Government ಐಟಿಐಗಳ ದತ್ತು ವಿದ್ಯಾರ್ಥಿ ಸ್ನೇಹಿ ನಡೆ
Team Udayavani, Dec 6, 2024, 6:28 AM IST
ಸರಕಾರಿ ಶಾಲೆಗಳನ್ನು ದತ್ತು ಯೋಜನೆಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ ರೀತಿಯಲ್ಲಿಯೇ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳನ್ನು ಕಾರ್ಪೊರೆಟ್ ಕಂಪೆನಿಗಳಿಗೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಅಡಿ ದತ್ತು ಪಡೆಯಲು ಅವಕಾಶ ಕಲ್ಪಿಸುವ ರಾಜ್ಯ ಸರಕಾರ ಚಿಂತನೆ ಸಮುಚಿತ ಮತ್ತು ವಿದ್ಯಾರ್ಥಿಸ್ನೇಹಿಯಾಗಿದೆ. ತನ್ಮೂಲಕ ರಾಜ್ಯದಲ್ಲಿ ಬಹುತೇಕ ನಿರ್ಲಕ್ಷ್ಯ ಕ್ಕೊಳಗಾಗಿರುವ ಸರಕಾರಿ ಐಟಿಐಗಳಿಗೆ ಮರುಜೀವ ಲಭಿಸುವ ಆಶಯ ಜನತೆಯಲ್ಲಿ ಮೂಡಿದೆ.
ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಪಾಲಿಗೆ ಈ ಸರಕಾರಿ ಐಟಿಐಗಳು ವರ ದಾನ ವಾಗಿವೆ. ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಕೈಗಾರಿಕ ತರ ಬೇತಿ ಯನ್ನು ಪಡೆದುಕೊಳ್ಳಲು ಈ ಐಟಿಐಗಳು ಬಡ ವಿದ್ಯಾರ್ಥಿಗಳಿಗೆ ಸಹಾಯಕ ವಾಗುತ್ತಿವೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿನ ಐಟಿಐಗಳು ಅಗತ್ಯ ಮೂಲ ಸೌಕರ್ಯಗಳ ಕೊರತೆ, ಬೋಧಕ ಮತ್ತು ಬೋಧಕೇತರ ಸಿಬಂದಿ ಕೊರತೆ, ವಿದ್ಯಾರ್ಥಿಗಳ ಕಲಿಕೆ ಮತ್ತು ತರಬೇತಿಗೆ ಪೂರಕವಾದ ಯಂತ್ರೋಪಕರಣ, ಸಾಧನ, ಸಲಕರಣೆಗಳ ಅಲಭ್ಯತೆಯಿಂದಾಗಿ ಸೊರಗಿ ಹೋಗಿವೆ. ಇವೆಲ್ಲದರ ಹೊರತಾಗಿಯೂ ಈ ಶಿಕ್ಷಣ ಸಂಸ್ಥೆಗಳಲ್ಲಿ ಸಹಸ್ರಾರು ಮಂದಿ ಕೈಗಾರಿಕ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಇದೇ ವೇಳೆ ಖಾಸಗಿ ಐಟಿಐಗಳು ಗುಣಮಟ್ಟದ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಆದರೆ ಇಲ್ಲಿನ ಶೈಕ್ಷಣಿಕ ವೆಚ್ಚ ಅಧಿಕವಾಗಿರುವುದರಿಂದ ಅದೆಷ್ಟೋ ಬಡ ವಿದ್ಯಾರ್ಥಿಗಳ ಪಾಲಿಗೆ ಐಟಿಐ ಶಿಕ್ಷಣ ಕೈಗೆಟುಕದ ದ್ರಾಕ್ಷಿಯಂತಾಗಿದೆ. ಇವೆಲ್ಲವನ್ನು ಗಮನದಲ್ಲಿರಿಸಿ ಸರಕಾರ ಈಗ ತನ್ನ ಅಧೀನದ ಐಟಿಐಗಳನ್ನು ಸಿಎಸ್‌ಆರ್ ಅಡಿ ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಲು ಮುಂದಾಗಿದೆ. ಐಟಿಐಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಿ ಆ ಬಳಿಕ ಇವುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಮೂಲಕ ಇವುಗಳ ನಿರ್ವಹಣೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಸರಕಾರ ದ್ದಾಗಿದೆ. ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರಕಾರ ಖಾಸಗಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು 150 ಐಟಿಐಗಳನ್ನು ಮೇಲ್ದರ್ಜೆಗೇರಿಸಿತ್ತಲ್ಲದೆ ಕೌಶಲ ಅಭಿವೃದ್ಧಿಗೆ ಒತ್ತು ನೀಡುವ ಮತ್ತು ಬೇಡಿಕೆ ಇರುವ ಹೊಸ ಕೋರ್ಸ್‌ಗಳನ್ನು ಆರಂಭಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದತ್ತು ನೀಡುವ ಚಿಂತನೆ ನಡೆಸಿದೆ. ಸರಕಾರಿ ಐಟಿಐಗಳನ್ನು ದತ್ತು ಪಡೆದ ಖಾಸಗಿ ಕಂಪೆನಿಗಳು ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಅನಿವಾರ್ಯವಾದ ಕೌಶಲಭರಿತ ಯುವಪೀಳಿಗೆ ಯನ್ನು ಸೃಷ್ಟಿಸಲು ಅಗತ್ಯ ಯೋಚನೆ, ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಬೇಕು. ಖಾಸಗಿ ಐಟಿಐಗಳ ಮಾದರಿಯಲ್ಲಿ ಸರಕಾರಿ ಐಟಿಐಗಳ ವಿದ್ಯಾರ್ಥಿ ಗಳನ್ನು ವಿವಿಧ ಖಾಸಗಿ ಕೈಗಾರಿಕೆಗಳು, ಉದ್ದಿಮೆಗಳಿಗೆ ಕರೆದೊಯ್ದು ಅವುಗಳ ಕಾರ್ಯಾಚರಣೆ ವಿಧಾನವನ್ನು ವೀಕ್ಷಿಸಲು, ಶಿಶಿಕ್ಷು ತರಬೇತಿಗೆ ಅನುವು ಮಾಡಿಕೊಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕಾ ಅವಧಿಯಲ್ಲಿಯೇ ತಮ್ಮ ಭವಿಷ್ಯದ ಉದ್ಯೋಗಾವಕಾಶ, ಕಾರ್ಯವಿಧಾನದ ಬಗೆಗೆ ಮಾಹಿತಿ ಲಭಿಸಿದಂತಾಗುತ್ತದೆ. ಇನ್ನು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಆದಿಯಾಗಿ ವಿವಿಧ ಯೋಜನೆಗಳ ಬಗೆಗೆ ಕಲಿಕಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸವಿವರ ಮಾಹಿತಿ ನೀಡುವ ಮೂಲಕ ಐಟಿಐ ವ್ಯಾಸಂಗದ ಬಳಿಕ ಸ್ವತಃ ತಾವೇ ಕಿರು ಅಥವಾ ಸಣ್ಣ ಉದ್ದಿಮೆಗಳ ಸ್ಥಾಪನೆಯತ್ತ ಅವರು ದೃಷ್ಟಿ ಹೊರಳಿಸುವಂತೆ ಮಾಡುವ ನಿಟ್ಟಿನಲ್ಲಿ ಸರಕಾರ ಮತ್ತು ಖಾಸಗಿ ಕಂಪೆನಿಗಳು ಜಂಟಿಯಾಗಿ ಯೋಜನೆ ರೂಪಿಸಬೇಕು. ಇದೇ ವೇಳೆ ಬಡ ವಿದ್ಯಾರ್ಥಿಗಳಿಗೆ ಕೈಗೆಟಕುವ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುವುದನ್ನು ಖಾತರಿಪಡಿಸಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದ್ದು, ತನ್ನ ಶಿಕ್ಷಣ ಸಂಸ್ಥೆಗಳ ಮೇಲಣ ಹಿಡಿತ ಕೈಜಾರದಂತೆ ಎಚ್ಚರ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.