PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ತೆರಿಗೆ ಪಾಲಿನಲ್ಲಿ ಭಾರೀ ಕಡಿತ ಮಾಡಿ ಶಿಕ್ಷಿಸದಂತೆ, ಹಣಕಾಸು ಇಲಾಖೆ ಖಾತ್ರಿಪಡಿಸಬೇಕು ಎಂದು ಮನವಿ
Team Udayavani, Nov 29, 2024, 5:35 PM IST
ನವದೆಹಲಿ: ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ(ನ29) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು. ಕರ್ನಾಟಕ ಹಾಗೂ ಕನ್ನಡಿಗರ ಅಭಿವೃದ್ಧಿಯ ಕುರಿತು ಚರ್ಚಿಸಿ, ಕೇಂದ್ರದ ಸಹಕಾರ ಕೋರಿದ್ದಾರೆ.ಭೇಟಿ ಕುರಿತು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಗೆ ಸಿಎಂ ನೀಡಿದ ಪತ್ರದ ಸಾರಾಂಶ ಹೀಗಿದೆ…
ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರಾಜ್ಯದ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿದೆ. 2023-24ರ ಸಾಲಿನಲ್ಲಿ ರೂ.5600 ಕೋಟಿಗಳನ್ನು ಮಂಜೂರು ಮಾಡಲಾಗಿತ್ತು.2024 -25ರ ಸಾಲಿನಲ್ಲಿ ರೂ. 2,340 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿನಲ್ಲಿ ಶೇ.58 ರಷ್ಟು ಕಡಿತವಾಗಿದೆ.
ರಾಜ್ಯವು ಹೆಚ್ಚುವರಿ ಬಡ್ಡಿ ಸಹಾಯಧನವನ್ನು ನೀಡದ ಹೊರತು, ಇದು ರಾಜ್ಯದ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಆದ್ದರಿಂದ ಈ ಕೂಡಲೇ ಇದನ್ನು ಪರಾಮರ್ಶಿಸಿ ನಬಾರ್ಡ್ ನೆರವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ರಾಜ್ಯದ ರೈತರು ಅಲ್ಪಾವಧಿ ಬೆಳೆ ಸಾಲಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆಯಾಗದಂತೆ ತಾವು ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತಿದ್ದೇನೆ.
ಎರಡನೆಯದಾಗಿ, ಈ ಮೊದಲೇ ತಮ್ಮಲ್ಲಿ ಮನವಿ ಮಾಡಿರುವಂತೆ, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 2023-24 ರ ಕೇಂದ್ರ ಬಜೆಟ್ ನಲ್ಲಿ ಅನುಮೋದನೆಯಾಗಿರುವ ರೂ. 5300 ಕೋಟಿ ಅನುದಾನ ಬಿಡುಗಡೆ ಮಾಡುವ ಕೇಂದ್ರ ಹಣಕಾಸು ಸಚಿವರ ಭರವಸೆ ಈವರೆಗೆ ಈಡೇರಿಲ್ಲ. ತ್ವರಿತ ನೀರಾವರಿ ಲಾಭ ಕಾರ್ಯಕ್ರಮದಡಿ ನೆರವು ಒದಗಿಸಲು ಸಚಿವ ಸಂಪುಟದ ಟಿಪ್ಪಣಿಯನ್ನು ಸಿದ್ಧಮಾಡಿರುವ ಬಗ್ಗೆ ತಿಳಿದುಬಂದಿದೆ. ಪ್ರಸಕ್ತ ಯೋಜನೆ ಶೀಘ್ರ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಲು ತಮ್ಮಲ್ಲಿ ಮನವಿ ಮಾಡುತ್ತೇನೆ.
ಮೂರನೆಯದಾಗಿ ಶುಷ್ಕ ವಲಯಕ್ಕೆ ಸೇರಿದ ಕರ್ನಾಟಕದಂತಹ ರಾಜ್ಯದಲ್ಲಿ ನೀರಾವರಿ ಸೌಲಭ್ಯ ಸಾಮರ್ಥ್ಯಗಳನ್ನು ಸಬಲಗೊಳಿಸುವುದು ಅತ್ಯಗತ್ಯವಾಗಿದೆ. ಈ ಕಾರ್ಯವನ್ನು ಬಹುತೇಕ ರಾಜ್ಯವು ತನ್ನ ಸಂಪನ್ಮೂಲಗಳಿಂದಲೇ ಭರಿಸುತ್ತಿದೆ. ಆದರೆ, ಜಲ ಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳಲ್ಲಿ ಯೋಜನೆಗಳ ತೀರುವಳಿ ಬಾಕಿ ಇರುವುದು ನಮ್ಮ ಯೋಜನೆಗಳನ್ನು ವಿಳಂಬ ಮಾಡಿದೆ. ಕಾವೇರಿ ನದಿ ಪಾತ್ರದ ಮೇಕೇದಾಟು ಯೋಜನೆ ಹಾಗೂ ಮಹದಾಯಿ ನದಿಯ ಕಳಸಾಬಂಡೂರಿ ಯೋಜನೆಗಳಗತ್ತ ತಾವು ತುರ್ತು ಗಮನ ಹರಿಸಬೇಕಿದೆ ಜಲಶಕ್ತಿ ಹಾಗೂ ಅರಣ್ಯ, ಪರಿಸರ ಸಚಿವಾಲಯಗಳಿಂದ ಶೀಘ್ರ ತೀರುವಳಿ ದೊರಕಿಸಿಕೊಡಲು ಕೋರಲಾಗಿದೆ.
ನಾಲ್ಕನೇಯದ್ದಾಗಿ, ಕರ್ನಾಟಕ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯವಾಗಿದ್ದು, 13 ಮಹಾನಗರ ಪಾಲಿಕೆಗಳಿದ್ದು, ಈ ಎರಡನೇ ಸ್ತರದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಅಗತ್ಯವಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ 2ಸಾವಿರ ಕೋಟಿ ರೂ. ಈ ಉದ್ದೇಶಕ್ಕಾಗಿ ತೆಗೆದಿರಿಸಿದೆ. ಆದರೆ ಈ ನಗರಗಳಿಗೆ ಸಮಗ್ರ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಅಮೃತ್ ಅಥವಾ ಇನ್ನಾವುದೇ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 10ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲು ನಾನು ಕೋರುತ್ತೇನೆ.
ಕೊನೆಯದ್ದಾಗಿ, 15ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ನಾವು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.1ರಷ್ಟು ಕಡಿಮೆ ಮಾಡಿರುವ ಶಿಫಾರಸ್ಸನ್ನು ಹಣಕಾಸು ಇಲಾಖೆ ಸರಿಪಡಿಸಬೇಕಾಗಿದೆ. ಹಣಕಾಸು ಆಯೋಗವು ರಾಜ್ಯಕ್ಕೆ ಹಂಚಿಕೆ ಕಡಿಮೆಯಾಗಿರುವುದಕ್ಕೆ ಪರಿಹಾರವಾಗಿ ರೂ.5495 ಕೋಟಿ ಅನುದಾನ ಬಿಡುಗಡೆಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಮತ್ತು ನೀರಿನ ಮೂಲಗಳ ಪುನರುಜ್ಜೀವನಕ್ಕೆ ರೂ.6ಸಾವಿರ ಕೋಟಿ ವಿಶೇಷ ಅನುದಾನ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಕನಿಷ್ಟ ಪಕ್ಷ ಹಣಕಾಸು ಆಯೋಗ ಈ ಎರಡು ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕಾಗಿದೆ.ನಾವು ಇನ್ನೂ 15ನೇ ಹಣಕಾಸು ಆಯೋಗದ ಅವಧಿಯಲ್ಲಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡುವಂತೆ ಪುನಃ ನಾನು ಮನವಿ ಮಾಡುತ್ತೇನೆ.
16ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರದ ತೆರಿಗೆ ಪಾಲಿಗೆ ಹೆಚ್ಚಿನ ದೇಣಿಗೆ ಒದಗಿಸುವ ರಾಜ್ಯಗಳಿಗೆ, ಕೇಂದ್ರದ ತೆರಿಗೆ ಪಾಲಿನಲ್ಲಿ ಭಾರೀ ಕಡಿತ ಮಾಡಿ ಶಿಕ್ಷಿಸದಂತೆ, ಹಣಕಾಸು ಇಲಾಖೆ ಖಾತ್ರಿಪಡಿಸಬೇಕು.ನಮ್ಮ ಮನವಿಗೆ ಸೂಕ್ತ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ನಮ್ಮದು.
ದೆಹಲಿಯಲ್ಲಿ ಇಂದು ಪ್ರಧಾನಿ @narendramodi ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದೆ.
ಈ ವೇಳೆ ಕರ್ನಾಟಕ ಹಾಗೂ ಕನ್ನಡಿಗರ ಅಭಿವೃದ್ಧಿಯ ಕುರಿತು ಚರ್ಚಿಸಿ, ಕೇಂದ್ರದ ಸಹಕಾರವಿರಲಿ ಎಂದು ಕೋರಿದೆ. pic.twitter.com/LDtlW3rSCQ— Siddaramaiah (@siddaramaiah) November 29, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.