Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

ಬೆಳೆ ಕನ್ನಡ- ಕಾಲದಿಂದ ಕಾಲಕ್ಕೆ ಪತ್ರಿಕಾ ಭಾಷೆ, ಶೈಲಿ ಬದಲಾವಣೆ ಅನಿವಾರ್ಯ, ಪತ್ರಿಕೆಯಲ್ಲಿ ಬಳಸುವ ಭಾಷೆ ಸರಳವಾಗಿದ್ದು, ಎಲ್ಲರಿಗೂ ಅರ್ಥವಾಗುವಂತಿರಬೇಕು

Team Udayavani, Nov 9, 2024, 7:29 AM IST

Paper-Reader

ಒಂದು ಕಾಲವಿತ್ತು, ಶಾಲೆಯಲ್ಲಿ ಪ್ರಾರ್ಥನೆ, ಅಸೆಂಬ್ಲಿ ಆದ ಮೇಲೆ ಆವತ್ತಿನ ದಿನಪತ್ರಿಕೆಯ ಮುಖ್ಯ ತಲೆಬರಹಗಳನ್ನೋ, ಸಂಪಾದಕೀಯ­ವನ್ನೋ ಒಬ್ಬೊಬ್ಬ ವಿದ್ಯಾರ್ಥಿಯಿಂದ ಓದಿಸುವ ಕ್ರಮವಿತ್ತು. ಇದು ಲೋಕಜ್ಞಾನ ವ­ರ್ಧನೆಗಷ್ಟೇ ಅಲ್ಲ, ಭಾಷೆಯ ಕಲಿಕೆಗೂ. ಪತ್ರಿಕೆಗಳ ಭಾಷೆಯೆಂದರೆ ಅಷ್ಟು ಶ್ರೇಷ್ಠ ಗುಣಮಟ್ಟದ್ದು, ಚಿಕ್ಕಂದಿನಿಂದಲೇ ಕಲಿತರೆ ಒಳ್ಳೆಯದೆಂಬ ಭಾವನೆಯಿತ್ತು. ಏನಾಯಿತೋ ಗೊತ್ತಿಲ್ಲ, ಪತ್ರಿಕೆಗಳ ಬಗೆಗಿದ್ದ ಆ ಗೌರವ ಇತ್ತೀಚೆಗೆ ಕ್ಷೀಣಿಸತೊಡಗಿದೆ…

ಬದಲಾವಣೆ ಜಗದ ನಿಯಮ. ನಮ್ಮ ಶರೀರದ ಜೀವಕೋಶಗಳೇ ಪ್ರತೀಕ್ಷಣಕ್ಕೂ ಬದಲಾಗುತ್ತಿರುತ್ತವಂತೆ. ಅಂದಮೇಲೆ ಸುತ್ತಮುತ್ತಲಿನ ಪ್ರಪಂಚ, ಅದರೊಂದಿಗಿನ ನಮ್ಮ ವ್ಯವಹಾರ, ಸಂವಹನ ವಿಧಾನಗಳು ಬದಲಾಗದೇ ಇರುತ್ತವೆಯೇ? ಹಾಗಾಗಿ, ಪತ್ರಿಕೆಗಳಲ್ಲಿ ಬಳಕೆಯಾಗುವ ಭಾಷೆ, ಪದಬಳಕೆ, ಶೈಲಿ ಸಹ ಕಾಲದಿಂದ ಕಾಲಕ್ಕೆ ಬದಲಾಗಿಯೇ ಆಗುತ್ತವೆ.

180 ವರ್ಷಗಳ ಹಿಂದೆ ಬಾಸೆಲ್‌ ಮಿಷನ್‌ ಹರ್ಮನ್‌ ಮೋಗ್ಲಿಂಗ್‌ ಪ್ರಕಟಿಸಿದ “ಮಂಗಳೂರು ಸಮಾಚಾರ’ ವೃತ್ತಪತ್ರಿಕೆಯಲ್ಲಿ ಬಳಕೆಯಾಗಿದ್ದ ಕನ್ನಡಕ್ಕೂ ಈಗ ನಿಮ್ಮ ಕೈಯಲ್ಲಿರುವ “ಉದಯವಾಣಿ’ ಪತ್ರಿಕೆಯಲ್ಲಿ 21ನೆಯ ಶತಮಾನದ ಕಾಲುಭಾಗ ಮುಗಿಯುತ್ತ ಬಂದಿರುವ ಕಾಲಘಟ್ಟದಲ್ಲಿ ಬಳಕೆಯಾಗು­ತ್ತಿರುವ ಕನ್ನಡಕ್ಕೂ ಸ್ಪಷ್ಟ ವ್ಯತ್ಯಾಸವಿದೆ!

“ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿದೆ. ಇದರಲ್ಲಿ ವೂರ ವರ್ತಮಾನ, ಅನ್ಯರ ನಡ್ತೆಗಳು, ಆಶ್ಚರ್ಯ ಸುದ್ದಿಗಳು, ಸುಬುದ್ಧಿಗಳು, ಕಥೆಗಳು ಇರುತ್ತವೆ…’ ಎಂದು “ಮಂಗಳೂರು ಸಮಾಚಾರ’ದ ಮೊತ್ತಮೊದಲ ಸಂಚಿಕೆಯಲ್ಲಿತ್ತಂತೆ. ವಿದೇಶೀ ಪಾದ್ರಿಯೊಬ್ಬ ಕನ್ನಡ ಕಲಿತು ಬರೆದ ರೀತಿಯದು. ಹಳೆಯ ಚಂದಮಾಮ, ಕಸ್ತೂರಿ, ತಾಯಿನಾಡು ಮುಂತಾದ ಪತ್ರಿಕೆಗಳಲ್ಲೂ, ವಿಶೇಷವಾಗಿ ಜಾಹೀರಾತುಗಳಲ್ಲಿ, 1950-60ರ ಯಕ್ಷಗಾನ ಬಯಲಾಟ ಕರಪತ್ರಗಳಲ್ಲೂ ಅದೇ ಥರದ ಭಾಷೆ ಬಳಕೆಯನ್ನು ನಾವು ಗಮನಿಸಬಹುದು. ಈಗಿನ ಬದಲಾವಣೆಯನ್ನೂ ಗಮನಿಸಬಹುದು.

ಆದರೆ ಬದಲಾವಣೆಗೆ ಜಗ್ಗದ ನಿಯಮವೂ ಒಂದಿದೆ. ಅದೇನೆಂದರೆ ಭಾಷೆ, ಪದಬಳಕೆ, ಶೈಲಿ ಎಷ್ಟೇ ಬದಲಾದರೂ ಹೆತ್ತತಾಯಿಗೆ ಸಮಾನವಾದ ಭಾಷೆಯ ಬಗೆಗಿನ ಗೌರವ ಕಡಿಮೆಯಾಗಬಾರದು. ಬರವಣಿಗೆಯಲ್ಲಿ ಅಸಡ್ಡೆ, ಉಡಾಫೆಗಳು ನುಸುಳಬಾರದು. ಇದನ್ನು ಕನ್ನಡದ ಪತ್ರಿಕೆಗಳು ಎಷ್ಟು ಪಾಲಿಸಿವೆ, ಎಲ್ಲಿ ಸೋತಿವೆ ಎಂಬೊಂದು ಸ್ಥೂಲನೋಟವಿದು.

ಒಂದೇ ಸ್ವರೂಪದ ಭಾಷೆ ಅಗತ್ಯ
ಕರ್ನಾಟಕದಲ್ಲಿ ಆಗಿಹೋದ ಪತ್ರಕರ್ತರಲ್ಲಿ ಖ್ಯಾತನಾಮರೆನಿಸಿದ ಡಿ.ವಿ.ಗುಂಡಪ್ಪ, ಪಿ.ಆರ್‌. ರಾಮಯ್ಯ, ಬೆಟಗೇರಿ ಕೃಷ್ಣಶರ್ಮ, ತಿರುಮಲೆ ತಾತಾಚಾರ್ಯ ಶರ್ಮ, ರಂಗನಾಥ ದಿವಾಕರ, ಸಿದ್ಧವ್ವನಹಳ್ಳಿ ಕೃಷ್ಣ ಶರ್ಮ, ಕಡೆಂಗೋಡ್ಲು ಶಂಕರಭಟ್ಟ, ಮೊಹರೆ ಹನುಮಂತರಾವ್‌, ದಿನಕರ ದೇಸಾಯಿ, ಖಾದ್ರಿ ಶಾಮಣ್ಣ, ವೈಎನೆR, ಬನ್ನಂಜೆ ಆಚಾರ್ಯದ್ವಯರು ಮುಂತಾದವರನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಲೇಬೇಕು. ಕನ್ನಡ ಪತ್ರಿಕಾ ಭಾಷೆಯ ಬೆಳವಣಿಗೆಗೆ, ಭಾಷೆ ಸರಳವೂ ಪ್ರಬುದ್ಧವೂ ಆಗಿರುವುದಕ್ಕೆ, ಏಕರೂಪತೆಗೆ ಇವರೆಲ್ಲರ ಶ್ರಮ-ಸಾಧನೆಗಳು ತುಂಬ ನೆರವಾಗಿವೆ.

ಆಡುಮಾತಿನ ಭಾಷೆಯಲ್ಲಾದರೆ ಭೌಗೋಳಿಕವಾಗಿ ಪ್ರತೀ 10-15 ಮೈಲು ಕ್ರಮಿಸಿದಾಗ ಸ್ವಲ್ಪವಾದರೂ ವ್ಯತ್ಯಾಸಗಳು ಕಂಡುಬರುತ್ತವೆ. ಹಾಗಾಗಿ ಆಡುಮಾತಿನಲ್ಲಿ ವಾಕ್ಯರಚನೆ, ಪದಬಳಕೆ, ಉಚ್ಚಾರ ಶೈಲಿ ಆಯಾ ಪ್ರದೇಶಗಳದಿದ್ದರೇನೇ ಮಾತಿಗೆ ಸೊಗಸು, ಸೊಗಡು. ಆದರೆ ಬರಹದ ಕ್ಷೇತ್ರಕ್ಕೆ ಬಂದಾಗ, ಪಾರಿಭಾಷಿಕ ಶಬ್ದಗಳ ಬಳಕೆಯಲ್ಲಿ, ಆಡುಮಾತಿನಷ್ಟು ಸ್ವಾತಂತ್ರ್ಯ ಸಾಧ್ಯವಿಲ್ಲ. ನಾಡಿನ ಎಲ್ಲ ಭಾಗಗಳಲ್ಲಿಯೂ ಪಾರಿಭಾಷಿಕ ಶಬ್ದಗಳು ಏಕರೀತಿಯಲ್ಲಿ ಪ್ರಯೋಗವಾಗಬೇಕು.

ಹೊಸಹೊಸ ಆವಿಷ್ಕಾರಗಳು, ತಂತ್ರಜ್ಞಾನ ಬಂದಂತೆಲ್ಲ ಹೊಸಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಿಕೊಳ್ಳಬೇಕು. ಅದರಲ್ಲೂ, ಜನಸಾಮಾನ್ಯರನ್ನು ಪ್ರತಿದಿನವೂ ಮುಟ್ಟುವ ದಿನಪತ್ರಿಕೆಗಳಿಗೆ- ರಾಜಕಾರಣ, ಆಡಳಿತ, ಕಾನೂನು, ವಿಜ್ಞಾನ, ವಾಣಿಜ್ಯ, ಕೃಷಿ, ಕ್ರೀಡೆ, ಪ್ರವಾಸೋದ್ಯಮ, ಮನೋರಂಜನೆ ಮುಂತಾಗಿ ಹತ್ತುಹಲವು ಕ್ಷೇತ್ರಗಳ ತಾಜಾ ಸುದ್ದಿ ಹೊತ್ತು ತರುವಂಥವುಗಳಿಗೆ- ಒಂದೇ ಸ್ವರೂಪದ ಪರಿಭಾಷೆ ತೀರ ಅಗತ್ಯ. ಇದಕ್ಕೆ ಕನ್ನಡ ಪತ್ರಿಕಾರಂಗದ ಪೂರ್ವಸೂರಿಗಳು ಹಾಕಿಕೊಟ್ಟ ಭದ್ರ ಬುನಾದಿ ಮತ್ತು ಇಂದಿಗೂ ಪತ್ರಿಕೋದ್ಯಮದಲ್ಲಿ ದುಡಿಯುತ್ತಿರುವ ಅನೇಕ ಹಿರಿಯರೂ ಕಿರಿಯರೂ ಸೇರಿ ಮಾಡುತ್ತಿರುವ ಸರ್ವತೋಮುಖ ಅಭಿವೃದ್ಧಿ ಸರ್ವಥಾ ಶ್ಲಾಘನೀಯವೇ.

ಅರ್ಥ ಕಳೆದುಕೊಂಡ ಪ್ರಯೋಗಶೀಲತೆ
ಅಂದಮಾತ್ರಕ್ಕೇ ಏಕರೀತಿ, ಏಕರೂಪಗಳು ಏಕತಾನತೆ ಮೂಡಿಸಬಾರದಲ್ಲ? ಪತ್ರಿಕಾ ಸಾಹಿತ್ಯವೆಂದರೆ ಅವಸರದ ಹೆರಿಗೆ ಹೌದಾದರೂ, ಹುಟ್ಟಿದ ಮಗು ಆಕರ್ಷಕವಾಗಿಯೇ ಕಾಣಬೇಕಲ್ಲ? ಆದ್ದರಿಂದಲೇ ಪತ್ರಿಕೆಗಳು ನಿರಂತರವಾಗಿ ಹೊಸತನಕ್ಕೆ, ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತವೆ. ಲಂಕೇಶ್‌ ಬಳಸುತ್ತಿದ್ದ “ಬಂ’, “ಗುಂ’ (ಅನುಕ್ರಮವಾಗಿ ಬಂಗಾರಪ್ಪ ಮತ್ತು ಗುಂಡೂರಾವ್‌) ಹ್ರಸ್ವ ರೂಪಗಳೂ ಅಂಥದೊಂದು ಪ್ರಯೋಗವೇ. ಲಂಕೇಶ್‌ ಅವರದ್ದಾದರೋ ಟ್ಯಾಬ್ಲಾಯ್ಡ್‌ ಪತ್ರಿಕೆ, ಆದರೆ ಮುಖ್ಯವಾಹಿನಿಯ ಗಂಭೀರ ಪತ್ರಿಕೆಗಳಲ್ಲೂ “ಯಡ್ಡಿ’, “ಸಿದ್ದು’, “ಪರಮೂ’ ಕಾಣಿಸಿಕೊಂಡರು.

“ಪರಂ ಗರಂ’, “ಗೌಡರ ಗುಟುರು’ ಅಂತೆಲ್ಲ ಟ್ಯಾಬ್ಲಾಯ್ಡ್‌  ಛಾಯೆ ವ್ಯಾಪಿಸಿತು. ತಲೆಬರಹದಲ್ಲಿ ಅತೀ ಕಡಿಮೆ ಅಕ್ಷರಗಳನ್ನು ಬಳಸಿ ಅತೀಹೆಚ್ಚು ವಿಷಯ ತುಂಬುವ ಸವಾಲಿರುವುದರಿಂದ ಸುಪ್ರೀಂ ಕೋರ್ಟ್‌ “ಸುಕೋ’ ಆಯ್ತು, ಮಹಾರಾಷ್ಟ್ರ “ಮಹಾ’ ಆಯ್ತು. ಈಗ ಪ್ರಮುಖ ಪತ್ರಿಕೆಗಳ ಪುಟಗಳೆಲ್ಲ ವರ್ಣರಂಜಿತ. ತಲೆಬರಹದಲ್ಲಿ ಪದಭಾಗಕ್ಕೆ ಬೇರೆಬೇರೆ ಬಣ್ಣ ಬಳಸಿ ಶ್ಲೇಷೆಯ ನಲಿದಾಟ. ಒಂದು ಮಿತಿಯೊಳಗೆ ಇವೆಲ್ಲ ಚಂದವೇ. ಆದರೆ ನವಿಲು ಕುಣಿಯಿತೆಂದು ಕೆಂಬೂತ ತಾನೂ ಕುಣಿದರೆ ಆಭಾಸವಾಗುತ್ತದೆಂದು ಗೊತ್ತಿರಬೇಕು.

ಎಲ್ಲಿ ಹೋಯಿತು ಆ ಕಾಲ?
ಒಂದು ಕಾಲವಿತ್ತು, ಶಾಲೆಯಲ್ಲಿ ಪ್ರಾರ್ಥನೆ, ಅಸೆಂಬ್ಲಿ ಆದಮೇಲೆ ಆವತ್ತಿನ ದಿನಪತ್ರಿಕೆಯ ಮುಖ್ಯ ತಲೆಬರಹಗಳನ್ನೋ, ಸಂಪಾದಕೀಯವನ್ನೋ ಒಬ್ಬೊಬ್ಬ ವಿದ್ಯಾರ್ಥಿಯಿಂದ ಓದಿಸುವ ಕ್ರಮವಿತ್ತು. ಇದು ಲೋಕಜ್ಞಾನವರ್ಧನೆಗಷ್ಟೇ ಅಲ್ಲ, ಭಾಷೆಯ ಕಲಿಕೆಗೂ. ಪತ್ರಿಕೆಗಳ ಭಾಷೆಯೆಂದರೆ ಅಷ್ಟು ಶ್ರೇಷ್ಠ ಗುಣಮಟ್ಟದ್ದು, ಚಿಕ್ಕಂದಿನಿಂದಲೇ ಕಲಿತರೆ ಒಳ್ಳೆಯದೆಂಬ ಭಾವನೆಯಿತ್ತು.

ಹಿಂದಿನ ಕಾಲದಲ್ಲಿ ಉಲ್ಟಾ ಅಕ್ಷರ ರೂಪದ ಅಚ್ಚಿನ ಮೊಳೆಗಳನ್ನು ಜೋಡಿಸಿ ಮುದ್ರಿಸುತ್ತಿ¨ªಾಗಲೂ ಒಂದೇ ಒಂದು ಕಾಗುಣಿತ ದೋಷ, ವಾಕ್ಯರಚನಾ ದೋಷ, ಲೇಖನಚಿಹ್ನೆಗಳ ಮಾಯವಾಗುವಿಕೆ ಇರುತ್ತಿರಲಿಲ್ಲ. ಈಗ ಯಾವುದೇ ಪತ್ರಿಕೆಯ ಯಾವುದೇ ಪುಟ ತೆರೆದರೂ ಕಣ್ಣಿಗೆ ರಾಚುವ ಕನಿಷ್ಠ ಐದಾರು ತಪ್ಪುಗಳು- ಆಧುನಿಕ ಡಿಟಿಪಿ ವ್ಯವಸ್ಥೆಯಲ್ಲಿ ಅಕ್ಷರಗಳ ನಿಜರೂಪವೇ ಕಾಣಿಸಿಕೊಳ್ಳುವುದು ಮತ್ತು ಗಣಕಯಂತ್ರದೊಳಗೆ ಸಂಕಲನ/ಸಂಪಾದನ ನೂರುಪಟ್ಟು ಸುಲಭ ಆಗಿದ್ದರೂ!

ಮರೆತೇ ಹೋಗಿರುವ ಕನ್ನಡ ಪದಗಳು
ಎಲ್ಲೆಲ್ಲೂ ಆ-ಹಾಕಾರದ (“ಗ್ಯಾಸ್‌ ಸಿಲಿಂಡರ್‌ ಬೆಲೆ ಹಗ್ಗ’; “ತಾನೇ ಎಣೆದ ಬಲೆಗೆ ಸಿಲುಕಿಕೊಂಡ ಯುವತಿ’) ತಾಂಡವ; ಅಲ್ಪಪ್ರಾಣ-ಮಹಾಪ್ರಾಣಗಳ ಪರಸ್ಪರ ಕಿತ್ತಾಟ; ವಿಭಕ್ತಿಪ್ರತ್ಯಯಗಳ ಅಸಮರ್ಪಕ ಬಳಕೆ ಅಥವಾ ಪೂರ್ಣತಿಲಾಂಜಲಿ; “ಸೊಸೆ ಕೊಂದ ಮಾವನ ಆತ್ಮಹತ್ಯೆ’ಯಂಥ ತಲೆಬರಹಗಳಲ್ಲಿ ಯಾರು ಯಾರನ್ನು ಕೊಂದದ್ದೆಂದು ಯಮಕಿಂಕರರಿಗೂ ಗೊಂದಲ; ಅತಿಪರಿಚಿತ ಕನ್ನಡ ಪದಗಳಿದ್ದರೂ ಇಂಗ್ಲಿಷಿನ ಡೌಲು. “ಬಾಲಕಿ ಹತ್ಯೆ ಮಾಡಿದ ಐಟಿ ದಂಪತಿ’ ಎಂಬ ತಲೆಬರಹವನ್ನಷ್ಟೇ ಓದಿದರೆ ಬಾಲಕಿಯೇ ಹತ್ಯೆ ಮಾಡಿದ್ದೆಂದು ಅರ್ಥೈಸಬೇಕು, ಸುದ್ದಿಯ ವಿವರ ಓದಿದರೆ ಕೋಪಗೊಂಡ ದಂಪತಿ ರೋಲಿಂಗ್‌ ಪಿನ್‌ (ಚಪಾತಿ ರೋಲ್‌)ನಿಂದ ಬಾಲಕಿಯ ತಲೆಗೆ ಹೊಡೆದು ಕೊಂದಿದ್ದಾ ರೆ’ ಅಂತೆ. ಅಂದರೆ ಲಟ್ಟಣಿಗೆ ಸಹ ಈಗ ಅಳಿವಿನಂಚಿನಲ್ಲಿರುವ ಕನ್ನಡ ಪದ ಅಂತಾಯ್ತು!

ಆಗಬೇಕಾದ್ದೇನು?
1. ಶಬ್ದಕೋಶವನ್ನು ಪಕ್ಕದಲ್ಲಿಟ್ಟು­ಕೊಳ್ಳಿ ಮತ್ತು ಆಗಾಗ (ಅರ್ಥ ಹುಡುಕಬೇಕಾ­ದಾಗಿನ ತುರ್ತಿನಲ್ಲಿ ಮಾತ್ರವಲ್ಲ, ಬಿಡುವಿನಲ್ಲೂ) ತೆರೆದು ಓದಿ. ನಿಮ್ಮ ಬರಹವನ್ನು ಅರ್ಥೈಸಲು ಓದು­ಗರು ನಿಘಂಟು ಬಳಸಬೇಕಾದ ಪರಿಸ್ಥಿತಿ ಬಾರದಿರಲಿ.

2. ನೀವು ಬರೆದಿದ್ದನ್ನು ಒಂದೆರಡು ಸಲ ನೀವೇ ಓದಿಕೊಳ್ಳಿ. ಸಾಧ್ಯವಾದಷ್ಟೂ ಮಟ್ಟಿಗೆ ಓದುಗರ ದೃಷ್ಟಿಕೋನದಿಂದ ಓದಿ ನೋಡಿ. ತಿದ್ದಿತೀಡಲು ಪ್ರಯತ್ನಿಸಿ. ಆರೇಳು ಪದಗಳಿಗಿಂತ ಹೆಚ್ಚಾದರೆ ಒಂದು ವಾಕ್ಯವನ್ನು ಚಿಕ್ಕದಾದ ಎರಡು ವಾಕ್ಯಗಳನ್ನಾಗಿಸಿ.

3 ಬರೆದಿದ್ದು ವ್ಯಾಕರಣಬದ್ಧ ಆಗಿರಬೇಕು ನಿಜ, ಅದಕ್ಕಿಂತಲೂ ಹೆಚ್ಚಾಗಿ ನಿಖರ, ಸ್ಪಷ್ಟ, ಆಭಾಸ­ರಹಿತ, ಒಂದೇ ಅರ್ಥ ಕೊಡುವ ರೀತಿಯಲ್ಲಿ­ರಬೇಕು. ವ್ಯಾಕರಣಕ್ಕೂ ಮನ್ನಣೆ ಕೊಡಬಯ­ಸುತ್ತೀರಾದರೆ ಮೊದಲಿಗೆ ವಿಭಕ್ತಿಪ್ರತ್ಯಯಗಳ ಸರಿಯಾದ ಬಳಕೆಯನ್ನು ಕಲಿತುಕೊಳ್ಳಿ.

4 ಸುದ್ದಿವಾಹಿನಿಗಳ ಶೈಲಿ ಅನುಕರಿಸಬೇಡಿ. ಪ್ರತಿ ವಾಕ್ಯ­ವನ್ನೂ “ಇನ್ನು’ ಅಥವಾ “ಹಾಗೇನೇ’/ಜತೆಗೆ’ ಎಂದು ಆರಂಭಿಸುವುದು,
“ಎಲ್ಲೋ  ಒಂದು ಕಡೆ’, “ಆಗಿರುವಂಥದ್ದು’, “ಹೇಳಿಕೆ ಕೊಟ್ಟಿರು­ವಂಥದ್ದು’ಗಳನ್ನು ಅನಗತ್ಯ ತುರುಕಿಸುವುದು ಬೇಡ.

5 ದ-ಧ, ಬ-ಭ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸ ಅರಿಯಲು “ಭೇದಿಯ ಬಾಧೆ ತಟ್ಟದಂತೆ ಭೇದ ಇಲ್ಲದೆ ಬುಧವಾರ ಬೋಧನೆ’ ಮಂತ್ರವನ್ನು ದಿನಾ ಐದು ಸಲ ಬರೆದು ಪಠಿಸಿರಿ. ಅ-ಕಾರಕ್ಕೆ ಹ-ಕಾರ (ಮತ್ತು ಅದಲು ಬದಲು) ಆಡುಭಾಷೆ­ಯಲ್ಲಿ ನಡೆಯಬಹುದು; ನಾಟಕಗಳಲ್ಲಿ, ಕಥೆ- ­ಕಾದಂಬರಿಗಳ ಸಂಭಾಷಣೆಯಲ್ಲಿ ಬೇಕಾಗ­ಬಹುದು; ಪತ್ರಿಕೆಯಲ್ಲಿ ಸುದ್ದಿ, ವರದಿಗಳ ಶಿಷ್ಟ ಬರವಣಿಗೆ ಆ-ಹಾಕಾರದಿಂದ ತತ್ತರಿಸದಿರಲಿ. ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ.

ಶ್ರೀವತ್ಸ ಜೋಶಿ, ಅಂಕಣಕಾರ, ವಾಷಿಂಗ್ಟನ್‌ ಡಿಸಿ. ಅಮೆರಿಕ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.