Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
Team Udayavani, Nov 15, 2024, 6:40 AM IST
ಕುಂದಾಪುರ: ಸಾಂಪ್ರದಾಯಿಕ ಕಂಬಳಗಳ ಪೈಕಿ ಅತೀ ಪುರಾತನ ಹಾಗೂ ಪ್ರಸಿದ್ಧವಾದುದು ವಂಡಾರು ಕಂಬಳ. ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೂ, ವಂಡಾರಿನ ಕಂಬಳ ಗದ್ದೆಗೂ ಸಂಬಂಧವಿದೆ. ಇಲ್ಲಿ ಈಗಲೂ ಹರಕೆಯ ಸೇವೆ ರೂಪದಲ್ಲೇ ಕಂಬಳ ನಡೆದುಕೊಂಡು ಬರುವುದು ವಿಶೇಷ.
ಇಲ್ಲಿ ಒಂದಿಡೀ ಊರಿನ ಹಬ್ಬ, ಜಾತ್ರೆಯ ರೂಪದಲ್ಲಿ ಕಂಬಳ ನಡೆಯುತ್ತಿದೆ. ವಂಡಾರು ಕಂಬಳ ಊರ ಜನರ ಧಾರ್ಮಿಕ ಮಹತ್ವ, ಸಾಮೂಹಿಕ ಪಾಲ್ಗೊಳ್ಳುವಿಕೆ, ಮನೆತನದ ಗೌರವದ ಸಂಕೇತ. ಧಾರ್ಮಿಕ ಕಟ್ಟುಕಟ್ಟಳೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ, ಜನರ ಜೀವನ, ಸಂಸ್ಕೃತಿಯನ್ನು ಬಿಂಬಿಸುವ ಕಂಬಳ ಇದಾಗಿದೆ.
ಹಿನ್ನೆಲೆ
ಕುಂದಾಪುರದಿಂದ ಸುಮಾರು 30 ಕಿ.ಮೀ. ದೂರದ ವಂಡಾರಿನಲ್ಲಿ ನಡೆಯುವ ಈ ಕಂಬಳಕ್ಕೆ ಪುರಾತನ ಹಿನ್ನೆಲೆ ಇದೆ. ಪಾಂಡವರು ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಬೇಕು ಅನ್ನುವುದು ಶಿವನ ಆಜ್ಞೆಯಾಗಿರುತ್ತದೆ. ಅದರಂತೆ ಒಂದು ದಿನ ರಾತ್ರಿ 5 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಾಲವಾದ ಕೋಟೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿ(ಕೆರೆ)ಯನ್ನು ನಿರ್ಮಿಸುತ್ತಾರೆ. ಅದು ಅರ್ಧ ರಾತ್ರಿಗೆ ಮುಗಿಯುತ್ತದೆ. ಅದಕ್ಕೆ ಅಲ್ಲಿಂದ ವಂಡಾರಿಗೆ ಸುರಂಗ ಮಾರ್ಗದ ಮೂಲಕ ನಿಗಳೇಶ್ವರ(ಮೊಸಳೆ)ನ ಮೂಲಕ ಬಂದು ಅಲ್ಲಿ 10 ಎಕ್ರೆ ವಿಸ್ತೀರ್ಣದ ಕಂಬಳ ಗದ್ದೆಯನ್ನು ನಿರ್ಮಿಸುತ್ತಾರೆ. ಹಾಗೆ ಕೆಲಸ ಮಾಡಿ, ಪಾಂಡವರು ಹಲಸಿನ ಹಣ್ಣನ್ನು ಸಿಗಿಯಲು ಹೋದ ವೇಳೆ ಬೆಳಗಾಯಿತೆಂದು ಊರವರಿಗೆ ತಿಳಿಯಬಾರದೆನ್ನುವ ಕಾರಣಕ್ಕೆ ಕೃಷ್ಣನೇ ಕೋಳಿಯ ರೂಪದಲ್ಲಿ ಕೂಗಿದ್ದು, ಇದನ್ನು ತಿಳಿದ ಅವರು, ಗದ್ದೆ ನಿರ್ಮಾಣ ನಿಲ್ಲಿಸಿ, ತೆರಳುತ್ತಾರೆ. ಇದಕ್ಕೆ ಅಲ್ಲಿನ ಗದ್ದೆ ಸಮೀಪ ಅರ್ಧ ಸಿಗಿದ ಹಲಸಿನ ಹಣ್ಣಿನ ಆಕೃತಿಯ ಕಲ್ಲಿನ ಪ್ರತಿಮೆಯಿದೆ. ಅದನ್ನು ಪಾಂಡವರ ಕಲ್ಲೆಂದು ಕರೆಯಲಾಗುತ್ತಿದ್ದು, ಅದಕ್ಕೆ ಜನ ಈಗಲೂ ಭಕ್ತಿಯಿಂದ ಪೂಜಿಸುತ್ತಾರೆ. ಕುಂದಾಪುರ ಭಾಗದ ದೊಡ್ಡ ಜಾತ್ರೆಯಾದ ಕೋಟೇಶ್ವರದ ಕೊಡಿ ಹಬ್ಬದ ದಿನ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಏಳುತ್ತದೆ. ವಂಡಾರಿನಲ್ಲಿ ಕಂಬಳ ನಡೆಯುವ ದಿನ ಕೋಟಿ ತೀರ್ಥ ಕೆರೆಯಲ್ಲಿ ಕೆಸರು ಕಾಣಿಸುತ್ತಿದ್ದು, ಇವೆರಡಕ್ಕೂ ಇರುವ ಸಂಬಂಧದ ದ್ಯೋತಕ.
ಕಂಬಳ ನಡೆಸುವ ಹೆಗ್ಡೆ ಮನೆತನ
ವಂಡಾರಿನ ಕಂಬಳಗದ್ದೆಯು ಇಲ್ಲಿನ ಹೆಗ್ಡೆ ಮನೆತನದ್ದಾಗಿದ್ದು, ಅವರೇ ಶತಮಾನಗಳಿಂದಲೂ ಈ ಹರಕೆಯ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ. ಮನೆಯ ದೇವರು ತುಳಸಿ ಅಮ್ಮ. ತಿರುಪತಿಯಿಂದ ಬಂದಿರುವುದಾಗಿ ಪ್ರತೀತಿಯಿದೆ. ಈ ಮನೆಯ ಸಮೀಪ ದಲ್ಲೇ ನಿಗಳೇಶ್ವರನ ಗುಡಿಯಿದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆ ಯುತ್ತದೆ. ತುಳಸಿ ಅಮ್ಮನಿಗೆ ಇಲ್ಲಿ ಬ್ರಾಹ್ಮಣರು, ನಿಗಳೇಶ್ವರನಿಗೆ ಬಂಟರೇ ಅರ್ಚಕರು. ಕಂಬಳದ ದಿನ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಮರುದಿನ ತುಳಸಿ ಅಮ್ಮನಿಗೆ ಗೆಂಡೋತ್ಸವ ನಡೆಯು ತ್ತದೆ. ಮನೆಯ ಸುತ್ತ ದೈವಗಳು, ಅಷ್ಟ ದಿಕ್ಕುಗಳಲ್ಲೂ ನಾಗಬನವಿದೆ. ಮನೆಯೊ ಳಗೆ ಹುತ್ತವಿದ್ದು, ಪಾವಿತ್ರÂ ಕಾಪಾಡದಿದ್ದರೆ ನಾಗರಹಾವು ಬರುತ್ತದೆ ಎನ್ನಲಾಗುತ್ತಿದೆ.
ಹರಕೆಯೇ ಇಲ್ಲಿನ ವಿಶೇಷ
ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಇಲ್ಲಿಗೆ ಕೋಣಗಳು ಬರುತ್ತವೆ. ಹಿಂದೆ ನೂರಿನ್ನೂರು ಜೋಡಿ ಕೋಣಗಳು ಬರುತ್ತಿದ್ದವು. ಈಗ 50-60 ಜೋಡಿ ಬರುತ್ತವೆ. ವಾದ್ಯ, ಚೆಂಡೆಯೊಂದಿಗೆ ಕಂಬಳ ಗದ್ದೆಗೆ ಕೋಣಗಳನ್ನು ಕರೆತರಲಾಗುತ್ತದೆ. ಕೋಣಗಳು ಮಾತ್ರವಲ್ಲದೆ ದನಕರುಗಳಿಗೆ ಅನಾರೋಗ್ಯ, ತೊಂದರೆ ಉಂಟಾಗದಂತೆ ಹರಕೆ ಸಲ್ಲಿಸುವ ಸಂಪ್ರದಾಯವಿದೆ. ಜಾನುವಾರುಗಳನ್ನು ಗದ್ದೆಗೆ ಇಳಿಸಿ, ಸುತ್ತು ಹಾಕಿಸಿ, ಹರಕೆ ಸಲ್ಲಿಸುತ್ತಾರೆ. ಮಕ್ಕಳನ್ನೂ ಗದ್ದೆಗೆ ಇಳಿಸಿ, ನೀರಿನ ಪ್ರೋಕ್ಷಣೆ ಮಾಡುತ್ತಾರೆ. ಕೊಡಿ ಹಬ್ಬದಲ್ಲಿರುವಂತೆ ಕಂಬಳ ದಿನ ಇಲ್ಲಿಗೆ ಬಂದು ಕಂಬಳ ಗದ್ದೆಯಲ್ಲಿ ಸುತ್ತು ಹಾಕಿ ಅಕ್ಕಿ (ಸುತ್ತಕ್ಕಿ ಸೇವೆ) ಹಾಕಿಕೊಂಡು ಹೋಗುವ ಕ್ರಮವೂ ಇದೆ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸದಸ್ಯ ಅಮರ್ ಶೆಟ್ಟಿ.
ಒಂದು ತಿಂಗಳು ನಡೆಯುತ್ತಿತ್ತು
ಬಹಳ ವರ್ಷಗಳ ಹಿಂದೆ ವಂಡಾರು ಕಂಬಳ ಜಾತ್ರೆಯ ರೂಪದಲ್ಲಿ ಒಂದು ತಿಂಗಳು ನಡೆಯುತ್ತಿತ್ತು. ವಾಹನ ಇಲ್ಲದ ಆ ಕಾಲದಲ್ಲಿ ಊರ ಜನರು ಇಲ್ಲಿಂದಲೇ ಪಾತ್ರೆ, ಮನೆಗೆ ಬೇಕಾದ ಸೊತ್ತುಗಳನ್ನು ಕೊಂಡೊಯ್ಯುತ್ತಿದ್ದರು. ಈಗ ಕೇವಲ 4 ದಿನಗಳಿಗಷ್ಟೇ ಸೀಮಿತವಾಗಿದೆ ಎನ್ನುತ್ತಾರೆ ಕಳೆದ 50 ವರ್ಷಗಳಿಗೂ ಹೆಚ್ಚು ಕಾಲದಿಂದ ವಂಡಾರು ಕಂಬಳದ ನೇತೃತ್ವ ವಹಿಸಿರುವ ವಂಡಾರು ಮನೆತನದ ಪ್ರವೀಣ್ ಹೆಗ್ಡೆ.
ಕಂಬಳಗದ್ದೆಯ ವೈಶಿಷ್ಯ
12 ವರ್ಷಗಳಿಗೊಮ್ಮೆ ಪಟ್ಟದ ಹೆಗ್ಡೆಯವರಿಗೆ ಉತ್ಸವ ನಡೆಯುತ್ತದೆ. ಈಗ ಕಾಶಿಯಿಂದ ತಂದಂತಹ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ.
ಕೋಣಗಳನ್ನು ತರುವಾಗ ಮೈಲಿಗೆ ಆದರೆ ಗದ್ದೆಗೆ ಇಳಿಸುವಂತಿಲ್ಲ. ಇಳಿದರೂ ಅದು ಕೈ ತಪ್ಪಿದರೆ ಎಷ್ಟೇ ಜನ ಅಡ್ಡ ನಿಂತರೂ ಆ ದಿನ ಅದು ಯಾರಿಗೂ ಸಿಗದೆ, ಓಡಿ ಹೋಗುತ್ತದೆ. ಮರು ದಿನ ಸಿಗುತ್ತದೆ ಅನ್ನುವ ಪ್ರತೀತಿಯಿದೆ.
ಪಟ್ಟದ ಹೆಗ್ಡೆ(ಕಂಬಳ ಮನೆತನದ ಯಜಮಾನ)ಯವರು ಗದ್ದೆಗೆ ಪೂರ್ಣ ಸುತ್ತು ಬರುವಂತಿಲ್ಲ. ವಿರುದ್ಧ ದಿಕ್ಕಿನಲ್ಲಿ ಹೋಗಿ ಬರಬಹುದು.
ಜನರ ನಂಬಿಕೆಯ ಆಚರಣೆ
ವಂಡಾರಿನಲ್ಲಿ ಕಂಬಳ ಕೇವಲ ಮನೋರಂಜನೆ ಮಾತ್ರವಲ್ಲ, ಇದು ಜನರ ನಂಬಿಕೆಯ ಆಚರಣೆ. ಸಾವಿರ ವರ್ಷಗಳ ಇತಿಹಾಸವಿದೆ ಅನ್ನುವುದು ಕೆಲವು ಕುರುಹು ಗಳಿಂದ ತಿಳಿದು ಬರುತ್ತದೆ. ಇದು ಜಾನಪದ ಆಚರಣೆ, ಇಲ್ಲಿ ಸ್ಪರ್ಧೆ ನಡೆಯು ವುದಿಲ್ಲ. ಕಂಬಳದ ದಿನ ಹರಕೆಯ ಸೇವೆ, ಸುತ್ತಕ್ಕಿ ಸೇವೆಗೆ ಹೆಚ್ಚಿನ ಪ್ರಾಮುಖ್ಯವಿದೆ.
– ಪ್ರವೀಣ್ ಹೆಗ್ಡೆ, ವಂಡಾರು ಮನೆತನದ ಮುಖ್ಯಸ್ಥರು
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.