Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
ಕುಕ್ಕೆ ಜಾತ್ರೋತ್ಸವಕ್ಕೆ ಮಲೆಕುಡಿಯ ಜನಾಂಗದವರ ಕೌಶಲದ ಸೇವೆ
Team Udayavani, Dec 4, 2024, 1:31 PM IST
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ನಿರ್ಮಿಸುವ ಆಕರ್ಷಕ ಬೆತ್ತದ ರಥಗಳು ಪ್ರಧಾನವಾಗಿದ್ದು, ಅವುಗಳ ನಿರ್ಮಾಣ ಭರದಿಂದ ಸಾಗಿದೆ.
ಯಾವುದೇ ಹಗ್ಗವನ್ನು ಬಳಸದೆ ಬೆತ್ತಗಳಿಂದಲೇ ಸುಂದರ ರಥವನ್ನು ನಿರ್ಮಿಸುವುದು ಮತ್ತು ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಉತ್ಸವದ ಪ್ರಮುಖ ಆಕರ್ಷಣೆ ಮತ್ತು ವಿಶೇಷ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ಮೂಲನಿವಾಸಿ ಮಲೆಕುಡಿಯ ಜನಾಂಗದವರಿಗೂ ಹೆಮ್ಮೆ ಮತ್ತು ಶ್ರದ್ಧಾ ಭಕ್ತಿಯ ಕಾರ್ಯ. ಭಕ್ತರಿಗೆ ಅಲಂಕೃತ ರಥಗಳನ್ನು ನೋಡುವುದೇ ಒಂದು ಸಡಗರ.
25 ದಿನಗಳ ಕಾಯಕ
ಮಲೆಕುಡಿಯ ಜನಾಂಗದ ನುರಿತ 61ಕ್ಕೂ ಅಧಿಕ ಹಿರಿಯ ಮತ್ತು ಕಿರಿಯ ಕುಶಲಿಗಳು ಸುಮಾರು 25ಕ್ಕೂ ಅಧಿಕ ದಿನಗಳ ಕಾಲ ರಥ ಕಟ್ಟುವ ಸೇವೆ ಮಾಡುತ್ತಾರೆ. ಆಕರ್ಷಕ ರಥವನ್ನು ಸಂಪ್ರದಾಯಬದ್ಧವಾಗಿ ನಿರ್ಮಿಸುತ್ತಾರೆ. ಬ್ರಹ್ಮರಥ, ಪಂಚಮಿ ರಥ ನಿರ್ಮಾಣ, ಶ್ರೀ ದೇಗುಲದ ಒಳಾಂಗಣದಲ್ಲಿ ಎಳೆಯುವ ಬಂಡಿ ರಥದ ಅಲಂಕಾರ, ಲಕ್ಷದೀಪೋತ್ಸವದಂದು ಎಳೆಯುವ ಪಂಚ ಶಿಖರದ ಚಂದ್ರಮಂಡಲ ರಥ ನಿರ್ಮಾಣ, ಹೂವಿನ ತೇರಿನ ಅಲಂಕಾರ ಎಲ್ಲವೂ ಮೂಲನಿವಾಸಿಗಳ ಸೇವೆಯಿಂದ ಕಂಗೊಳಿಸುತ್ತವೆ.
ಈ ಬಾರಿ ಡಿ.5ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.6ರಂದು ರಾತ್ರಿ ಪಂಚಮಿ ರಥೋತ್ಸವ, ಡಿ.7ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ ಜರಗಲಿದೆ.
ತಲೆಮಾರಿನಿಂದ ಬಂದ ಕಲೆ
ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ರಥದ ಅಟ್ಟೆಯನ್ನು ಬಿದಿರು ಹಾಗೂ ರಥದ ಮೇಲ್ಭಾಗವನ್ನು ಪೂರ್ಣ ಬೆತ್ತದಿಂದ ನಿರ್ಮಿಸುತ್ತಿದ್ದಾರೆ. ರಥಕಟ್ಟಲು ಬೆತ್ತದ ಸೀಳುಗಳನ್ನು ಬಳಸುತ್ತಾರೆ. ಆಕರ್ಷಕ ಶೈಲಿಯಲ್ಲಿ ರಥವನ್ನು ನಿರ್ಮಿಸಿದ ಬಳಿಕ ಬಟ್ಟೆಯ ಪತಾಕೆಗಳಿಂದ ಸಿಂಗರಿಸಲಾಗುತ್ತದೆ. ರಥಗಳ ಗಾಂಭೀರ್ಯತೆ, ಅದರ ಶೈಲಿ, ಆಕರ್ಷಣೆಗಳು ಹಾಗೂ ರಥಗಳ ವಿನ್ಯಾಸಗಳು ಇವರ ಅತ್ಯುತ್ತಮ ರಚನಾ ಕೌಶಲವನ್ನು ತೆರೆದಿಡುತ್ತವೆ. ಗುರು ಇಲ್ಲದ ಈ ಕಾಯಕವನ್ನು ಹಿರಿಯರ ರಚನಾ ಕೌಶಲವನ್ನು ನೋಡಿ ಕಲಿತಿದ್ದಾರೆ ಎನ್ನುವುದು ವಿಶೇಷ. ಹಿರಿಯರೊಂದಿಗೆ ಯುವ ಜನಾಂಗವೂ ದೇವರ ಈ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರ
E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್ ಕಡ್ಡಾಯ: ಪ್ರಾಧಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.