Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಬೋಳಂಗಡಿ ಬಳಿ ಕೆಟ್ಟು ನಿಂತ ಕಂಟೈನರ್ ಲಾರಿ
Team Udayavani, Nov 13, 2024, 6:30 AM IST
ಬಂಟ್ವಾಳ: ಮೆಲ್ಕಾರ್-ಕಲ್ಲಡ್ಕ ಮಧ್ಯದ ಬೋಳಂಗಡಿ ಬಳಿ ಮಂಗಳವಾರ ಕಂಟೈನರ್ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಂಗಳವಾರ ಸಂಜೆ 3.30ರ ವೇಳೆಗೆ ಲಾರಿ ಕೆಟ್ಟು ನಿಂತಿದ್ದು, ಹೀಗಾಗಿ ಎರಡೂ ಬದಿಯ ವಾಹನಗಳು ಏಕಮುಖ ರಸ್ತೆಯಲ್ಲಿ ಸಂಚರಿಸುವಂತಾಯಿತು. ಬೋಳಂಗಡಿ- ನರಹರಿ ಪರ್ವತ ಭಾಗದಲ್ಲಿ ಹೆದ್ದಾರಿ ಕಾಮಗಾರಿಯಿಂದ ವಾಹನಗಳು ಪ್ರತಿನಿತ್ಯವೂ ತೀರಾ ನಿಧಾನವಾಗಿ ಸಾಗುತ್ತಿದ್ದು, ಈ ನಡುವೆ ಲಾರಿ ಕೆಟ್ಟು ವಾಹನಗಳು ತಾಸುಗಳ ಕಾಲ ಹೆದ್ದಾರಿಯಲ್ಲೇ ನಿಲ್ಲಬೇಕಾಯಿತು. ಟ್ರಾಫಿಕ್ ಜಾಮ್‌ನ ಮಧ್ಯೆಯೇ ಟ್ಯಾಂಕರೊಂದರಿಂದ ಡೀಸೆಲ್ ಸೋರಿಕೆಯಾಗಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಬಳಿಕ ಸೋರಿಕೆಯನ್ನು ತಡೆದು ಟ್ಯಾಂಕರ್ ಕಳುಹಿಸಿಕೊಡಲಾಯಿತು.
ಸಂಜೆ 5.30ರ ಬಳಿಕ ನಿಧಾನಕ್ಕೆ ಸಹಜ ಸ್ಥಿತಿಯತ್ತ ಮರಳಿತ್ತು. ಹೆದ್ದಾರಿಯಲ್ಲಿ ಕಲ್ಲಡ್ಕದಿಂದ ಪಾಣೆಮಂಗಳೂರುವರೆಗೂ ವಾಹನಗಳು ಸರತಿಯಲ್ಲಿ ನಿಂತಿದ್ದು, ಕೆಲವು ಕಡೆ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿ ವಾಹನಗಳ ನಿಯಂತ್ರಣಕ್ಕೆ ತೊಂದರೆ ಉಂಟಾಯಿತು. ಖಾಸಗಿ ಬಸ್‌ಗಳು ಸೇರಿದಂತೆ ಒಂದಷ್ಟು ವಾಹನಗಳು ಪಾಣೆಮಂಗಳೂರು-ನರಿಕೊಂಬು-ಶಂಭೂರು ರಸ್ತೆಯ ಮೂಲಕ ಸಾಗಿ ದಾಸಕೋಡಿಯಲ್ಲಿ ಹೆದ್ದಾರಿಯನ್ನು ಸಂಪರ್ಕಿಸಿದವು.
ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ. ಅವರ ನೇತೃತ್ವದಲ್ಲಿ ಸಂಚಾರ ಪೊಲೀಸರು ವಾಹನ ನಿಯಂತ್ರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಜತೆಗೆ ಸ್ಥಳೀಯ, ನಾಗರಿಕರು, ಆಟೋ ಚಾಲಕರು ಕೂಡ ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.