Madanthyar: ನಾಳ ಅಂಗನವಾಡಿ ಕಟ್ಟಡ ಶಿಥಿಲ; ಪ್ಲಾಸ್ಟಿಕ್ ಹೊದಿಕೆಯೇ ಆಸರೆ
ಬಿರುಕುಬಿಟ್ಟ ಗೋಡೆಗಳು, ಗೆದ್ದಲು ಹಿಡಿದ ಪಕ್ಕಾಸು: ಮಕ್ಕಳಿಗೆ ಒಳಗೆ ಕುಳಿತುಕೊಳ್ಳಲು ಭಯ
Team Udayavani, Dec 13, 2024, 1:10 PM IST
ಮಡಂತ್ಯಾರು: ನ್ಯಾಯತರ್ಪು ಗ್ರಾಮದ ನಾಳದಲ್ಲಿ 40 ವರ್ಷದ ಹಿಂದೆ ಪ್ರಾರಂಭವಾದ ಅಂಗನವಾಡಿಯ ಕಟ್ಟಡ ಕಳೆದ ಆರೇಳು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. 1989-90ನೇ ಸಾಲಿನಲ್ಲಿ ನಿರ್ಮಾಣಗೊಂಡ ಸ್ವಂತ ಕಟ್ಟಡದ ಮೇಲ್ಛಾವಣಿಯ ರೀಪು ಮತ್ತು ಪಕ್ಕಾಸುಗಳು ಗೆದ್ದಲು ಹಿಡಿದು ನೇತಾಡುವ ಸ್ಥಿತಿಯಲ್ಲಿವೆ. ಸೋರುವ ಛಾವಣಿಗೆ ಪ್ಲಾಸ್ಟಿಕ್ ಹೊದಿಕೆಯೇ ಆಸರೆಯಾಗಿದೆ.
10ರಿಂದ 15 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಈ ಶಿಥಿಲ ಕಟ್ಟಡ ಮಕ್ಕಳು ಮತ್ತು ಹೆತ್ತವರಲ್ಲಿ ಆತಂಕ ಮೂಡಿಸುತ್ತಿದೆ. ಆದರೆ ಅದರ ಸಂಪೂರ್ಣ ದುರಸ್ತಿ ಇಲ್ಲವೇ ಮರು ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲಧಿಕಾರಿಗಳು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.
ಪ್ರತೀ ವರ್ಷ ಕಳಿಯ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅನುದಾನ ಪಡೆದು ಮೇಲ್ಛಾವಣಿಯ ಸಣ್ಣ ಪುಟ್ಟ ದುರಸ್ತಿ ಮಾಡಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಕಳಿಯ ಗ್ರಾಮ ಪಂಚಾಯತ್ ವತಿಯಿಂದ ಮೇಲ್ಛಾವಣಿಗೆ ಟಾರ್ಪಲ್ ಹೊದಿಕೆ ಹಾಕಲಾಗಿದೆ. ಆದರೆ ಈ ಟಾರ್ಪಾಲು ಭಾರೀ ಗಾಳಿಯಿಂದಾಗಿ ಎರಡೇ ತಿಂಗಳಲ್ಲಿ ಹರಿದು ಚಿಂದಿಯಾಗಿದೆ.
ಪಂಚಾಯತ್ ಸದಸ್ಯರು, ಊರಿನ ವಿದ್ಯಾಭಿಮಾನಿಗಳು, ಪೋಷಕರು ಸೇರಿ ಕಾಂಪೌಂಡ್ ರಚನೆಗೆ ಕಲ್ಲಿನ ಕಂಬ, ತಂತಿ ಮತ್ತು ಕಬ್ಬಿಣದ ಗೇಟ್ ಮೊದಲಾದ ಕೊಡುಗೆಗಳನ್ನು ನೀಡಿದ್ದಾರೆ. ನೂತನ ಕಟ್ಟಡದ ರಚನೆಗಾಗಿ ಮೇಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
ಏನೇನು ಸಮಸ್ಯೆಗಳು?
-ಕಟ್ಟಡದ ಮೇಲ್ಛಾವಣಿಯ ರೀಪು, ಪಕ್ಕಾಸು ಗೆದ್ದಲು ಹಿಡಿದು ನೇತಾಡುವ ಸ್ಥಿತಿಯಲ್ಲಿದೆ.
-ಕಟ್ಟಡ ಸುತ್ತಲೂ ಇಲಿ, ಹೆಗ್ಗಣಗಳು ಬಿಲದಿಂದ ಮಣ್ಣು ಹೊರಹಾಕಿರುವುದು ಕಂಡುಬರುತ್ತದೆ.
-ಸಣ್ಣ ಮಳೆಗೂ ಕಟ್ಟಡದ ಒಳಗೆ ನೀರು ಜಿನುಗುತ್ತದೆ, ಮಕ್ಕಳಿಗೆ ಕುಳಿತುಕೊಳ್ಳುವುದು ಕಷ್ಟ.
-ಕಟ್ಟಡದ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಬಾಗಿಲು ಮುಚ್ಚಿದರೂ ಹೊರಗಿನ ದೃಶ್ಯ ಕಾಣುತ್ತದೆ.
-ವಿಪರೀತ ಗಾಳಿ, ಗುಡುಗು, ಸಿಡಿಲಿನ ಸಂದರ್ಭದಲ್ಲಿ ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ.
-ವಿದ್ಯುತ್ ವಯರಿಂಗ್, ಉಪಕರಣಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ.
-ಬಾಗಿಲು, ದಾರಂದ ಕಿಟಕಿಗಳು ಶಿಥಿಲವಾಗಿವೆ. ಗೋಡೆಗಳ ಬಣ್ಣದ ಮಸುಕಾಗಿದೆ.
ನಾಳ ಅಂಗನವಾಡಿ ಕೇಂದ್ರ ಕೆಲವು ವರ್ಷಗಳಿಂದ ಶಿಥಿಲ ವ್ಯವಸ್ಥೆಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮತ್ತು ಪಂಚಾಯತ್‌ಗೆ ಮನವಿಯನ್ನು ಸಲ್ಲಿಸಲಾಗಿದೆ. ಸಣ್ಣ-ಪುಟ್ಟ ಸಮಸ್ಯೆಗಳಿಗೆ ಪಂಚಾಯತ್ ಪ್ರತಿನಿಧಿಗಳು, ಪೋಷಕರು ಸಹಕಾರ ನೀಡುತ್ತಾರೆ. ನೂತನ ಕಟ್ಟಡದ ಅಗತ್ಯವಿದೆ.
-ಭವಾನಿ ಲೋಕೇಶ್ ನಾಳ, ಅಧ್ಯಕ್ಷರು, ಬಾಲ ವಿಕಾಸ ಸಮಿತಿ
ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಅಗಿಲ್ಲ. ಮಳೆಹಾನಿ ಪರಿಹಾರ ನಿಧಿ ಯೋಜನೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಬೇಡಿಕೆ ಕಳುಹಿಸಿ ಕೊಡಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ.
-ಪ್ರಿಯಾ ಆಗ್ನೇಸ್ ಚಾಕೊ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬೆಳ್ತಂಗಡಿ
-ಕೆ.ಎನ್. ಗೌಡ ಗೇರುಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ
Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ
Pakistan: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ʼಮತ್ತೆʼ ವಿದಾಯ ಹೇಳಿದ ಪಾಕಿಸ್ತಾನದ ಆಲ್‌ರೌಂಡರ್
Atul Subhash ಪ್ರಕರಣ; ಯುಪಿಯಲ್ಲಿರುವ ಪತ್ನಿಯ ಮನೆಗೆ ನೋಟಿಸ್ ಅಂಟಿಸಿದ ಬೆಂಗಳೂರು ಪೊಲೀಸರು
Gangolli Election:ಗಂಗೊಳ್ಳಿ ಗ್ರಾ.ಪಂ. ಚುನಾವಣೆಯಲ್ಲಿ ಕೈ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.