Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು
ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಮಾಧ್ಯಮವಾಗಿಸುವ ಪ್ರಯತ್ನ ಹೊಸದಲ್ಲ ; ಆದರೂ ವಿಜ್ಞಾನ, ತಂತ್ರಜ್ಞಾನದಲ್ಲಿ ಕನ್ನಡ ಕಲಿಕೆಯ ಮಾಧ್ಯಮ ಆಗಲಿಲ್ಲ
Team Udayavani, Nov 22, 2024, 6:40 AM IST
ಈಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ನೇಮಕಾತಿ ಗಳು ನಡೆದುದು ಬಹಳ ಕಡಿಮೆ. ಅದು ಎಂಜಿನಿ ಯರಿಂಗ್‌ನಿಂದ ಹಿಡಿದು ಸಾಮಾನ್ಯ ಪದವಿ ಕಾಲೇಜುಗಳಲ್ಲೂ, ವಿವಿಗಳಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಎಲ್ಲೆಲ್ಲೂ ಅತಿಥಿ ಉಪನ್ಯಾಸಕರದ್ದೇ ಕಾರುಬಾರು. ಅವರು ದಿನನಿತ್ಯ ಭವಿಷ್ಯದ ಭಯ ಎದುರಿಸುತ್ತಾರೆ. ಅವರ ಅಸ್ತಿತ್ವವೇ ಗಟ್ಟಿ ಇರದಿರುವಾಗ ಅವರು ಉನ್ನತ ಶಿಕ್ಷಣದಲ್ಲಿ ಕನ್ನಡ ಗಟ್ಟಿಮಾಡುವ ಪ್ರಯತ್ನಕ್ಕೆ ಕೈ ಹಾಕುವುದಾದರೂ ಹೇಗೆ? ಅತಿಥಿ ಉಪನ್ಯಾಸಕರು ಪ್ರತಿನಿತ್ಯ ತಮ್ಮ ಖಾಯಮಾತಿಯ ಬಗ್ಗೆ ಯೋಚಿಸುತ್ತಾರೆಯೇ ವಿನಾ ಕನ್ನಡದ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ಉನ್ನತ ಶಿಕ್ಷಣ ದಲ್ಲಿ ಕನ್ನಡ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ ಹಾಗೂ ಬಳಕೆಯಲ್ಲಿಲ್ಲ …
ಕರ್ನಾಟಕದ ಯಾವುದೇ ಕಾಲೇಜಿನ ಕಾರಿಡಾರ್‌ನಲ್ಲಿ ಈಗ ನಡೆದುಹೋಗುತ್ತಿದ್ದರೆ ಒಳಗೆ ಪಾಠ ನಡೆಯುತ್ತಿರುವುದು ಕೇಳುತ್ತದೆ. ಆದರೆ ಯಾವ ಭಾಷೆಯೆಂಬುದು ಮಾತ್ರ ತಿಳಿಯು ವುದು ಕಷ್ಟ! ಕನ್ನಡ ಇಂಗ್ಲಿಷ್ ಮಿಶ್ರಿತ ಪಾಠವೇ ಈಗ ಸಾರ್ವತ್ರಿಕ. 20-30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಯಾವುದಾದರೂ ಒಂದು ಭಾಷೆಯಲ್ಲಾದರೂ ತರಗತಿಗಳು ನಡೆಯುತ್ತಿದ್ದವು ಎನ್ನಬಹುದು.
ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಮಾಧ್ಯಮ ಯಾವುದು? ಈ ಪ್ರಶ್ನೆಗೆ ಎಲ್ಲರೂ ಸಂದೇಹವಿಲ್ಲದೇ ಹೇಳುವ ಉತ್ತರ ಇಂಗ್ಲಿಷ್ ಎಂದು. ಆದರೆ ನಿಜಕ್ಕೂ ಪಾಠಗಳು ನಡೆಯುವ ಮಾಧ್ಯಮ ಯಾವುದು ಎಂದು ಕೇಳಿದರೆ ಉತ್ತರಿಸಲು ತಡವರಿಸಬೇಕಾಗುತ್ತದೆ. ಯಾಕೆಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಮಾಡಬೇಕಾದ ಮೇಷ್ಟ್ರುಗಳಿಗೇ ಇಂಗ್ಲಿಷ್ ಬರುವುದಿಲ್ಲ ಎಂಬುದು ವಾಸ್ತವ. ಇದು ಕನ್ನಡ ರಾಜ್ಯೋತ್ಸವದ ಮಾಸ. ಇಡೀ ರಾಜ್ಯದಲ್ಲಿ ಉನ್ನತ ಶಿಕ್ಷಣದ ಮಾಧ್ಯಮ ಅನಧಿಕೃತವಾಗಿ ಕನ್ನಡವಾಗಿ ಬದಲಾಗಿದೆಯೆಂದು ಖುಷಿ ಪಡೋಣವೇ? ಸ್ವಲ್ಪ ತಾಳಿ. ಮೇಷ್ಟ್ರುಗಳ ಹಾಗೂ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರ ಬರೆಯುವವರ ಕನ್ನಡ ಭಾಷೆಯನ್ನೊಮ್ಮೆ ಪರೀಕ್ಷಿಸಿ ನೋಡಿ. ಎದೆ ಒಡೆಯುತ್ತದೆ.
ಕಲಿಕಾ ಮಾಧ್ಯಮ ಕುರಿತೇ ಗೊಂದಲ
ಈಗ ಉನ್ನತ ಶಿಕ್ಷಣದಲ್ಲಿ ಕಲಿಸುವ ಮಾಧ್ಯಮ ಯಾವುದು ಎಂಬ ಬಗೆಗೇ ಗೊಂದಲವಿದೆ. ಮಾಧ್ಯಮ ಯಾವುದೇ ಆಗಿರಲಿ, ವಿದ್ಯಾರ್ಥಿಗೆ ಕನ್ನಡದಲ್ಲಿ ಬರೆಯುವ ಅವಕಾಶ ಹಿಂದಿನಿಂದಲೂ ಇದೆ. ಈಗ ಕಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನವರು ಪರೀಕ್ಷೆಯಲ್ಲಿ ಉತ್ತರಿಸುವುದು ಕನ್ನಡದಲ್ಲೇ . ವಿಜ್ಞಾನ ಹಾಗೂ ವಾಣಿಜ್ಯ ಪದವಿಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಹೆಚ್ಚಾಗಿ ಇಂಗ್ಲಿಷಿನಲ್ಲೇ ಇರುವುದರಿಂದ ಅವರು ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಾರೆ. ಅವರ ಮೇಷ್ಟ್ರುಗಳು ತಮ್ಮ ಪಾಠವನ್ನು ಕಲಿಸುವ ಮಟ್ಟಿಗೆ ಇಂಗ್ಲಿಷ್ ಜ್ಞಾನ ಹೊಂದಿರುವಂತೆ ಕಾಣುತ್ತದೆ. ಕೆಲವರು ಒಂದು ಭಾಷೆಯಲ್ಲಿ ಶುರುಮಾಡಿ ಇನ್ನೊಂದರಲ್ಲಿ ಮುಗಿಸುವುದೂ ಇದೆ. ನಿಜವೆಂದರೆ ಉನ್ನತ ಶಿಕ್ಷಣದ ಭಾಷೆ ಯಾವುದು ಎಂದರೆ ಉತ್ತರಿಸಲು ತಡವರಿಸುವುದು ಅನಿವಾರ್ಯ. ಯಾಕೆಂದರೆ ಇಷ್ಟು ವರ್ಷಗಳ ನಮ್ಮ ಸಾಧನೆಯೆಂದರೆ ಒಂದು ಭಾಷೆಯಲ್ಲೂ ತಮ್ಮನ್ನು ಪರಿಪೂರ್ಣವಾಗಿ ಅಭಿವ್ಯಕ್ತಗೊಳಿಸಿಕೊಳ್ಳಲು ಸಾಧ್ಯವಾಗದ ಜನಾಂಗವನ್ನು ಸೃಷ್ಟಿಸಿದ್ದೇವೆ.
ಉದ್ದೇಶವೇನೋ ಚೆನ್ನಾಗಿದೆ, ಆದರೆ…
ಈ ಸತ್ಯ ಮೇಲಿನಿಂದ ಕೆಳಗಿನವರೆಗೆ ಎಲ್ಲರಿಗೂ ಗೊತ್ತಿದೆ. ಅದಕ್ಕೇ ಸ್ಥಳೀಯ ಭಾಷೆಯಲ್ಲೇ ಉನ್ನತ ಶಿಕ್ಷಣವನ್ನು ಗಟ್ಟಿಮಾಡಬೇಕು ಎಂಬ ಕಲ್ಪನೆಗೆ ಇಂಬು ಸಿಕ್ಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020, ಸ್ಥಳೀಯ ಭಾಷಾ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಅದರ ಫಲವಾಗಿಯೇ ಈಗ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ದೇಶದ ಪ್ರತಿಯೊಂದು ಸ್ಥಳೀಯ ಭಾಷೆಯಲ್ಲೂ ಕಲಿಸುವ ವಿಷಯಗಳಲ್ಲಿ ಒರಿಜಿನಲ್ ಪಠ್ಯಪುಸ್ತಕ ರಚನೆಯಾಗಬೇಕು ಎಂಬ ಉದ್ದೇಶದಿಂದ ಪ್ರತಿಯೊಂದು ರಾಜ್ಯದ ಒಂದೊಂದು ವಿವಿಗೆ ಸಂಯೋಜನೆಯ ಜವಾಬ್ದಾರಿ ನೀಡಿದೆ. ಕರ್ನಾಟಕದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ ಜವಾಬ್ದಾರಿ ವಹಿಸಲಾಗಿದ್ದು, ಬೆಂಗಳೂರಿನಲ್ಲಿ ಇತ್ತೀಚೆಗೆ ಬರಹಗಾರರಿಗೆ ಎರಡು ದಿನಗಳ ಕಮ್ಮಟ ಏರ್ಪಾಟಾಗಿತ್ತು. ಇನ್ನು ಮೂರು ತಿಂಗಳ ಒಳಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳ ಕರಡು ಸಿದ್ಧವಾಗಬೇಕು ಎಂಬುದು ಯುಜಿಸಿಯ ನಿರೀಕ್ಷೆ. ನಮ್ಮ ಬರಹಗಾರರು ಎಷ್ಟರಮಟ್ಟಿಗೆ ಯಶಸ್ವಿಯಾಗುವರೋ ಕಾದುನೋಡಬೇಕು.
ಕನ್ನಡ ಕಾಳಜಿಯ ಫಲ
ಉನ್ನತ ಶಿಕ್ಷಣಕ್ಕೆ ಕನ್ನಡವನ್ನು ಮಾಧ್ಯಮವಾಗಿ ತರಬೇಕೆಂಬ ಪ್ರಯತ್ನ ಹೊಸದಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಕುವೆಂಪು, ದೇಜಗೌ ಅವರ ಕನ್ನಡ ಕಾಳಜಿಯ ಫಲವಾಗಿ ಅಲ್ಲಿನ ಪ್ರಸಾರಾಂಗವು ವಿಶೇಷವಾಗಿ ಕನ್ನಡದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಪಠ್ಯಪುಸ್ತಕಗಳನ್ನು ರಚಿಸಿ ಪ್ರಕಟಿಸಿತು. ಇದರ ಫಲವಾಗಿಯೇ ಕನ್ನಡಕ್ಕೆ ಜೆ. ಆರ್. ಲಕ್ಷ್ಮಣರಾವ್, ಜಿಟಿನಾ, ಅಡ್ಯನಡ್ಕ ಕೃಷ್ಣಭಟ್ಟ ಮುಂತಾದ ಕನ್ನಡ ವಿಜ್ಞಾನ ಬರಹಗಾರರು ದೊರೆತರು. ಕನ್ನಡ ಭಾಷೆಯೂ ವಿವಿಧ ವಿಷಯಗಳಲ್ಲಿ ವಿಪುಲವಾಗಿ ಬೆಳೆಯಿತು. ಆದರೂ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಕನ್ನಡ ಕಲಿಕೆಯ ಮಾಧ್ಯಮ ಆಗಲಿಲ್ಲ ಎಂಬುದು ವಾಸ್ತವ. ಇದನ್ನು ಇಂಗ್ಲಿಷಿನಲ್ಲಿ ಬರೆಯುವ ಧೈರ್ಯವಿಲ್ಲದ ಮಕ್ಕಳು ಹರುಕು ಮುರುಕು ಇಂಗ್ಲಿಷಿನಲ್ಲೇ ಬರೆಯುತ್ತಿದ್ದರು. ಯಾಕೆಂದರೆ ಆಗ ಕನ್ನಡದಲ್ಲಿ ಉತ್ತರ ಪತ್ರಿಕೆ ತಿದ್ದುವ ಮೇಷ್ಟ್ರುಗಳೂ ಇರಲಿಲ್ಲ!
ಪ್ರಯತ್ನಗಳು ನಡೆದಿವೆ, ಫಲ ಸಿಕ್ಕಿಲ್ಲ…
ಕಾಲಾನಂತರದಲ್ಲಿ ಈ ನ್ಯೂನತೆಯನ್ನು ಕಂಡುಕೊಂಡ ತಾಂತ್ರಿಕ ವಿವಿಯು ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೂ ಆರಂಭಿಸಿಲು ಪರವಾನಿಗೆ ಕೊಟ್ಟಿತು. ಕೆಲವು ಕಾಲೇಜುಗಳು ಎಂಜಿನಿಯರಿಂಗ್ ತರಗತಿಗಳನ್ನು ಕನ್ನಡದಲ್ಲೇ ನಡೆಸುವ ಪ್ರಯತ್ನವನ್ನೂ ಮಾಡಿದವು. ಆದರೆ ವಿದ್ಯಾರ್ಥಿಗಳೇ ಮುಂದೆ ಬರಲಿಲ್ಲ. ತಾವು ಕನ್ನಡದಲ್ಲಿ ಬರೆದರೆ ಮುಂದೆ ಕೆಲಸ ಸಿಗುತ್ತೋ ಇಲ್ಲವೋ ಎಂಬ ಆತಂಕ ಈ ವಿದ್ಯಾರ್ಥಿಗಳಿಗಿರಬೇಕು! ನಮ್ಮ ಎಲ್ಲ ಶಿಕ್ಷಣದ ಉದ್ದೇಶವೂ ಅನ್ನದ ದಾರಿಯನ್ನು ಹುಡುಕುವುದೇ ಆಗಿರುವುದರಿಂದ ತಾಂತ್ರಿಕ ಶಿಕ್ಷಣಕ್ಕೆ ಕನ್ನಡವನ್ನು ತರುವ ಪ್ರಯತ್ನಕ್ಕೆ ಅಷ್ಟಾಗಿ ಇನ್ನೂ ಫಲ ಸಿಕ್ಕಿಲ್ಲ. ವಾಣಿಜ್ಯ ತರಗತಿಗಳು ಪದವಿ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಹೆಸರಿಗೆ ಇಂಗ್ಲಿಷ್‌ನಲ್ಲೇ ನಡೆಯುತ್ತಿವೆ. ವಾಣಿಜ್ಯ ಹಾಗೂ ಕಲಾ ಪದವಿಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತವೆ. ಅವುಗಳನ್ನೇ ಓದಿ ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಹೊರಡುತ್ತಾರೆ. ಆದರೆ ಅವುಗಳ ಗುಣಮಟ್ಟ ಗಾಬರಿ ಹುಟ್ಟಿಸುವಂತಿವೆ. ಹೆಚ್ಚಿನವು ಇಂಗ್ಲಿಷಿನಿಂದ ನೇರ ಭಾಷಾಂತರವಾಗಿದ್ದು ವಿಚಿತ್ರ ಅರ್ಥಗಳನ್ನು ಹೊಳೆಸುತ್ತವೆ. ಅವುಗಳ ಕನ್ನಡವನ್ನು ನೋಡಿದರೆ ಅಯ್ಯೋ ಎನಿಸುತ್ತದೆ.
ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಆಗಿಲ್ಲ
ಪಾಠಮಾಡುವವರು ಬರೆಯುವುದಿಲ್ಲ ಹಾಗೂ ಬರೆಯುವವರು ಪಾಠಮಾಡುವುದಿಲ್ಲ ಎಂಬುದು ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಲಾಗುವ ಮಾತು. ಈ ಮಾತನ್ನು ಕೊಂಚ ಮಾರ್ಪಾಟಿನೊಂದಿಗೆ ಇತರ ವಿಷಯಗಳಿಗೂ ಅನ್ವಯಿಸಬಹುದು ಎನಿಸುತ್ತದೆ. ನಮ್ಮಲ್ಲಿ ಓದುವವರು ಬರೆಯುವುದಿಲ್ಲ, ಬರೆಯುವವರು ಓದುವುದಿಲ್ಲ ಎಂಬುದು ಸಾಮಾನ್ಯವೆಂಬಂತೆ ಕಾಣುತ್ತದೆ. ಅಲ್ಲಲ್ಲಿ ಅಪವಾದಗಳಿದ್ದರೆ ಅದು ನಮ್ಮ ಪುಣ್ಯ. ಈಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ನೇಮಕಾತಿಗಳು ನಡೆದುದು ಬಹಳ ಕಡಿಮೆ. ಅದು ಎಂಜಿನಿಯರಿಂಗ್‌ನಿಂದ ಹಿಡಿದು ಸಾಮಾನ್ಯ ಪದವಿ ಕಾಲೇಜುಗಳಲ್ಲೂ, ವಿಶ್ವವಿದ್ಯಾನಿಲಯಗಳಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಎಲ್ಲೆಲ್ಲೂ ಅತಿಥಿ ಉಪನ್ಯಾಸಕರುಗಳದ್ದೇ ಕಾರುಬಾರು. ಅವರು ದಿನನಿತ್ಯ ಭವಿಷ್ಯದ ಭಯ ಎದುರಿಸುತ್ತಾರೆ. ಅವರ ಅಸ್ತಿತ್ವವೇ ಗಟ್ಟಿ ಇರದಿರುವಾಗ ಅವರು ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಗಟ್ಟಿಮಾಡುವ ಪ್ರಯತ್ನಕ್ಕೆ ಕೈ ಹಾಕುವುದಾದರೂ ಹೇಗೆ? ಈ ಅತಿಥಿ ಉಪನ್ಯಾಸಕರುಗಳ ಗುಣಮಟ್ಟದ ಬಗ್ಗೆ ಕೂಡ ಸಾಕಷ್ಟು ದೂರುಗಳಿವೆ. ಯಾವ್ಯಾವುದೋ ಊರುಗೋಲಿನ ಸಹಾಯದಿಂದ ಅತಿಥಿ ಉಪನ್ಯಾಸಕರಾಗಿ ನಿಯೋಜನೆಗೊಳ್ಳುವವರು ಪ್ರತಿನಿತ್ಯ ತಮ್ಮ ಖಾಯಮಾತಿಯ ಬಗ್ಗೆ ಯೋಚಿಸುತ್ತಾರೆಯೇ ವಿನಾ ಕನ್ನಡದ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ಉನ್ನತ ಶಿಕ್ಷಣದಲ್ಲಿ ಕನ್ನಡ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ ಹಾಗೂ ಬಳಕೆಯಲ್ಲಿಲ್ಲ ಎಂಬುದು ವಾಸ್ತವ. ಇಂದು ಇಂಗ್ಲಿಷಿನಲ್ಲಿ ಪಾಠಮಾಡಲಾಗದವರು ಕನ್ನಡದಲ್ಲಿ ಪಾಠಮಾಡುವ ಪೋಸು ಕೊಡುತ್ತಾರೆಯೇ ವಿನಾ ಕನ್ನಡದ ಮೇಲಿನ ಅಭಿಮಾನದ ಮೇಲೆ ಅಲ್ಲ ಎಂಬುದು ಎದ್ದು ಕಾಣುವ ಸತ್ಯ.
ಅಂತೂ ಉನ್ನತ ಶಿಕ್ಷಣದಲ್ಲಿ ಕನ್ನಡದ ಬಸ್ಸು ಸಾಗಬೇಕಾದ ಹಾದಿ ಇನ್ನೂ ಬಹಳ ದೂರವಿದೆ ಎಂಬುದು ನಿಜ. ಅದಕ್ಕೆ ಎಲ್ಲ ಕಡೆಗಳ ಬದ್ಧತೆಯ ಕೊರತೆ ಕಾರಣ ಎಂಬುದು ಎದ್ದು ಕಾಣುವ ವಿಚಾರ.
ಆಗಬೇಕಾದ್ದೇನು?
1.ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಅಗತ್ಯವಿದೆ. ಹೆಚ್ಚು ಆಸ್ಥೆಯಿಂದ ಈ ಬಗ್ಗೆ ಕೆಲಸ ಮಾಡಬೇಕಾಗಿದೆ.
2.ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ನೇಮಕಾತಿಗಳನ್ನು ಕಾಲಕಾಲಕ್ಕೆ ನಡೆಸಬೇಕು. ಈ ಪ್ರಕ್ರಿಯೆಯಿಂದ ಉನ್ನತ ಶಿಕ್ಷಣದ ದಕ್ಷತೆಯ ಜತೆಗೆ ಬದ್ಧತೆಯೂ ಹೆಚ್ಚಾಗುತ್ತದೆ.
3.ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರ ಗುಣಮಟ್ಟದ ಬಗ್ಗೆ ಕೂಡ ಸಾಕಷ್ಟು ದೂರುಗಳಿದ್ದು, ಈ ಬಗ್ಗೆ ಸ್ಪಷ್ಟವಾದ ನೀತಿಯನ್ನು ರೂಪಿಸಬೇಕು.
4.2020ರ ಹೊಸ ಶಿಕ್ಷಣ ನೀತಿಯ ಅನ್ವಯ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಮುತು ವರ್ಜಿಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ.
5.ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇರಿ ಎಲ್ಲ ರೀತಿಯ ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ದೊರೆಯುವಂತಾಗಬೇಕು.
-ಪ್ರೊ.ನಿರಂಜನ ವಾನಳ್ಳಿ, ಕುಲಪತಿಗಳು, ಬೆಂಗಳೂರು ಉತ್ತರ ವಿವಿ, ಕೋಲಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.