SM Krishna; ಕರಾವಳಿಗೆ ಕೃಷ್ಣ ಕೃಪೆ; 2010ರ ವಿಮಾನ ದುರಂತದ ವೇಳೆ ಮಂಗಳೂರಿಗೆ ಭೇಟಿ
ನಾಡಗೀತೆಗೆ ಮಧ್ವರ ಹೆಸರು ಸೇರಿಸಿದ್ದು ಎಸ್.ಎಂ. ಕೃಷ್ಣ
Team Udayavani, Dec 11, 2024, 7:25 AM IST
ಮಂಗಳೂರು: ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಯೋಜನೆಗಳನ್ನು ಪ್ರಕಟಿಸಿದ್ದರು.
2002-03ರಲ್ಲಿ 500 ಕೋ.ರೂ. ಮೊತ್ತದ ಕುಡ್ಸೆಂಪ್ ಯೋಜನೆಯ ಕೆಲಸಗಳು ಕರಾವಳಿಯಲ್ಲಿ ಆರಂಭವಾಗಿತ್ತು. ಮಂಗಳೂರು ನಗರ, ಉಡುಪಿ, ಕುಂದಾಪುರ, ಪುತ್ತೂರು, ಉಳ್ಳಾಲದಲ್ಲಿ ಈ ಕಾಮಗಾರಿಗಳು ನಡೆದಿದ್ದವು. ಕುಡಿಯುವ ನೀರಿನ ಯೋಜನೆ, ಒಳಚರಂಡಿ, ಘನ ತ್ಯಾಜ್ಯ ವಿಲೇವಾರಿ, ಕಡಿಮೆ ವೆಚ್ಚದ ಶೌಚಾಲಯಗಳು ಇತ್ಯಾದಿ ಯೋಜನೆಗಳಿದ್ದವು. ಮಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಆವರ ಬೆಂಬಲವಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ರಸ್ತೆಗಳು, ಮೀನುಗಾರರಿಗೆ ಮನೆಗಳನ್ನೂ ನಿರ್ಮಿಸಲಾಗಿತ್ತು. ಜಿಲ್ಲೆಯ ಕೆಲವು ತಾಲೂಕುಗಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳೂ ಇವರ ಅವಧಿಯಲ್ಲಿ ಆಗಿವೆ. ಮಲ್ಪೆ, ಗಂಗೊಳ್ಳಿ ಬಂದರು ಅಭಿವೃದ್ಧಿಗೂ ಗಮನ ನೀಡಿದ್ದರು.
2002ರಲ್ಲಿ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿಯಾಗಿ ಭಾಗವಹಿಸಿ ದ್ದರು. ಇದಲ್ಲದೇ ಮುಖ್ಯಮಂತ್ರಿಯಾಗಿ ಹಲವು ಬಾರಿ ಕರಾವಳಿಗೆ ಭೇಟಿ ನೀಡಿದ್ದರು. ಚುನಾವಣ ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಪದವಿಯಿಂದ ಇಳಿದ ಮೇಲೂ ಕರಾವಳಿಯನ್ನು ಮರೆತಿರಲಿಲ್ಲ. ಹಲವಾರು ಕಾರ್ಯಕ್ರಮಗಳಿಗೆ, ಇಲ್ಲಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ವಿಮಾನ ದುರಂತದ ವೇಳೆ ಮಂಗಳೂರಿಗೆ
2010ರ ಮೇ 22ರಂದು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ದುರಂತದ ವೇಳೆ ಕೇಂದ್ರ ವಿದೇಶಾಂಗ ಸಚಿವರಾಗಿದ್ದರು ಎಸ್.ಎಂ. ಕೃಷ್ಣ. ಆಗ ಮಂಗಳೂರಿಗೆ ಭೇಟಿ ನೀಡಿ ದುರಂತ ನಡೆದ ಸ್ಥಳ, ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.
ಎಂ.ಜಿ. ರಸ್ತೆ ಉದ್ಘಾಟನೆ
ಕುಡ್ಸೆಂಪ್ ಯೋಜನೆಯ ಮಂಗಳೂರಿನ ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿದೆ. ಪಿವಿಎಸ್‌ನಿಂದ ನಾರಾಯಣಗುರು ವೃತ್ತ (ಲೇಡಿಹಿಲ್ ವೃತ್ತ)ದ ವರೆಗಿನ ಎಂ.ಜಿ. ರಸ್ತೆ (ಚತುಷ್ಪಥ)ಯನ್ನು ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಉದ್ಘಾಟಿಸಿದ್ದರು. ಇದೇ ವೇಳೆ ನಾರಾಯಣಗುರು ವೃತ್ತದಿಂದ ಉರ್ವಸ್ಟೋರ್ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಶಿಲಾನ್ಯಾಸವನ್ನೂ ನೆರವೇರಿಸಿದ್ದನ್ನು ಸ್ಮರಿಸಬಹುದು.
ಮೂಡುಬಿದಿರೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಎಸ್.ಎಂ. ಕೃಷ್ಣ
ಮೂಡುಬಿದಿರೆ: ಇಪ್ಪತ್ತೂಂದು ವರ್ಷಗಳ ಹಿಂದೆ, 2003ರಲ್ಲಿ ಮೂಡುಬಿದಿರೆಯಲ್ಲಿ ಡಾ| ಎಂ. ಮೋಹನ ಆಳ್ವರ ಮುತುವರ್ಜಿಯಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಬಂದಿ ದ್ದರು. ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಕೃಷ್ಣ ಬರಬೇಕಿತ್ತು. ಆದರೆ ಅಂದು ಬರಲಿಕ್ಕಾಗಿರಲಿಲ್ಲ. ಅವರ ಬದಲು ಅಂದು ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದರು. ವಿಶೇಷ ಎಂದರೆ ತಡವಾಗಿ ಬಂದಿರುವುದರಿಂದ ವೇದಿಕೆ ಏರದೆ ವೇದಿಕೆಯ ಮುಂಭಾಗ ಸ್ವಲ್ಪ ಸಮಯ ಕುಳಿತುಕೊಂಡು ಬಳಿಕ ತೆರಳಿದ್ದರು.
ಉಡುಪಿಯ ಕೃಷ್ಣನಲ್ಲಿಗೆ ಬಂದಿದ್ದ ಕೃಷ್ಣ
ಉಡುಪಿ: ಶ್ರೀಕೃಷ್ಣ ಮಠ ಹಾಗೂ ಎಸ್.ಎಂ. ಕೃಷ್ಣ ಅವರಿಗೆ ಅವಿನಾಭಾವ ನಂಟಿತ್ತು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲೂ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಕೃಷ್ಣ ದರ್ಶನ ಮಾಡಿದ್ದರು.
2000 ಇಸವಿಯ ನ. 13 ಮತ್ತು 14ರಂದು ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮುಂದಾಳತ್ವದಲ್ಲಿ ಪೇಜಾವರ ಮಠದಲ್ಲಿ ನಡೆದ ರಾಷ್ಟ್ರೀಯ ಕನಕ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು, ಶಾಸಕರಾಗಿದ್ದ ಯು.ಆರ್. ಸಭಾಪತಿ, ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಆ ಕಾರ್ಯಕ್ರಮದಲ್ಲಿದ್ದರು. ಅನಂತರ ಪೇಜಾವರ ಶ್ರೀಪಾದರ ಪರ್ಯಾಯದ ಸಂದರ್ಭದಲ್ಲೂ ಆಗಮಿಸಿದ್ದರು. ಈ ವೇಳೆ ಅವರಿಗೆ ರಾಷ್ಟ್ರ ರತ್ನ ಬಿರುದು ನೀಡಿ ಶ್ರೀಪಾದರು ಸಮ್ಮಾನಿಸಿದ್ದರು. 2008ರಲ್ಲಿ ಪುತ್ತಿಗೆ ಮಠಾಧೀಶರದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 3ನೇ ಪರ್ಯಾಯದ ಸಂದರ್ಭದಲ್ಲಿಯೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಜಿಲ್ಲೆಯ ಕಾಪು ನಗರದ ಅಭಿವೃದ್ಧಿಗೆ ಕೃಷ್ಣ ವಿಶೇಷ ಕೊಡುಗೆ ನೀಡಿದ್ದರು. ವಸಂತ ಸಾಲ್ಯಾನ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಕೊಡುಗೆ ತರಲು ಶ್ರಮಿಸಿದ್ದರು. 2007ರಲ್ಲಿ ಶಿರ್ವ ವಿದ್ಯಾವರ್ಧಕ ಸಂಘದ ವಜ್ರಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ನೂತನ ಗ್ರಂಥಾಲಯ ಉದ್ಘಾಟಿಸಿದ್ದರು. ಈ ವೇಳೆ ನ್ಯಾ| ಸಂತೋಷ್ ಹೆಗ್ಡೆ, ವಿನಯ ಹೆಗ್ಡೆ ಮೊದಲಾದವರು ಇದ್ದರು.
ನಾಡಗೀತೆಗೆ ಮಧ್ವರ ಹೆಸರು ಸೇರಿಸಿದ್ದು ಎಸ್.ಎಂ. ಕೃಷ್ಣ
ಉಡುಪಿ: ಆರಂಭದಲ್ಲಿ ರಚನೆಯಾದ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರು ಇರಲಿಲ್ಲ. ಮಧ್ವರ ಹೆಸರು ಸೇರಿಸಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು. ಅನಂತರ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದು ಮಧ್ವರ ಹೆಸರು ಸೇರಿಸಲು ತಿಳಿಸಿದ್ದರು. ಅದರಂತೆ ಎಸ್.ಎಂ. ಕೃಷ್ಣ ನಾಡಗೀತೆಯಲ್ಲಿ ಮಧ್ವರ ಹೆಸರನ್ನು ಸೇರಿಸಿದ್ದರು. ಹಾಗೆಯೇ ಡಾ| ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಉಡುಪಿಯಲ್ಲೂ ಪ್ರತಿಭಟನೆ ನಡೆದಿತ್ತು.
15 ದಿನ ಮಣಿಪಾಲದಲ್ಲಿದ್ದರು
ಮುಖ್ಯಮಂತ್ರಿ, ರಾಜ್ಯಪಾಲರಾದ ಅನಂತರದಲ್ಲಿ ಚಿಕಿತ್ಸೆ ಹಾಗೂ ತೀರ್ಥಕ್ಷೇತ್ರ ಸಂದರ್ಶನ ಹಿನ್ನೆಲೆಯಲ್ಲಿ ಕೃಷ್ಣ ಅವರು ಕುಟುಂಬ ಸಮೇತರಾಗಿ ಸುಮಾರು 15 ದಿನಗಳ ಕಾಲ ಮಣಿಪಾಲದ ಹೊಟೇಲ್ ಒಂದರಲ್ಲಿ ತಂಗಿದ್ದರು. ಕೆಎಂಸಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನ, ಶ್ರೀಕೃಷ್ಣ ಮಠ, ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನ, ಮೂಲ್ಕಿಯ ಬಪ್ಪನಾಡು ಹೀಗೆ ಕರಾವಳಿಯ ದೇವಸ್ಥಾನಗಳಿಗೆ ಈ ಅವಧಿಯಲ್ಲಿ ಭೇಟಿ ನೀಡಿದ್ದರು.
ಮಣಿಪಾಲದ ಪೈ ಕುಟುಂಬದೊಂದಿಗೂ ನಿಕಟ ಸಂಪರ್ಕ ಹೊಂದಿದ್ದರು. ಪೈ ಕುಟುಂಬದ ಕಾರು ಚಾಲಕರಾಗಿದ್ದ ರಾಮಪ್ಪ ಪೂಜಾರಿಯವರು ಈ ಅವಧಿಯಲ್ಲಿ ಎಸ್.ಎಂ. ಕೃಷ್ಣ ಅವರ ಕಾರು ಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃಷ್ಣ ಹಾಗೂ ಅವರ ಕುಟುಂಬದ ಸದಸ್ಯರನ್ನು ಕರಾವಳಿಯ ವಿವಿಧೆಡೆಗೆ ಕರೆದುಕೊಂಡು ಹೋಗಿದ್ದು, ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣದ ವರೆಗೂ ಕರೆದೊಯ್ದ ನೆನಪು ಇಂದಿಗೂ ಹಚ್ಚ ಹಸುರಾಗಿದೆ ಎಂದು ರಾಮಪ್ಪ ಪೂಜಾರಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.