Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಾಣಂತಿ-ಮಕ್ಕಳ ಸರಣಿ ಸಾವು ಪ್ರಕರಣ
Team Udayavani, Dec 19, 2024, 6:45 AM IST
ಬೆಳಗಾವಿ: ಜಿಲ್ಲಾಸ್ಪತ್ರೆಗಳ ಸಂಭವಿಸಿದ ಬಾಣಂತಿ-ಮಕ್ಕಳ ಸರಣಿ ಸಾವು ಪ್ರಕರಣಗಳು ಬುಧವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತಲ್ಲದೆ, ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರೆ, ಇದು ಕೊಲೆಗಡುಕ ಸರಕಾರ ಎಂದು ಡಾ| .ಸಿ.ಎನ್. ಅಶ್ವತ್ಥನಾರಾಯಣ ಗುಡುಗಿದರು.
ಬುಧವಾರ ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅಶೋಕ್, ಇದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಅನಂತರ ಸರಕಾರ ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆಯೇ ರೋಗಪೀಡಿತವಾಗಿದೆ. ಡ್ರಗ್ ಮಾಫಿಯಾದ ಸುಳಿಯಲ್ಲಿ ಸಿಲುಕಿದೆ ಎಂದು ಆರೋಪಿಸಿದರು.
ಕಳೆದ 1 ತಿಂಗಳಲ್ಲಿ ದಾವಣಗೆರೆಯಲ್ಲಿ 28 ಬಾಣಂತಿಯರು ಮೃತಪಟ್ಟಿದ್ದರೆ, ರಾಯಚೂರಿನಲ್ಲಿ 3 ತಿಂಗಳಲ್ಲಿ 10 ಬಾಣಂತಿಯರ ಸಾವಾಗಿದೆ. ಕಲಬುರಗಿ, ಚಿತ್ರದುರ್ಗ, ಪಾವಗಡ ಹೀಗೆ ಹಲವೆಡೆ ಬಾಣಂತಿ-ಶಿಶು ಮೃತಪಟ್ಟಿದ್ದು, ಬಳ್ಳಾರಿಗೆ ಮಾತ್ರ ಪ್ರಕರಣ ಸೀಮಿತವಾಗಿಲ್ಲ ಎಂದು ಗಮನ ಸೆಳೆದರು.ಅವಧಿ ಮುಗಿದ ಔಷಧ ಇಡಲಾಗಿತ್ತು ಎಂಬ ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಸರಬರಾಜಾದ ದ್ರಾವಣದಿಂದಲೇ ಸಾವು ಸಂಭವಿಸಿರುವುದು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಹಾಗಿದ್ದರೆ, ರಿಂಗಲ್ ಲ್ಯಾಕ್ಟೇಟ್ ದ್ರಾವಣವನ್ನು ಪಶ್ಚಿಮ ಬಂಗಾ ಫಾರ್ಮಾಸುಟಿಕಲ್ಸ್ ಕಂಪೆನಿಯು ಹೇಗೆ ನಮ್ಮ ವೈದ್ಯಕೀಯ ಸರಬರಾಜು ನಿಗಮದ ಉಗ್ರಾಣ ಸೇರಿತು? ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು ಸಂಭವಿಸಿದ ಬಳಿಕ 37 ಬ್ಯಾಚ್ ಔಷಧಗಳನ್ನು ಫ್ರೀಜ್ ಮಾಡಿದ್ದಾಗಿ ಹೇಳಿದ್ದೀರಿ. ಆದರೂ ಅದು ಸರಬರಾಜಾದದ್ದು ಹೇಗೆ? ಅವರನ್ನು ಕೇವಲ ಕಪ್ಪು ಪಟ್ಟಿಗೆ ಸೇರಿಸಿದರೆ ಸಾಕೆ? ಅವರು ಇನ್ನಾರು ತಿಂಗಳಲ್ಲಿ ವೈಟ್ ಲಿಸ್ಟ್ ಗೆ ಬರುತ್ತಾರೆ. ಬಡವರು ಚಿಕಿತ್ಸೆ ಪಡೆಯುವ ಸರಕಾರಿ ಆಸ್ಪತ್ರೆ ಮೇಲೆ ಜನರಿಗೆ ನಂಬಿಕೆ ಬರಬೇಕು. ಈ ಹಿಂದೆ ಎಷ್ಟು ಸಾವಾಗಿತ್ತು ಎಂಬುದರ ತಾಳೆ ಮಾಡಿಕೊಂಡು ಅಥವಾ ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎನ್ನುವ ಉತ್ತರ ಬೇಡ. ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸಿದರು.
ದಿನೇಶ್ ಗುಂಡೂರಾವ್ ವಜಾಗೊಳಿಸಿ
ಆರೋಗ್ಯ ಇಲಾಖೆಯಲ್ಲಿ ನಿಯಮ ಹಾಗೂ ಮನಸ್ಸು ಎರಡೂ ಅನ್ವಯಿಸದೆ ಕೆಲಸ ಮಾಡಲಾಗುತ್ತಿದೆ. 2023-24ರ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಇಟ್ಟಿದ್ದ 12 ಸಾವಿರ ಕೋಟಿ ರೂ.ಗಳಲ್ಲಿ ಶೇ. 60ರಷ್ಟು ಖರ್ಚು ಮಾಡಿದ್ದು, ಈ ಬಾರಿ ಈವರೆಗೆ ಕೇವಲ ಶೇ. 23ರಷ್ಟು ಖರ್ಚು ಮಾಡಲಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆಯ ಶೇ. 40, 15ನೇ ಹಣಕಾಸು ಆಯೋಗದ ಶೇ. 50ರಷ್ಟು ಹಣ ಮಾತ್ರ ಬಳಸಲಾಗಿದೆ. 108 ಆ್ಯಂಬುಲೆನ್ಸ್ ಸೇವೆಯಲ್ಲಿ ಜಿಪಿಎಸ್ ಇಲ್ಲ, ಸಿಬಂದಿಗೆ ಸಂಬಳ ಆಗಿಲ್ಲ. ಆ್ಯಂಬುಲೆನ್ಸ್ ಶವಾಗಾರದಂತಾಗಿವೆ. ಈ ಹಿಂದೆ ಭ್ರೂಣ ಹತ್ಯೆ ಪ್ರಕರಣಗಳು ನಡೆದಾಗಲೇ ಸರಕಾರವನ್ನು ಎಚ್ಚರಿಸಿದ್ದೆವು. ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಗೆ ಈಗಲೂ ರಾಷ್ಟ್ರೀಯ ಮಾನ್ಯತೆ ಇಲ್ಲ. ಐಸಿಯು, ಟ್ರಾಮಾ ಕೇಂದ್ರಗಳು ಕೆಲಸ ಮಾಡುತ್ತಿಲ್ಲ. ಔಷಧ ನಿಗಮದಲ್ಲಿ ಲಭ್ಯ ಇರಬೇಕಿದ್ದ 761 ಅಗತ್ಯ ಔಷಧಿಗಳ ಪೈಕಿ 253 ಔಷಧಿಗಳು ಮಾತ್ರ ಇವೆ. ಸರಕಾರ ಮೈಮರೆತಿರುವುದರಿಂದ ಬಾಣಂತಿಯರ ಸಾವು ಸಂಭವಿಸಿದೆ. ಇಷ್ಟಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಣ್ಣ ವಿಷಾದ, ಬೇಸರವೂ ಇಲ್ಲ. ಇದು ಕೊಲೆಗಡುಕ ಸರಕಾರ. ಈ ಕೂಡಲೇ ಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಸಂಪುಟದಿಂದ ವಜಾಗೊಳಿಸಬೇಕು ಎಂದು ಡಾ| ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ ಬೇಡ
ಬೆಳಗಾವಿ: ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್‌ಗಳು ಇರಬಾರದು. ತತ್‌ಕ್ಷಣ ತೆಗೆದು ಹಾಕಿ ಎಂದು ಬಿಜೆಪಿಯ ಡಾ| ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದರು.
ಬಾಣಂತಿಯರ ಸರಣಿ ಸಾವು ಕುರಿತ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ. ಆದರೆ, ಈವರೆಗೆ ಈ ವಿಚಾರ ಆರೋಗ್ಯ ಸಚಿವರ ಗಮನಕ್ಕೇ ಇಲ್ಲ ಎಂದರು. ಸರಕಾರಿ ಆಸ್ಪತ್ರೆಗಳಿಗೆ ಬರುವವರೆಲ್ಲರೂ ಬಡವರು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರು. ಅಂಥವರಿಗೆ ಬಳಕೆದಾರರ ಶುಲ್ಕ ವಿಧಿಸುವುದು ಸರಿಯೇ? ಪ್ರಯೋಗಾಲಯದ ಪರೀಕ್ಷೆ, ಚಿಕಿತ್ಸೆ ಎಲ್ಲಕ್ಕೂ ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ ಇರಲೇಬಾರದು. ತತ್‌ಕ್ಷಣ ಅವುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.