Kukke Shree Subrahmanya: ನೀರಿನಲ್ಲಿ ಬಂಡಿ ಉತ್ಸವ; ನೀರಾಟವಾಡಿದ ಗಜರಾಣಿ
ಇಂದಿನಿಂದ ಸರ್ಪಸಂಸ್ಕಾರ ಸೇವೆ ಆರಂಭ
Team Udayavani, Dec 13, 2024, 11:31 AM IST
ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಡಿ.12ರ ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.
ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.
ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಯಿತು.
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ಮದ್ಯಾಹ್ನದ ನಂತರ ನೀರನ್ನು ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು.
ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಬಳಿಕ ವಿವಿಧ ಸಂಗೀತ ಸುತ್ತುಗಳ ಪಲ್ಲಕ್ಕಿ ಉತ್ಸವ ನೀರಿನಲ್ಲಿ ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಈ ವಿಶಿಷ್ಠ ಉತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಕೃತಾರ್ಥರಾದರು.
ಶ್ರೀ ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿರುವುದರಿಂದ ಹೆಚ್ಚಿನ ಸಂಭ್ರಮ ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ, ತಾನು ಸಂಭ್ರಮ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಹೆಚ್ಚಿನ ಸಂತಸ ನೀಡಿತು. ಅಲ್ಲದೆ ಪುಟಾಣಿ ಮಕ್ಕಳು ಕೂಡಾ ನೀರಿನಲ್ಲಿ ಒದ್ದೆಯಾಗಿ ಆಟವಾಡುತ್ತಿದ್ದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ್ತ ಗೌಡ ಆಲ್ಕಬೆ, ದೇವಳದ ನಿವೃತ್ತ ಇಒ ಡಾ.ನಿಂಗಯ್ಯ, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಟ್ ರಾಜಲಕ್ಷ್ಮಿ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್, ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.
ಇಂದಿನಿಂದ ಸರ್ಪಸಂಸ್ಕಾರ ಸೇವೆ ಆರಂಭ:
ಶ್ರೀ ಕ್ಷೇತ್ರದ ಜಾತ್ರೆಯ ಅವಧಿಯಲ್ಲಿ ಶ್ರೀ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ನಡೆಯುವುದಿಲ್ಲ. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಮುಕ್ತಾಯವಾಗಿರುವುದರಿಂದ ಡಿ.13ರ ಶುಕ್ರವಾರ ದೇವಳದ ಪ್ರಧಾನ ಸೇವೆಯಾದ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ
Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ
Pakistan: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ʼಮತ್ತೆʼ ವಿದಾಯ ಹೇಳಿದ ಪಾಕಿಸ್ತಾನದ ಆಲ್‌ರೌಂಡರ್
Atul Subhash ಪ್ರಕರಣ; ಯುಪಿಯಲ್ಲಿರುವ ಪತ್ನಿಯ ಮನೆಗೆ ನೋಟಿಸ್ ಅಂಟಿಸಿದ ಬೆಂಗಳೂರು ಪೊಲೀಸರು
Gangolli Election:ಗಂಗೊಳ್ಳಿ ಗ್ರಾ.ಪಂ. ಚುನಾವಣೆಯಲ್ಲಿ ಕೈ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.