು ಸಿಟಿ ಬಸ್‌ಗಳು 500ಕ್ಕೂ ಅಧಿಕ ಟ್ರಿಪ್‌ಗ್ಳಲ್ಲಿ ಬಸ್ ನಿಲ್ದಾಣವನ್ನು ಪ್ರವೇಶಿಸುವ ಸ್ಥಳ ಇದಾಗಿದೆ. ಮೊದಲೇ ಈ ಸ್ಥಳ ಇಕ್ಕಟ್ಟಿನಿಂದ ಕೂಡಿದೆ. ನಿಲ್ದಾಣದೊಳಗೆ ಸ್ಥಳಾವಕಾಶದ ಕೊರತೆಯಿಂದ ಕೆಲವು ಬಸ್‌ಗಳನ್ನು ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿಗಳು ನಡೆದಾಡಲು ಸ್ಥಳಾವಕಾಶವೇ ಇಲ್ಲ.
ಫುಟ್‌ಪಾತ್ ಕಾಮಗಾರಿಗೂ ಅಡ್ಡಿ
ಇಲ್ಲಿ ಲಭ್ಯವಿರುವ ಸ್ವಲ್ಪ ಜಾಗದಲ್ಲಿ ಫುಟ್‌ಪಾತ್ ನಿರ್ಮಿಸುವ ಕಾಮಗಾರಿ ಈ ಹಿಂದೆ ನಡೆದಿತ್ತು. ಆದರೆ ಫುಟ್‌ಪಾತ್ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಕೂಡ ಸಾಮಗ್ರಿಗಳನ್ನು ಇಟ್ಟಿರುವುದರಿಂದ ಆ ಕಾಮಗಾರಿ ಕೂಡ ಅಪೂರ್ಣವಾಗಿದೆ.
ಅಪಾಯಕಾರಿ ನಡಿಗೆ
ನಿಲ್ದಾಣ ಪ್ರವೇಶಿಸುವ ಬಸ್‌ಗಳ ನಡುವೆ ರಸ್ತೆಯ ಮಧ್ಯದಲ್ಲಿಯೇ ಪಾದಚಾರಿಗಳು ಕೂಡ ನಿಲ್ದಾಣದ ಕಡೆಗೆ ಅಪಾಯಕಾರಿಯಾಗಿ ಹೋಗುವಂತಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಪ್ರಾಣಭಯದಲ್ಲಿ ನಡೆಯುವಂತಾಗಿದೆ. ರಸ್ತೆಯ ಒಂದು ಬದಿಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಇಡಲಾಗಿದ್ದರೆ ಇನ್ನೊಂದು ಬದಿಯಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ಇಡಲಾಗಿದೆ.
ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ರಸ್ತೆ ಬದಿ, ಫುಟ್‌ಪಾತ್ ಮೇಲೆ ಇರುವ ಸಾಮಗ್ರಿಗಳನ್ನು ತೆರವುಗೊಳಿಸದಿದ್ದರೆ ಇಲ್ಲಿ ಅವಘಡ ಉಂಟಾಗುವ ಅಪಾಯವಿದೆ. ಕೂಡಲೇ ಸಾಮಗ್ರಿಗಳನ್ನು ತೆರವು ಗೊಳಿಸಬೇಕು ಎನ್ನುತ್ತಾರೆ ಬಸ್ ಚಾಲಕರು, ಪಾದಚಾರಿಗಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.