Mangaluru: ಮಾತೃ ಭಾಷಿಕರ ಕೊಡುಗೆಯಿಂದ ಕೊಂಕಣಿ ಸಮೃದ್ಧ: ಅವಧೂತ್ ತಿಂಬ್ಲೊ
ಕೊಂಕಣಿ ಸಾಧಕರಿಗೆ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ
Team Udayavani, Nov 6, 2024, 8:40 PM IST
ಮಂಗಳೂರು: ಕೊಂಕಣಿ ಭಾಷೆಯ ಕಂಪು ದೇಶ ವಿದೇಶದಲ್ಲಿ ಪಸರಿದ್ದು, ಮತ್ತಷ್ಟು ವಿಸ್ತಾರವಾಗಲು ಮಾತೃಭಾಷಿಗರ ಕೊಡುಗ ಅಗತ್ಯ. ಕೊಂಕಣಿಯಲ್ಲಿ ಹೆಚ್ಚು ಸಾಹಿತ್ಯ ಕೃಷಿ ಆಗಬೇಕಾಗಿದ್ದು, ಯುವ ಪೀಳಿಗೆ ಸಾಹಿತ್ಯಕ್ಕೆ ಕೊಡುಗೆ ನೀಡಬೇಕು. ಭಾಷೆಗೆ ಹಿನ್ನಡೆಯಾದರೆ ಅದರೆ ನೇರ ಪರಿಣಾಮ ಬದುಕಿನ ಮೇಲೆ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಧರ್ಮದಂತೆ ಪ್ರೀತಿಸಬೇಕು ಎಂದು ಗೋವಾ ಮೂಲದ ಉದ್ಯಮಿ ಅವಧೂತ್ ತಿಂಬ್ಲೊ ಹೇಳಿದರು.
ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬುಧವಾರ ವಿಶ್ವ ಕೊಂಕಣಿ ಸಮಾರೋಹದ ಭಾಗವಾದ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಎಷ್ಟೇ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದರೂ ಮಾತೃ ಭಾಷೆ ಮರೆಯಲು ಅಸಾಧ್ಯ. ಕನಸಿನಲ್ಲೂ ಮಾತನಾಡುವುದು ಮಾತೃ ಭಾಷೆಯನ್ನು ಮಾತ್ರ. ಕೊಂಕಣಿ ಭಾಷೆ ಸಾಹಿತ್ಯ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜನರತ್ತ ತಲುಪಿಸಲು ಭೌತಿಕ ಕಟ್ಟಡಗಳಿಗೆ ಒತ್ತು ನೀಡುವ ಬದಲು ವರ್ಚುವಲ್ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಮುಂದಾಗಬೇಕು ಎಂದರು.
ಕೊಂಕಣಿ ಸಾಹಿತ್ಯ ಪ್ರಕಾರಗಳ ಅಗತ್ಯ
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಹಾಗೂ ಉದ್ಯೋಗದ ನಿಮಿತ್ತ ಜನ ಬೇರೆ ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಅಂತಿಮವಾಗಿ ತಾಯ್ನಾಡಿಗೆ ಮರಳಿ ತಮ್ಮ ಮಾತೃ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇದರಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಕೊಂಕಣಿ ಭಾಷೆ ಸಾರ್ವತ್ರಿಕಗೊಳ್ಳಲು ಹೆಚ್ಚೆಚ್ಚು ಸಾಹಿತ್ಯ ಪ್ರಕಾರಗಳು, ಸಿನೆಮಾಗಳ ಅಗತ್ಯವಿದೆ ಎಂದರು.
ಸ್ಥಾಪಕ ಟ್ರಸ್ಟಿ ವಿಲಿಯಂ ಡಿ’ ಸೋಜಾ ಅವರನ್ನು ಗೌರವಿಸಲಾಯಿತು. ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷ ಕೆ. ಜಗದೀಶ್ ಶೆಣೈ, ಡಾ| ಕಿರಣ್ ಬುಡ್ಕುಳೆ, ಗಿಲ್ಬರ್ಟ್ ಡಿ’ಸೋಜಾ, ಕಾರ್ಯದರ್ಶಿ ಡಾ| ಕೆ. ಮೋಹನ್ ಪೈ, ಖಜಾಂಚಿ ಬಿ.ಆರ್. ಭಟ್, ಸಹ ಕಾರ್ಯದರ್ಶಿ ಸ್ನೇಹ ಶೆಣೈ, ಸಿಎಒ ಡಾ| ಬಿ. ದೇವ್‌ದಾಸ್ ಪೈ, ಟ್ರಸ್ಟಿಗಳಾದ ರಮೇಶ್ ನಾಯಕ್, ಮೆಲ್ವಿನ್ ರೋಡ್ರಿಗಸ್ ಉಪಸ್ಥಿತರಿದ್ದರು. ಸ್ಮಿತಾ ಶೆಣೈ ನಿರೂಪಿಸಿದರು.
ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಚಿಂತಕ ವಂ| ಮೌಜಿನ್ಹೊ ದೆ ಅತಾಯಿದ್ ಅವರಿಗೆ ಪ್ರದಾನಿಸಲಾಯಿತು. ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕವಿ ಪ್ರಕಾಶ ಡಿ. ನಾಯಕ್ ಅವರ “ಮೊಡಕೂಳ್’ ಎಂಬ ಕೃತಿಗೆ ನೀಡಲಾಯಿತು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮುಂಬಯಿಯ ವೀಣಾ ಅಡಿಗೆ ಹಾಗೂ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.