King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
ಪಶ್ಚಿಮಘಟ್ಟ ಪ್ರದೇಶದ ಕಾಳಿಂಗಕ್ಕೆ "ಓಫಿಯೋಫೆಗಸ್ ಕಾಳಿಂಗ' ಹೆಸರು ಅಧಿಕೃತ , ಡಾ| ಗೌರಿಶಂಕರ್ ಅಧ್ಯಯನದ ಫಲ ರಾಜ್ಯೋತ್ಸವ ಸುವರ್ಣ ಸಂಭ್ರಮಕ್ಕೆ ಕೊಡುಗೆ
Team Udayavani, Nov 9, 2024, 7:48 AM IST
ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಣಸಿಗುವ ಕಾಳಿಂಗ ಸರ್ಪದ ಪ್ರಭೇದಕ್ಕೆ “ಕಾಳಿಂಗ’ ಎಂದು ವೈಜ್ಞಾನಿಕ ಹೆಸರನ್ನೇ ಇಡುವ ಮೂಲಕ ಕನ್ನಡದ ಹೆಸರನ್ನು ಜಗದ್ವಿಖ್ಯಾತಗೊಳಿಸುವ ಪ್ರಯತ್ನವೊಂದು ನಡೆದಿದೆ. ಇದರಿಂದ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ವರ್ಷಾಚರಣೆಗೆ ಇನ್ನಷ್ಟು ಇಂಬು ನೀಡಿದಂತಾಗಿದೆ.
ಉರಗ ತಜ್ಞ ಆಗುಂಬೆಯ ಕಾಳಿಂಗ ಮನೆಯ ಡಾ| ಪಿ. ಗೌರಿಶಂಕರ್ ಅವರ ಅಧ್ಯಯನದ ಫಲವಾಗಿ ವೈಜ್ಞಾನಿಕ ಹೆಸರಿನಲ್ಲಿಯೂ ಕನ್ನಡ ಛಾಪು ಮೂಡಿದ್ದು, ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಾಗಿದೆ. ಈ ಕುರಿತು ನ. 22ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು “ಓಫಿಯೋಫೆಗಸ್ ಕಾಳಿಂಗ’ ಎಂಬ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ. “ನಮ್ಮ ಕಾಳಿಂಗ’ ಹೆಸರಿನಡಿಯಲ್ಲಿ ಈ ಕಾರ್ಯಕ್ರಮವು ಬೆಂಗಳೂರಿನ ಜೆ.ಎನ್. ಟಾಟಾ ಸಭಾಂಗಣದಲ್ಲಿ ನಡೆಯಲಿದ್ದು, ವೈಜ್ಞಾನಿಕ ಭಾಷೆಗಳಲ್ಲಿ ಕನ್ನಡ ಅಧಿಕೃತವಾಗಿ ಬಳಕೆಯಾಗಲಿದೆ.
ಪ್ರಪಂಚದಲ್ಲಿ ಕಂಡುಬರುವ ಕಾಳಿಂಗ ಸರ್ಪದಲ್ಲಿ ಸದ್ಯ 4 ಬಗೆಯ ಪ್ರಭೇದಗಳಿದ್ದು ಪೂರ್ವ ಪಾಕಿಸ್ಥಾನ, ಉತ್ತರ ಮತ್ತು ಪೂರ್ವ ಭಾರತ, ಅಂಡಮಾನ್ ದ್ವೀಪಗಳು, ಇಂಡೋ-ಬರ್ಮಾ, ಇಂಡೋ-ಚೀನ ಮತ್ತು ಥೈಲ್ಯಾಂಡ್ ಭಾಗದಲ್ಲಿ ಕಂಡುಬರುವುದು ನಾರ್ಥನ್ ಕಿಂಗ್ ಕೋಬ್ರಾ (ಓಫಿಯೋಫೆಗಸ್ ಹ್ಯಾನ), ದಕ್ಷಿಣ ಫಿಲಿಫಿನ್ಸ್ ಭಾಗದಲ್ಲಿ ಸುಂದ ಕಿಂಗ್ ಕೋಬ್ರಾ (ಓಫಿಯೋಫೆಗಸ್ ಬಂಗಾರಸ್), ಉತ್ತರ ಫಿಲಿಫಿನ್ಸ್‌ನ ಲೂಜಾನ್‌ಕಿಂಗ್ ಕೋಬ್ರಾ (ಓಫಿಯೋಫೆಗಸ್ ಸಲ್ವತಾನಾ) ಹಾಗೂ ಭಾರತದ ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಕಾಳಿಂಗ ಸರ್ಪ (ಓಫಿಯೋಫೆಗಸ್ ಕಾಳಿಂಗ) ಎಂಬ ವೈಜ್ಞಾನಿಕ ಹೆಸರು ಇಡಲಾಗಿದೆ.
ಸಂಶೋಧನೆಯ ಪ್ರಕಾರ ಸರ್ಪಗಳ ಬಣ್ಣ, ಮೈ ಪಟ್ಟೆ ಹಾಗೂ ಕೆಲ ಸೂಕ್ಷ್ಮ ದೈಹಿಕ ಬದಲಾವಣೆಗಳನ್ನು ನಾವು ಗುರುತಿಸಬಹುದು. ಓಫಿಯೋಫೆಗಸ್ ಕಾಳಿಂಗದಲ್ಲಿ 40ಕ್ಕಿಂತ ಕಡಿಮೆ ಪಟ್ಟೆಗಳಿರುತ್ತದೆ. ಬಂಗಾರಸ್‌ನಲ್ಲಿ 70ಕ್ಕಿಂತ ಹೆಚ್ಚು ಪಟ್ಟೆ, ಹ್ಯಾನ ಪ್ರಭೇದದಲ್ಲಿ 50-70 ಪಟ್ಟೆಗಳು ಹಾಗೂ ಸಲ್ವತಾನಾದಲ್ಲಿ ಯಾವುದೇ ಪಟ್ಟೆಗಳು ಕಂಡುಬರುವುದಿಲ್ಲ. ಇವುಗಳ ಆನುವಂಶಿಕ ಮಟ್ಟದಲ್ಲಿ ಶೇ. 1ರಿಂದ 4ರ ವರೆಗೆ ವ್ಯತ್ಯಾಸವಿರುತ್ತದೆ.ಈ ವ್ಯತ್ಯಾಸವನ್ನು ಡಿ.ಎನ್.ಎ, ಹಾವಿನ ಪೊರೆ, ಫೋಟೋ ಹಾಗೂ ಪಳೆಯುಳಿಕೆಗಳನ್ನು ಅಧ್ಯಯನ ಮಾಡುವ ಮೂಲಕ ಗುರುತಿಸಲಾಗಿದೆ ಎಂದು ಡಾ| ಗೌರಿ ಶಂಕರ್ ಮಾಹಿತಿ ನೀಡಿದರು.
ಸರ್ಪಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಡಾ| ಗೌರಿ ಶಂಕರ್ 2012ರಲ್ಲಿ ಕಾಳಿಂಗಸರ್ಪಗಳ ಬಗ್ಗೆ ಅಧಿಕೃತ ಅಧ್ಯಯನ ಆರಂಭಿಸಿದರು. ಈ ಮೊದಲು ಕಾಳಿಂಗ ಸರ್ಪದ ಬಗ್ಗೆ 1836ರಲ್ಲಿ ಸಂಶೋಧನೆ ನಡೆದಿತ್ತು. ಬರೋಬ್ಬರಿ 185 ವರ್ಷಗಳ ಬಳಿಕ ಡಾ| ಗೌರಿಶಂಕರ್ ಈ ಸಂಶೋಧನೆ ನಡೆಸಿದ್ದಾರೆ.
“ಈ ಹಿಂದಿನ ಸಂಶೋಧನೆಯಲ್ಲಿ ಕಾಳಿಂಗ ಸರ್ಪದಲ್ಲಿ 4 ವಿಧ ಎಂದು ಗುರುತಿಸಲಾಗಿತ್ತು. ಅದರ ಮುಂದಿನ ಭಾಗವಾಗಿ ಈ ಪ್ರಭೇದಗಳಿಗೆ ಹೆಸರನ್ನಿಡಲಾಗಿದೆ. ಪ್ರತೀ ಬಾರಿ ವೈಜ್ಞಾನಿಕ ಹೆಸರು ಯುರೋಪಿಯನ್ ಭಾಷೆಯಲ್ಲಿ ಇರುತ್ತಿದ್ದವು. ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಸರ್ಪಗಳಿಗೆ ಈ ಪ್ರದೇಶದಲ್ಲಿ ಕರೆಯುವಂತೆ “ಕಾಳಿಂಗ’ ಎಂದು ಹೆಸರಿಡಲು ಹೆಮ್ಮೆಯಾಗುತ್ತದೆ.” – ಡಾ| ಗೌರಿ ಶಂಕರ್, ಉರಗ ತಜ್ಞ
– ಸುಚೇತಾ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.