New Airstrip: ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣಕ್ಕೆ ಜಮೀನು ತೊಡಕು!
ಕಲ್ಮಂಜ, ಲಾಯಿಲದಲ್ಲಿ 140 ಎಕ್ರೆ ಭೂಮಿ ಸಿಗದೆ ಆರಂಭಿಕ ಹಿನ್ನಡೆ, ಪರ್ಯಾಯ ಭೂಮಿ ಹುಡುಕಾಟದಲ್ಲಿ ಜಿಲ್ಲಾಡಳಿತ
Team Udayavani, Dec 18, 2024, 7:25 AM IST
ಮಂಗಳೂರು: ಪ್ರವಾಸೋದ್ಯಮವನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಿನಿ ವಿಮಾನ ನಿಲ್ದಾಣಕ್ಕೆ (ಏರ್ ಸ್ಟ್ರಿಪ್) ಈಗ ಜಮೀನು ತೊಡಕು ಕಾಡುತ್ತಿದೆ.
ಮಿನಿ ವಿಮಾನ ನಿಲ್ದಾಣ ಮಾಡುವು ದಾದರೆ ಕನಿಷ್ಠ 140 ಎಕ್ರೆ ಜಮೀನು ಅಗತ್ಯವಿದೆ. ಆದರೆ ಜಿಲ್ಲಾಡಳಿತವು ಗುರುತಿಸಿದ್ದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಹಾಗೂ ಲಾಯಿಲ ಗ್ರಾಮಗಳ ಜಮೀನನ್ನು ಪರಿಶೀಲಿಸಿದ ಮೂಲಸೌಕರ್ಯ ಅಭಿವೃದ್ಧಿ ನಿಗಮದ ತಾಂತ್ರಿಕ ತಂಡ, ಈ ಜಾಗ ಸೂಕ್ತವಾಗಿಲ್ಲ ಎಂದು ತಿಳಿಸಿದೆ. ಜತೆಗೆ ಸದ್ಯ ಲಭ್ಯವಿರುವ ಜಮೀನು ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಾಲುತ್ತಿಲ್ಲ ಎಂದಿದೆ.
ನಿಗದಿತ ಜಮೀನಿನ ಸ್ಥಿತಿಗತಿಯನ್ನು ಕಂದಾಯ, ಮಾಲಿನ್ಯ, ಭೂವಿಜ್ಞಾನ, ಭೂಮಾಪನ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿದ್ದಾರೆ. ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳೂ ಪರಿಶೀಲಿಸಿದ್ದಾರೆ. ಈ ಜಾಗವು ಏರು ತಗ್ಗುಗಳಿಂದ ಕೂಡಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದ್ದು ಜತೆಗೆ ಅರಣ್ಯ ಇಲಾಖೆಯ ವಶದಲ್ಲಿರುವ ಅಕೇಶಿಯಾ ಹಾಗೂ ನೆಡುತೋಪುಗಳು ಇಲ್ಲಿರುವುದನ್ನು ಪರಿಶೀಲಿಸಲಾಗಿತ್ತು.
ಪರ್ಯಾಯ ಜಾಗಕ್ಕೆ ಹುಡುಕಾಟ
ಈಗ ಪರ್ಯಾಯ ಸ್ಥಳಗಳನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಂದ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಸೂಚನೆ ಬಂದಿದ್ದು, ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ.
ದ.ಕ. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಈಗ ನಿಗದಿ ಮಾಡಿರುವ ಜಾಗ ಸೂಕ್ತ ಅಲ್ಲ ಎಂಬುದಾಗಿ ಸ್ಥಳ ಪರಿಶೀಲಿಸಿದ ವಿಮಾನ ನಿಲ್ದಾಣ ಸಚಿವಾಲಯದ ತಾಂತ್ರಿಕ ತಂಡ ತಿಳಿಸಿದೆ. ಪರ್ಯಾಯ ಜಾಗ ಪರಿಶೀಲನೆಯ ಹಂತದ ಲ್ಲಿದೆ. ಇನ್ನೂ ಅಂತಿಮ ಆಗಿಲ್ಲ’ ಎಂದರು.
ಮಿನಿ ವಿಮಾನ ನಿರ್ವಹಣೆ ಅವಕಾಶ
“ಬೆಳ್ತಂಗಡಿ ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣದ ಸ್ಥಾಪನೆ ಅಗತ್ಯವಾಗಿದೆ. ಎಟಿಆರ್‌ಗಳು, 12 ಆಸನಗಳ ವಿಮಾನ ಹಾಗೂ ನಾಲ್ಕು ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು 2022ರಲ್ಲಿ ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿದ್ದ ವಿ.ಸೋಮಣ್ಣ ತಿಳಿಸಿದ್ದರು. ಜಿಲ್ಲಾಡಳಿತದಿಂದ ಜಮೀನು ನಿಗದಿ ಮಾಡುವ ಕಾರ್ಯ ನಡೆದಿತ್ತು.
3 ಏರ್‌ಸ್ಟ್ರಿಪ್‌ನಲ್ಲಿ 2 ಪ್ರಗತಿ; 1 ಬಾಕಿ!
ಪ್ರವಾಸೋದ್ಯಮ ಹಾಗೂ ಉದ್ಯಮ ವಲಯವನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ 2023-24ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಧರ್ಮಸ್ಥಳ, ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಹೊಸ ಏರ್‌ಸ್ಟ್ರಿಪ್‌ಗ್ಳನ್ನು ಅಭಿವೃದ್ಧಿಪಡಿಸುವ ಯೋಜನೆ ಪ್ರಕಟಿಸಿತ್ತು. ಈ ಪೈಕಿ ಚಿಕ್ಕಮಗಳೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಕೊಡಗು ಏರ್‌ಸ್ಟ್ರಿಪ್‌ಗೆ ಕುಶಾಲನಗರ ಸಮೀಪ ಜಮೀನು ಗುರುತಿಸಿದ್ದು, ತಾಂತ್ರಿಕ ತಂಡದ ಪರಿಶೀಲನೆ ನಡೆಯುತ್ತಿದೆ.
ಪರ್ಯಾಯ ಸ್ಥಳ ಪರಿಶೀಲನೆ
ಧರ್ಮಸ್ಥಳದ ಮಿನಿ ವಿಮಾನ ನಿಲ್ದಾಣಕ್ಕೆ ಪರ್ಯಾಯ ಜಾಗ ನಿಗದಿ ಮಾಡುವಂತೆ ಈಗಾಗಲೇ ಸೂಚನೆ ಬಂದಿದೆ. ಈ ಕುರಿತಂತೆ ಪರಿಶೀಲನೆ ನಡೆಯುತ್ತಿದೆ.
ಮುಲ್ಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.