Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
ಆದದ್ದೆಲ್ಲಾ ಒಳಿತೇ ಆಯಿತು' ಎಂದು ಸಾರುವ ದಾಸರಾದರು.
Team Udayavani, Nov 16, 2024, 2:45 PM IST
ಕನ್ನಡದ ಅಗ್ರಪಂಕ್ತಿಯಲ್ಲಿ ದಾಸ ಸಾಹಿತ್ಯ ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’ ಎಂಬ ವಿಷಯ ಬಂದ ಕೂಡಲೇ ಹಲವಾರು ಬಗೆಯ ಸಾಹಿತ್ಯವು ಮುಂಚೂಣಿಗೆ ಬರುತ್ತದೆ. ಅವುಗಳಲ್ಲಿ ಪ್ರಮುಖವಾಗಿ ದಾಸಸಾಹಿತ್ಯ, ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಶರೀಫರ ಪದಗಳು, ಕವನಗಳು ಇತ್ಯಾದಿ. ದಾಸಸಾಹಿತ್ಯವು ಹೆಚ್ಚಿನ ವೇಳೆ ಮಹಾವಿಷ್ಣುವಿನ ಕುರಿತಾಗಿ ಇದ್ದರೆ, ವಚನ ಸಾಹಿತ್ಯವು ಲಿಂಗಾಯತ ಸಿದ್ಧಾಂತಕ್ಕೆ ಒತ್ತು ನೀಡಿ ಈಶ್ವರನ ಆರಾಧನೆಗೆ ಪ್ರಾಧಾನ್ಯ ನೀಡಿದೆ. ಹರಿಹರ ಎಂದೇನೂ ವಿಭಾಗವಾಗಿ ನೋಡದೇ ಹೋದಾಗ ಇವೆರಡೂ ಸಾಹಿತ್ಯಗಳು ಭಕ್ತಿಪಂಥದ ವಿಶೇಷಗಳೇ ಆಗಿದ್ದು ಧಾರ್ಮಿಕ ಮತ್ತು ನೀತಿಬೋಧಕ ಬೋಧನೆಗಳನ್ನು ಸಾಮಾನ್ಯ ಜನರ ಹೃದಯಕ್ಕೆ ಹರಡಿವೆ. ಹರಿದಾಸ ಸಾಹಿತ್ಯದ ಪ್ರಚಾರವು ಸಂಗೀತವನ್ನೇ ಮಾಧ್ಯಮವಾಗಿ ಬಳಸಿಕೊಂಡಿದೆ.
ವಚನ ಸಾಹಿತ್ಯವು ಹಲವೊಮ್ಮೆ ಸರಳ, ಕೆಲವೊಮ್ಮೆ ಗಾಢ ಆದರೆ ಎರಡೂ ಬಗ್ಗೆಯೂ ಬಲು ನೇರ. ಶರೀಫರ ಪದಗಳೂ ಸಹ ಸಂಗೀತವನ್ನೇ ಮಾಧ್ಯಮವಾಗಿ ಇರಿಸಿಕೊಂಡು ಮುಖ್ಯವಾಗಿ ಸಾಮಾನ್ಯ ಜನರ ಅರಿವು ಮೂಡಿಸುವಂಥಾ ನೀತಿ ಬೋಧನೆಯೇ ಮೂಲವಾಗಿದೆ. ದಾಸಸಾಹಿತ್ಯದಲ್ಲಿ ಆಗಲೇ ಹೇಳಿದಂತೆ ನಾರಾಯಣ ನಾಮ ಸ್ಮರಣೆಯೇ ಅಧಿಕವಾಗಿದ್ದರೂ ಹಲವಾರು ದೇವತಾಸ್ವರೂಪಗಳ ಮೇಲೂ ರಚನೆಗಳಾಗಿವೆ.
“ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ’ ಎಂಬ ಪುರಂದರದಾಸರ ಪದವು ಸುಪ್ರಸಿದ್ಧವಾಗಿದೆ. “ಗಜವದನ ಬೇಡು ಗೌರಿ ತನಯ’ ಅರಿಯದವರಾರು? “ಕೊಡು ಬೇಗ ದಿವ್ಯ ಮತಿ’ ಎಂದು ತಾಯಿ ಸರಸ್ವತಿಯನ್ನು ಕೋರಿಕೊಳ್ಳುವ ಪದವು ನಿತ್ಯ ಆರಾಧನೆಯ ಪದ. “ಬಿಡುವೆನಯ್ನಾ ಹನುಮ ಬಿಡುವೆನಯ್ನಾ’ ಎಂಬ ಪದವಾಗಲಿ, ಮೂರೂ ಅವತಾರಗಳನ್ನು ನೆನೆವ “ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ’ ಎಂಬುದು ಒಂದೆರೆಡು ಉದಾಹರಣೆಗಳು ಮಾತ್ರ.
ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮದಲ್ಲಿ ವಿದ್ಯಾ ಕೇಂದ್ರವನ್ನು ಸ್ಥಾಪಿಸಿದ, ಅಲ್ಲಿಯೇ ತಮ್ಮ ಮಠವನ್ನು ಹೊಂದಿರುವ ಶ್ರೀಪಾದರಾಜರು, ಇದೇ ಗ್ರಾಮದಲ್ಲಿ ಬೃಂದಾವನವನ್ನೂ ಹೊಂದಿದ್ದಾರೆ. “ರಂಗವಿಠಲ’ ಎಂಬ ಅಂಕಿತದಡಿ ಅನೇಕ ಪದಗಳನ್ನು ರಚಿಸಿದ್ದಾರೆ. “ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’, “ಇಟ್ಟಾಂಗೆ ಇರುವೆನೋ ಹರಿಯೇ’ ಒಂದೆರಡು ರಚನೆಗಳ ಉದಾಹರಣೆಗಳಷ್ಟೇ. ಇವರ ಶಿಷ್ಯರೇ ಶ್ರೀ ವ್ಯಾಸರಾಜರು.
ಕನ್ನಡನಾಡಿನ ಭವ್ಯ ಸಂಸ್ಕೃತಿಯನ್ನು ವಿಜಯನಗರದ ಅರಸರ ಕಾಲದಲ್ಲಿ ರಾಜಗುರುಗಳಾಗಿ ರಕ್ಷಿಸಿದ್ದ ಶ್ರೀ. ವ್ಯಾಸರಾಜರ ಅಂಕಿತ ಶ್ರೀಕೃಷ್ಣ. “ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ’ ಎಂಬ ಉಗಾಭೋಗ, “ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನ. ಹೀನ ವಿಷಯಗಳು ಶ್ವಾನನಂತಿರುವೆ’, “ಕೊಳಲನೂದುವ ಚದುರನ್ಯಾರೆ ನೋಡಮ್ಮ’ ಎಂಬ ದೇವರನಾಮಗಳು ಇವರ ಒಂದೆರಡು ರಚನೆಗಳ ಉದಾಹರಣೆಗಳು.
ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ “ಶ್ರೀ ವಾದಿರಾಜರು’, “ಹಯವದನ’ ಎಂಬ ಅಂಕಿತನಾಮದ ಅಡಿ ಹಲವಾರು ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗಗಳನ್ನು ರಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಮಠ ಮತ್ತು ಬೃಂದಾವನವಿದೆ. “ಶೋಭಾನವೆನ್ನಿರೆ ಸುರರೊಳು ಶುಭಗನಿಗೆ’ ಎಂದು ಆರಂಭವಾಗುವ ಲಕ್ಷ್ಮೀ ಶೋಭಾನೆ, “ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರಂ’ಗಳು ಕೇವಲ ಒಂದೆರಡು ಉದಾಹರಣೆಗಳು ಅಷ್ಟೇ.
ವ್ಯಾಸರಾಯರ ಶಿಷ್ಯರಾದ, ಕರ್ನಾಟಕ ಸಂಗೀತ ಪಿತಾಮಹರಾದ “ಶ್ರೀ ಪುರಂದರದಾಸರು’ ದಾಸಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಭಕ್ತಿಪಂಥದ ಕಾಲದ ಅತ್ಯಂತ ಪ್ರಸಿದ್ಧರಾದ ದಾಸರು. ಕರ್ನಾಟಕ ಸಂಗೀತ ಪಿತಾಮಹ ಎಂದೇ ಖ್ಯಾತರಾದ, ದಾಸರೆಂದರೆ ದಾಸರಯ್ಯಾ ಪುರಂದರದಾಸರಯ್ಯ ಎಂದೇ ಹೊಗಳಿಸಿಕೊಂಡಿರುವ, ದಾಸರು ಎಂದೊಡನೆ ಪುರಂದರದಾಸರು ಎಂದೇ ಬರುವ, ಲೋಕಾದ್ಯಂತ ಮನೆಮಾತಾಗಿರುವ ನಮ್ಮ ಪುರಂದರದಾಸರ ಕಾಲಮಾನ 1484ರಿಂದ 1564 ಎಂದು ಹೇಳಲಾಗಿದೆ.
ಪುರಂದರದಾಸರ ಬಗ್ಗೆ ಹೇಳುವುದು ಬಹಳಷ್ಟಿದೆ. ಮೊದಲಿಗೆ ಶ್ರೀನಿವಾಸ ನಾಯಕರಾಗಿದ್ದ ಕಾಲದಲ್ಲಿ ಮನೆಯ ಮೇಲೆ ಒಂಬತ್ತು ಚಿನ್ನದ ಕಲಶಗಳನ್ನು ಇರಿಸಿದ್ದರು ಎನ್ನುತ್ತಾರೆ. ತಾನು ನವಕೋಟಿನಾರಾಯಣ ಎಂಬುದನ್ನು ಹೀಗೆ ಸಾರಿದ್ದರು. ಈ ಚಿಕ್ಕದಲ್ಲದ ಚಿಕ್ಕ ವಿಷಯದಲ್ಲೇ ತಿಳಿಯುವುದು ಏನೆಂದರೆ “ಸಾರುವುದು’ ಅವರಲ್ಲಿ ಮುಂಚಿನಿಂದಲೇ ಇದೆ.
ಪುರಂದರದಾಸರು ಆ ಹಿಂದಿನ ದಾಸರು ಅಥವಾ ಇತರೆ ಭಕ್ತಿಪಂಥದವರಿಗಿಂತ ಹೇಗೆ ಭಿನ್ನ ಎಂದರೆ “ಸರಳತೆ’. ಗಾಢವಾದ ವಿಷಯಗಳನ್ನು ಸರಳವಾಗಿ ಸಾರುವುದೇ ಇವರ ವಿಶೇಷ. ಒಂಬತ್ತು ಕಲಶಗಳನ್ನು ಇರಿಸಿ ಸರಳವಾಗಿ ತಾವು ನವಕೋಟಿ ನಾರಾಯಣ ಎಂದು ಪೇಳಿದಂತೆ. ಶ್ರೀನಿವಾಸನಾಯಕನಿಗೆ ಒಂದು ವಿಶೇಷ ಸಂದರ್ಭದಲ್ಲಿ ಭಗವಂತನ ಮಹಿಮೆ ಅರಿವಾಗಿ, “ನವ’ಕೋಟಿ ನಾರಾಯಣನಿಂದ ಮುಕ್ತಿ ಹೊಂದಿ “ನವ’ ಮಾನವನಾಗಿ ಪರಿವರ್ತನೆ ಹೊಂದಿ, “ನವ’ ರಂಧ್ರಗಳ ಈ ದೇಹದ ಐಹಿಕ ಸುಖಗಳೆಲ್ಲ ನಶ್ವರ ಎಂದು ಅರಿವು ಮೂಡಿ “ಆದದ್ದೆಲ್ಲಾ ಒಳಿತೇ ಆಯಿತು’ ಎಂದು ಸಾರುವ ದಾಸರಾದರು.
ಇದೊಂದು ಅತೀ ವಿಶಿಷ್ಟವಾದ ಪರಿವರ್ತನೆ ಎಂದೇ ದಾಖಲು ಮಾಡಬಹುದು. ಕನ್ನಡ, ಕರ್ನಾಟಕ ಎಂದಾಗ ಹೇಗೆ ಕರ್ನಾಟಕ ಸಂಗೀತ ಪಿತಾಮಹ ಎಂದು ಅರಿವಾಗುತ್ತದೋ ಹಾಗೆ ಇಂಥಾ ಪರಿವರ್ತನೆಗಳೂ ವಿಶೇಷವಾಗಿ ದಾಖಲಾಗಬೇಕು.
ಸಂಗೀತವನ್ನೇ ಅಸ್ತ್ರವನ್ನಾಗಿರಿಸಿಕೊಂಡು, ಮಾಯಾಮಾಳವಗೌಳ ರಾಗದಿಂದಲೇ ಆರಂಭಿಸಿ, ಸರಳೆ ಮತ್ತು ಜಂಟಿ ವರಸೆಗಳಿಂದ ನಾಲಿಗೆ, ಹಸ್ತ, ಮತ್ತು ಲೆಕ್ಕಾಚಾರದ ಬುದ್ಧಿಯನ್ನು ಏಕಕಾಲಕ್ಕೆ ಶಿಸ್ತಿಗೆ ಒಡ್ಡುವ ಸಂಗೀತ ಅಭ್ಯಾಸದ ಕಲೆ ಇಂದಿಗೂ ನಡೆದುಕೊಂಡು ಬಂದಿದೆ. ಸ್ವರ, ಸಾಹಿತ್ಯ ಮತ್ತು ತಾಳ ಶುದ್ಧತೆಯೇ ಸಂಗೀತ ಲೋಕದ ಮೊದಲ ಮೆಟ್ಟಿಲುಗಳು. “ಲಂಬೋದರ ಲಕುಮಿಕರ’ ಎಂಬ ಪಿಳ್ಳಾರಿ ಗೀತೆಯನ್ನು ಕಲಿಯದ ವಿದ್ಯಾರ್ಥಿಯೇ ಇಲ್ಲಾ ಎಂದರೆ ಅದು ಅತಿಶಯೋಕ್ತಿಯಲ್ಲ. ಪುರಂದರದಾಸರು ತಮ್ಮದೊಂದು ರಚನೆಯಲ್ಲಿ “ತಾಳ ಬೇಕು, ತಕ್ಕ ಮೇಳ ಬೇಕು ಗಾನವನ್ನು ಕೇಳಬೇಕೆಂಬುವವರಿಗೆ ಶಾಂತ ಮೇಳಬೇಕು; ಯತಿಪ್ರಾಸವಿರಬೇಕು; ಗತಿಗೆ ನಿಲ್ಲಿಸಬೇಕು; ಗಳ ಶುದ್ಧಿಯಿರಬೇಕು; ತಿಳಿದು ಪೇಳಲು ಬೇಕು, ಕಳಕಳ ಬಿಡಬೇಕು, ಕಳೆಮುಖವಿರಬೇಕು, ಅರಿತವರಿರಬೇಕು, ಹರುಷ ಹೆಚ್ಚಿಸಬೇಕು’ ಎಂದಿದ್ದಾರೆ. ಯಾವುದೇ ಒಂದು ರಚನೆಯ ಗಾಯನವು ನೂರಾರು ಕಾಲ ಮನದಲ್ಲಿ ಉಳಿಯಬೇಕು ಎಂದರೆ ದಾಸರು ಹೇಳಿರುವ ವಿಷಯಗಳ ಪಾಲನೆಯಾಗಬೇಕು.
ಪುರಂದರದಾಸರು ಮನಸ್ಸಿಗೆ ತಂತಾನೇ ಮೂಡಿ ಬರುವ ಮತ್ತೊಬ್ಬ ದಾಸರು ಎಂದರೆ ಕನಕದಾಸರು. ಕನಕರ ಜನ್ಮ ವೃತ್ತಾಂತದಲ್ಲೂ ಸಹ ದಾಸರಾಗುವ ಮುನ್ನ ಬೇರೆಯೇ ಕಥೆಯಿದೆ. ತಮ್ಮಲ್ಲಿದ್ದ ಕನಕವನ್ನು ದಾನಮಾಡಿ “ಕನಕದಾಸ’ರಾದವರು. ಕನಕ-ಪುರಂದರರ ಜೋಡಿ ದಾಸ ಸಾಹಿತ್ಯದಲ್ಲೇ ಒಂದು ವಿಶಿಷ್ಟ ವಿಚಾರ ಮತ್ತು ಈ ಜೋಡಿಯನ್ನು “ಅಶ್ವಿನಿ ದೇವತೆಗಳು’ ಎಂದೂ ಬಣ್ಣಿಸಲಾಗಿದೆ.
ಕನಕರ ಕಾಲಮಾನ 1508 ರಿಂದ 1606 ಎನ್ನಲಾಗಿದೆ. ಕನಕದಾಸರ ರಚನೆಗಳ ವಿಶೇಷ ಎಂದರೆ ಕ್ಲಿಷ್ಟ ಮತ್ತು ಗಾಢ. “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’ ಎಂದು ತಮ್ಮ ದಾಸರ ಜೀವನವನ್ನು ಭಗವಂತನ ಮಹಿಮೆಯನ್ನು ಸಾರುವಲ್ಲಿ ಮೀಸಲಾಗಿರಿಸಿಕೊಂಡವರು. “ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ’ ಎಂದು ಹೇಳುತ್ತಾ ಈ ಶರೀರ ಎಷ್ಟು ನಶ್ವರ ಎಂದು ಹೇಳಿದ್ದಾರೆ. ಇನ್ನು ಕ್ಲಿಷ್ಟತೆಯ ಬಗ್ಗೆ ಹೇಳಿದರೆ “ನಿಶೆವೆಸರಸುರನ ಉಸಿರ ತೊಲಗಿಸಿದೆ ಕುಸುಮ ಶರನ ಪಿತ ಗೋವಿಂದ ವಸು ಪೂರಿತ ಶ್ರುತಿ ಮಸುಳಿಸದೆ ತಂದೆ ಬಿಸಜ ಸಂಭವನಯ್ಯ ಗೋವಿಂದ’ ಎಂದು ಆ ಪರಮಪುರುಷ ಹರಿ ಗೋವಿಂದ ಎಂದು ಹೇಳುವ ಮೊದಲ ಚರಣವಷ್ಟೇ!
ದಾಸ ಸಾಹಿತ್ಯದ ಬಗ್ಗೆ ಹೇಳುವಾಗ ಇನ್ನೂ ಅನೇಕಾನೇಕ ದಾಸರನ್ನು ಸ್ಮರಿಸಬೇಕು ನಿತ್ಯ. ಮಹಿಳೆಯರೂ ಈ ವಿಷಯದಲ್ಲಿ ಹಿಂದಿಲ್ಲ ಎಂಬುದೇ ಹೆಗ್ಗಳಿಕೆ. ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಒಂದೆರೆಡು ಉದಾಹರಣೆಗಳಷ್ಟೇ. ಕರ್ನಾಟಕ, ಕನ್ನಡ, ಕನ್ನಡ ನಾಡು, ಕರುನಾಡು ಎಂಬೆಲ್ಲ ಮಾತುಗಳು ಬಂದಾಗ ದಾಸರು, ಮಾತು, ದಾಸಸಾಹಿತ್ಯವು ಅಗ್ರಪಂಕ್ತಿಗಳಲ್ಲಿ ಒಂದಾಗಿ ನಿಲ್ಲುತ್ತದೆ. ದೇಸಿಸ್ವರದ 150ನೆಯ ಸಂಚಿಕೆಯ ಈ ಶುಭ ಸಂದರ್ಭದಲ್ಲಿ ದಾಸರನ್ನು ನೆನೆಯುವ ಸೌಭಾಗ್ಯ ನನ್ನದಾಗಿದೆ.
*ಶ್ರೀನಾಥ್ ಭಲ್ಲೇ, ರಿಚ್ಮಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.