Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
ಕೈಕುಂಜೆ ಭಾಗದಿಂದ ವಿಪರೀತ ದುರ್ನಾತ; ಸಂಸದರು, ರೈಲ್ವೇ ಇಲಾಖೆಗೆ ದೂರು ನೀಡಲು ಸಿದ್ಧತೆ
Team Udayavani, Dec 18, 2024, 12:54 PM IST
ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆ ಭಾಗದ ರೈಲ್ವೇ ಸೇತುವೆಯ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ರೈಲ್ವೇ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಕೊಳೆತ ತ್ಯಾಜ್ಯ ಎಸೆದಿರುವ ಪರಿಣಾಮ ದುರ್ನಾತದಿಂದ ಕೈಕುಂಜೆ ಪೂರ್ವ ಬಡಾವಣೆಯ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಕಠಿನ ಕ್ರಮಕ್ಕಾಗಿ ಸ್ಥಳೀಯರು ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಹಾಗೂ ರೈಲ್ವೇ ಇಲಾಖೆಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.
ಬಂಟ್ವಾಳ ರೈಲ್ವೇ ನಿಲ್ದಾಣದ ಅನತಿ ದೂರದಲ್ಲಿ ಈ ಪ್ರದೇಶವಿದ್ದು, ಪೊದೆಗಳಲ್ಲಿ ಕೊಳೆತ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳು ಕಂಡುಬಂದಿದ್ದು, ಆಹಾರ ಕೊಳೆತಿರುವ ಕಾರಣದಿಂದ ದುರ್ನಾತ ಬೀರುತ್ತಿದೆ. ಈ ಸಮಸ್ಯೆ ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳು ಮೂಗು ಬಿಡದ ಸ್ಥಿತಿ ಇದೆ. ಕೈಕುಂಜೆ ಬಡಾವಣೆಗೆ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಗ್ರಹದ ವಾಹನ ನಿತ್ಯ ಆಗಮಿಸುತ್ತಿದ್ದು, ಸ್ಥಳೀಯರು ತಮ್ಮ ತ್ಯಾಜ್ಯವನ್ನು ಈ ವಾಹನಗಳಿಗೆ ನೀಡುತ್ತಿದ್ದಾರೆ.
ಹೀಗಾಗಿ ಹೊರಗಿನವರೇ ಈ ರೀತಿ ತ್ಯಾಜ್ಯವನ್ನು ಎಸೆಯುತ್ತಿದ್ದು, ಜಾಗವು ರೈಲ್ವೇ ಇಲಾಖೆಗೆ ಸಂಬಂಧಪಟ್ಟಿರುವುದರಿಂದ ಇಲಾಖೆ ಕ್ರಮಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ. ರೈಲ್ವೇ ನಿಲ್ದಾಣ ಪರಿಸರದಲ್ಲಿ ಸಾಕಷ್ಟು ಮಂದಿ ಅಪರಿಚಿತರು ಓಡಾಡುತ್ತಿದ್ದು, ಅವರೇ ಆಹಾರವನ್ನು ತಂದು ಅಲ್ಲಿ ಸೇವಿಸಿ ಉಳಿದುದನ್ನು ಬಿಸಾಡಿ ಹೋಗುವ ಸಾಧ್ಯತೆ ಇರುವುದರಿಂದ ಇಲಾಖೆ ಇಂತಹ ಅಪರಿಚಿತರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂಬುದು ಕೈಕುಂಜೆ ಬಡಾವಣೆ ನಿವಾಸಿಗಳ ಆಗ್ರಹವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.