World Chess Championship: ವಿಶ್ವ ಚೆಸ್: ಸತತ 6ನೇ ಪಂದ್ಯ ಡ್ರಾ
ಗುಕೇಶ್-ಲಿರೆನ್ ಸಮಬಲದ ಹೋರಾಟ ಮುಂದುವರಿಕೆ
Team Udayavani, Dec 6, 2024, 1:40 AM IST
ಸಿಂಗಾಪುರ: ಇಲ್ಲಿ ನಡೆಯುತ್ತಿರುವ ಗ್ರ್ಯಾನ್‌ಮಾಸ್ಟರ್‌ಗಳಾದ ಭಾರತದ ಡಿ. ಗುಕೇಶ್ ಮತ್ತು ಚೀನದ ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 9ನೇ ಪಂದ್ಯವೂ ಡ್ರಾಗೊಂಡಿದೆ. ಇಲ್ಲಿಗೆ ಪಂದ್ಯಾವಳಿಯಲ್ಲಿ ಸತತ 6 ಪಂದ್ಯ, ಒಟ್ಟಾರೆ 7 ಪಂದ್ಯಗಳು ಡ್ರಾನೊಂದಿಗೆ ಅಂತ್ಯಗೊಂಡಿದ್ದು, ಗುಕೇಶ್, ಲಿರೆನ್ ಮಧ್ಯೆ ಸಮಬಲದ ಹೋರಾಟ ಮುಂದುವರಿದಿದೆ.
ಗುರುವಾರ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್ ಮತ್ತು ಕಪ್ಪು ಕಾಯಿಯೊಂದಿಗೆ ಆಡಿದ ಡಿಂಗ್ ಲಿರೆನ್ ತಮ್ಮ 54ನೇ ನಡೆಯಲ್ಲಿ ಪಂದ್ಯವನ್ನು ಡ್ರಾಗೊಳಿಸಿಕೊಂಡರು. 14 ಪಂದ್ಯಗಳ ಈ ಸರಣಿಯಲ್ಲಿ ಇನ್ನು 5 ಪಂದ್ಯಗಳಷ್ಟೇ ಬಾಕಿ ಉಳಿದಿವೆ. 14 ಪಂದ್ಯಗಳಲ್ಲಿ ಮೊದಲು 7.5 ಅಂಕ ಗಳಿಸುವವರು ವಿಜೇತರಾಗುತ್ತಾರೆ. ಒಂದು ವೇಳೆ ಕೊನೇ ಪಂದ್ಯದ ಬಳಿಕವೂ ಅಂಕ ಸಮನಾಗಿದ್ದರೆ, ಆಗ ಟೈ ಬ್ರೇಕರ್ ನಡೆಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
23ನೇ ನಡೆಯ ಬಳಿಕ ಪಂದ್ಯ ಡ್ರಾದತ್ತ
ಟೈಮ್ ಕಂಟ್ರೋಲ್ ವಿಭಾಗದಲ್ಲಿ ನಡೆದ ಪಂದ್ಯದ ಆರಂಭಿಕ ಹಂತದಲ್ಲಿ ಗುಕೇಶ್, ಲಿರೆನ್ ಇಬ್ಬರೂ ಒಬ್ಬರಾದ ಮೇಲೊಬ್ಬರು ಆಟವನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು. ಈ ಹಂತದಲ್ಲಿ ಯಾರೂ ಕೂಡ ಗೆಲ್ಲುವ ಸಾಧ್ಯತೆಯಿತ್ತು. ಆದರೆ 23ನೇ ನಡೆಯ ಬಳಿಕ ಪಂದ್ಯದಲ್ಲಿ ಇಬ್ಬರೂ ಸಮಬಲದ ನಿಯಂತ್ರಣ ಸಾಧಿಸಿದರು. ಇಲ್ಲೇ ಪಂದ್ಯ ಡ್ರಾದತ್ತ ಸಾಗಲಾರಂಭಿಸಿತು.