Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ
Team Udayavani, Dec 8, 2024, 11:48 AM IST
ಬುದ್ಧನ ಉಪನ್ಯಾಸ ನಡೆಯುತ್ತಿದ್ದ ಸ್ಥಳಕ್ಕೆ ರೈತನೋರ್ವ ಅಳುತ್ತ ಬಂದ. “ಗುರುಗಳೇ, ನನ್ನ ಹಸು ಕಳೆದುಹೋಯಿತು. ಹಸು ಇಲ್ಲದೇ ನನ್ನ ಬದುಕೇ ಸರ್ವನಾಶವಾಯಿತು’ ಎಂದೆಲ್ಲ ಗೋಳಾಡಿದ. ಮತ್ತಷ್ಟು ಅತ್ತು ಸಮಾಧಾನ ಮಾಡಿಕೊಂಡ.
ಅವನು ಹೇಳುವುದನ್ನೆಲ್ಲ ಶಾಂತವಾಗಿ ಕೇಳಿದ ಬುದ್ಧ, “ನೀನೀಗ ನನ್ನ ಹತ್ತಿರ ಸಂಕಟ ಹೇಳಿಕೊಂಡೆಯಲ್ಲ, ನಿನ್ನ ನೋವು ಕಡಿಮೆಯಾಯಿತೇ?’ ಅದಕ್ಕೆ ರೈತನಿಗೆ ಏನು ಹೇಳಬೇಕೆಂದು ತೋಚದೇ ತಲೆದೂಗಿದ. ಆಗ ಬುದ್ಧ, “ನೋಡು, ನಾವೆಲ್ಲ ನಮಗೆ ಪ್ರಿಯವಾದ ವಸ್ತುಗಳನ್ನು ಕಳೆದುಕೊಳ್ಳುತ್ತಿರುತ್ತೇವೆ. ನೋವು ಉಂಟಾಗುವುದು ಕಳೆದುಕೊಳ್ಳುವಿಕೆಯಿಂದಲ್ಲ. ನಾವು ಆ ವಸ್ತುವನ್ನು ಅತಿಯಾಗಿ ಹಚ್ಚಿಕೊಂಡಿರುವುದರಿಂದ. ಹಸುವಿನೊಂದಿಗಿನ ನಿನ್ನ ಭಾವನಾತ್ಮಕ ಬಾಂಧವ್ಯ ನಿನ್ನನ್ನು ನೋವಿಗೆ ದೂಡಿದೆ. ಹಸು ಕಳೆದುಹೋದ ನೋವಿಗಿಂತಲೂ ಹಸುವಿಲ್ಲದೇ ಇರಲಾಗದು ಎಂಬ ನಿನ್ನ ನಂಬಿಕೆ ನಿನಗೆ ಜಾಸ್ತಿ ನೋವನ್ನು ಕೊಡುತ್ತಿದೆ. ಯೋಚನೆ ಮಾಡು’ ಎಂದ. ರೈತ ಯೋಚಿಸಿದ… ನಂತರ ಸಮಾಧಾನ ಮಾಡಿಕೊಂಡು ಹೇಗಾದರೂ ಒಂದು ವ್ಯವಸ್ಥೆ ಮಾಡಿಕೊಂಡು ಜೀವನ ಮಾಡುತ್ತೇನೆಂದು ಹೇಳಿ ಹೋದ.
ನೀತಿ: ಬದುಕಿನುದ್ದಕ್ಕೂ ನಾವು ಒಂದಲ್ಲ ಒಂದು ಸಂಗತಿಯನ್ನು ಬಿಟ್ಟು ಕೊಡುತ್ತಲೇ ಇರಬೇಕಾಗುತ್ತದೆ. ನಮ್ಮದೆಂದು ನಾವು ಅಂದುಕೊಂಡಿದ್ದ ವಸ್ತುಗಳು ನಾಶವಾಗುತ್ತವೆ, ಕಳೆದುಹೋಗುತ್ತವೆ. ನಮ್ಮವರೆಂದು ನಾವು ಅಂದುಕೊಂಡಿದ್ದ ವ್ಯಕ್ತಿಗಳು ಬದಲಾಗುತ್ತಾರೆ. ಹಾಗಾಗಿ ನಮ್ಮದಾಗಿ ಉಳಿಯದ ಸಂಗತಿಗಳನ್ನು ಬಿಟ್ಟುಕೊಡುತ್ತ ಹೋಗುವುದೇ ಜಾಣತನ, ಕಷ್ಟವಾದರೂ ಅದೇ ಯೋಗ್ಯ ದಾರಿ.
***
ನಿಜವಾದ ಸಂಪತ್ತೆಂದರೆ ತೃಪ್ತಿ!
ಒಮ್ಮೆ ಭಾರೀ ಶ್ರೀಮಂತನೊಬ್ಬ ಬುದ್ಧನನ್ನು ನೋಡಲು ಬಂದ. ಆತ ಕಡು ಲೋಭಿ. ಅವನು ಬಂದದ್ದೇಕೆಂದರೆ ಮತ್ತೂ ಹೆಚ್ಚು ಹಣ ಸಂಪಾದನೆ ಮಾಡುವುದು ಹೇಗೆಂದು ಬುದ್ಧನನ್ನು ಕೇಳಲು… ಅದನ್ನೇ ಕೇಳಿದ ಕೂಡ. ಬುದ್ಧ ಅವನನ್ನು ಸ್ವಾಗತಿಸಿ, ಸರಳ ಪ್ರಶ್ನೆಯೊಂದನ್ನು ಕೇಳಿದ. “ಈಗ ಯಾರಾದರೂ ಒಬ್ಬ ಮನುಷ್ಯನಿಗೆ ಬಾಣ ನಾಟಿದರೆ ಅವನೇನು ಮಾಡಬೇಕು?’
ಅದಕ್ಕೆ ಶ್ರೀಮಂತ, “ತಕ್ಷಣ ಅದನ್ನು ಕಿತ್ತು ಹಾಕಬೇಕು’ ಎಂದ. ಆಗ ಬುದ್ಧ ಕೇಳಿದ, “ಅದರ ಬದಲು ಆತ ಆ ಬಾಣವನ್ನು ಮಾಡಿದವರು ಯಾರು, ಯಾವ ಮರದಿಂದ ಮಾಡಿದ ಬಾಣ ಅಥವಾ ನನಗೇ ಏಕೆ ಬಾಣ ತಾಗಿತು ಎಂದೆಲ್ಲ ಯೋಚನೆ ಮಾಡಿ ನಂತರ ಬಾಣವನ್ನು ತೆಗೆದರೆ?’
“ಅದು ಮೂರ್ಖತನ, ಅವನ ಕಥೆ ಮುಗಿದಂತೆಯೇ’ ಉತ್ತರ ತಕ್ಷಣವೇ ಬಂತು ಶ್ರೀಮಂತನಿಂದ. ಹೌದೆಂದು ತಲೆದೂಗಿದ ಬುದ್ಧನೆಂದ: “ನೋಡೂ, ನೀನೂ ಅದನ್ನೇ ಮಾಡುತ್ತಿದ್ದೀಯಾ, ನಿನ್ನ ಮನಸ್ಸನ್ನು ದುರಾಸೆಯೆಂಬ ಬಾಣ ಹೊಕ್ಕಿದೆ. ಸುಮ್ಮನೆ ಅದನ್ನು ತೆಗೆದು, ಎಸೆಯುವುದನ್ನು ಬಿಟ್ಟು ನೀನು ಇನ್ನೂ ಹೆಚ್ಚು ಸಂಪಾದನೆ ಮಾಡಲು ಹೊರಟಿದ್ದೀಯಾ. ದುರಾಸೆಯಿಂದ ಕೂಡಿದ ಮನಸ್ಸನ್ನು ಯಾವ ಸಂಪತ್ತೂ ತೃಪ್ತಗೊಳಿಸಲು ಸಾಧ್ಯವೇ ಇಲ್ಲ. ನಿಜವಾದ ಸಂಪತ್ತೆಂದರೆ ತೃಪ್ತಿ.’
ಶ್ರೀಮಂತನಿಗೆ ಅರ್ಥವಾಯಿತು. ಆತ ಲೋಭವನ್ನು ಬಿಟ್ಟು ಪರೋಪಕಾರಿಯಾಗಿ ಬದುಕತೊಡಗಿದ.
***
ಮನಸ್ಸೆಂಬ ಪಾಳುಬಿದ್ದ ಭೂಮಿ:
ಒಂದು ದಿನ ಬುದ್ಧ ಮತ್ತವನ ಅನುಯಾಯಿಗಳು ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದರು. ಪಾಳುಬಿದ್ದ ಭೂಮಿಯೊಂದರ ಬದಿಯ ದಾರಿಯಲ್ಲಿ ಹಾದು ಹೋಗುತ್ತಿದ್ದರು. ಆಗ ರೈತನೊಬ್ಬ ಬಂದು ಬುದ್ಧನಲ್ಲಿ ಗೋಳು ತೋಡಿಕೊಂಡ. “ಸ್ವಾಮಿ, ನಾನೆಷ್ಟು ಕಷ್ಟ ಪಡುತ್ತೇನೆ. ಆದರೆ, ಈ ಭೂಮಿ ಏನನ್ನೂ ಬೆಳೆಯುತ್ತಿಲ್ಲವೇಕೆ ?’ ಎಂದು ಕಣ್ಣೀರಿಟ್ಟ. ಆಗ ಬುದ್ಧ ಭೂಮಿಯನ್ನೆಲ್ಲ ಒಮ್ಮೆ ಗಮನಿಸಿ ನೋಡಿ, “ಈ ಭೂಮಿಯ ಮಣ್ಣು ಚೆನ್ನಾಗಿಯೇ ಇದೆ. ಆದರೆ, ಮೇಲೆ ತುಂಬಿಕೊಂಡಿರುವ ಕಲ್ಲು ಮುಳ್ಳುಗಳ ಭಾರದಿಂದ ಬಂಜರಾಗಿದೆ. ಬೀಜ ಬಿತ್ತುವ ಮೊದಲು ನೀನು ಈ ಕಲ್ಲು ಮುಳ್ಳುಗಳನ್ನೆಲ್ಲ ಸ್ವತ್ಛ ಮಾಡು. ಇಲ್ಲವಾದರೆ ಎಷ್ಟು ಶ್ರಮ ಹಾಕಿದರೂ ಅದು ವ್ಯರ್ಥವೇ’ ಎಂದ.
ಆಮೇಲೆ ಬುದ್ಧ ಶಿಷ್ಯರಿಗೆ ಹೇಳಿದ: ನಮ್ಮ ಮನಸ್ಸೆನ್ನುವುದೂ ಆ ಪಾಳುಬಿದ್ದ ಭೂಮಿಯಂತೆ. ಅಜ್ಞಾನ, ದುರಾಸೆ, ಸಿಟ್ಟು ಮುಂತಾದ ಕಲ್ಲು ಮುಳ್ಳುಗಳು ಅಲ್ಲಿ ಹರಡಿವೆ. ಅವನ್ನು ತೆಗೆದು ಹಾಕಿದರೆ ಮಾತ್ರ ಪ್ರೀತಿ, ಕರುಣೆ, ಸಹಾನುಭೂತಿಯಂತಹ ಬೆಳೆಗಳು ಬೆಳೆಯಲು ಸಾಧ್ಯ. ಪ್ರತಿದಿನವೂ ನಮ್ಮ ಮನಸ್ಸಿನ ಈ ಕಳೆಯನ್ನು ತೆಗೆದುಹಾಕುವ ಕೆಲಸ ಸಾಗುತ್ತಲಿರಬೇಕು. ಅಂದಾಗ ಮಾತ್ರ ನೆಮ್ಮದಿ ಸಾಧ್ಯ.
***
ಮಿತಿಗಳನ್ನು ಮೀರಿ ಬಾಳಬೇಕು…
ಒಂದು ದಿನ ಬುದ್ಧ ಮತ್ತು ಅವನ ಶಿಷ್ಯರು ನಡೆದುಕೊಂಡು ಹೋಗುತ್ತಿರುವಾಗ, ಒಂದೆಡೆ ಸಣ್ಣ ಹಗ್ಗದಲ್ಲಿ ಕಟ್ಟಿರುವ ಆನೆಯನ್ನು ನೋಡಿದರು. ಶಿಷ್ಯರಿಗೆ ಅಚ್ಚರಿಯಾಯಿತು! “ಗುರುಗಳೇ, ಇಂಥ ಬಲವಾದ ಆನೆಗೆ ಆ ಹಗ್ಗವೊಂದು ಲೆಕ್ಕವೇ? ಯಾಕೆ ಅದು ತಪ್ಪಿಸಿಕೊಂಡು ಹೋಗುತ್ತಿಲ್ಲ?’ ಎಂದು ಕೇಳಿದರು. “ನೋಡಿ, ಮರಿಯಾಗಿದ್ದಾಗ ಇದನ್ನು ಹಗ್ಗದಿಂದ ಕಟ್ಟಿದ್ದರು. ಆಗ ಆನೆ ಪುಟ್ಟದಿದ್ದ ಕಾರಣ ಎಷ್ಟು ಪ್ರಯತ್ನಿಸಿದರೂ ಬಿಡಿಸಿಕೊಳ್ಳಲು ಆಗಿರಲಿಲ್ಲ. ಹಾಗಾಗಿ ಈ ಹಗ್ಗವನ್ನು ತುಂಡರಿಸುವುದು ತನ್ನಿಂದಾಗದು ಎಂದು ಆನೆ ತಿಳಿದುಕೊಂಡುಬಿಟ್ಟಿದೆ. ಅದು ತನ್ನ ಮಿತಿಯನ್ನು ತಾನೇ ನಿರ್ಧರಿಸಿಕೊಂಡುಬಿಟ್ಟಿದೆ. ಅದೇ ರೀತಿ ನಾವೆಲ್ಲ ಕಾಣದ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇವೆ. ಹಳೆಯ ಕಾಲದ ನಂಬಿಕೆಗಳನ್ನು ಪ್ರಶ್ನಿಸಲು ಅಂಜುತ್ತೇವೆ. ಈ ಎಲ್ಲೆಗಳನ್ನು ಮೀರಿದಾಗಲೇ ನಿಜವಾದ ಸ್ವಾತಂತ್ರ್ಯ ಲಭಿಸುವುದು…’ ಎಂದ ಬುದ್ಧ.
ನೀತಿ: ಎಷ್ಟೋ ಸಲ ನಿಜವಾದ ಸಮಸ್ಯೆಗಳಿಗಿಂತ ನಾವು ಹೇರಿಕೊಂಡ ಮಿತಿಗಳೇ ನಮ್ಮನ್ನು ಹೊಸ ಸಾಹಸ ಮಾಡದಂತೆ ತಡೆಯುತ್ತವೆ. ನಮ್ಮ ನಂಬಿಕೆ, ವಿಚಾರಗಳನ್ನು ದಿಟ್ಟತನದಿಂದ ವಿಮರ್ಶಿಸಿಕೊಳ್ಳಬೇಕು. ಆಗ ಮಾತ್ರ ನಾವೇ ನಿರ್ಮಿಸಿಕೊಂಡ ಸಂಕೋಲೆಗಳಿಂದ ಬಿಡುಗಡೆ ಸಾಧ್ಯ.
-ದೀಪಾ ಹಿರೇಗುತ್ತಿ, ಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.