Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ
ಸುಗಮ ಸಂಗೀತ ಕ್ಷೇತ್ರದ ಸ್ಥಿತಿಗತಿ ಹೇಗಿದೆ ಎಂಬುದರ ಅವಲೋಕನ ಇಲ್ಲಿದೆ
Team Udayavani, Nov 16, 2024, 6:20 AM IST
ದೇಶದಲ್ಲೇ ಕನ್ನಡದ ವಿಶಿಷ್ಟ ಸಂಗೀತ ಪ್ರಕಾರ ಸುಗಮ ಸಂಗೀತ | ಕನ್ನಡ ಭಾವಲೋಕ ತೆರೆದಿಟ್ಟ ಸಂಗೀತ | ಕವಲು ದಾರಿಯಲ್ಲಿ ಕಲಾವಿದರು ಪ್ರಾಥಮಿಕ ಶಾಲಾ ಹಂತದಲ್ಲೇ ಸುಗಮ ಸಂಗೀತವನ್ನು ಕಲಿಸುವಂತಾಗಲಿ | ಸುಗಮ ಸಂಗೀತ ಬೆಳೆದರೆ ಕನ್ನಡವೂ ಮನೆ ಮನೆ ಮುಟ್ಟೀತು
ಸಮುದಾಯವನ್ನು ಬೆಸೆಯುವ ವಿಶಿಷ್ಟ ಶಕ್ತಿ “ಸುಗಮ ಸಂಗೀತ’ಕ್ಕಿದೆ. ಕರ್ನಾಟಕದ ವಿಶಿಷ್ಟ ಪ್ರಕಾರವಾದ ಸುಗಮಸಂಗೀತ ಕನ್ನಡ ಭಾಷೆಯನ್ನು ಮನೆ ಮನೆಗೆ ಮುಟ್ಟಿಸುವಲ್ಲಿಯೂ ಯಶ ಪಡೆದಿದೆ. ಕೇಳುತ್ತಲೇ ಇರಬೇಕು ಅನಿಸುವಂಥ ಸುಮನೋಹರ ಲಾಲಿತ್ಯದ ಸುಗಮ ಸಂಗೀತದ ಉಗಮ ಹೇಗಾಯಿತು, ಅದು ಯಾವ್ಯಾವ ಮಜಲುಗಳನ್ನು ಪಡೆದುಕೊಂಡು ಬೆಳವಣಿಗೆ ಸಾಧಿಸಿತು? ಕ್ಯಾಸೆಟ್ ಯುಗದಿಂದ ಈಗಿನ ಪೆನ್‌ಡ್ರೈವ್ ಕಾಲದವರೆಗೆ ಅದು ಎದುರಿಸಿದ ಸವಾಲುಗಳು ಏನು? ಈಗ ಸುಗಮ ಸಂಗೀತ ಕ್ಷೇತ್ರದ ಸ್ಥಿತಿಗತಿ ಹೇಗಿದೆ ಎಂಬುದರ ಅವಲೋಕನ ಇಲ್ಲಿದೆ…
ಇಂ ದು ಜನಪ್ರಿಯವಾಗಿರುವ “ಸುಗಮ ಸಂಗೀತ’ ಗಾಯನ ಶೈಲಿಗೆ ಅದರ ಹೆಸರು ಮಾತ್ರ ಹೊಸದು. ಆದರೆ, ಅದರ ಅಂತರಾತ್ಮ ಸಾವಿರಾರು ವರ್ಷಗಳಷ್ಟು ಹಿಂದಿನದ್ದು. ಅಮ್ಮ ಹಾಡಿದ ಜೋಗುಳವೇ ಮೊದಲ “ಸುಗಮ ಸಂಗೀತ’ ಎನ್ನಬಹುದು. ಸಾಹಿತ್ಯ- ಸಂಗೀತದ ಬಗೆಗೆ ಯಾವ ಜ್ಞಾನವೂ ಇಲ್ಲದ ತಾಯಿ ಹಾಡಿದ “ಜೋ ಜೋ’ ಗೀತೆ, ಹೇಗೆ ಮಗುವಿನ ಮನಸ್ಸಿಗೆ ಹಿತ ತಂದಿತೋ, ಅಂದೇ ಅದರ ಸುಗಮತೆ ಪ್ರಾರಂಭವಾಗಿರಬೇಕು. ಸಂಗೀತ ಹೃದಯದ ಭಾಷೆ. ಮಾತಿನಲ್ಲಿ ಗಂಟೆಗಟ್ಟಲೆ ಹೇಳಲಾಗದ್ದನ್ನು ಸಂಗೀತ ಸ್ವರಗಳು ಕ್ಷಣ ಮಾತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೇಳಬಲ್ಲವು. ಮನಸ್ಸನ್ನು ಕ್ಷಣಮಾತ್ರದಲ್ಲಿ ಸಂಸ್ಕಾರಗೊಳಿಸುವ ಅದ್ಭುತ ಶಕ್ತಿ ಸಂಗೀತದಲ್ಲಿರುವುದರಿಂದ ಇದು ಶ್ರೀಸಾಮಾನ್ಯನ ಭಾಷೆಯಾಗಿದೆ. ವಿಶ್ವ ಭಾಷೆಯಾಗಿದೆ.
ಇಪ್ಪತ್ತನೇ ಶತಮಾನದ ಅತೀದೊಡ್ಡ ಕೊಡುಗೆ ಯಾದ “ಸುಗಮ ಸಂಗೀತ’ಕ್ಕೆ ಒಂದು ಶತಕದ ಇತಿ ಹಾಸವಿದೆ. ಶಾಸ್ತ್ರೀಯ ಸಂಗೀತದ ಬೇರಿನಿಂದ ಹುಟ್ಟಿ ಟಿಸಿಲೊಡೆದು, ಹೂವಾಗಿ ಗೊಂಚಲು ಗೊಂಚಲು ಅರಳಿ ನಿಂತ ಈ ಗಾಯನ ಶೈಲಿಗೆ “ಆಕಾಶವಾಣಿ’ಯೇ ತವರುಮನೆ. “ಲಘು ಸಂಗೀತ’ವೆಂಬ ಹಣೆಪಟ್ಟಿ ಹೊತ್ತು ಕೇವಲ ಸಂಗೀತ ಪ್ರಸ್ತುತಿಗೆ ಮೀಸಲಾಗಿದ್ದ ಈ ಗಾಯನ ಪ್ರಕಾರಕ್ಕೆ ನಿರ್ದಿಷ್ಟವಾದ ಭಾಷೆಯಾಗಲಿ, ವಸ್ತುವಾಗಲಿ ಇರಲಿಲ್ಲ. ದೇವರನಾಮ, ಗಝಲ್, ಅಭಂಗ್, ಜನಪದ ಗೀತೆ, ವಚನ, ಕನ್ನಡ ಗೀತೆ, ಮೀರಾ ಭಜನೆಗಳು ಹೀಗೆ ಇವೆಲ್ಲ “ಲಘು ಸಂಗೀತದ’ ವಸ್ತು, ವಿಚಾರಗಳಾಗಿದ್ದವು. “ಲೈಟ್ ಮ್ಯೂಸಿಕ್’ ಎನ್ನುವ ಹಣೆಪಟ್ಟಿ ಇತ್ತು ನಿಜ. ಆದರೆ ಇದು ಹಗುರವಾದ ಗಾಯನ, ಶಾಸ್ತ್ರೀಯ ಸಂಗೀತಕ್ಕಿಂತಲೂ ಅಷ್ಟೇನೂ ಪ್ರಾಮುಖ್ಯ ಇಲ್ಲದ ಗಾಯನ ಎಂಬ ತಾತ್ಸಾರವೂ ವಿದ್ವಾಂಸರಿಗಿತ್ತು.
ಕನ್ನಡತನದ ತೇಜಸ್ಸು ಬೆಳಗಿತು…
ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು (1921) ಪ್ರಕಟವಾದ ಕೂಡಲೇ ಕನ್ನಡತನದ ತೇಜಸ್ಸು ಸಾವಿರಾರು ಹೃದಯಗಳಲ್ಲಿ ಒಮ್ಮೆಲೆ ಹರಿಯತೊಡಗಿತು. ಅದುವರೆಗೂ ಇಲ್ಲದ ಕಾವ್ಯದ ವಸ್ತು, ರೀತಿ, ಭಾವ, ವರ್ಣನೆ, ಶೈಲಿಗಳ ಹೊಸ ರೂಪ ಸಾಕ್ಷಾತ್ಕಾರವಾಯಿತು. ಇವುಗಳ ಅಭಿವ್ಯಕ್ತಿಗೆ ಸಂಗೀತ ಮಾಧ್ಯಮವಾಗಲು ಪ್ರಾರಂಭಿಸಿತು. ಇಂಗ್ಲಿಷಿನ “ಲಿರಿಕ್’ ಮಾದರಿಯನ್ನು ಅನುಸರಿಸಿ ಕನ್ನಡದ ಕವಿಗಳು ಭಾವಗೀತೆ ಗಳನ್ನು ರಚಿಸತೊಡಗಿದರು. ಇವು ಸಾಂಪ್ರದಾಯಿಕವಾದ ಗೀತೆ, ಕೀರ್ತನೆಗಳಿಗಿಂತ ಭಿನ್ನವೂ, ವಿಶಿಷ್ಟವೂ ಆಗಿದ್ದು, ಮತ, ಧರ್ಮ, ಸಾಂಪ್ರದಾಯಿಕ ಭಕ್ತಿ, ಶ್ರದ್ಧೆಗಳಿಂದ ಮುಕ್ತವಾಗಿದ್ದವು. ನಿಸರ್ಗದ ಅನೂಹ್ಯ ಶಕ್ತಿ, ಸೌಂದರ್ಯ, ವೈಯಕ್ತಿಕ ಹಂಬಲ, ದುಃಖ, ಆನಂದಗಳ ಅಭಿವ್ಯಕ್ತಿಗಾಗಿ ಬಳಕೆಯಾದ ಕವಿತೆಯೂ ಭಾವಗೀತೆಯಾಯಿತು. ಬಿಎಂಶ್ರೀ ಅವರಿಂದ ಪ್ರಾರಂಭಿಸಿದ ಈ ಕಾವ್ಯಜ್ಯೋತಿ ಅವರ ಶಿಷ್ಯರಾದ ಮಾಸ್ತಿ, ಕುವೆಂಪು, ಪುತಿನ ಮುಂತಾದ ಕವಿಗಳಿಂದ ಉಜ್ವಲ ಬೆಳಕಾಯಿತು. ಹಟ್ಟಿಯಂಗಡಿ ನಾರಾಯಣರಾವ್, ಪಂಜೆ ಮಂಗೇಶರಾಯರು, ಗೋವಿಂದ ಪೈ ಅವರು ಕಾವ್ಯದ ಛಂದಸ್ಸು, ಪ್ರಾಸ, ಸಂಪ್ರದಾಯಗಳನ್ನು ಮುರಿದು, ನವೋ ದಯ ಸಾಹಿತ್ಯಕ್ಕೆ ಹೊಸತನ ತಂದರು. ವಿ. ಸೀ. ಅವರ “ಗೀತೆಗಳು’ ಕವಿತಾ ಸಂಕಲನ, “ಸುಗಮ ಸಂಗೀತ’ದ ಹಾದಿಗೆ ಹೊಸ ದಿಕ್ಸೂಚಿಯಾಯಿತು. ಇತ್ತ ಉತ್ತರ ಕರ್ನಾಟಕದ ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಭಾ ಜೋಶಿ, ಮಧುರಚೆನ್ನ, ವಿನೀತ ರಾಮಚಂದ್ರ, ರಂ.ಶ್ರೀ. ಮುಗಳಿ, ವಿ.ಕೃ. ಗೋಕಾಕ, ಡಿ.ಎಸ್. ಕರ್ಕಿ ಮುಂತಾದವರ ಕವಿತೆಗಳು ಬಾನುಲಿ ಯಲ್ಲಿ ರೆಕ್ಕೆ ಬಿಚ್ಚಿ ಹಾರಾಡತೊಡಗಿ, ಜನಪ್ರಿಯವಾದವು.
ಹೊಸ ದಿಕ್ಕು ತೋರಿದ ಘಟಾನುಘಟಿಗಳು
ಸುಗಮ ಸಂಗೀತಕ್ಕೆ ಹೊಸ ದಿಕ್ಕು ತೋರಿದವರು ಗಮಕಿಗಳೇ. ಕಾವ್ಯದ ರಸವನ್ನು ವಾಚಿಕಾಭಿನಯದ ಮೂಲಕ ಅಂದಿನಿಂದ ಇಂದಿನವರೆಗೆ, ತಲೆಮಾರಿನಿಂದ ತಲೆಮಾರಿಗೆ ತಂದವರು ಗಮಕಿಗಳೇ. ಹೀಗೆ ಸದಭಿರುಚಿಯ ಸಂಸ್ಕೃತಿಯನ್ನು ತಂದ ನವೋದಯ ಸಾಹಿತ್ಯವೇ ಸುಗಮ ಸಂಗೀತಕ್ಕೆ ಭದ್ರವಾದ ಅಡಿಪಾಯ ಹಾಕಿತು. ಬಿಎಂಶ್ರೀ, ಮಾಸ್ತಿ, ಕುವೆಂಪು, ಬೇಂದ್ರೆ, ಪುತಿನ ಮುಂತಾದ ಮಹನೀಯರ ಕವಿತೆಯನ್ನು ಹಾಡಲು ತೋರಿಸಿಕೊಟ್ಟವರು ಪಂ| ಭೀಮಸೇನ್ ಜೋಶಿ, ಎಂ.ಎಲ್. ವಸಂತಕುಮಾರಿ, ಜಯಂತಿದೇವಿ ಹಿರೇಮಠ, ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಪಿ.ಆರ್. ಭಾಗವತ್, ಬಾಳಪ್ಪ ಹುಕ್ಕೇರಿ, ಪಿ. ಕಾಳಿಂಗರಾವ್, ಟಿ. ರುಕ್ಮಿಣಿ, ಆರ್.ಕೆ. ಶ್ರೀಕಂಠನ್, ಎಸ್.ಕೆ. ವಸುಮತಿ, ಎಚ್.ಆರ್. ಲೀಲಾವತಿ, ಎಂ. ಪ್ರಭಾಕರ್, ಎನ್.ಎಸ್. ರಾಮನ್, ಎಂ.ಎನ್. ರತ್ನಾ, ಶ್ಯಾಮಲಾ ಜಾಗಿರ್‌ದಾರ್, ಶ್ಯಾಮಲಾ ಭಾವೆ, ಅನುರಾಧಾ ಧಾರೇಶ್ವರ್ ಮುಂತಾದ ಘಟಾನುಘಟಿಗಳು.
ಕ್ಯಾಸೆಟ್ ಲೋಕದ ಹೊಸ ಅಧ್ಯಾಯ
ಆಕಾಶವಾಣಿಯ “ಹೂವಿನ ಕೋರಿಕೆ’ ನಡೆಸುವ ಕಾರ್ಯಕ್ರಮಗಳ ಯಶಸ್ಸಿನೊಡನೆ ಎಂ.ಎಸ್.ಐ.ಎಲ್ ಗೀತೆಗಳು ಮೂರು ವರ್ಷಗಳ ಕಾಲ ಭಾವಗೀತೆಗಳ ಮಹಾಪೂರವನ್ನೇ ಹರಿಸಿದವು. ಈ ಕಾರ್ಯಕ್ರಮದ ಮೂಲಕ ಬಿ.ಕೆ. ಸುಮಿತ್ರ, ರತ್ನಮಾಲ ಪ್ರಕಾಶ್, ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ, ಮೈಸೂರು ಅನಂತಸ್ವಾಮಿ, ಟಿ.ಕೆ. ಶ್ರೀನಿವಾಸನ್, ಜಯಪಾಲ್, ಎಂ.ಕೆ. ಜಯಶ್ರೀ, ಶ್ಯಾಮಲಾ ಭಾವೆ ಮುಂತಾದ ಗಾಯಕರು ಬಂದರು. ನಿಸಾರ್ ಅಹಮದ್ ಅವರು ಮೈಸೂರು ಅನಂತಸ್ವಾಮಿಯವರ ಸಂಗೀತದಲ್ಲಿ ಕನ್ನಡ ಸುಗಮ ಸಂಗೀತದ ಮೊಟ್ಟಮೊದಲ ಕ್ಯಾಸೆಟ್ “ನಿತ್ಯೋತ್ಸವ’ವನ್ನು 1976 ರಲ್ಲಿ ಹೊರತಂದರು. ತನ್ನ ನಾವೀನ್ಯತೆಯಿಂದ ಅದು ಎಲ್ಲರ ಮನ ಗೆದ್ದಿತು.
ಆನಂತರದಲ್ಲಿ ಹಲವು ಕ್ಯಾಸೆಟ್ ಸಂಸ್ಥೆಗಳು ಹುಟ್ಟಿಕೊಂಡವು. ಅವುಗಳಲ್ಲಿ “ಸಂಗೀತಾ’ (1980), “ನಾದಲಹರಿ’ (1981) ಮತ್ತು ಲಹರಿ ಸಂಸ್ಥೆಗಳು ಹೆಸರಾಂತ ಕವಿಗಳ ಗೀತೆಗಳನ್ನು ಒಳಗೊಂಡ ಹಲವು ಕ್ಯಾಸೆಟ್‌ಗಳನ್ನು ಹೊರತಂದು ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದವು. ಈ ಕ್ಯಾಸೆಟ್‌ಗಳಿಗೆ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ , ಎಚ್. ಕೆ. ನಾರಾಯಣ, ಪದ್ಮಚರಣ್ ಮುಂತಾದವರ ಸಂಗೀತ ನಿರ್ದೇಶನವಿತ್ತು.
ಕಲೆ ಉಳಿಯಬೇಕು…
ಕನ್ನಡ ಭಾಷೆಯಲ್ಲಿ ಸಾಹಿತ್ಯ ಬೆಳೆಯಬೇಕಾದರೆ, ಪರಭಾಷಿಕರ ಮನೆಗೂ ಕನ್ನಡ ಮುಟ್ಟಬೇಕಾದರೆ ಸುಗಮ ಸಂಗೀತ ಕ್ಷೇತ್ರ ಉಳಿಯಬೇಕು., ಬೆಳೆಯಬೇಕು. ಜನಪ್ರಿಯತೆಯ ಉತ್ತುಂಗ ತಲುಪಿದಂತೆ, ಅಲ್ಲಲ್ಲಿ ಸತ್ವವಿಲ್ಲದ ಗಾಯನವೂ, ಸಂಪೂರ್ಣ ಅಭ್ಯಾಸ, ಸಾಧನೆ ಇಲ್ಲದ, ಕಲಾವಿದರೂ ಹುಟ್ಟಿಕೊಂಡರು. ಕಲೆ ವ್ಯಾಪಾರದತ್ತ ಹೊರಟು, ಗಳಿಕೆಯೇ ಮುಖ್ಯವಾಯಿತು. ಕಲಾವಿದರಿಗೆ ಬದ್ಧತೆ ಕಡಿಮೆಯಾಗುತ್ತಾ ಬಂತು. ಅತಿಯಾದ ಚಲನಶೀಲತೆಯಿಂದ ಕ್ಯಾಸೆಟ್ ತನ್ನ ಅಸ್ತಿತ್ವ ಕಳೆದುಕೊಂಡು ಮಾಯವಾಯಿತು. ಇಂದು ಸಿ.ಡಿ., ಕ್ಯಾಸೆಟ್, ಯಾವುವೂ ಚಾಲ್ತಿಯಲ್ಲಿಲ್ಲ. ಕಂಪ್ಯೂಟರ್‌ನಿಂದ ಆಟೋ ಟ್ಯೂನಿಂಗ್, ಸ್ಕೇಲ್ ಶಿಫ್ಟಿಂಗ್, ಟೆಂಪೋ ಶಿಫ್ಟಿಂಗ್ ಮುಂತಾದ ಅನುಕೂಲಗಳಿಂದ ಹಾಡುಗಾರಿಕೆಯಲ್ಲಿ ಆಳವಾದ ಸಾಧನೆ ಕಡಿಮೆಯಾಗುತ್ತಿದೆ. ಹಾಗೆಯೇ ಕ್ಯಾಸೆಟ್‌ಗಳಿಂದ ಸಿಗುತ್ತಿದ್ದ ಆದಾಯ, ಲಾಭಕ್ಕೂ ಕತ್ತರಿ ಬಿದ್ದಿದೆ. ಸಾವಿರಾರು ಹಾಡುಗಳು ಯುಟ್ಯೂಬ್ ವಾಹಿನಿಗಳಲ್ಲಿ ಪುಕ್ಕಟೆಯಾಗಿ ದೊರಕುತ್ತಿವೆ. ಹಿಂದೆ ಗಾಯನದಿಂದ ಜೀವನ ಕಟ್ಟುಕೊಂಡಿದ್ದ ಗಾಯಕರು ವೇದಿಕೆಯ ಕಾರ್ಯಕ್ರಮಗಳಿಗೆ ಕಾಯುವಂತಾಗಿದೆ.
ಸಮುದಾಯವನ್ನು ಬೆಸೆಯುವ “ಸುಗಮ ಸಂಗೀತ’ಕ್ಕೆ ವಿಶಿಷ್ಟ ಶಕ್ತಿ ಇದೆ. ಇದು ಕ್ಷಣ ಮಾತ್ರದಲ್ಲಿ ಮನಸ್ಸಿನ ಕಲ್ಮಶಗಳನ್ನು ತೊಳೆಯಬಲ್ಲದು. ನಿಮಿಷ ಮಾತ್ರದಲ್ಲಿ ಮನದ ಉರಿಯನ್ನು ತಣಿಸಬಲ್ಲದು. ವಿರಹದ ಬೇಗೆಯನ್ನು ನೀಗಿ ಮಿಲನದ ಹೂಮಳೆ ಸುರಿಸಬಲ್ಲದು. ಆದರೆ, ಇಂದು ಅಸಹಾಯಕ ಸ್ಥಿತಿ ತಲುಪುತ್ತಿರುವ ಈ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಸರಕಾರದ ಬೆಂಬಲ ಅತ್ಯವಶ್ಯಕವಾಗಿದೆ.
ಆಗಬೇಕಾದ್ದೇನು?
1ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಹಂತದಲ್ಲಿಂದಲೇ ಮಕ್ಕಳಿಗೆ “ಸುಗಮ ಸಂಗೀತ’ವನ್ನು ಕಲಿಸಬೇಕು
2ಕಾಲೇಜು ಶಿಕ್ಷಣದಲ್ಲೂ “ಸುಗಮ ಸಂಗೀತ’ ಉಪನ್ಯಾಸಕರನ್ನು ನೇಮಿಸುವುದು ಅಗತ್ಯ
3ಸರಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ಸುಗಮ ಸಂಗೀತಕ್ಕೆ ಪ್ರಥಮ ಆದ್ಯತೆ ನೀಡಬೇಕು
4ನಿವೃತ್ತ “ಸುಗಮ ಸಂಗೀತ’ ಕಲಾವಿದರಿಗೆ ಪಿಂಚಣಿ ನೀಡುವ ಸಂಬಂಧ ಸರಕಾರ ಗಮನಹರಿಸಲಿ
5ಸುಗಮ ಸಂಗೀತ ಧ್ವನಿ ಮುದ್ರಣಕ್ಕೆ ಸಹಾಯಧನ ರಾಜ್ಯ ಸರಕಾರವು ಸಹಾಯಧನ ನೀಡಲಿ
ಡಾ| ಜಯಶ್ರೀ ಅರವಿಂದ್, ಸಂಗೀತ ನಿರ್ದೇಶಕಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.