Tabla Maestro; ಉಸ್ತಾದ್ ಜಾಕೀರ್ ಹುಸೇನ್ ದೈವೀ ಪುರುಷ
ಶಾಸ್ತ್ರೀಯ ಸಂಗೀತವನ್ನು ವಿಶ್ವಮಟ್ಟಕ್ಕೇರಿಸಿ, ವಿನೂತನ ಯೋಚನೆಗಳಿಗೆ ನಾಂದಿ ಹಾಡಿದ್ದ ಜಾಕಿರ್
Team Udayavani, Dec 17, 2024, 7:55 AM IST
ಬೆಂಗಳೂರು: ನಾನು ಕಂಡ ಹಾಗೆ ಉಸ್ತಾದ್ ಜಾಕೀರ್ ಹುಸೇನ್ ಅವರು ಸಾಮಾನ್ಯ ವ್ಯಕ್ತಿಗಳ ಸಾಲಿನಲ್ಲಿ ಬರುವುದೇ ಇಲ್ಲ. ಅವರನ್ನು “ದೈವೀ ಪುರುಷ’ ಎನ್ನಬಹುದು. ವೇದಿಕೆ ಮೇಲಾ ಗಲಿ, ವೇದಿಕೆಯಿಂದ ಆಚೆಯಾಗಲಿ ಸಂಗೀತಗಾರ
ರಿಗೂ ಅವರು ದೇವರ ರೀತಿಯೇ ಇದ್ದರು.
ಅವರಂಥ ವ್ಯಕ್ತಿ, ವ್ಯಕ್ತಿತ್ವ ಬಹಳ ವಿರಳ. ಚಿಕ್ಕಂದಿ ನಿಂದಲೂ ಅವರು ನನಗೆ ದೊಡ್ಡ ಸ್ಫೂರ್ತಿ. ನಾನು ಅವರಂತೆಯೇ ಕೂದಲು ಬಿಡಬೇಕು ಎಂದು ಹಠ ಮಾಡುತ್ತಿದ್ದೆನಂತೆ; ಅದನ್ನು ಈಗಲೂ ನನ್ನ ತಾಯಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಮುಂದೆ ನಾನು ಕಲಾವಿದನಾಗಿ ಬೆಳೆದ ಮೇಲೆ ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಸಂಗೀತದ ಕೃಷಿ, ಶಾಸ್ತ್ರೀಯ ಸಂಗೀತವನ್ನು ವಿಶ್ವಮಟ್ಟಕ್ಕೆ ಬೆಳೆಸುವ ಬಗೆ ಹೀಗೆ ಹೊಸ ಯೋಚನೆಗಳಿಗೆ ಅವರು ನಾಂದಿ ಹಾಡಿದವರು. ಮುಂದೆ ಅದೇ ದಾರಿದೀಪ ವಾಯಿತು. “ಫ್ಯೂಶನ್ ಸಂಗೀತ’ವನ್ನು ಹೇಗೆ ಮಾಡ ಬಹುದು ಎಂದು ತೋರಿಸಿಕೊಟ್ಟಿದ್ದು ಅವರೇ.
ಬಹುಮುಖ ಪ್ರತಿಭೆ
ಬಹುತೇಕ ಕಲಾವಿದರು ತಮ್ಮ ವಾದ್ಯದಲ್ಲಿ ಮಾತ್ರ ಪ್ರಾವೀಣ್ಯ ಹೊಂದಿರುತ್ತಾರೆ. ಆದರೆ ಜಾಕೀರ್ ಭಾಯ್ ತಬಲಾ ಅಷ್ಟೇ ಅಲ್ಲ, ಅದ್ಭುತವಾಗಿ ಪಿಯಾನೊ ಹಾಗೂ ಡ್ರಮ್ಸ್ ನುಡಿಸುತ್ತಿದ್ದರು. ಸಂಗೀತ ಸಂಯೋಜಕರಾಗಿದ್ದರು, ನಟನೆ ಕೂಡ ಮಾಡಿದ್ದರು. ತಬಲಾದ ಡಗ್ಗಾದಲ್ಲಿ ಸರಿಗಮ ನುಡಿಸಿರುವ ಮೊಟ್ಟಮೊದಲ ಕಲಾವಿದ ಇವರು. ಪಂ| ಶಿವಕುಮಾರ್ ಶರ್ಮಾ ಅವರ ಸಂತೂರ್ ಜತೆಗೆ, ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿಯ ಜತೆ -ಹೀಗೆ ಅನೇಕ ಜುಗಲ್‌ಬಂದಿಗಳಲ್ಲಿ ಅವರು ಏನು ಸ್ವರ ನುಡಿಸುತ್ತಿದ್ದರೋ ಅದನ್ನೇ ಇವರು ಡಗ್ಗಾದಲ್ಲಿ ನುಡಿಸುತ್ತಿದ್ದರು. ಅಷ್ಟರಮಟ್ಟಿಗೆ ಅವರಿಗೆ ಸ್ವರ, ಲಯಗಳು ಒಲಿದಿದ್ದವು.
ಅವರು “ಭಲೇ’ ಎಂದದ್ದು ಇನ್ನೂ ನೆನಪಿದೆ
ಜಾಕೀರ್ ಅವರು ತಮ್ಮ ಸಹ ಕಲಾವಿದರ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಡಾ.| ಎಂ. ಬಾಲಮುರಳಿಕೃಷ್ಣ ಅವರ ಗಾಯನ, ಜಾಕೀರ್ ಹುಸೇನ್ ಅವರ ತಬಲಾ ಹಾಗೂ ನನ್ನ ಕೊಳಲು ವಾದನ… ನಾವು ಮೂವರು ಚೆನ್ನೈಯಲ್ಲಿ ಒಂದು ಕಾರ್ಯಕ್ರಮ ನೀಡಿದ್ದ ಪ್ರಸಂಗ.
ಆಗ ನನ್ನ ಕಣ್ಣಾರೆ ನೋಡಿ, ಅನುಭವಿಸಿದ್ದು ಎಂದರೆ, ಆ ಇಬ್ಬರೂ ದೈವಿ ಪುರುಷರು ಕಾರ್ಯಕ್ರಮ ನಡೆಯುವಾಗ ಪರಸ್ಪರ ಮುಖ ನೋಡುತ್ತಿರಲಿಲ್ಲ. ಆದರೆ ಕೃಷ್ಣ ಅವರು ಮುಂದೆ ಏನು ಹಾಡುತ್ತಾರೆಂಬುದು ಜಾಕೀರ್ ಅವರಿಗೆ ಗೊತ್ತಿರುತ್ತಿತ್ತು, ಜಾಕೀರ್ ಅವರು ಏನು ನುಡಿಸುತ್ತಾರೆ ಎಂಬುದು ಕೃಷ್ಣ ಅವರಿಗೆ ತಿಳಿದಿರುತ್ತಿತ್ತು. ಜಾಕೀರ್ ಅವರೊಂದಿಗೆ ನನ್ನ ಮೊದಲ ಕಾರ್ಯಕ್ರಮವದು. ನಾನು ಕೊಳಲು ನುಡಿಸಿ, ಮುಕ್ತಾಯ ಮಾಡುವ ಹೊತ್ತಿಗೆ ಅವರಿಬ್ಬರೂ “ಭಲೇ!’ ಎಂದಿದ್ದರು. ಜಾಕೀರ್ ಅವರು “ಭಲೇ’ ಎಂದದ್ದು ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. ಯುವ ಕಲಾವಿದರನ್ನು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು.
ಇನ್ನೊಂದು ಕಾರ್ಯಕ್ರಮದಲ್ಲಿ ನಾನು ಜಾಕೀರ್ ಅವರ ಆಟೋಗ್ರಾಫ್ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದೆ. ಅವರು ನನ್ನನ್ನು ನೋಡಿದ ತತ್‌ಕ್ಷಣ ನೇರವಾಗಿ ಬಂದು, “ನೀವು ಯಾಕೆ ಇಲ್ಲಿ ನಿಂತಿದ್ದೀರಿ? ಬನ್ನಿ ನನ್ನ ಜತೆ’ ಎಂದು ನನ್ನ ಕೈಹಿಡಿದು ಕರೆದುಕೊಂಡು ಹೋಗಿ, ವಿಶ್ವವಿಖ್ಯಾತ ಗಿಟಾರ್ ವಾದಕ ಜಾನ್ ಮೆಕ್ಲಾಫಿನ್, ಮ್ಯಾಂಡೊಲಿನ್ ಶ್ರೀನಿವಾಸ್ ಅವರನ್ನು ಭೇಟಿ ಮಾಡಿಸಿದರು. ಇವರು ದಕ್ಷಿಣ ಭಾರತದ ಖ್ಯಾತ ಕೊಳಲು ವಾದಕ, ಇವರ ಜತೆ ನೀವು ಕಾರ್ಯಕ್ರಮ ನೀಡಬೇಕು ಎಂದೆಲ್ಲ ಹೇಳಿದ್ದರು. ಜಾಕೀರ್ ಭಾಯ್ ಮುಂದೆ ಎಲ್ಲೆ ಸಿಕ್ಕಿದರೂ ಬಹಳ ಪ್ರೀತಿ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು.
ಅವರ ಆಗಮನಕ್ಕೇ ಚಪ್ಪಾಳೆ ಸುರಿಮಳೆ
1992-93ರಲ್ಲಿ ಹುಬ್ಬಳ್ಳಿಯಲ್ಲಿ ಡಾ| ಗಂಗೂಬಾಯಿ ಹಾನಗಲ್ ಅವರು ಒಂದು ವಾರದ ದೊಡ್ಡ ಸಂಗೀತ ಸಮ್ಮೇಳನ ಆಯೋಜಿಸಿದ್ದರು. ದೇಶದ ದಿಗ್ಗಜ ಕಲಾವಿದರೆಲ್ಲ ಭಾಗವಹಿಸಿದ್ದರು. ಜಾಕೀರ್ ಭಾಯ್ ಅವರ ಕಾರ್ಯಕ್ರಮದ ದಿನ ಅವರು ವೇದಿಕೆ ಬಂದ ತತ್‌ಕ್ಷಣ ಸಾವಿರಾರು ಜನರಿಂದ ಚಪ್ಪಾಳೆ ಕೇಳಿಬಂದಿತ್ತು. ಇದು ಅವರ ಕಾರ್ಯಕ್ರಮಕ್ಕಲ್ಲ, ಬರೇ ಅವರು ವೇದಿಕೆಗೆ ಬಂದದಕ್ಕೆ! ಆಗಲೇ ಅವರಿಗೆ ಅಷ್ಟೊಂದು ವರ್ಚಸ್ಸು, ಜನಪ್ರಿಯತೆ ಇತ್ತು. ಜಾಕೀರ್ ಗತ್ ಆರಂಭಿಸಿ, ಕೇವಲ “ತಕತಿಟತಿಟಕ ಧಾ’ ಇಷ್ಟೇ ಗತ್ ನುಡಿಸಿದರು; ಕೇವಲ ಇಷ್ಟಕ್ಕೆ ನೆರೆದಿದ್ದ ಪ್ರೇಕ್ಷಕರು ಸುಮಾರು ಎರಡೂವರೆ ನಿಮಿಷ ಚಪ್ಪಾಳೆ ಹೊಡೆದಿದ್ದರು. ಅವರ ಸೋಲೋ ಕಛೇರಿ ಹೊರತುಪಡಿಸಿ ಉಳಿದೆಲ್ಲ ಕಛೇರಿಗಳಲ್ಲಿ, ಮುಖ್ಯ ಕಲಾವಿದರು ದೊಡ್ಡವರಿರಲಿ, ಸಣ್ಣವರಿರಲಿ ಅವರಿಗೇ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದರು. ಎಂದಿಗೂ ಪ್ರೇಕ್ಷಕರಿಗೆ ಮುಖ ಮಾಡಿ ಕುಳಿತುಕೊಳ್ಳುತ್ತಿರಲಿಲ್ಲ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.
ವಿಶ್ವ ಸಾಧಕ
ಕೇವಲ ಹಿಂದೂಸ್ಥಾನಿ ಅಷ್ಟೇ ಅಲ್ಲ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅವರು ಕಲಿತಿದ್ದರು. ಇಡೀ ಸಂಗೀತ ಕ್ಷೇತ್ರಕ್ಕೆ ಅವರೊಂದು ಪ್ರೇರಣೆ. ಕರ್ನಾಟಕದಾದ್ಯಂತ ಅವರ ಕಾರ್ಯಕ್ರಮಗಳಾಗಿವೆ. ವಿಶ್ವದಲ್ಲಿ ಎಲ್ಲೇ ಅವರ ಕಾರ್ಯಕ್ರಮ ಇರಲಿ, ಹೌಸ್‌ಫುಲ್ ಇರುತ್ತಿತ್ತು. ಎಲ್ಲ ಟಿಕೆಟ್‌ಗಳು ಪ್ರದರ್ಶನದ ಮುಂಚೆಯೇ ಮಾರಾಟವಾಗುತ್ತಿದ್ದವು. ಭಾರತೀಯ ಕಲಾವಿದರೊಬ್ಬರು ವಿಶ್ವಮಟ್ಟದಲ್ಲಿ ಈ ರೀತಿಯ ಸಾಧನೆ ಮಾಡಿರುವುದು ಒಂದು ಹೆಗ್ಗಳಿಕೆ. ಅವರ ಜತೆ ನಾನು ಕಾಲ ಕಳೆದಿರುವುದು ನನ್ನ ಸೌಭಾಗ್ಯ, ಪುಣ್ಯ. ಅವರೊಂದು ಜ್ಞಾನ ಭಂಡಾರ. ಇತ್ತೀಚೆಗೆ ನಾನು ಅಮೆರಿಕ ಕಾರ್ಯಕ್ರಮಕ್ಕೆ ಹೋದಾಗ ಅವರಿಗೆ ಮೆಸೆಜ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಇಷ್ಟು ಬೇಗ ಅವರು ನಮ್ಮನ್ನು ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಇದೊಂದು ದೊಡ್ಡ ಆಘಾತ.
-ಡಾ| ಪ್ರವೀಣ್ ಗೋಡ್ಖಿಂಡಿ,
ಖ್ಯಾತ ಕೊಳಲು ವಾದಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ
Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.