Puttur: ರಸ್ತೆ ಅಗೆದು ಹಾಕಿದವರು ನಾಪತ್ತೆ!; ಅಪಘಾತದ ತಾಣವಾಗುತ್ತಿದ್ದರೂ ಕೇಳುವವರಾರೂ ಇಲ್ಲ
ಮುಕ್ಕೂರು-ಕಾಪುಕಾಡು ರಸ್ತೆ; ಕುಂಜಾಡಿ ಬಳಿ ಸೇತುವೆ ಅಪೂರ್ಣ; ಗುತ್ತಿಗೆದಾರರು ಎಲ್ಲಿ ಎಂದು ಕೇಳುತ್ತಿರುವ ಜನ;; ಮೈಸೂರು ಭಾಗದವರಿಗೆ ಧರ್ಮಸ್ಥಳಕ್ಕೆ ಹತ್ತಿರದ ಮಾರ್ಗ
Team Udayavani, Nov 11, 2024, 12:48 PM IST
ಪುತ್ತೂರು: ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ವರ್ಷ ಸಮೀಪಿಸುತ್ತಿದೆ. ಅದಾಗ್ಯೂ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕ್ಷಣ ಕ್ಷಣವೂ ವಾಹನ ಸವಾರರ ಪಾಲಿಗೆ ಅಪಘಾತದ ತಾಣವಾಗಿ ಬದಲಾಗುತ್ತಿದ್ದರೂ ಕೇಳುವವರೇ ಇಲ್ಲದ ಕಥೆ ಇಲ್ಲಿನದು.
ಧರ್ಮಸ್ಥಳವನ್ನು ಮೈಸೂರು, ಮಡಿಕೇರಿ ಭಾಗದಿಂದ ಕಡಿಮೆ ಅವಧಿಯಲ್ಲಿ ಸಂಪರ್ಕಿಸುವ ಸವಣೂರು-ಪೆರುವಾಜೆ-ಬೆಳ್ಳಾರೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಯಲ್ಲಿನ ಕುಂಜಾಡಿಯಿಂದ ಕಾಪುಕಾಡು ತನಕದ 12.5 ಕೋ.ರೂ.ವೆಚ್ಚದ ಕಾಮಗಾರಿ ಕುಟುಂತ್ತಾ ಸಾಗಿ ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗಿದೆ.
ವಾಹನ ಸವಾರರಿಗೆ ಅಪಾಯ
ಕುಂಜಾಡಿ ಬಳಿ 2.5 ಕೋ.ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಆರಂಭಗೊಂಡು ವರ್ಷ ಸಮೀಪಿಸುತ್ತಿದೆ. ಮಳೆಗಾಲದಲ್ಲಿ ತೋಡು ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅರ್ಧ ಕಾಮಗಾರಿ ಆಗಿದ್ದ ಹೊಸ ಸೇತುವೆಯಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಲ್ಲಿ ಹಾಕಿದ್ದು ಇದೀಗ ಎದ್ದು ಹೋಗಿ ಆಗಾಗ ದ್ವಿಚಕ್ರ ವಾಹನಗಳು ಬೀಳುತ್ತಿದ್ದಾರೆ.
ತಡೆಗೋಡೆ ಇಲ್ಲ
ಸೇತುವೆಯ ಒಂದು ಭಾಗದಲ್ಲಿ ತಡೆಗೋಡೆ ಅಪೂರ್ಣವಾಗಿದೆ. ಕೃಷಿ ತೋಟದ ಬದಿಯಲ್ಲಿ ಆಳೆತ್ತರದ ಕಂದಕ ನಿರ್ಮಿಸಿದ್ದು ಮುಂದಿನ ಕಾಮಗಾರಿ ನಡೆಯದೆ ಕೆಲವು ತಿಂಗಳುಗಳೇ ಕಳೆದಿದೆ. . ನಿಲ್ಲಿಸಿ ಎನ್ನುವ ಫಲಕವೊಂದು ಕಾಮಗಾರಿಯ ದಯನೀಯ ಸ್ಥಿತಿಯನ್ನು ನೆನಪಿಸುತ್ತಿದೆ. ಎರಡೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆಗಿದ್ದೇ ಬೇರೆ.
ಉಸ್ತುವಾರಿ ಎಲ್ಲಿ..?
ಸುಮಾರು 10 ಕೋ.ರೂ.ವೆಚ್ಚದಲ್ಲಿ ಕುಂಜಾಡಿಯಿಂದ ಕಾಪುಕಾಡು ತನಕ ವಿಸ್ತರಿತ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಲಾಗಿತ್ತು. ಮಳೆಗಾಲದ ಮೊದಲು ಕನ್ನರ್ತ್‌ಮಜಲು, ಬೋಳಕುಮೇರು ಕ್ರಾಸ್, ಚಾಮುಂಡಿಮೂಲೆ, ಕಾಪು ಬಳಿ ರಸ್ತೆ ಅಗೆದು ಹಾಕಲಾಯಿತು. ಮಳೆಯ ಪರಿಣಾಮ ಇಲ್ಲಿ ವಾಹನ ದಾಟಿಸುವುವದೇ ಸವಾರರ ಪಾಲಿಗೆ ಸವಾಲಾಯಿತು. ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತಾತ್ಕಾಲಿಕ ದುರಸ್ತಿ ನಡೆಸಲಾಯಿತು. ಆದರೂ ಸಮಸ್ಯೆಗೆ ಪೂರ್ತಿ ಮುಕ್ತಿ ಸಿಗಲಿಲ್ಲ. ಮಳೆ ಇಳಿದಿದೆ. ಈಗ ಜಲ್ಲಿ ದಾಟಿ ಹೋಗುವ ಸವಾಲು ಹುಟ್ಟಿದೆ. ಇಷ್ಟಾದರೂ ಕಾಮಗಾರಿಯ ಉಸ್ತುವಾರಿ ವಹಿಸಿದವರೂ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಇರುವ ರಸ್ತೆಯನ್ನು ಬಲಿ ಕೊಡಲಾಯಿತು ಎಂಬ ಆರೋಪ ಕೇಳಿ ಬಂದಿದೆ.
ಮೂರು ವರ್ಷದ ಗೋಳು
ಸವಣೂರು-ಬೆಳ್ಳಾರ ತನಕ ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ಮತ್ತು ಸುಳ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದೆ. 2021 ಮಾರ್ಚ್‌ಲ್ಲಿ ಈ ಎರಡೂ ಉಪವಿಭಾಗ ವ್ಯಾಪ್ತಿಯಲ್ಲಿ 7 ಕಿ.ಮೀ. ರಸ್ತೆ ಒಟ್ಟು 7.5 ಕೋ.ರೂ. ವೆಚ್ಚದಲ್ಲಿ 5.5 ಮೀ.ಅಗಲದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಹಾಗೂ ಪುತ್ತೂರು ಉಪವಿಭಾಗಕ್ಕೆ ಸೇರಿರುವ ಕನ್ನಡಕುಮೇರಿನಿಂದ ಕಾಪುಕಾಡು ತನಕದ ವಾ¤ಪ್ತಿಯಲ್ಲಿ 4 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ಕೋ. ರೂ.ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಕನ್ನಡಕುಮೇರಿನಿಂದ ಬೊಬ್ಬರಕಾಡು ಚಡಾವಿನ ತನಕ ಡಾಮರು ಆಗಿದೆ. ಮುಕ್ಕೂರು-ಕಾಪುಕಾಡು ತನಕ ರಸ್ತೆಯ ಇಕ್ಕೆಡೆ ಅಗೆದು ಮೂರು ವರ್ಷ ಸಂದಿತ್ತು. ಕಳೆದ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.