UG, PG ಶಿಕ್ಷಣ ಸುಧಾರಣೆ: ಅವಸರದ ನಿರ್ಧಾರ ಬೇಡ
Team Udayavani, Dec 7, 2024, 6:20 AM IST
ದೇಶದ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ಕರಡು ಅಧಿಸೂಚನೆಯನ್ನು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಶುಕ್ರವಾರ ಬಿಡುಗಡೆ ಮಾಡಿದೆ. ಯುಜಿ, ಪಿಜಿಗೆ ಸಂಬಂಧಿಸಿದಂತೆ ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ನೀಡಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ, ವಿದ್ಯಾರ್ಥಿಗಳಿಗೆ ಕೋರ್ಸ್‌ವೊಂದರ ಕಲಿಕೆಯ ಮಧ್ಯದಲ್ಲಿ ಕೋರ್ಸ್ ಬದಲಾವಣೆಗೆ ಅವಕಾಶ, ನಿಗದಿತ ಅವಧಿಗೂ ಮುನ್ನವೇ ಪದವಿ ಪೂರ್ಣಗೊಳಿಸಲು ಅವಕಾಶ, ಏಕಕಾಲದಲ್ಲಿ ಎರಡು ಕೋರ್ಸ್ ಕಲಿಕೆಗೆ ಅವಕಾಶ ಇವೇ ಮೊದಲಾದ ಕ್ರಾಂತಿಕಾರಕ ಸುಧಾರಣಾ ಪ್ರಸ್ತಾವಗಳನ್ನು ಈ ಕರಡು ಒಳಗೊಂಡಿದೆ. ಯುಜಿಸಿಯ ಈ ಎಲ್ಲ ಪ್ರಸ್ತಾವನೆಯೂ ಅತ್ಯಂತ ದೂರದೃಷ್ಟಿಯಿಂದ ಕೂಡಿದ್ದು, ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪೈಪೋಟಿಯನ್ನು ಎದುರಿಸಲು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಎಂಬುದರಲ್ಲಿ ಎರಡು ಮಾತಿಲ್ಲ.
ಕೇಂದ್ರ ಸರಕಾರ ಕೆಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಲೇ ಬಂದಿತ್ತು. ಶಿಕ್ಷಣ ವ್ಯವಸ್ಥೆಯನ್ನು ಆದಷ್ಟು ದೇಶೀಯವನ್ನಾಗಿಸುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಜಾರಿಗೆ ತಂದಿತ್ತು. ಈಗ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಮಾರ್ಪಾಡುಗಳನ್ನು ಮಾಡಲು ಯುಜಿಸಿ ಮುಂದಾಗಿದೆ. ಈ ಪ್ರಸ್ತಾವಗಳು ಮೇಲ್ನೋಟಕ್ಕೆ ಅತ್ಯಂತ ಕ್ರಾಂತಿಕಾರಿ ಮತ್ತು ವಿದ್ಯಾರ್ಥಿಸ್ನೇಹಿ ನಡೆಯಾಗಿ ಕಂಡರೂ ದೇಶದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ಈ ಎಲ್ಲ ಸುಧಾರಣ ಕ್ರಮಗಳು ಎಷ್ಟು ಪೂರಕ ಮತ್ತು ವಿದ್ಯಾರ್ಥಿಗಳಿಗೆ ನೆರವಾಗಬಲ್ಲುದು ಎಂಬ ಬಗೆಗೆ ಯುಜಿಸಿ ಆದಿಯಾಗಿ ಇಡೀ ಶೈಕ್ಷಣಿಕ ರಂಗ ಗಂಭೀರ ಚಿಂತನೆ ನಡೆಸಲು ಇದು ಸಕಾಲ.
ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತಾದ ಗೊಂದಲಗಳು ಇಂದಿಗೂ ಮುಂದುವರಿದಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಣೆಗೆ ತೋರಿದ ಆತುರ, ಆಸಕ್ತಿ, ಬದ್ಧತೆಯನ್ನು ಅದರ ಅನುಷ್ಠಾನದಲ್ಲಿ ಸರಕಾರ ತೋರಿಲ್ಲ ಎಂಬುದಂತೂ ಸ್ಪಷ್ಟ. ಈ ಪೂರ್ವ ನಿದರ್ಶನವನ್ನೇ ಮುಂದಿಟ್ಟು ಹೇಳುವುದಾದರೆ ಈ ಯುಜಿಸಿ ಪ್ರಸ್ತಾವಿಸಿರುವ ಹೊಸ ನಿಯಮದ ಜಾರಿಯಲ್ಲಿ ಅವಸರ ಸರ್ವಥಾ ಸಲ್ಲದು.
ಅಂಕ ಗಳಿಕೆಯೊಂದೇ ಮಾನದಂಡವಾಗಿರುವ ದೇಶದ ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂತಹ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೆ ತರುವುದು ಎಷ್ಟು ಸಮಂಜಸ ಎಂಬುದೇ ಸದ್ಯದ ಜಿಜ್ಞಾಸೆ. ದೇಶದ ಬೆರಳೆಣಿಕೆಯ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದಂತೆ ಬಹುತೇಕ ಶಿಕ್ಷಣ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ಇಲ್ಲ. ಇನ್ನು ದೇಶದಲ್ಲಿ ನೀಟ್‌ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ಹಿಂಜರಿದು ಆತ್ಮಹತ್ಯೆ ಹಾದಿ ಹಿಡಿಯುವಂತಹ ಸಂದರ್ಭದಲ್ಲಿ ಇಂತಹ ಕ್ರಾಂತಿಕಾರಕ ಬದಲಾವಣೆಗಳು ವಿದ್ಯಾರ್ಥಿಗಳ ಮೇಲೆ ಯಾವ ತೆರನಾದ ಒತ್ತಡಕ್ಕೆ ಕಾರಣವಾದೀತು ಎಂಬುದೂ ಚಿಂತನೀಯ.
ಈ ಕರಡು ನಿಯಮಾವಳಿಗಳ ಬಗೆಗೆ ಶಿಕ್ಷಣ ತಜ್ಞರು ಸಮಗ್ರ ಅಧ್ಯಯನ ನಡೆಸಿ, ದೇಶದ ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಪೂರಕವಾದ ಮಾರ್ಪಾಡುಗಳನ್ನು ತರಲು ಯುಜಿಸಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ಅಗತ್ಯವಿದೆ. ಈ ವಿಷಯದಲ್ಲಿ ಯುಜಿಸಿ ಇನ್ನಷ್ಟು ಚಿಂತನೆ ನಡೆಸಿ, ದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿ, ಅಗತ್ಯ ಮಾರ್ಪಾಡುಗಳೊಂದಿಗೆ ಸುಧಾರಣ ಕ್ರಮಗಳನ್ನು ಜಾರಿಗೆ ತಂದರೆ ಮಾತ್ರ ಅದರ ನೈಜ ಉದ್ದೇಶ ಈಡೇರಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.