Desi Swara: ಕನ್ನಡ ಭಾಷೆಗೆ ಕನ್ನಡಿಗರು ಮಾತ್ರ ಬಲ…ಕನ್ನಡವೆಂದರೇ ಕೇವಲ ಕಥೆ…
ನಾವು ಓದುವಾಗ ಇಷ್ಟೊಂದು ಮಟ್ಟಿಗೆ ಕಾನ್ವೆಂಟ್‌ಗಳ ಭರಾಟೆ ಇರಲಿಲ್ಲ.
Team Udayavani, Dec 7, 2024, 4:24 PM IST
ಮಾತೃ ಭಾಷೆಯಲ್ಲಿಯೇ ಶಿಕ್ಷಣ ಬೇಕು. ಇದು ಯಾವಾಗಲು ಕನ್ನಡ ಮಾಸವಾದ ನವಂಬರ್‌ನಲ್ಲಿ ಮಾತ್ರ ಕೇಳುವ ಕೂಗು. ಸರಕಾರವನ್ನು ಹಲವು ಧರಣಿ ಹೋರಾಟಗಳ ಮೂಲಕ ಕನ್ನಡವನ್ನು ಪ್ರೀತಿಸುವ ಎಲ್ಲ ಮನಸ್ಸುಗಳು ಕೋರಿಕೊಳ್ಳುತ್ತಿರುತ್ತವೆ. ಈ ಕೂಗು ಪ್ರತಿ ವರುಷವು ಪುನರಾವರ್ತನೆ.
ಇಂದು ಕನ್ನಡದ ಬಗ್ಗೆ ನಮ್ಮ ಕನ್ನಡದ ಮನಗಳಿಗೆ ಎಷ್ಟರ ಮಟ್ಟಿಗೆ ತಾತ್ಸರವುಂಟಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಕನ್ನಡ ಎಂಬುದು ಕೇವಲ ಹಳ್ಳಿಗಾಡಿನ ಜನಗಳಿಗೆ ಸೀಮಿತವಾದದ್ದು, ನೀನು ಏನಾದರೂ ದೊಡ್ಡದೊಡ್ಡ ಹುದ್ದೆ, ಕೆಲಸಗಳನ್ನು ಗಳಿಸಬೇಕೆಂದರೆ, ದೇಶ ವಿದೇಶವನ್ನು ಸುತ್ತಬೇಕೆಂದರೇ ಇಂಗ್ಲಿಷ್‌ನ್ನು ಮಾತ್ರ ಕಲಿ ಎನ್ನುವಂತಾಗಿದೆ.
ನಾವು ಓದುವಾಗ ಇಷ್ಟೊಂದು ಮಟ್ಟಿಗೆ ಕಾನ್ವೆಂಟ್‌ಗಳ ಭರಾಟೆ ಇರಲಿಲ್ಲ. ಇದ್ದರೂ ಅಲ್ಲೊ ಇಲ್ಲೋ ಕಣ್ಣಿಗೆ ವಿರಳವಾಗಿ ಬೀಳುತ್ತಿದ್ದವು. ಕಾನ್ವೆಂಟ್ ಅಂದರೇ ಅದು ಇಂಗ್ಲಿಷ್ ಮಾಧ್ಯಮನ್ನು ಬೋಧಿಸುವ ಶಾಲೆಗಳು ಎಂದು ಕರೆಯುತ್ತಿದ್ದೇವು. ಕನ್ನಡದಲ್ಲಿ ಮಾತನಾಡಿದರೇ ಶಿಕ್ಷೆ ಕೊಡುತ್ತಾರಂತೆ! ಹೀಗೆ ಅಲ್ಲಿ ಇಲ್ಲಿ ಕೇಳಿ ಭಯಪಡುತ್ತಿದ್ದೆವು. ಅಲ್ಲಿ ಓದುವ ಶಾಲೆಯ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ತುಂಬ ಹೊಳೆಯುತ್ತಿದ್ದವು. ಶಿಸ್ತು ಬದ್ಧವಾದ ಶಾಲಾ ಸಮ ವಸ್ತ್ರಗಳನ್ನು ಧರಿಸಿಕೊಂಡು ಹೋಗುತ್ತಿದ್ದುದು ನಮ್ಮ ಚಿಕ್ಕ ಮನಸ್ಸುಗಳಿಗೆ ತುಂಬ ಕುತೂಹಲದ ಆಕರ್ಷಣೆಯಾಗಿ ಕಾಣುತ್ತಿತ್ತು. ನಮ್ಮ ಡ್ರೆಸ್ ನೋಡಿಕೊಂಡು ನಾವೇ ಏನೇನೋ ಯೋಚಿಸುತ್ತಿದ್ದೆವು.
ಸರಕಾರಿ ಶಾಲೆಗಳೆಂದರೇ ಅದು ಬಡವರ ರೈತಾಪಿ ಜನರ ಮಕ್ಕಳಿಗೆ ಮಾತ್ರ ಎಂಬ ನೀತಿ ಹತ್ತು ಇಪ್ಪತ್ತು ವರುಷಗಳ ಹಿಂದೆಯು ಇತ್ತು. ಇಂದು ಸಹ ಇದೆ. ನಗರದಲ್ಲೂ ಸಹ ಅದು ಕೇವಲ ಸ್ಲಂ, ಬಡ ಜನರ, ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ. ಅದರಲ್ಲೂ ಪುನಃ ಹಳ್ಳಿಯಿಂದ ಬಂದಂತವರ ಮಕ್ಕಳಿಗೆನೇ!
ನಮ್ಮ ಕೈಯಿಂದ ಖಾಸಗಿ ಶಾಲೆಗಳಿಗೆ ಕಳಿಸಲು ಸಾಧ್ಯವಿಲ್ಲ ಎಂದು ಅನಿಸಿದರೆ ನೀವು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬಹುದು ಎಂಬ ಅಲಿಖಿತ ಶಾಸನ ಹಿಂದಿನಿಂದಲೂ ರೂಢಿಯಲ್ಲಿದೆ. ಅದರಂತೆ ಹೆತ್ತವರು ತಮ್ಮ-ತಮ್ಮ ಶಕ್ತಿ ಅನುಸಾರ ತಮ್ಮ-ತಮ್ಮ ಕಂದಮ್ಮಗಳನ್ನು ಈ ಶಾಲೆಗಳಿಗೆ ಕಳಿಸುತ್ತಾರೆ. ಹಿಂದೆ ನಮ್ಮ-ನಮ್ಮ ಮನೆಯಲ್ಲಿ ಮಾತ ನಾಡುವ ಭಾಷೆಯಲ್ಲಿಯೇ ನಮ್ಮ ಗುರುಗಳು ನಮಗೆ ಪಾಠವನ್ನು ಹೇಳಿಕೊಡುತ್ತಿದ್ದರು. ಕನ್ನಡದಲ್ಲಿ ಪಾಠ ಮಾಡಿದರೇ ಎಲ್ಲವೂ ಹಿತವೇ ತಾನೇ. ಅವರುಗಳು ಹೇಳುತ್ತಿದ್ದ ವಿಷಯ, ಕಥೆಗಳು, ಗಣಿತ, ವಿಜ್ಞಾನ ಪ್ರತಿಯೊಂದು ಮನನವಾಗುತ್ತಿತ್ತು.
ಆ ಸಮಯಕ್ಕೆ ಇನ್ನೊಂದು ಶಿಕ್ಷಣ ಮಾಧ್ಯಮವು ಸಹ ಇದೆ ಎಂಬ ಅರಿವು ನಮಗೆ ಸಹ ಇರಲಿಲ್ಲ, ನಮ್ಮ ಹೆತ್ತವರಿಗೂ ತಿಳಿದಿರಲಿಲ್ಲ. ಓದುವುದು ಅಂದರೇ ಮನೆಯ ಕೆಲಸ ಕಾರ್ಯ ಬಿಟ್ಟು ಶಾಲೆಗೆ ಹೋಗುವುದು ಎನ್ನುವುದಾಗಿತ್ತು. ಇದರಿಂದ ಏನೂ ಉಪಯೋಗವಾಗುತ್ತದೆ. ಇದರಿಂದ ನಾವುಗಳು ಏನಾದರೂ ಸಾಧಿಸುವುವೆವು ಎಂಬುದು ಸಹ ಗೊತ್ತಿಲ್ಲದಂತಹ ಮುಗ್ಧ ಮನಸ್ಸು ಉಳ್ಳವರಾಗಿದ್ದೆವು.
ನಮ್ಮ ಹೆತ್ತವರು ಸಹ ಹಾಗೆಯೇ. ಫೇಲ್ ಆಗುವವರೆಗೂ ನೀ ಓದು ಮಗಾ ಎಂದು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರೂ.
ನಮ್ಮ ಹಳ್ಳಿಯಲ್ಲಿ ಒಂದು ಮಾತು ಬಲು ಪ್ರಸಿದ್ಧಿಯಾಗಿತ್ತು. ಯಾರಾದರೂ ನಿಮ್ಮ ಮಗಾ ಏನೂ ಮಾಡುತ್ತಿದ್ದಾನೆ? ಎಂದರೇ ಇನ್ನೇನೂ ಶಾಲೆಗೆ ಹೋಗುತ್ತಿದೆ. ಎಸೆಸೆಲ್ಸಿ ವರೆಗೆ ಓದಲಿ ಬಿಡು. ಹೇಂಗೂ ಅದರಲ್ಲಿ ಡುಮುಕ್ಕಿ ಹೊಡೆಯುತ್ತದೆ. ಆಮೇಲೆ ಬ್ಯಾಸಾಯಕ್ಕೆ ಹಾಕಿಕೊಂಡರಾಯಿತು ಎನ್ನುತ್ತಿದ್ದರು. ಓದುವುದು ಅಂದರೇ ಹತ್ತನೇ ತರಗತಿಯವರೆಗೆ ಮಾತ್ರ ಎಂಬುದಾಗಿತ್ತು. ಮನೆಯವರು ಸಹ ಹತ್ತನೇ ತರಗತಿಯವರೆಗೆ ಅದು ಹೇಗೆ ನೀನು ಉತ್ತೀರ್ಣನಾಗಿದ್ದೀಯಾ ಎಂದು ವಿಚಾರಿಸುತ್ತಿರಲಿಲ್ಲ. ಶಾಲೆಗೆ ತಪ್ಪದೇ ಹೋಗುತ್ತಾನಲ್ಲ ಅದಕ್ಕೆ ಪಾಸ್ ಆಗಿದ್ದಾನೆ ಎಂದುಕೊಳ್ಳುತ್ತಿದ್ದರು.
ಆದರೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಈ ಮಾನದಂಡವನ್ನು ಯಾರೂ ಉಪಯೋಗಿಸುತ್ತಾರೆ? ಇದರಿಂದ ಧಾರಾಳವಾಗಿ ಸಾಮಾನ್ಯ ವಿದ್ಯಾರ್ಥಿಗಳು ಒಂದು, ಎರಡು, ಮೂರು ವಿಷಯಗಳಲ್ಲಿ ಫೇಲ್ ಆಗುತ್ತಿದ್ದರೂ. ಉಪಪರೀಕ್ಷೆಗಳನ್ನು ತೆಗೆದುಕೊಂಡು ಪಾಸು ಮಾಡುವವರು ಮಾಡುತ್ತಿದ್ದರು. ಮಿಕ್ಕಿದವರು ವಿದ್ಯೆಗೆ ಒಂದು ದೊಡ್ಡ ನಮಸ್ಕಾರವನ್ನು ಹಾಕಿ ಕೃಷಿ ಆರಂಭ ಮಾಡಲು ತೊಡಗುತ್ತಿದ್ದರು. ಪ್ರಳಯಾಂತಕ, ಜಾಣ, ಚುರುಕು ವಿದ್ಯಾರ್ಥಿಗಳು ಮಾತ್ರ ಪಾಸಾಗಿ ಮುಂದೆ ಓದಲು ಪಟ್ಟಣದ ಕಡೆ ಹೆಜ್ಜೆ ಹಾಕುತ್ತಿದ್ದರು.
ಆದರೇ ಇಂದಿನ ಯುಗದಲ್ಲಿ ನಮ್ಮ ಪ್ರತಿಯೊಂದು ಚಿಕ್ಕ ಹುಡುಗನಿಗೂ ಓದಿನ ಗುರಿ ಗೊತ್ತು ಶಿಕ್ಷಣ ಅಂದರೇ ಏನು? ತಾನು ಏಕೆ ಓದಬೇಕು? ಎಷ್ಟು ಅಂಕ ಪಡೆದರೇ ಎಲ್ಲಿ ಸೀಟ್ ಸಿಗುವುದು? ಯಾವ ಕಾಲೇಜಿನಲ್ಲಿ ಓದಿದರೇ ಯಾವ ಯಾವ ಕೆಲಸಗಳು ಸಿಗುವುದು? ಇತ್ಯಾದಿ ವಿಷಯಗಳನ್ನು ಅವರು ಎಷ್ಟರ ಮಟ್ಟಿಗೆ ಮನನ ಮಾಡಿರುತ್ತಾರೆ ಎಂದರೇ…? ಕೇಳುವುದೇ ಬೇಡಬಿಡಿ.
ಇಂದು ಹೆತ್ತವರಿಗೆ ಮಕ್ಕಳು ಓದುತ್ತಿದ್ದಾರೆಂದರೆ ಏನೋ ಒಂದು ಯುದ್ಧಕ್ಕೆ ಸಿದ್ಧತೆಗೊಳ್ಳುತ್ತಿದ್ದಾರೆ ಎಂಬ ಅನುಭವ. ಅಷ್ಟರ ಮಟ್ಟಿಗೆ ಪ್ರತಿಯೊಂದು ಕುಟುಂಬವು ಶಿಕ್ಷಣದ ಮಹತ್ವವನ್ನು ಕಂಡುಕೊಂಡಿದೆ. ಇಂದು ಹಳ್ಳಿಗಾಡಿನ ಮಕ್ಕಳು ಸಹ ಹತ್ತು ಇಪ್ಪತ್ತು ಕಿಲೊ ಮೀಟರ್ ದೂರದ ಕಾನ್ವೆಂಟ್‌ಗಳಿಗೆ ಬಂದು ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಬಾಯಿಬಿಟ್ಟರೇ ಮಮ್ಮಿ, ಡ್ಯಾಡಿ, ಆಂಟಿ, ಅಂಕಲ್ ಮುಂತಾದ ಇಂಗ್ಲಿಷ್ ಪದಪುಂಜಗಳು ಚಿಕ್ಕ-ಚಿಕ್ಕ ಬಾಯಿಂದ ಪುಂಕಾನುಪುಂಕವಾಗಿ ಹೊರ ಬರುತ್ತಿವೆ. ಅಷ್ಟರ ಮಟ್ಟಿಗೆ ಇಂಗ್ಲಿಷ್ ನಮ್ಮನಮ್ಮ ಮನೆಗಳ ಮನದಲ್ಲಿ ಹಾಸು ಹೊಕ್ಕಾಗಿದೆ.
ಗಮನಿಸಿ. ಇಂದು ಯಾವುದೇ ಒಂದು ಕೆಲಸವನ್ನು ದೊರಕಿಸಿಕೊಳ್ಳಬೇಕೆಂದರೇ ಅದು ವಿಪರೀತ ಕಷ್ಟ. ಹತ್ತು ಹಲವಾರು ಟೆಸ್ಟ್‌ಗಳು. ಅದಕ್ಕಾಗಿ ವಿವಿಧ ರೀತಿಯಲ್ಲಿ ನಾವುಗಳು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ದೊಡ್ಡದೊಡ್ಡ ಓದನ್ನು ಓದಬೇಕೆಂದರೇ ಇಂಗ್ಲಿಷ್ ಬೇಕೇ ಬೇಕು. ಕನ್ನಡದಲ್ಲಿ ಮಾತ್ರ ಓದಿ ಏನಾದರೂ ಸಾಧಿಸಿದವರು ಇದ್ದಾರೆಯೇ ತೋರಿಸಿ ಎಂದು ಮಕ್ಕಳುಗಳು ಹಿರಿಯರನ್ನು ಪ್ರಶ್ನೆ ಮಾಡುತ್ತಾರೆ. ಸಾಧಿಸಿರುವವರು ಇದ್ದಾರೆ ಆದರೆ ಅಷ್ಟು ಸುಲಭವಾಗಿ ಎಲ್ಲರಿಗು ಅದು ಹೇಗೆ ತಿಳಿಯಬೇಕು ಮತ್ತು ತಿಳಿಸುವವರು ಯಾರು ನೀವೇ ಹೇಳಿ!
ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಅರಿಯಬೇಕು ಎಂದರೇ ಅದೇ ಇಂಗ್ಲಿಷ್ ಪುಸ್ತಕಗಳ ಮೊರೆ ಹೋಗಬೇಕು.
ಉನ್ನತ ಶಿಕ್ಷಣವನ್ನು ನೀಡುವ ಎಲ್ಲ ಕರ್ನಾಟಕದ ವಿಶ್ವವಿದ್ಯಾನಿಲಯಗಳು ದೊಡ್ಡ ವಿಷಯಗಳನ್ನು ಇಂಗ್ಲಿಷ್‌ನಲ್ಲಿಯೇ ಕೊಡುವುದು. ಪುಸ್ತಕಗಳು ಸಹ ಕನ್ನಡದಲ್ಲಿ ದೊರೆಯುವುದಿಲ್ಲ. ಪರೀಕ್ಷೆಗಳು ಸಹ ಕನ್ನಡ ಮಾಧ್ಯಮದಲ್ಲಿ ಇರುವುದಿಲ್ಲ. ಕನ್ನಡದಲ್ಲಿ ಅಭ್ಯಾಸ ಮಾಡಬೇಕೆಂದು ಬರುವ ಕನ್ನಡದ ಮನಗಳಿಗೆ ಹೆಜ್ಜೆಹೆಜ್ಜೆಗೂ ಇಂಗ್ಲಿಷ್ ಕಾಡುತ್ತದೆ. ಇದರಿಂದ ತಮ್ಮ ವ್ಯಕ್ತಿತ್ವದಲ್ಲಿಯೇ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿ ಕೀಳರಿಮೆ ಬೆಳೆಸಿಕೊಳ್ಳುತ್ತಾ ತಾವೆ ಕೊರಗುವುಂತಾಗಿದೆ.
ಈ ಎಲ್ಲ ಕಾರಣಗಳನ್ನು ನಮ್ಮ ಸರಕಾರ ಮತ್ತು ಹಿರಿಕಿರಿ ಹೋರಾಟಗಾರರು ನೋಡುತ್ತಿದ್ದಾರೆಯೇ? ಇದನ್ನು ಬದಲಾಯಿಸುವ ಕಡೆ ಇವರು ಏಕೆ ಮನಸ್ಸು ಮಾಡಬಾರದು.
ಕನ್ನಡ ಮಾಧ್ಯಮದಲ್ಲಿ ಓದಿದರೂ ಸಹ ಏನಾದರೂ ಸಾಧಿಸಬಹುದು. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾವಂತನಿಗೂ ಸಹ ಸುಲಭವಾಗಿ ಕೆಲಸಗಳು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಿಗುವುವು ಎಂಬ ಭರವಸೆಯ ಬೆಳಕನ್ನು ಶಾಸನವನ್ನು ರೂಪಿಸುವವರು ಕೊಡಬೇಕು. ಅದು ಬಿಟ್ಟು ಕೇವಲ ಅಭಿಮಾನಕ್ಕೋಸ್ಕರ ಕನ್ನಡದಲ್ಲಿಯೇ ಓದಿ ಎಂದರೇ ಯಾರೂ ಕೇಳುತ್ತಾರೆ?
ಯಾಕೆಂದರೇ ಬೆಳೆದು ದೊಡ್ಡವರಾದ ಮೇಲೆ ಕೆಲಸ ಮಾಡಲೇಬೇಕು ಅಲ್ಲವಾ? ಬೆಂಗಳೂರಿನಂತಹ ನಗರದಲ್ಲಿ ಒಂದು ಚಿಕ್ಕ ಕೆಲಸವನ್ನು ಗಿಟ್ಟಿಸಲು ಸಹ ಇಂಗ್ಲಿಷ್ ಮಾತನ್ನಾಡಬೇಕಾದಂತಹ ವ್ಯವಸ್ಥೆಯನ್ನು ನಿರ್ಮಿಸಿರುವುದಾದರೂ ಯಾರೂ?
ಇದು ಮೊದಲು ಸರಿಯಾದರೇ ಈ ರೀತಿಯ ಧರಣಿ, ಹೋರಾಟಗಳಿಲ್ಲದೇ ಕನ್ನಡ ಜನಗಳು ಕನ್ನಡದ ಬಗ್ಗೆ ಇಟ್ಟುಕೊಂಡಿರುವ ಅಂತರಂಗದ ಅಭಿಮಾನವನ್ನು ತಾವು ಮಾಡುವ ಸಂಸ್ಥೆಯಲ್ಲಿ, ಕೆಲಸಗಳಲ್ಲೂ ಮತ್ತು ಎಲ್ಲ ರಂಗದಲ್ಲೂ ಕೆಂಪು ಹಳದಿ ಪತಾಕೆಯನ್ನು ಆರಿಸುವವರು.
ಗಮನಿಸಿ ಮತ್ತು ಮನನ ಮಾಡಿಕೊಳ್ಳಿ ಕನ್ನಡಕ್ಕೆ ಕನ್ನಡಿಗರೇ ಬಲ!
ಕನ್ನಡದ ಜನರು ಮಾತ್ರ ಕನ್ನಡವನ್ನು ಕಲಿಯುವತ್ತಾ ಅಸಕ್ತಿ ಹೊಂದಿರುವವರು. ಪರ ರಾಜ್ಯದವರೂ ಯಾಕೆ ಈ ಭಾಷೆಯನ್ನು ಕಲಿಯುತ್ತಾರೆ? ಕನ್ನಡವೆಂದರೇ ಕೇವಲ ಕಥೆ, ಕಾದಂಬರಿ, ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಬಾರದು. ಅದರ ಬಲಿಷ್ಟತೆಯನ್ನು ಜಗತ್ತಿಗೆ ತೋರಿಸುವಂತೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಅದರ ಕಡೆ ಗಮನ ಹರಿಸಬೇಕು ಅಷ್ಟೇ!!
*ತಿಪ್ಪೇರುದ್ರಪ್ಪ ಎಚ್.ಈ., ಡೇಟನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.