Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
ಇದೇ ಮೊದಲ ಬಾರಿ ಗರಿಷ್ಠ ದರ; ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆ
Team Udayavani, Nov 19, 2024, 7:43 AM IST
ಕುಂದಾಪುರ/ದಾವಣಗೆರೆ: ಕೇರಳ ಹೊರತುಪಡಿಸಿ ದೇಶದಲ್ಲೇ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ಕರ್ನಾಟಕ ದಲ್ಲೂ ಈ ಬಾರಿ ಇಳುವರಿ ಕೊರತೆಯಿದ್ದು, ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ತೆಂಗಿನಕಾಯಿ ಬೆಲೆ 60 ರೂ. ಗಡಿ ದಾಟಿದೆ. ಇದು ತೆಂಗಿನ ಕಾಯಿ ಮಾರುಕಟ್ಟೆಯ ಸಾರ್ವ ಕಾಲಿಕ ಗರಿಷ್ಠ ಧಾರಣೆ ಯಾಗಿದೆ.
ರೈತರಿಂದಲೇ ಉತ್ತಮ ಗುಣ ಮಟ್ಟದ ಕಾಯಿಗಳನ್ನು 50-52 ರೂ. ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದು, ಅಂಗಡಿಗಳಲ್ಲಿ 58-60 ರೂ.ಗೆ ಮಾರುತ್ತಿದ್ದಾರೆ. ಮಂಗಳೂರು ಕೊಬ್ಬರಿ ಕೆ.ಜಿ.ಗೆ 130-140 ರೂ., ತಿಪಟೂರು ಕೊಬ್ಬರಿಗೆ 150 ರೂ. ಧಾರಣೆ ಇದೆ.
ಪ್ರಸ್ತುತ ಕಾರ್ತಿಕ ಮಾಸದಲ್ಲಿ ದೇಗುಲಗಳಲ್ಲಿ ದೀಪೋತ್ಸವ, ಅಯ್ಯಪ್ಪ ಸ್ವಾಮಿ ವ್ರತ ಮತ್ತಿತರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮದುವೆ, ಮುಂಜಿಯಂಥ ಶುಭ ಕಾರ್ಯಗಳು ಆರಂಭ ವಾಗುತ್ತಿರುವ ಹೊತ್ತಲ್ಲಿ ಬಹುಬಳಕೆಯ ತೆಂಗಿನ ಕಾಯಿ ದರ ಏರಿಕೆ ಗ್ರಾಹಕರ ಜೇಬು ಸುಡುತ್ತಿದೆ.
ಫ್ಯಾಕ್ಟರಿಗಳಿಗೂ ಕಾಯಿ ಕೊರತೆ
ಇತ್ತೀಚೆಗಿನ ವರ್ಷಗಳಲ್ಲಿ ತೆಂಗಿನ ಎಣ್ಣೆಯ ಜತೆಗೆ ಪೌಡರ್‌ನಂತಹ ಕೆಲವು ಉತ್ಪನ್ನಗಳಿಗೂ ತೆಂಗಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಯಾಗು ತ್ತಿದೆ. ಆದರೆ ಈ ವರ್ಷ ಇಳುವರಿ ಕೊರತೆಯಿಂದ ಶೇ. 50 ತೆಂಗಿನಕಾಯಿ ಕಡಿಮೆ ಇದೆ ಎನ್ನುತ್ತಾರೆ ಕುಂದಾಪುರದ ಪೌಡರ್ ಉತ್ಪನ್ನ ತಯಾರಿ ಘಟಕದ ಚಂದ್ರಶೇಖರ್ ಕಲ್ಪತರು. 10 ವರ್ಷಗಳಿಗೊಮ್ಮೆ ಹೀಗೆ ಕೊರತೆ, ಬೆಲೆ ಏರಿಕೆ ಆಗುತ್ತದೆ. ಆದರೆ ಈ ಸಲ ಹೆಚ್ಚು ತೆಂಗು ಬೆಳೆಯುವ ಕೇರಳ, ತಮಿಳುನಾಡು, ಆಂಧ್ರದಲ್ಲೂ ಇಳುವರಿ ಕಡಿಮೆಯಿದೆ.
ಎಲ್ಲಿಂದಲೂ ಸರಬರಾಜು ಆಗುತ್ತಿಲ್ಲ. ಹಾಗಾಗಿ ಬೆಲೆ ನಿರಂತರ ಏರುತ್ತಿದೆ. ಇದರಿಂದ ಪೌಡರ್ ಉತ್ಪನ್ನಗಳ ತಯಾರಿ ವೆಚ್ಚವೂ ದುಬಾರಿಯಾಗಿದೆ. ಕೆ.ಜಿ.ಗೆ 150 – 170 ರೂ. ಇದ್ದ ಪೌಡರ್ ಬೆಲೆ ಈಗ 220-250 ರೂ. ಆಗಿದೆ. ಈ ಪೌಡರ್‌ಗಳಿಗೆ ಬೇಕರಿಗಳಿಂದ ಹೆಚ್ಚಿನ ಬೇಡಿಕೆಯಿದ್ದು, ಸಿಹಿ ತಿಂಡಿಗಳಿಗೆ ಬಳಕೆಯಾಗುತ್ತದೆ. ಕಾರ್ಮಿಕರಿಗೆ ಕೆಲಸ ನಿಲ್ಲಿಸಬಾರದು ಅನ್ನುವ ಕಾರಣಕ್ಕೆ ದುಬಾರಿ ಬೆಲೆ ಕೊಟ್ಟು ಬೇರೆಡೆಗಳಿಂದ ಕಾಯಿ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳುತ್ತಾರೆ.
ರೈತರ ತೋಟಕ್ಕೆ ಲಗ್ಗೆ
ಚಿಲ್ಲರೆ ಮಾರುಕಟ್ಟೆಯಲ್ಲಿ ಎಳನೀರು ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವತಃ ರೈತರ ತೋಟಕ್ಕೆ ಹೋಗಿ 25-35 ರೂ. ದರ ಕೊಟ್ಟು ಎಳನೀರು ಖರೀದಿಸುತ್ತಿದ್ದಾರೆ. ಉತ್ತಮ ದರ ತೋಟದಲ್ಲೇ ಸಿಗುವ ಕಾರಣ ಎಳನೀರು ಮಾರಾಟಕ್ಕೇ ಹೆಚ್ಚಿನ ಬೆಳೆಗಾರರು ಆಸಕ್ತಿ ವಹಿಸಿದ್ದಾರೆ. ತೆಂಗಿನಮರದಿಂದ ಒಣಗಿದ ಕಾಯಿ ಇಳಿಸುವ, ಸುಲಿಯುವ ಹಾಗೂ ಮಾರುಕಟ್ಟೆಗೆ ಹೋಗುವ ಸಾಗಾಟ ವೆಚ್ಚ ಎಲ್ಲವೂ ರೈತರಿಗೆ ಉಳಿ ತಾಯ ವಾಗುವುದರಿಂದ ಎಳನೀರು ಯಥೇತ್ಛ ಪ್ರಮಾಣದಲ್ಲಿ ರೈತರ ತೋಟ ದಲ್ಲೇ ಮಾರಾಟವಾಗುತ್ತಿದೆ. ಹೀಗಾಗಿ ಪ್ರಸ್ತುತ ತೆಂಗಿನ ಕಾಯಿ ಕೊರತೆ ಉಂಟಾಗಿದ್ದು, ದರ ಏರಿಕೆಯಾಗಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಎಳನೀರಿಗೆ 50 ರೂ.
ಈ ಬಾರಿ ಎಳನೀರಿನ ಇಳುವರಿಯೂ ಕಡಿಮೆಯಾಗಿರುವ ಕಾರಣ ಅದರ ಬೆಲೆಯೂ 55-60 ರೂ.ನಲ್ಲಿದೆ. ಕಳೆದ ಬಾರಿ ಇದು 40-45 ರೂ. ಆಸುಪಾಸಿನಲ್ಲಿತ್ತು. ಇನ್ನು ಹೊಸ ಬೆಳೆ ಬರುವುದು ಮಾರ್ಚ್ ನಲ್ಲಿ. ಅಲ್ಲಿಯವರೆಗೆ ತೆಂಗಿನಕಾಯಿ ಹಾಗೂ ಎಳನೀರಿನ ಬೆಲೆ ಏರಿಕೆಯಾಗುತ್ತಲೇ ಇರಬಹುದು ಎನ್ನುತ್ತಾರೆ ವ್ಯಾಪಾರಿಗಳು.
ದೊಡ್ಡ ಮಟ್ಟದ ಏರಿಕೆ ಆಗಿರಲಿಲ್ಲ
ಒಂದು ತಿಂಗಳಿನಿಂದ ತೆಂಗಿನಕಾಯಿ ಬೆಲೆ ನಿರಂತರ ಏರಿಕೆಯಾಗುತ್ತಿದೆ. ವ್ಯಾಪಾರಿಗಳೇ ರೈತರ ಬಳಿಗೆ ಬಂದು ಕಾಯಿ ಖರೀದಿಸುತ್ತಿದ್ದಾರೆ. ಕೆಲವರು ಮುಂಗಡ ಕಾಯ್ದಿರಿಸುತ್ತಿದ್ದಾರೆ. ನಿರಂತರ ಮಳೆಯಿಂದ ಎಳೆ ಕಾಯಿ ಉದುರಿದ್ದು, ರೋಗ ಬಾಧೆ, ಕಳೆದ ವರ್ಷ ಎಳನೀರಿಗೆ ಬೇಡಿಕೆ ಹೆಚ್ಚಳ ಮುಂತಾದ ಕಾರಣಗಳಿಂದ ಈ ಬಾರಿ ಶೇ. 30-40ರಷ್ಟು ಇಳುವರಿ ಕಡಿಮೆಯಾಗಿದೆ. ಕೆಲವು ವರ್ಷಗಳಿಂದ ಹೊಸ ತೆಂಗಿನ ತೋಟಗಳೂ ಆಗಿಲ್ಲ. 20-30 ವರ್ಷಗಳಲ್ಲಿ ಕಾಯಿಗೆ ದೊಡ್ಡ ಮಟ್ಟದಲ್ಲಿ ಬೆಲೆ ಹೆಚ್ಚಿರಲಿಲ್ಲ. ಆದರೆ ಅಡಿಕೆ, ಕಾಳು ಮೆಣಸು ಸಹಿತ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಈ ವರ್ಷ ಬೆಲೆ ಏರಿಕೆಯಾದರೂ ರೈತರಲ್ಲಿ ತೆಂಗಿನಕಾಯಿಯೇ ಇಲ್ಲ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಪ್ರಮುಖರಾದ ಸತ್ಯನಾರಾಯಣ ಉಡುಪ ಜಪ್ತಿ.
ತೆಂಗು ಪ್ರದೇಶವೂ ಕ್ಷೀಣ
ರಾಜ್ಯದಲ್ಲಿ ತೆಂಗು ಬೆಳೆಯುವಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರ ಕನ್ನಡ, ದ.ಕನ್ನಡ ಸೇರಿದಂತೆ 8-10 ಜಿಲ್ಲೆಗಳು ಪ್ರಮುಖವಾಗಿವೆ. ಮೊದಲು ರೈತರಿಗೆ ಒಂದು ತೆಂಗಿನಕಾಯಿಗೆ 8-12 ರೂ. ದರ ಸಿಗುತ್ತಿತ್ತು. ತೆಂಗು ಕೃಷಿ ಅಷ್ಟಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕಾಗಿ ಬೆಳೆಗಾರರು ಅಡಕೆ, ದಾಳಿಂಬೆಯಂಥ ಇತರ ವಾಣಿಜ್ಯ ಬೆಳೆಯತ್ತ ಒಲವು ತೋರಿದ್ದರಿಂದ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಶೇ. 30-40 ತೆಂಗು ಪ್ರದೇಶ ಕೀÒಣಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೆರ್ ಇದ್ದ ತೆಂಗು ಪ್ರದೇಶ ಈಗ ಅರ್ಧಕ್ಕರ್ಧ ಅಂದರೆ 6 ಸಾವಿರ ಹೆಕ್ಟೇರ್‌ಗೆ ಇಳಿದಿದ್ದು ಈ ಪ್ರದೇಶವನ್ನು ಅಡಕೆ ಆವರಿಸಿದೆ. ಪ್ರಸ್ತುತ ತೋಟದಲ್ಲಿಯೇ 30-35 ರೂ.ಗಳಿಗೆ ಎಳನೀರು ಮಾರಾಟವಾಗುತ್ತಿದ್ದು, ಇದರ ಲಾಭ ಪಡೆಯಲು ರೈತರ ಬಳಿ ತೆಂಗಿನ ಬೆಳೆಯೇ ಇಲ್ಲದಂತಾಗಿರುವುದು ವಿಪರ್ಯಾಸ.
ರೈತರಿಂದ ನಾವು 51-52 ರೂ. ದರದಲ್ಲಿ ಕಾಯಿ ಖರೀದಿ ಮಾಡುತ್ತಿದ್ದೇವೆ. 58-60 ರೂ. ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವೆಡೆಗಳಲ್ಲಿ ಜಾಸ್ತಿಯೂ ಇದೆ. ಇನ್ನಷ್ಟು ಜಾಸ್ತಿ ಆಗಬಹುದು.
– ಸಂತೋಷ್ ಭಕ್ತ ಉಡುಪಿ,
ತೆಂಗು ವ್ಯಾಪಾರಸ್ಥರು
-ಪ್ರಶಾಂತ್ ಪಾದೆ/ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.