U19 Men’s Asia Cup Final : ಇಂದು ಭಾರತ-ಬಾಂಗ್ಲಾ ಫೈನಲ್
Team Udayavani, Dec 8, 2024, 7:20 AM IST
ದುಬೈ: ದಾಖಲೆ 8 ಬಾರಿಯ ಚಾಂಪಿಯನ್ ಭಾರತ ಹಾಗೂ ಹಾಲಿ ಚಾಂಪಿಯನ್ ಖ್ಯಾತಿಯ ಬಾಂಗ್ಲಾದೇಶ ಭಾನುವಾರ ಅ-19 ಏಷ್ಯಾ ಕಪ್ ಕ್ರಿಕೆಟ್ ಪ್ರಶಸ್ತಿ ಸಮರದಲ್ಲಿ ಮುಖಾಮುಖಿ ಆಗಲಿವೆ.
ಈವರೆಗಿನ ಪಂದ್ಯಗಳ ಅವಲೋಕನದಂತೆ ಭಾರತದ ಬ್ಯಾಟಿಂಗ್ ಹಾಗೂ ಬಾಂಗ್ಲಾದ ಬೌಲಿಂಗ್ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು. ಇಲ್ಲೊಂದು ಪ್ರತೀಕಾರದ ಲೆಕ್ಕಾಚಾರವೂ ಇದೆ. 2023ರ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕವೇ ಬಾಂಗ್ಲಾದೇಶ ಫೈನಲ್‌ಗೆ ಲಗ್ಗೆ ಇರಿಸಿತ್ತು. ಅಲ್ಲಿ ಯುಎಇಯನ್ನು 195 ರನ್ನುಗಳಿಂದ ಬಗ್ಗುಬಡಿದು ಮೊದಲ ಸಲ ಚಾಂಪಿಯನ್ ಆಗಿತ್ತು. ಅಂದಿನ ಸೆಮಿಫೈನಲ್ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳಬೇಕಿದೆ.
ಮ್ಹಾತ್ರೆ, ಸೂರ್ಯವಂಶಿ ಸ್ಟಾರ್:
ಭಾರತದ ಬ್ಯಾಟಿಂಗ್ ಆರಂಭಿಕರಿಬ್ಬರ ಅಮೋಘ ಆಟದಿಂದ ಯಶಸ್ಸಿನ ಪಥ ಹಿಡಿದಿದೆ. ಆಯುಷ್ ಮ್ಹಾತ್ರೆ 175 ರನ್, 13ರ ಹರೆಯದ ವೈಭವ್ ಸೂರ್ಯವಂಶಿ 167 ರನ್ ಪೇರಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಅದರಲ್ಲೂ ಸೂರ್ಯವಂಶಿ ಅವರ ಸಿಡಿಲಬ್ಬರದ ಆಟ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ನಾಯಕ ಮೊಹಮ್ಮದ್ ಅಮಾನ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಬಾಂಗ್ಲಾದೇಶ ತನ್ನ ಬೌಲರ್‌ಗಳನ್ನು ಹೆಚ್ಚು ನಂಬಿಕೊಂಡಿದೆ. ಮೊಹಮ್ಮದ್ ಅಲ್ ಫಹಾದ್ ಮತ್ತು ಮೊಹಮ್ಮದ್ ಇಕ್ಬಾಲ್ ಹಸನ್ ಎಮೊನ್ ತಲಾ 10 ವಿಕೆಟ್ ಹಾರಿಸಿದ್ದಾರೆ.
ಎರಡೂ ತಂಡಗಳು ಸ್ಥಿರ ಪ್ರದರ್ಶನದೊಂದಿಗೆ ಗಮನ ಸೆಳೆದಿವೆ. ಲೀಗ್ ಹಂತದಲ್ಲಿ ಒಂದನ್ನು ಸೋತು, ಎರಡನ್ನು ಗೆದ್ದಿವೆ. ಭಾರತ ತನ್ನ ಆರಂಭಿಕ ಪಂದ್ಯದಲ್ಲೇ ಪಾಕಿಸ್ಥಾನ ವಿರುದ್ಧ ಎಡವಿ ಸೋಲಿನ ಆರಂಭ ಕಂಡುಕೊಂಡು ಮತ್ತೆ ಚೇತರಿಸಿಕೊಂಡಿತು. ಬಾಂಗ್ಲಾದೇಶದ ಏಕೈಕ ಸೋಲು ಶ್ರೀಲಂಕಾ ವಿರುದ್ಧ ಎದುರಾಗಿತ್ತು.
ಸ್ವಾರಸ್ಯವೆಂದರೆ, ಪಾಕಿಸ್ಥಾನ ಮತ್ತು ಶ್ರೀಲಂಕಾ ಲೀಗ್ ಹಂತದ ಅಜೇಯ ತಂಡಗಳಾಗಿದ್ದವು. ಆದರೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದವು. ಭಾರತವನ್ನು ಮಣಿಸಿದ ಪಾಕಿಸ್ಥಾನವನ್ನು ಬಾಂಗ್ಲಾದೇಶ ಹೊರದಬ್ಬಿದರೆ, ಬಾಂಗ್ಲಾದೇಶವನ್ನು ಸೋಲಿಸಿದ ಶ್ರೀಲಂಕಾವನ್ನು ಭಾರತ ಹೊರಗಟ್ಟಿತು. ಸಹಜವಾಗಿಯೇ ಫೈನಲ್ ಹಣಾಹಣಿ ಕುತೂಹಲ ಮೂಡಿಸಿದೆ.
ಪಂದ್ಯಾರಂಭ: ಬೆಳಗ್ಗೆ 10.30, ಪ್ರಸಾರ: ಸೋನಿ ಸ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.