Year Ender: ಮಾಸಿದ ಬದುಕಿನ ಬಣ್ಣ.. ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡದ ಕಲಾವಿದರಿವರು..
ನೂರಾರು ಚಿತ್ರಗಳು ಪ್ರತಿ ವರ್ಷದಂತೆ ಈ ವರ್ಷವೂ ಬಂದು ಹೋಗಿವೆ...
ಸುಹಾನ್ ಶೇಕ್, Dec 9, 2024, 3:00 PM IST
2024 ಕನ್ನಡ ಚಿತ್ರರಂಗಕ್ಕೆ (Sandalwood) ಹೇಳಿಕೊಳ್ಳುವಷ್ಟು ಉತ್ತಮವಾದ ವರ್ಷವೇನಲ್ಲ. ಸಿನಿಮಾಗಳ ವಿಚಾರಕ್ಕೆ ಬಂದರೆ ನೂರಾರು ಚಿತ್ರಗಳು ಪ್ರತಿ ವರ್ಷದಂತೆ ಈ ವರ್ಷವೂ ಬಂದು ಹೋಗಿವೆ. ಈ ಪೈಕಿ ಮನಸ್ಸಿನಲ್ಲಿ ನೆನಪಾಗಿ ಉಳಿಯುವಂತಹ ಸಿನಿಮಾಗಳ ಸಂಖ್ಯೆ ಕಡಿಮೆ ಎಂದರೆ ತಪ್ಪಾಗದು.
ಅದರ ಜತೆಗೆ ಚಂದನವನ ಈ ವರ್ಷ ಅನೇಕ ಕಲಾವಿದರನ್ನು ಕಳೆದುಕೊಂಡಿದೆ. ಬಣ್ಣದ ಲೋಕದಲ್ಲಿ ಮೆರೆದಾಡಿದ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ಕೆಲವರು ದುಡುಕಿನ ನಿರ್ಧಾರದಿಂದ ಸುಂದರ ಬದುಕನ್ನು ಅಂತ್ಯಗೊಳಿಸಿದರೆ, ಮತ್ತೆ ಕೆಲವರು ವಿಧಿ ನಿಯಮಕ್ಕೆ ಸೋತು ಇಹಲೋಕದಿಂದ ದೂರವಾಗಿದ್ದಾರೆ. 2024ರಲ್ಲಿ ನಿಧನರಾದ ಚಂದನವನದ ಕಲಾವಿದರ ಪಟ್ಟಿ ಇಲ್ಲಿದೆ..
ನಟ ಕೆ.ಶಿವರಾಂ:
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದ ಕೆ.ಶಿವರಾಮ್ ಅವರನ್ನು ಈ ವರ್ಷ ನಾವು ಕಳೆದುಕೊಂಡಿದ್ದೇವೆ. ಚಿತ್ರರಂಗ ಮಾತ್ರವಲ್ಲದೆ ರಾಜಕಾರಣಿ ಹಾಗೂ ಮಾಜಿ ಐಎಎಸ್ ಅಧಿಕಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದರು.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದ್ದ ಶಿವರಾಂ, 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು.
1993ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶಿವರಾಂ ಅವರು, ನಾಗತಿಹಳ್ಳಿ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳಲ್ಲಿ ಅವರು ಮಿಂಚಿದ್ದರು.
ಈ ವರ್ಷದ ಫೆಬ್ರವರಿ 29 ರಂದು ಹೃದಯಾಘಾತದಿಂದ ಅವರು ನಿಧನರಾದರು.
ನಿರ್ದೇಶಕ, ನಟ ದ್ವಾರಕೀಶ್:
ಕನ್ನಡ ಚಿತ್ರರಂಗದ ಅಮೂಲ್ಯ ರತ್ನ ದ್ವಾರಕೀಶ್ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು. ‘ಕರ್ನಾಟಕದ ಪ್ರಚಂಡ ಕುಳ್ಳʼ ದ್ವಾರಕೀಶ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಒಂದೆರಡಲ್ಲ.
1964ರಲ್ಲಿ ʼವೀರ ಸಂಕಲ್ಪʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ಮಿಂಚಿದ್ದರು.
ಇದನ್ನೂ ಓದಿ: Bollywood Movies:2025ರಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಬಾಲಿವುಡ್ ಸಿನಿಮಾಗಳ ಪಟ್ಟಿ
‘ಭಾಗ್ಯವಂತರು’, ʼಮೇಯರ್ ಮುತ್ತಣ್ಣʼ, ʼಕುಳ್ಳ ಏಜೆಂಟ್ ೦೦೦ʼ, ʼಕೌಬಾಯ್ ಕುಳ್ಳʼ, ʼಸಿಂಗಪೂರಿನಲ್ಲಿ ರಾಜಾ ಕುಳ್ಳʼ, ʼಪ್ರೀತಿ ಮಾಡು ತಮಾಷೆ ನೋಡುʼ ಹೀಗೆ ಸುಮಾರು 40 ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಾಣ ಸೇರಿದಂತೆ ʼನೀ ಬರೆದ ಕಾದಂಬರಿʼ ಡಾನ್ಸ್ ರಾಜ ಡಾನ್ಸ್ʼ, ʼಶ್ರುತಿ ಹಾಕಿದ ಹೆಜ್ಜೆʼ, ʼರಾಯರು ಬಂದರು ಮಾವನ ಮನೆಗೆʼ, ‘ಮಜ್ನು’, ‘ಗಿಡ್ಡು ದಾದ’, ʼಕಿಡ್ನಾಪ್ʼ, ʼಕಿಲಾಡಿಗಳುʼ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ಅವರ ಕೊಡುಗೆಗಳು ಕನ್ನಡ ಚಿತ್ರರಂಗಕ್ಕೆ ಅಮೋಘವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏ.16 ರಂದು ವಿಧಿವಶರಾದರು.
ಪವಿತ್ರಾ ಜಯರಾಮ್:
ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದ ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಮ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದರು.
ತೆಲುಗಿನ ʼತ್ರಿನಯನಿʼ ಧಾರವಾಹಿಯಲ್ಲಿ ನಟಿಸಿ ಅಪಾರ ಮನೆ ಮಂದಿಯ ಮನಗೆದ್ದಿದ್ದರು. ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಪ್ರವೇಶ ಪಡೆದಿದ್ದರು. ಜೋಕಾಲಿʼ, ʼನೀಲಿʼ, ʼರಾಧಾರಮಣʼ ಧಾರವಾಹಿಯಲ್ಲಿ ನಟಿಸಿದ್ದರು.
ಮೇ 11 ರಂದು ಆಂಧ್ರಪ್ರದೇಶದ ಕರ್ನೂಲು ಸಮೀಪ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.
ಅಪರ್ಣಾ:
ಕನ್ನಡ ಕಿರುತೆರೆಯಲ್ಲಿ ತನ್ನ ಅಚ್ಛ ಕನ್ನಡದ ಧ್ವನಿಯಿಂದಲೇ ಖ್ಯಾತಿಯನ್ನು ಗಳಿಸಿದ್ದ ನಟಿ ಅಪರ್ಣಾ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿತ್ತು.
ಇದನ್ನೂ ಓದಿ: Year Ender: ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳು ಇವರೇ ನೋಡಿ..
ಅಪರ್ಣಾ ಅವರು ದೂರದರ್ಶನದಲ್ಲಿ ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಕನ್ನಡದ ಜನಪ್ರಿಯ ಮುಖವಾಗಿದ್ದರು. 1990 ರ ದಶಕದಲ್ಲಿ ದೂರ ದರ್ಶನದಲ್ಲಿದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದರು . 1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂವು ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 2015 ಮತ್ತು 2021 ರ ನಡುವೆ ಕಾಮಿಡಿ ಶೋ, ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿಯೂ ಜನಪ್ರಿಯರಾಗಿದ್ದರು.
2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ಅವರು ನಿಧರಾಗಿದ್ದರು.
ದೀಪಕ್ ಅರಸ್:
ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಅವರ ಹಠಾತ್ ನಿಧನದ ಸುದ್ದಿ ಸ್ಯಾಂಡಲ್‌ವುಡ್‌ಗೆ ಶಾಕ್ ಆಗಿತ್ತು.
ಕನ್ನಡದಲ್ಲಿ 2011ರಲ್ಲಿ ಬಂದಿದ್ದ ‘ಮನಸಾಲಜಿ’ ಸಿನಿಮಾ ನಿರ್ದೇಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 2023ರಲ್ಲಿ ‘ಶುಗರ್ ಫ್ಯಾಕ್ಟರಿ’ ಸಿನಿಮಾ ನಿರ್ದೇಶನ ಮಾಡಿದ್ದರು.
ಕಿಡ್ನಿ ವೈಫಲ್ಯದಿಂದಾಗಿ ಅವರು ಅಕ್ಟೋಬರ್ 17 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಿರ್ದೇಶಕ ಗುರುಪ್ರಸಾದ್:
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕ – ನಟರಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಅವರ ಆತ್ಮಹತ್ಯೆ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಅತೀ ದೊಡ್ಡ ವಿಚಾರದ ಸುದ್ದಿಯಾಗಿತ್ತು.
‘ಮಠ’, ‘ಎದ್ದೇಳು ಮಂಜುನಾಥ’ ಮುಂತಾದ ಸಿನಿಮಾಗಳಿಂದ ನಿರ್ದೇಶಕನಾಗಿ ಬೇರೂರಿದ್ದ ಗುರುಪ್ರಸಾದ್ ಮಾದನಾಯಕನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನ.3 ರಂದು ಅವರ ಮೃತದೇಹ ಅಪಾರ್ಟ್ ಮೆಂಟ್‌ನಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ: Year Ender: ಸೌತ್‌ನಲ್ಲಿ ಈ ವರ್ಷ ಸಿನಿಮಾಗಿಂತ ವಿವಾದಗಳದ್ದೇ ಹೆಚ್ಚು ಸದ್ದು – ಸುದ್ದಿ
ಸಾಲದ ಸುಳಿಯಲ್ಲಿ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಅವರ ನಿಧನದ ಬಳಿಕ ಕೆಲ ಕಲಾವಿದರು ಮಾತನಾಡಿದ ರೀತಿ ಚಂದನವನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ನಟಿ ಶೋಭಿತಾ:
ʼಬ್ರಹ್ಮಗಂಟುʼ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ಶೋಭಿತಾ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಸದ್ದು ಮಾಡಿತ್ತು. 2024ರ ನವೆಂಬರ್ 30ರ ಮಧ್ಯರಾತ್ರಿ ಹೈದರಾಬಾದ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ವಂದನ, ಎರಡೊಂದ್ಲ ಮೂರು. ಅಟೆಂಪ್ಟ್ ಟು ಮರ್ಡರ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅವರ ಸಾವಿನ ಹಿಂದಿನ ಕಾರಣ ಇನ್ನು ನಿಗೂಢವಾಗಿದೆ.
ನಟ ಟಿ ತಿಮ್ಮಯ್ಯ:
ಚೆಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ಈ ಜೀವ ನಿನಗಾಗಿ, ಕುರುಕ್ಷೇತ್ರ, ನಿಷ್ಕರ್ಷ, ಬೆಳದಿಂಗಳ ಬಾಲೆ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಟಿ ತಿಮ್ಮಯ್ಯ ಅವರು ನ.16 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.
ಅವರು ಡಾ ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ನಟಿಸಿದ್ದರು.
ನಿರ್ದೇಶಕ ಚಿ. ದತ್ತರಾಜ್: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಅಕ್ಟೋಬರ್ 14 ರಂದು ನಿಧರಾದರು. ಡಾ. ರಾಜ್ಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜ್ಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಜೊತೆಗೆ ಹಿರಿಯ ನಟಿ ಮಂಜುಳ ನಟನೆಯ ರುದ್ರಿ ಸೇರಿದಂತೆ ಮೊದಲಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.