Bengaluru: ಸೆಕ್ಯುರಿಟಿ ಗಾರ್ಡ್ ಸೇರಿ ಇಬ್ಬರ ಭೀಕರ ಹತ್ಯೆ
Team Udayavani, Dec 10, 2024, 10:27 AM IST
ಬೆಂಗಳೂರು: ಯಲಹಂಕ ನ್ಯೂಟೌನ್‌ನ ಕೈಗಾರಿಕಾ ಪ್ರದೇಶದ ಮುಚ್ಚಿದ ಕಾರ್ಖಾನೆಯೊಂದರ ಆವರಣ ದಲ್ಲಿ ಭಾನುವಾರ ತಡರಾತ್ರಿ ಸೆಕ್ಯುರಿಟಿ ಗಾರ್ಡ್ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನೇಪಾಳ ಮೂಲದ ಬಿಕ್ರಂ ಬಿಸ್ವಜಿತ್(24) ಮತ್ತು ಬಿಹಾರ ಮೂಲದ ಚೋಟು ತೂರಿ(33) ಕೊಲೆಯಾದವರು.
ಯಲಹಂಕ ನ್ಯೂಟೌನ್‌ನ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿರುವ ಮುಚ್ಚಿದ ಎಲೆಕ್ಟ್ರಿಕಲ್ ಕಾರ್ಖಾನೆಯೊಂದರ ಆವರಣದಲ್ಲಿ ಕೃತ್ಯ ನಡೆದಿದೆ.
ಕೊಲೆಗೀಡಾದ ವ್ಯಕ್ತಿಗಳ ಸ್ನೇಹಿತರೇ ಹತ್ಯೆಗೈದು ಪರಾರಿಯಾಗಿರುವ ಸಾಧ್ಯತೆಯಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಬಿಕ್ರಂ ಕೈಗಾರಿಕಾ ಪ್ರದೇಶದ ಎಲೆಕ್ಟ್ರಿಕಲ್ ಕಾರ್ಖಾನೆಯೊಂದರ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಚೋಟು ತೂರಿ ಸಮೀಪದ ಗಾರ್ಮೆಂಟ್ಸ್‌ವೊಂದರಲ್ಲಿ ವಾಹನ ಚಾಲಕನಾಗಿದ್ದ. ಇಬ್ಬರು ಇದೇ ಎಲೆಕ್ಟ್ರಿಕಲ್ ಕಾರ್ಖಾನೆ ಆವರಣದಲ್ಲಿ ಮಲಗುತ್ತಿದ್ದರು. ಭಾನುವಾರ ರಾತ್ರಿ ಬಿಕ್ರಂ ಮತ್ತು ಚೋಟು ತೂರಿ ಹಾಗೂ ಪರಿಚಯಸ್ಥ ಇತರೆ 3-4 ಮಂದಿ ಕಾರ್ಮಿಕರು ಎಲೆಕ್ಟ್ರಿಕಲ್ ಕಾರ್ಖಾನೆಯ ಆವರಣದಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ, ಕಲ್ಲು ಹಾಗೂ ಕಬ್ಬಿಣ ರಾಡ್‌ಗಳು ಹಾಗೂ ಟೈಲ್ಸ್ ಪೀಸ್‌ಗಳಿಂದ ಬಿಕ್ರಂ ಮತ್ತು ಚೋಟು ತೂರಿಯ ಕುತ್ತಿಗೆ, ತಲೆ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಸಹೋದ್ಯೋಗಿ ಬಂದಾಗ ಬೆಳಕಿಗೆ: ಸೋಮವಾರ ಬೆಳಗ್ಗೆ 8 ಗಂಟೆಯಾದರೂ ಚೋಟು ತೂರಿ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ ಆತನ ಸಹೋದ್ಯೋಗಿಯೊಬ್ಬ ಚೋಟು ತೂರಿಗೆ ಕರೆ ಮಾಡಿದ್ದು, ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಆತ ಮಲಗುವ ಜಾಗಕ್ಕೆ ಬಂದು ನೋಡಿದಾಗ ಹತ್ಯೆಯಾಗಿರುವುದು ಗೊತ್ತಾಗಿದೆ. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಇಬ್ಬರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಮತ್ತೂಂದೆಡೆ ಕಾರ್ಖಾನೆ ಸಮೀಪದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ನಾಲ್ಕೈದು ಮಂದಿ ಪಾರ್ಟಿ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ತಲೆಮರೆಸಿಕೊಂಡಿರುವ ನಾಲ್ಕು ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆ ಬಳಿಕ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.