“ಗಿಲಿಗಿಲಿ’ ಕೌತುಕದ ಪ್ರೊ|ಶಂಕರ್ ; ಇಂದು ಉಡುಪಿಯಲ್ಲಿ “ಶಂಕರಾಭಿವಂದನೆ’
Team Udayavani, Dec 14, 2024, 6:23 AM IST
ಕರಾವಳಿ ಪ್ರದೇಶದಲ್ಲಿ ಹಿಂದೆಂದೂ ನಡೆಯದಂತಹ ಅಂತಾರಾಷ್ಟ್ರೀಯ ಜಾದೂಗಾರರ ಸಮಾವೇಶ “ಗಿಲಿಗಿಲಿ ಮ್ಯಾಜಿಕ್’ ಉಡುಪಿಯಲ್ಲಿ ಮೂರು ಬಾರಿ ನಡೆದದ್ದು ಇತಿಹಾಸದ ಪುಟದಲ್ಲಿ ಅಚ್ಚೊತ್ತಿದೆ. ಈ ಇತಿಹಾಸದ ಸೃಷ್ಟಿಗೆ ಕಾರಣರು ಪ್ರೊ|ಶಂಕರ್.
ಕೇವಲ ಡಿಗ್ರಿ ಧಾರಿಗಳಾದ ಶಂಕರ್ ಜಾದೂಗಾರಿಕೆ ಮೂಲಕ ಅಂತಾರಾಷ್ಟ್ರೀಯ ಸಮಾವೇಶ ನಡೆಯುವ ಬಹುಮುನ್ನವೇ ಪ್ರೊಫೆಸರ್‌ಗಿರಿಗೆ ಏರಿದ್ದರು. ಈ ಗಾರುಡಿಗನಿಗೀಗ ಸಾರ್ವಜನಿಕ ಅಭಿನಂದನೆ ಡಿ. 14ರ ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವುದಿದೆ. ಹಿಂದಿನ ದಾಖಲೆಗಳ ತುಣುಕುಗಳನ್ನು ಬಿತ್ತರಿಸುವ ಮೂಲಕ ಮತ್ತೆ ಗತವೈಭವದ ಕಾಲಕ್ಕೆ ಕೊಂಡೊಯ್ಯಲಾಗುತ್ತಿದೆ.
1994ರಲ್ಲಿ ಉಡುಪಿಯಲ್ಲಿ ನಡೆದ ಸಮಾ ವೇಶದಲ್ಲಿ 360 ದೇಶ-ವಿದೇಶಗಳ ಜಾದೂಗಾರರು ಭಾಗವಹಿಸಿದ್ದರು. 1997ರಲ್ಲಿ ನಡೆದ ಗಿಲಿಗಿಲಿ ಸಮಾವೇಶದಲ್ಲಿ 12 ದೇಶಗಳ ಸುಮಾರು 600 ಜಾದೂಗಾರರು ಆಗಮಿಸಿದ್ದರು. ಅಕºರ್, ಜಹಾಂ ಗೀರ್ ಮೊದಲಾದ ರಾಜರ ಕಾಲದಲ್ಲಿ ನಡೆಯುತ್ತಿದ್ದ ಜಾದೂ ಪ್ರದರ್ಶನವನ್ನು ಆಗಿನ ಪ್ರವಾಸಿಗರು ಪ್ರವಾಸ ಕಥನದಲ್ಲಿ ದಾಖಲಿಸಿದ್ದರು. ಇದುವೇ “ಇಂಡಿಯನ್ ರೋಪ್ ಟ್ರಿಕ್’. ಶಂಕರ್ ವಿದೇಶಗಳಿಗೆ ಹೋದಾಗ ವಿದೇಶೀ ಕಲಾವಿದರು ಇದು ಕೇವಲ ಪುರಾಣಕಥೆ, ಕಟ್ಟು ಕಥೆ ಎಂದು ಹೇಳಿದ್ದು ಶಂಕರ್‌ಗೆ ಸವಾಲು ಸ್ವೀಕರಿಸುವುದಕ್ಕೆ ಕಾರಣವಾಯಿತು. ಮಲ್ಪೆ ಕಡಲತೀರದಲ್ಲಿ ಈ ಪ್ರದರ್ಶನ ನಡೆಯಿತು.
ಜನರೆಲ್ಲ ಇದನ್ನು ನೋಡಿ ಹೌಹಾರಿ ವೀಕ್ಷಿಸಿದರು, ಮೂಗಿನ ಮೇಲೆ ಬೆರಳಿಟ್ಟರು.
ಒಂದು ಬುಟ್ಟಿಯಲ್ಲಿ ಹಗ್ಗವನ್ನು ಸುತ್ತಿಡುತ್ತಾರೆ. ಕುತೂಹಲ ಶುರುವಾದಾಗ ಹಗ್ಗ 15-20 ಅಡಿ ಯಷ್ಟು ಎತ್ತರ ನೇರ ಕಂಬದಂತೆ ನೆಟ್ಟಗೆ ಏರುತ್ತದೆ. ಒಬ್ಬ ಹುಡುಗ ಅದನ್ನು ಮರ ಹತ್ತಿದಂತೆ ಹತ್ತುತ್ತಾನೆ, ಅದರ ತುತ್ತತುದಿವರೆಗೂ. ಅನಂತರ ಅದೇ ಮಾರ್ಗದಲ್ಲಿ ಇಳಿದುಬರುತ್ತಾನೆ. ಈ ಪ್ರದರ್ಶ ನವನ್ನು ಮಲ್ಪೆ ಕಡಲ ತೀರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಸಿಯೇ ಬಿಟ್ಟರು ಪ್ರೊ|ಶಂಕರ್. ಅಮೆರಿಕದ ಎಡಿನ್‌ಬರ್ಗ್ ವಿ.ವಿ.ಯಲ್ಲಿ ಸಂಶೋ ಧನೆ ನಡೆಸುವಾತನೊಬ್ಬ ಉಡುಪಿಗೆ ಕೆಮರಾ ಸಹಿತ ಬಂದು ಈ ವಿಶ್ವ ದಾಖಲೆಯನ್ನು ದಾಖಲಿಸಿಬಿಟ್ಟ. “ರೋಪ್ ಟ್ರಿಕ್’ ಕಟ್ಟುಕತೆಯಲ್ಲ, “ಸಾಧ್ಯಕತೆ’ ಎಂಬುದು ದಾಖಲಾಯಿತು.
2001ರಲ್ಲಿ ನಡೆದ ಗಿಲಿಗಿಲಿ ಸಮ್ಮೇಳನದಲ್ಲಿ ಸುಮಾರು 700 ಜಾದೂಗಾರರು ಭಾಗವಹಿಸಿದ್ದರು. ಕೆನಡಾದ ಪ್ರಸಿದ್ಧ ಜಾದೂಗಾರ ಡೀನ್ ಗುನ್ನರ್‌ಸನ್ ಅಜ್ಜರಕಾಡು ಮೈದಾನದಲ್ಲಿ ಸ್ಟ್ರೇಟ್ ಜಾಕೆಟ್ ಎಸ್ಕೇಪ್ ಪ್ರದರ್ಶನ ನಡೆಸಿದಾಗ 50,000 ಜನರು ವೀಕ್ಷಿಸಿದ್ದು ದಾಖಲೆ. ಅಮೆರಿಕದಲ್ಲಿ ಕ್ರಿಮಿನಲ್‌ಗಳಿಗೆ ಜಾಕೆಟ್‌ನ್ನು ರಿವರ್ಸ್ ಆಗಿ ಹಾಕಿ ಕೋಳಗಳಿಂದ ಬಂಧಿಸುತ್ತಾರೆ. 200 ಅಡಿ ಎತ್ತರದಲ್ಲಿ ಕ್ರೇನ್ ಮೂಲಕ ಗುನ್ನರ್‌ಸನ್‌ನ್ನು ಈ ತೆರನಾಗಿ ಬಂಧಿಸಿ ಎತ್ತರಕ್ಕೊಯ್ಯುತ್ತಾರೆ. ಅಲ್ಲಿ ತುದಿಗೆ ಹಗ್ಗವನ್ನು ಜೋಡಿಸಿಟ್ಟು ಪೆಟ್ರೋಲ್‌ನಿಂದ ಬೆಂಕಿ ಕೊಡುತ್ತಾರೆ. ಬೆಂಕಿ ಹೊತ್ತಿ ಕೊಳ್ಳುವ ಕ್ಷಣಾರ್ಧದಲ್ಲಿ ಗುನ್ನರ್‌ಸನ್ ಆ ಬಂಧನದಿಂದ ಪಾರಾಗಿ ಕೆಳಕ್ಕೆ ಜಿಗಿಯುತ್ತಾರೆ. ಆಗ ನೋಡಬೇಕಿತ್ತು ಜನರ ಕುತೂಹಲ, ಅಚ್ಚರಿ. ಆ ಸಮಯ ದಲ್ಲಿ ಉಡುಪಿಯ ಗಲ್ಲಿಗಲ್ಲಿಗಳಲ್ಲೂ ಸ್ಟ್ರೀಟ್ ಮೆಜಿಶಿ ಯನ್‌ಗಳಿದ್ದು ಸಾರ್ವಜನಿಕರ ಕುತೂಹಲಗಳನ್ನು ಹೆಚ್ಚಿಸಿದರು. ಇದೇ ಗುನ್ನರ್‌ಸನ್ 2015ರಲ್ಲಿ ಉಡುಪಿಗೆ ಬಂದಾಗ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾ ನದಲ್ಲಿ ಭೂಗತನಾಗಿ 24 ಗಂಟೆ ಇದ್ದು ಬಿಟ್ಟರು. ಇದಕ್ಕೆ ಸಾಕ್ಷಿಯಾಗಿ ಸಿಸಿ ಕೆಮರಾ ಅಳವಡಿಸಿದ್ದು ಜನರೊಂದಿಗೆ ಮಾತನಾಡುತ್ತಿದ್ದರು.
“ಭಾರತದಲ್ಲಿ ಇಂಥದ್ದೊಂದು ಪ್ರದರ್ಶನ ನೀಡಬೇಕು. ಇಲ್ಲವಾದರೆ ಭಾರತವನ್ನು ಬಿಟ್ಟು ಬೇರೆಡೆ ನಡೆಸುತ್ತೇನೆ’ ಎಂದು ನಿಡುಗಾಲದ ಮಿತ್ರ ಶಂಕರ್‌ಗೆ ಹೇಳಿದಾಗ ಶಂಕರ್ ಭಾರತದಲ್ಲಿಯಾಗುವುದಷ್ಟೇ ಅಲ್ಲದೆ ಉಡುಪಿಯಲ್ಲಿಯೇ ಆಗಮಾಡಿಸಿದರು.
ಮೂಲತಃ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಯವರಾದ ಪ್ರೊ|ಶಂಕರ್ ಉಡುಪಿಯಲ್ಲಿ ನೆಲೆಯಾಗಲು ಕಾರಣವಾದದ್ದು ಸಿಂಡಿಕೇಟ್ ಬ್ಯಾಂಕ್, ಇದಕ್ಕೂ ಕಾರಣವಾದದ್ದು ಜಾದೂ ಕಲೆ. ಜಪಾನ್‌ನಲ್ಲಿ ಫಾರ್ಮಸುಟಿಕಲ್ ಕಂಪೆನಿಯವರು ತಮ್ಮ ಉತ್ಪನ್ನಗಳ ಪ್ರಚಾರಾರ್ಥ ಜಾದೂಗಾ ರನೊಬ್ಬನನ್ನು ನೇಮಿಸಿಕೊಂಡದ್ದು ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಕೆ.ಪೈಯವರಿಗೆ ತಿಳಿದು ಪ್ರೊ|ಶಂಕರ್‌ರನ್ನು ಬ್ಯಾಂಕ್‌ಗೆ ಸಿಬಂದಿಯಾಗಿ ನೇಮಿಸಿಕೊಂಡರು. ಇದಕ್ಕೂ ಮುನ್ನ ಅರ್ಜಿ ಹಾಕಿದ್ದಾಗ ಪೂರ್ಣಕಾಲೀನ ವೃತ್ತಿಪರ ಜಾದೂ ಗಾರನಾಗು ಎಂದು ಸಾಲವನ್ನು ಮಂಜೂರು ಮಾಡಿದವರೂ ಕೆ.ಕೆ.ಪೈಯವರೇ.
ದೇಶ, ವಿದೇಶಗಳಲ್ಲಿ ಒಟ್ಟಾರೆ 15,000ಕ್ಕೂ ಹೆಚ್ಚು ಪ್ರದರ್ಶನ ನೀಡಿದ ಹೆಗ್ಗಳಿಕೆ ಪ್ರೊ|ಶಂಕರ್ ಅವರ ದಾಗಿದೆ.
ಜಾದೂಗಾರಿಕೆಗೆ ಒಂದು ಸಬಲ ತಂಡ ಬೇಕಿ ರುತ್ತದೆ. ಪ್ರೊ|ಶಂಕರ್ ಅವರ ಮಕ್ಕಳು, ಪತ್ನಿಯವರಲ್ಲದೆ ಸ್ನೇಹಿತರ ದೊಡ್ಡ ಪಡೆಯನ್ನು ಜಾದೂ ಕಲೆ ಸೃಷ್ಟಿಸಿಕೊಂಡಿದೆ. ನಿವೃತ್ತಿ ಬಳಿಕವೂ ಸಾರ್ವಜನಿಕ ಪ್ರದರ್ಶನ ನೀಡಲು ತಂಡಕ್ಕೆ ಪ್ರೊ|ಶಂಕರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಒತ್ತಡ, ಮಾನಸಿಕ ವೇದನೆಯಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಶಂಕರ್ ಜಾದೂಕಲೆ ಮೂಲಕ ಒಂದಿಷ್ಟು ಶಾಂತತೆಯನ್ನು ಸಿಂಪಡಿಸುತ್ತಿದ್ದಾರೆ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.