UV Fusion: ಚೆಂಬಣ್ಣದ ಮಂದಾರದ ಕಂಪು
Team Udayavani, Nov 20, 2024, 11:24 AM IST
ಚಳಿಗಾಲದ ಕೊನೆಯಲ್ಲಿ ಬಗೆಬಗೆಯಾಗಿ ಅರಳುವ ಹೂವುಗಳಿಂದ ಕಂಗೊಳಿಸುವ ಮರಗಳಿವೆ. ಬೇಸಗೆಯ ವಸಂತದಲ್ಲೂ ಹೂ ಗಳನ್ನು ಬಿರಿಯುವ ಹಸುರಿನ ಬಗೆಗಳಿವೆ. ದಾರಿಯ ಬದಿಯಲ್ಲಿ, ಬೀದಿಯ ಇಕ್ಕೆಲಗಳಲ್ಲಿ ಬೆಳೆಯುವ ಶೃಂಗಾರ ದ್ರುಮಗಳು-ಅವೆನ್ಯೂ ಮರಗಳು ಒಂದಾ ಎರಡಾ? ಗುಲ್ಮೊಹರು, ನೀಲಮೊಹರು, ಕಾಪರ್ ಪಾಡ್, ತಬೆಬುಯಾ, ತುತ್ತೂರಿಯ ಹೂಗಳ ಮರ ಹೀಗೆ ದಂಡಿಯಾಗಿ ತಮಗೆ ದೊರೆತ ಸ್ಥಳಗಳಲ್ಲಿ ನಿಂತು, ನೆರಳನ್ನು ನೀಡುವ ಜತೆಗೆ ಆವರಣಗಳನ್ನು ಸಿಂಗರಿಸುತ್ತವೆ ಈ ಮರಗಳು.
ಉಷ್ಣವಲಯದ ಬಹುತೇಕ ಕಡೆ ನೆರಳಿಗೆ, ಅಂದಕ್ಕೆ , ಕೆಲಕಡೆ ಆಹಾರವಾಗಿ ಮತ್ತು ಔಷಧಿಯಾಗಿ ಬಳಕೆಯಾಗುತ್ತಿರುವ ವೃಕ್ಷ ಕೆಂಪು ಮಂದಾರ. ರಕ್ತ ಕಾಂಚನ, ಕಾಂಚನಾರ, ಕಚ್ನಾರ್, ಕೋವಿದಾರ, ಬಸವನ ಪಾದ, ಹೊಳೆದಾಸವಾಳ ಹೀಗೆ ಬಗೆಬಗೆಯಾಗಿರುವ ಹೆಸರುಗಳೇ ಸಾಕು ಇದರ ವಿಶಾಲ ವ್ಯಾಪ್ತಿಯನ್ನು ಹೇಳಲು. ಭಾರತದ ಬಹುತೇಕ ಪ್ರದೇಶಗಳಲ್ಲಿ ಕಾಂಚನ ಮರವು ಕೆಂಪು, ಗುಲಾಬಿ, ಕಡು ಕೆಂಪು, ತೆಳು ನೀಲಿಯ ಬಣ್ಣಗಳ ತರಹೇವಾರಿ ಹೂಗಳನ್ನು ತದನಂತರ ಕೋಡನ್ನು ಬಿಡುತ್ತದೆ. ವರ್ಷೆ ಯ ಕಟು ಮಳೆಯನ್ನೂ ಅನುಭವಿಸಿ ಶಿಶಿರನ ನಿಲಮುಗಿಲನ್ನು ದಿಟ್ಟಿಸುವವರೆಗಿನ ಹೂವರಳುವ ಪಯಣ ಕೆಂಪು ಮಂದಾರದ್ದು.
ಈ ಕಚ್ನಾರ್ ಮರವನ್ನು ಆರ್ಕಿಡ್ ಮರ ಎಂದೂ ಕರೆಯಲಾಗುತ್ತದೆ. ಏಕೆಂದರೆ ಅದರ ಆಕರ್ಷಕ ಹೂವುಗಳು ಆರ್ಕಿಡ್‌ಗಳನ್ನು ಹೋಲುತ್ತವೆ. ಕಚ್ನಾರ್ ಅಪಾರ ನೆರಳನ್ನೀಯುವ, ಎಲೆ ಉದುರುವ ಪರ್ಣಪಾತೀ ಮರವಾಗಿದ್ದು ಅದು 12 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ಎಲೆಗಳು ಚಿಟ್ಟೆಯ ಅಥವಾ ಹೃದಯದ ಆಕಾರದವು. ಮರದ ತೊಗಟೆ ಕಂದು ವರ್ಣದ್ದು. ಗುಂಡನೆಯ ಮೇಲಾವರಣಕ್ಕೆ ಕಂಡು ಬಣ್ಣದ ಕಾಂಡ ಕಾಲಿನಂತೆ ಗೋಚರಿಸುತ್ತದೆ. ಎಲೆಯು ಒಂಟೆಯ ಕಾಲಿನ ಗೊರಸಿನ ರೀತಿಯಲ್ಲಿ, ಬಸವನ ಪಾದದ ಸಾಮ್ಯತೆಯಿರುವುದರಿಂದ ಒಂಟೆ ಕಾಲಿನ ಗಿಡ, ಬಸವನ ಪಾದದ ಗಿಡ ಎಂಬೆಲ್ಲಾ ಗುಣವಿಶೇಷವಾಚಕಗಳೂ ಈ ಮರಕ್ಕಿದೆ. ಮಳೆಗಾಲ ಮುಗಿಯುವವರೆಗೂ ಮರಗಳು ಸುಮಭರಿತವಾಗಿರುವುದನ್ನು ಕಾಣಬಹುದು.
ವೈದ್ಯರ ಸಲಹೆಯ ಮೇರೆಗೆ ಸ್ವೀಕರಿಸುವುದಾದರೆ, ಕಾಂಚನದ ಎಲೆ, ತೊಗಟೆ, ಮೊಗ್ಗು ಎಲ್ಲವೂ ಔಷಧಿಗಾಗಿ ಬಳಸಬಲ್ಲುದೇ. ಇದರ ಮೊಗ್ಗಿನಿಂದ ವಿಶೇಷ ಖಾದ್ಯದ ತಯಾರಿಯನ್ನೂ ಮಾಡುತ್ತಾರೆ.
ವಸಂತದ ಆರಂಭಕ್ಕೆ ಆರಂಭದಲ್ಲಿ ಮರವು ಹಸುರಾದ ಕೋಡುಗಳನ್ನು ಬಿಟ್ಟು ತದನಂತರ ಮಾಗಲು ಆರಂಭವಾಗುತ್ತವೆ. ಹಸಿರಿನಿಂದ ಹೊಳೆಯುತ್ತಿರುವ ಸಮಯದಲ್ಲಿ ಗಿಳಿವಿಂಡುಗಳು ಆಹಾರವನ್ನರಸಿ ಕೆಂಪುಮಂದಾರವನ್ನಾಶ್ರಯಿಸುತ್ತವೆ. ಈ ಕೋಡುಗಳು ಶರತ್ಕಾಲದ ಆರಂಭದ ವೇಳೆಗೆ ಮಾಗಿದ ಮೇಲೆ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅಗತ್ಯವಿರುವಲ್ಲಿ ನರ್ಸರಿಗಳಲ್ಲಿ ಗಿಡಗಳನ್ನು ತಯಾರಿಸಲು ಬೀಜಗಳನ್ನು ಸಂಗ್ರಹಿಸುತ್ತಾರೆ. ಗುಲ್ಮೊಹರಿನ ಬೀಜಗಳಂತೆಯೇ ಇವುಗಳ ಬೀಜಕ್ಕೂ ವಾಣಿಜ್ಯಕ ಮಹತ್ವವಿದೆ. ಭಾರತೀಯ ಅಂಚೆ ಇಲಾಖೆಯು ಎಂಭತ್ತೂಂದನೆಯ ಇಸವಿಯಲ್ಲಿ ಎರಡು ರೂಪಾಯಿ ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿ ಜನಸಾಮಾನ್ಯರಿಗೆ ಅದರ ಅರಿವನ್ನು ಪ್ರಚುರಪಡಿಸಿದೆ.
-ವಿಶ್ವನಾಥ ಭಟ್, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.