Manipal: ಜಿಲ್ಲೆಗಿರುವುದು ಒಬ್ಬರೇ ಸರಕಾರಿ ಮನೋವೈದ್ಯರು!
ಪ್ರಥಮ ಚಿಕಿತ್ಸೆ ಮಾದರಿಯಲ್ಲಿ ಗ್ರಾಮೀಣದಲ್ಲಿ ಸಿಗಬೇಕು ಸೈಕಲಾಜಿಕಲ್ ಸೇವೆ
Team Udayavani, Dec 12, 2024, 4:13 PM IST
ಮಣಿಪಾಲ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1 ಲಕ್ಷ ಜನಸಂಖ್ಯೆಗೆ ಒಬ್ಬ ಮನೋವೈದ್ಯರಾದರೂ ಬೇಕು. ಅದನ್ನು ಹೊರತುಪಡಿಸಿದ ಸಾಮಾನ್ಯ ಲೆಕ್ಕದಲ್ಲಿ ನೋಡಿದರೂ ಉಡುಪಿ ಜಿಲ್ಲಾ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ 36 ಮನೋವೈದ್ಯರು ಇರಬೇಕಿತ್ತು. ಆದರೆ, ಸದ್ಯಕ್ಕೆ ಸೇವೆ ನೀಡುತ್ತಿರುವುದು ಒಬ್ಬರೇ ಸರಕಾರಿ ಮನೋವೈದ್ಯರು.
ನಗರಗಳಲ್ಲಿ ಖಾಸಗಿ ಮನೋವೈದ್ಯರಾದರೂ ಇರುತ್ತಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಶೇ. 10 ಜನರಿಗೂ ಸೇವೆ ಸಿಗುತ್ತಿಲ್ಲ. ಮನೋವೈದ್ಯರ ಕೊರತೆಯಿಂದಾಗಿ ಮನೋರೋಗಿಗಳಿಗೆ ಆಪ್ತ ಸಲಹೆ, ಸಮಾಲೋಚನೆ, ಚಿಕಿತ್ಸೆ ಗಳು ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಮಾನಸಿಕ ರೋಗಗಳನ್ನು ಗುರುತಿಸಲಾಗದೆ, ನಿಯಂತ್ರಿಸಲಾಗದ ಪರಿಸ್ಥಿತಿ ಎದುರಾಗಿದೆ. ದಿನೇದಿನೇ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳು, ಆಧುನಿಕ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಲು ದಾರಿ ಇಲ್ಲದೆ ಕಳವಳಪಡುವಂತಾಗಿದೆ.
ಆಪ್ತ ಸಲಹೆ, ಚಿಕಿತ್ಸೆ ದೊರಕುತ್ತಿಲ್ಲ
ದೇಶದ 140 ಕೋಟಿ ಜನಸಂಖ್ಯೆಯಲ್ಲಿ 7.50 ಕೋಟಿಯಷ್ಟು ಮನೋರೋಗಿಗಳಿದ್ದು, ಅವರಿಗೆ ಸರಿಯಾದ ಸಮಯಕ್ಕೆ ಸೂಕ್ತವಾದ ಆಪ್ತ ಸಲಹೆ, ಚಿಕಿತ್ಸೆ ದೊರಕುವಲ್ಲಿ ವೈದ್ಯರ ಕೊರತೆ ಸವಾಲಾಗಿದೆ. ದೇಶದಲ್ಲಿ ಶೇ.78.57ರಷ್ಟು ಮಾನಸಿಕ ತಜ್ಞರು, ಮನೋವೈದ್ಯರ ಕೊರತೆಯಿದೆ.
ಸ್ವದೇಶದಲ್ಲಿ ಕಲಿತು ವಿದೇಶದಲ್ಲಿ ಸೇವೆ
ದೇಶದ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ 42 ಸಾವಿರ ಮನೋವೈದ್ಯರ ಅಗತ್ಯವಿದೆ. ಪ್ರಸ್ತುತ 9 ಸಾವಿರ ಮನೋವೈದ್ಯರು ಇದ್ದು, ಮನೋರೋಗಿಗಳಿಗೆ ಅಗತ್ಯ ಚಿಕಿತ್ಸೆ, ಸಲಹೆ, ಪುನರ್ವಸತಿ ಒತ್ತಡ ಪರಿಹರಿಸುವುದು ಮಾನಸಿಕ ತಜ್ಞರಿಂದ ಆಗಬೇಕಿದೆ. ಸರಕಾರಿ ಸೀಟು, ಹಣದಲ್ಲಿ ತರಬೇತಿ ಪಡೆದು ಬಹುತೇಕ ಮಂದಿ ವಿದೇಶದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿದೆ ಮಾನಸಧಾರ ಯೋಜನೆ
ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಸರಕಾರ ಪ್ರತಿ ಜಿಲ್ಲೆಗೆ ಒಂದು ಮಾನ್ಯತೆ ಪಡೆದ ಎನ್‌ಜಿಒಗಳಿಂದ ಮಾನಸಿಕ ಅಸ್ವಸ್ಥರಿಗಾಗಿ ಡೇ ಕೇರ್ ಸೆಂಟರ್, ಪುನರ್ವಸತಿ ಕೇಂದ್ರ ತೆರೆದಿದ್ದು ಜಿಲ್ಲೆಯಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 25 ಆರೋಗ್ಯ ಕೇಂದ್ರಗಳಲ್ಲಿ ಮಾನಸಧಾರ ಮೂಲಕ ವೈದ್ಯ ಸೇವೆ ನೀಡಲಾಗುತ್ತಿದೆ.
ಕಾಯ್ದೆ ಏನು ಹೇಳುತ್ತದೆ?
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನಡಿ ಮನೋವೈದ್ಯರ ಸೇವೆ ತಾಲೂಕು ಆಸ್ಪತ್ರೆಗಳಲ್ಲಿ ಈಗ ವಾರಕ್ಕೊಮ್ಮೆ ಲಭ್ಯವಿದೆ. ಮಾನಸಿಕ ಆರೋಗ್ಯ (ಯೋಗ ಕ್ಷೇಮ) ಕಾಯ್ದೆ 2017ರಲ್ಲಿ ಜಾರಿಗೆ ಬಂದಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಮನೋತಜ್ಞರನ್ನು ನಿಯೋಜಿಸಬೇಕು, ಆಪ್ತ ಸಮಾಲೋಚನೆ ಮಾಡಬೇಕು. ಉಚಿತ ಚಿಕಿತ್ಸೆ ಕೊಡಿಸಬೇಕು ಎನ್ನುವುದನ್ನು ಅದು ಒಳಗೊಂಡಿದೆ. ಇದು ಪರಿಣಾಮಕಾರಿ ಜಾರಿಯಾಗದ ಹಿನ್ನೆಲೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಗಂಭೀರ ಸ್ವರೂಪಕ್ಕೆ ತಲುಪುವ ಭೀತಿ
ಇಂದಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಒತ್ತಡದಿಂದ ಖನ್ನತೆಗೆ ಒಳಗಾಗುತ್ತಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣ ಗಳು ಹೆಚ್ಚುತ್ತಿವೆ. ಅದರಲ್ಲೂ ಯುವಜನತೆ ಇದಕ್ಕೆ ಹೆಚ್ಚು ಬಲಿಯಾಗುತಿದ್ದು, ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ತೆಗೆದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವೃತ್ತಿ ಶಿಕ್ಷಣ, ಊಟ, ನಿದ್ರೆ ಮೇಲೆ ಪರಿಣಾಮ ಬೀರುತಿದ್ದು ಖನ್ನತೆಗೆ ವೈದ್ಯರ ಮೂಲಕ ಸರಿಯಾದ ಚಿಕಿತ್ಸೆ ನೀಡದೇ ಇದ್ದರೆ ಆಗ ಅದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮುದಾಯ ಸಮಸ್ಯೆಯಾಗಿ ಕಾಡಬಹುದು. ಇದರಿಂದಾಗಿ ಮಾನಸಿಕ ರೋಗ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆ, ಕೌನ್ಸೆಲಿಂಗ್ ತಜ್ಞರಿಂದ ಸಿಗಬೇಕಿದೆ.
ಜಿಲ್ಲೆಯ 25 ಕೇಂದ್ರಗಳಲ್ಲಿ ಸೇವೆ
ಮನೋವೈದ್ಯರ ಕೊರತೆ ದೇಶದಲ್ಲೇ ಇದೆ. ಈ ಕ್ಷೇತ್ರದಲ್ಲಿ ಕಲಿತ ವೈದ್ಯ ಅಭ್ಯರ್ಥಿಗಳು ಸರಕಾರಿ ಸೇವೆಗೆ ಬರುತ್ತಿಲ್ಲ. ಮಾನಸ ಧಾರ ಯೋಜನೆ ಮೂಲಕ ಮನೋವೈದ್ಯರಾದ ಡಾ| ಪಿ.ವಿ. ಭಂಡಾರಿ ಅವರ ನೆರವು ಪಡೆದು ಜಿಲ್ಲೆಯ 25 ಆರೋಗ್ಯ ಕೇಂದ್ರಗಳಲ್ಲಿ ಸೇವೆ ಒದಗಿಸುತ್ತಿದ್ದೇವೆ.
-ಡಾ| ಐ.ಪಿ. ಗಡಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh; ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಮೂರು ದಿನಗಳ ಭೇಟಿ
World Chess ರೋಚಕ ಫೈನಲ್; ಡಿಂಗ್ ಸೋಲಿಸಿದ ಗುಕೇಶ್: ಅತ್ಯಂತ ಕಿರಿಯ ವಿಶ್ವ ಚಾಂಪಿಯನ್
Panchamasali ಮೀಸಲಾತಿ ಹೋರಾಟದಲ್ಲಿ ಅನಗತ್ಯ ರಾಜಕೀಯ : ಹೆಬ್ಬಾಳ್ಕರ್ ಕಿಡಿ
Captains’ clash: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ; ನಾಯಕನಾಗಿ ಯಾರು ಉತ್ತಮರು?
Palakkad: ಸಿಮೆಂಟ್ ಲಾರಿ ಪಲ್ಟಿಯಾಗಿ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.