Kala Sampada: ಹಿಂದೂಸ್ತಾನಿ ಕಛೇರಿಗಳ ಸಂಗೀತ ಹಬ್ಬ ಸ್ವರಸ್ವಾದ್
Team Udayavani, Nov 10, 2024, 3:08 PM IST
ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್ ಮತ್ತಿತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 3 ಹಿಂದೂಸ್ತಾನಿ ಕಛೇರಿಗಳ ಸಂಗೀತ ಹಬ್ಬ “ಸ್ವರಸ್ವಾದ್’ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಅ. 26 ರಂದು ಜರುಗಿತು.
ಮೊದಲಿಗೆ ಪಂ| ಗಣಪತಿ ಭಟ್ ಹಾಸಣಗಿ ಹಾಗೂ ವಿ| ಸಂಗೀತ ಕಟ್ಟಿಯವರ ಶಿಷ್ಯೆ, ಉಡುಪಿಯ ಯುವ ಕಲಾವಿದೆ ಅನುರಾಧ ಭಟ್, ರಾಗ ಕೇದಾರದಲ್ಲಿ ವಿಲಂಬಿತ್ ತೀನ್ ತಾಲ್ ಹಾಗೂ ದೃತ್ ತೀನ್ ತಾಲ್‌ನ ಬಂಧಿಶ್‌ಗಳನ್ನು ಪ್ರಸ್ತುತ ಪಡಿಸಿ, 2 ಭಜನ್‌ಗಳನ್ನು ಹಾಡಿ ತನ್ನ ಗಾಯನ ಪ್ರಸ್ತುತಿಯನ್ನು ಮುಕ್ತಾಯಗೊಳಿಸಿದರು. ಅವರಿಗೆ ತಬ್ಲಾದಲ್ಲಿ ದೀಪಕ್ ನಾಯಕ್ ಹರಿಖಂಡಿಗೆ, ಸಂವಾದಿನಿಯಲ್ಲಿ ಪ್ರಸಾದ್ ಕಾಮತ್ ಉಡುಪಿ, ಅವರು ಉತ್ತಮವಾಗಿ ಸಾಥ್ ನೀಡಿದರು. ತಾನ್ಪುರದಲ್ಲಿ ಜಯಶ್ರೀ ಶೇಟ್ ಸಹಕರಿಸಿದರು.
ಎರಡನೆಯ ಕಛೇರಿಯನ್ನು ಕೆನಡಾದಲ್ಲಿ ನೆಲೆಸಿರುವ, ಸರೋದ್ ಕಲಾವಿದ ಆರ್ನಾಬ್ ಚಕ್ರವರ್ತಿ ನಡೆಸಿಕೊಟ್ಟರು. ಇವರು ಅಪರೂಪದ ರಾಗ ಮಾಲ್ಗುಂಜಿಯನ್ನು ವಿಲಂಬಿತ್ ಹಾಗೂ ದೃತ್ ತೀನ್ ತಾಲ್‌ಗಳಲ್ಲಿ ಪ್ರಸ್ತುತಪಡಿಸಿ ಅನಂತರ ತಿಲಕ್ ಕಾಮೋದ್ ರಾಗವನ್ನು ಮಧ್ಯಲಯ ರೂಪಕ್ ಹಾಗೂ ದೃತ್ ತೀನ್ ತಾಲ್‌ಗಳಲ್ಲಿ ನುಡಿಸಿದರು. ಇವರಿಗೆ ತಬ್ಲಾದಲ್ಲಿ ಕೋಟೇಶ್ವರದ ವಿಘ್ನೇಶ್ ಕಾಮತ್ ಉತ್ತಮವಾಗಿ ಸಾಥ್ ನೀಡಿದರು.
ಕೊನೆಯದಾಗಿ ಪಂ| ಪಾರ್ಥ ಭೋಸ್ ಕೋಲ್ಕತಾ, ಇವರಿಂದ ಸಿತಾರ್ ವಾದನ ಕಾರ್ಯಕ್ರಮ ನಡೆಯಿತು. ತಮ್ಮ ಕಛೇರಿಯಲ್ಲಿ ಸುಂದರ ಆಲಾಪ್ ಹಾಗೂ ವಿಲಂಬಿತ್ ಝಪ್ ತಾಳದ ಗತ್ ನೊಂದಿಗೆ ಮಾಧುರ್ಯಪೂರ್ಣವಾಗಿ ರಾಗ ದುರ್ಗಾವನ್ನು ಪ್ರಸ್ತುತ ಪಡಿಸಿದರು ಮತ್ತು ಮಿಶ್ರ ಕಮಾಜ್ ರಾಗದ ಗತ್ ಮಾಲಾದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು. ಪಾರ್ಥ ಭೋಸ್ ಅವರಿಗೆ ಗೋವಾದ ಮಯಾಂಕ್ ಬೇಡೇಕರ್ ಉತ್ತಮವಾಗಿ ತಬ್ಲಾ ಸಾಥ್ ನೀಡಿದರು.
ಮುನ್ನೋಟ:
ಯಕ್ಷಾಂಗಣ ಮಂಗಳೂರು: ಯಕ್ಷಗಾನ ತಾಳ ಮದ್ದಳೆ ಸಪ್ತಾಹ-2024. ನವೆಂಬರ್ 11ರಿಂದ 17ರ ವರೆಗೆ. ಸಮಯ ಸಂಜೆ ಗಂಟೆ 4.30ರಿಂದ ಸ್ಥಳ: ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣ.
ಮಣಿ ಕೃಷ್ಣಸ್ವಾಮಿ ಅಕಾಡೆಮಿ: ರಾಗ ಸುಧಾರಸ ಸಂಗೀತೋತ್ಸವ. ನ. 14ರಂದು ಸಂಜೆ 5ಕ್ಕೆ ಉದ್ಘಾಟನೆ ಬಳಿಕ ಶ್ರೇಯಾ ಕೊಳತ್ತಾಯ, ನಿರಂಜನ್ ದಿಂದೋಡಿ ಅವರಿಂದ ಹಾಡುಗಾರಿಕೆ. ಸ್ಥಳ: ಟೌನ್ ಹಾಲ್ ಮಂಗಳೂರು ನ. 15ರ ಸಂಜೆ 6.60ರಿಂದ ಡಾ| ರಾಜ್‌ಕಮಾರ್ ಭಾರತಿ ಅವರಿಂದ ಹಾಡುಗಾರಿಕೆ. ಸ್ಥಳ: ಎಡನೀರು ಮಠ, ಕಾಸರಗೋಡು ನ. 16ರ ಸಂಜೆ 6.60ರಿಂದ ಹೇರಂಬ್ ಮತ್ತು ಹೇಮಂತ್ ಅವರಿಂದ ಕೊಳಲು ವಾದನ. ಸ್ಥಳ: ಯಕ್ಷಗಾನ ಕಲಾರಂಗ, ಐವೈಸಿ ಇನ್ಫೋಸಿಸ್ ಹಾಲ್, ಉಡುಪಿ.
ಕಟೀಲು ಕನಕ ಸಂಭ್ರಮ: ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರ 50 ವರ್ಷದ ಯಕ್ಷ ಪಯಣದ “ಕಟೀಲು ಕನಕ ಸಂಭ್ರಮ’ ಕಾರ್ಯಕ್ರಮ. ನ. 16ರ ಸಂಜೆ 6.30ರಿಂದ ಸ್ಥಳ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ.
ರನ್ನ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.