Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
ಆರೋಪಿಗಳಿಂದ 40 ಕೆ.ಜಿ ಮಾಂಸ, ನಾಡ ಬಂದೂಕು, ಕತ್ತಿ, ವಾಹನ ವಶ
Team Udayavani, Nov 16, 2024, 5:59 PM IST
ಗುಂಡ್ಲುಪೇಟೆ (ಚಾಮರಾಜನಗರ): ಜಿಂಕೆ ಮಾಂಸ ಸಾಗಾಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಗುಂಡ್ಲುಪೇಟೆ ಬಫರ್ ಝೋನ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಅಣ್ಣೂರುಕೇರಿ ಗ್ರಾಮದ ರವಿ, ಸಿದ್ದಶೆಟ್ಟಿ, ಸಿದ್ದರಾಜು, ಮಹೇಶ ಹಾಗೂ ಪಂಜನಹಳ್ಳಿ ಗ್ರಾಮದ ಸುರೇಶ ಬಂಧಿತರು. ಆರೋಪಿಗಳು ಶಿವಪುರ ಗುಂಡ್ಲುಪೇಟೆ ಮಾರ್ಗದ ಕಲ್ಲುಕಟ್ಟೆ ಡ್ಯಾಂ ಬಳಿ ಮೂರು ಬೈಕ್‍ಗಳಲ್ಲಿ ಬರುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಐವರ ಅಡ್ಡಗಟ್ಟಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿತರು ಕಡಬೂರು ಚಿರಕನಹಳ್ಳಿ ಗ್ರಾಮದ ಬಳಿಯ ಕೆರೆಯ ಸಮೀಪ ಜಿಂಕೆಯನ್ನು ಬಂದೂಕಿನಿಂದ ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಸುಮಾರು 40 ಕೆ.ಜಿ ಜಿಂಕೆ ಮಾಂಸ, ನಾಡ ಬಂದೂಕು, ಕತ್ತಿ ಮತ್ತು ವಾಹನಗಳ ವಶಕ್ಕೆ ಪಡೆಯಲಾಗಿದೆ. ಗುಂಡ್ಲುಪೇಟೆ ಬಫರ್ ವಲಯದಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂತರ ಜಿಂಕೆಯ ಮಾಂಸವನ್ನು ನಿಯಮಾನುಸಾರ ವಿಲೇ ಮಾಡಲಾಗಿದೆ ಎಂದು ಆರ್‍ಎಫ್ ಒ ಸತೀಶ್ ಕುಮಾರ್ ಮಾಹಿತಿ ನೀಡಿದರು.
ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಗುಂಡ್ಲುಪೇಟೆ ಬಫರ್‍ಜೋನ್ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಬಿ.ಎಸ್, ಕಾರ್ತಿಕ್ ಸುರಪುರ್, ಶ್ರೀಪಾಲ್, ರಮೇಶ ಎಸ್ ಮಠಪತಿ, ಮಹೇಶ ಎನ್ ಹಾಗೂ ಗುಂಡ್ಲುಪೇಟೆ ಬಫರ್‍ಜೋನ್ ವಲಯದ ಸಿಬ್ಬಂದಿ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.