BIMS Hospital: ಬಾಣಂತಿಯರ ಸರಣಿ ಸಾವು: ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ಬಿಜೆಪಿ ದೂರು
ಕೊಲೆಗಡುಕ ಸರಕಾರ ಮಹಿಳೆಯರು, ಮಕ್ಕಳಿಗೆ ಮೊದಲು ಜೀವದ ಗ್ಯಾರಂಟಿ ಕೊಡಲಿ ಎಂದು ಛಾಟಿ ಬೀಸಿದ ವಿಪಕ್ಷ ನಾಯಕ ಆರ್.ಅಶೋಕ್
Team Udayavani, Dec 6, 2024, 5:30 PM IST
ಬೆಂಗಳೂರು: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ (BIMS Hospital) ಬಾಣಂತಿಯರ ಸರಣಿ ಸಾವು, ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಶುಕ್ರವಾರ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಒಳಗೊಂಡ ನಿಯೋಗ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಬಾಣಂತಿಯರ ಸರಣಿ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದೆ.
ದೂರಿನಲ್ಲೇನಿದೆ?
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇತ್ತೀಚೆಗೆ ತಜ್ಞರ ಸಮಿತಿಯೊಂದು ರಚಿಸಿ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ತಿಳಿಸಿತ್ತು. ಅದರಂತೆ ತಜ್ಞರ ಸಮಿತಿಯೂ ಬಾಣಂತಿಯರ ಸಾವಿಗೆ ಐವಿ ಗ್ಲುಕೋಸ್ ಕಾರಣ ಎಂಬ ವರದಿ ಬಹಿರಂಗಗೊಂಡಿತ್ತು.
ಇಷ್ಟಾದರೂ ಬಾಣಂತಿಯರ ಸಾವು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಈ ಪ್ರಕರಣವು ಕಾಂಗ್ರೆಸ್ ಸರ್ಕಾರದ, ವಿಶೇಷವಾಗಿ ಆರೋಗ್ಯ ಸಚಿವಾಲಯದ, ಆರೋಗ್ಯ ರಕ್ಷಣೆಯ ಮೂಲಭೂತ ಮಾನದಂಡಗಳ ಖಾತ್ರಿಪಡಿಸುವಲ್ಲಿ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಘೋರ ನಿರ್ಲಕ್ಷ್ಯ, ಸತ್ಯವನ್ನು ಮರೆಮಾಚಲು ಮುಂದಾಗಿರುವುದು ಖಂಡನೀಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಗುಣಮಟ್ಟದ ಔಷಧಗಳು ರೋಗಿಗಳ ಸುರಕ್ಷತೆಯ ಸಂಪೂರ್ಣ ನಿರ್ಲಕ್ಷ್ಯ ಸೂಚಿಸುತ್ತದೆ ಮತ್ತು ಪ್ರಸ್ತುತ ಆರೋಗ್ಯ ಸಚಿವರ ನಾಯಕತ್ವದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಮತ್ತು ದುರುಪಯೋಗ ಬಹಿರಂಗಪಡಿಸುತ್ತದೆ. ಬಾಣಂತಿಯರ ಸಾವಿಗೆ ಮೂಲ ಕಾರಣಗಳ ತಿಳಿಸುವ ಬದಲು, ಆಸ್ಪತ್ರೆಯ ಆಡಳಿತಗಾರರು, ಅಧಿಕಾರಿಗಳು ಮತ್ತು ಕಾಂಗ್ರೆಸ್ ನಾಯಕರು ಸತ್ಯವನ್ನು ಹತ್ತಿಕ್ಕಲು ಒಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣವನ್ನು ರತ್ನಗಂಬಳಿಯ ಕೆಳಗೆ ತಳ್ಳುವ ಈ ಪಿತೂರಿಯು ಕರ್ನಾಟಕದ ಜನರಿಗೆ ಅಪಮಾನ ಮತ್ತು ಅಧಿಕಾರದ ಅಸ್ಪಷ್ಟ ದುರುಪಯೋಗವಾಗಿದೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.
ಕೊಲೆಗಡುಕ ಕಾಂಗ್ರೆಸ್ ಸರಕಾರ ಮೊದಲು ಜೀವದ ಗ್ಯಾರಂಟಿ ಕೊಡಲಿ: ಆರ್.ಅಶೋಕ್
ಕೊಲೆಗಡುಕ ಕಾಂಗ್ರೆಸ್ ಸರಕಾರದಿಂದ ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಮಹಿಳೆ ಮಗು ಸಾವು ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ನಿಮಗೆ ಮಾನವೀಯತೆ ಇದೆಯಾ? ನಿಮಗೆ ಮನುಷ್ಯತ್ವ ಇದೆಯಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ಕಳಪೆ ಔಷಧಿಯಿಂದ ಮತ್ತೊಬ್ಬ ಬಾಣಂತಿ, ಮಗುವಿನ ಸಾವಾಗಿದೆ. ನೀವು ಮಾಡಿದ ಕಾಟಾಚಾರದ ಸಭೆಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಇಷ್ಟಾದರೂ ತಾವಾಗಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಲಿ ಬಳ್ಳಾರಿಗೆ ಭೇಟಿ ನೀಡಿಲ್ಲ. ನಿಮ್ಮನ್ನ ಕೊಲೆಗಡುಕ ಸರಕಾರ ಅನ್ನದೆ ಇನ್ನೇನು ಅನ್ನಬೇಕು? ಬಡ ಕುಟುಂಬದ ಮಹಿಳೆಯರಿಗೆ, ಮಕ್ಕಳಿಗೆ ಮೊದಲು ಜೀವದ ಗ್ಯಾರಂಟಿ ಕೊಡಿ. ಬದುಕುವ ಭಾಗ್ಯ ಕೊಡಿ. ತಾವು ಬಳ್ಳಾರಿಗೆ ಭೇಟಿ ಕೊಡಲು ಇನ್ನು ಎಷ್ಟು ಮಹಿಳೆಯರು, ಹಸುಗೂಸುಗಳ ಹೆಣ ಬೀಳಬೇಕು? ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.